ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಿಳಿಯಾನೆ ನಿಗಮ-ಮಂಡಳಿ ಬೇಕಿದೆ ಪರಾಮರ್ಶೆ

02:48 PM Oct 03, 2024 IST | Samyukta Karnataka

ಆರ್ಥಿಕ ಮುಗ್ಗಟ್ಟು ನಿಷ್ಕ್ರಿಯ ಹಾಗೂ ಒಂದೇ ಉದ್ದೇಶ ಹೊಂದಿರುವ ಹಲವು ನಿಗಮ ಮಂಡಳಿಗಳನ್ನು ವಿಲೀನಗೊಳಿಸುವ ಅಗತ್ಯವಿದೆ. ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರ ಈ ಹೇಳಿಕೆ ಪ್ರಸ್ತುತ ನಿಗಮ ಮಂಡಳಿಗಳಲ್ಲಿಯ ಭ್ರಷ್ಟಾಚಾರ, ಆಕ್ರಮ ಅವ್ಯವಹಾರ ಹಾಗೂ ರಾಜಕೀಯ ಮೇಲಾಟಗಳ ಸಂದರ್ಭದಲ್ಲಿ ಮಹತ್ರ ಎನಿಸುತ್ತದೆ.
ಯೋಗ್ಯರಿಗೆ ಸುಲಭವಾಗಿ ಮತ್ತು ಸರಳವಾಗಿ ಸರ್ಕಾರದ ಯೋಜನೆಗಳ ಫಲ ದೊರೆಯಬೇಕು. ಬೆಳವಣಿಗೆಯಲ್ಲಿ ಹಾಗೂ ರಾಜ್ಯದ ಅಭ್ಯುದಯ ಕ್ಷಿಪ್ತವಾಗಿ ನಡೆಯಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ನಿಗಮ ಮಂಡಳಿ, ಸಾರ್ವಜನಿಕ ಉದ್ದಿಮೆ, ಸಂಘ ಸಂಸ್ಥೆಗಳನ್ನು ಸ್ಥಾಪಿಸಿದೆ. ವಿಕೇಂದ್ರೀಕರಣ ವ್ಯವಸ್ಥೆಯ ಉದ್ದೇಶವೂ ಅದೇ.
ಆದರೆ ನಿಗಮ ಮಂಡಳಿ, ಪ್ರಾಧಿಕಾರಗಳು, ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು, ಸಂಘ ಸಂಸ್ಥೆಗಳೆಲ್ಲ ರಾಜಕೀಯ ಸಂತ್ರಸ್ತರ ಗಂಜಿ ಕೇಂದ್ರಗಳಾಗಿ ಮಾರ್ಪಟ್ಟಿರುವುದು ಮೂರಾಲ್ಕು ದಶಕಗಳ ಹಿಂದೆಯೇ. ಈ ಮಧ್ಯೆ ಅವು 'ಹುಲ್ಲುಗಾವಲು' ಕೂಡ ಆಗಿವೆ!
ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ಸರಳ ಸೌಲಭ್ಯಕ್ಕಾಗಿ ರಚಿತವಾದ ಈ ನಿಗಮ ಮಂಡಳಿಗಳ ಉದ್ದೇಶ ಮೂಲೆಗುಂಪಾಗಿ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ದುಂದುವೆಚ್ಚದ ಕೊಳ್ಳೆ ಕೇಂದ್ರಗಳಾಗಿರುವುದು ಸತ್ಯ, ಮುಖ್ಯಮಂತ್ರಿಯವರ ಪತ್ನಿಗೆ ಕಾನೂನುಬಾಹಿರವಾಗಿ ಮತ್ತು ಆಕ್ರಮವಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಹದಿನಾಲ್ಕು ಸೈಟ್ ಗಳನ್ನು ಪಡೆದಿರುವ ಪ್ರಕರಣ ಈಗ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿ ಮುಖ್ಯಮಂತ್ರಿ ಕುರ್ಚಿಗೇ ಕಳಂಕ ಬಂದಿದೆ. ಕಂಟಕವೂ ಎದುರಾದೀತು, ಪರಿಶಿಷ್ಟ ಪಂಗಡ ಜನಾಂಗದ ಕಲ್ಯಾಣಕ್ಕಾಗಿ ರೂಪಿತಗೊಂಡ ಮಹರ್ಷಿ ವಾಲ್ಮೀಕಿ ನಿಗಮದ ಅಧ್ಯಕ್ಷರು, ಸಚಿವರುಗಳೇ ನೂರಾರು ಕೋಟಿ ರೂಪಾಯಿ ಗೋಲ್ ಮಾಲ್ ಮಾಡಿ ಕಂಬಿ ಎಣಿಸುತ್ತಿದ್ದಾರೆ.
ದೇವರಾಜ ಅರಸು ಟರ್ಮಿನಲ್‌ನಲ್ಲಿ ಅವ್ಯವಹಾರ, ಅಕ್ರಮ ನಡೆದು, ಅದರ ಹಿಂದಿನ ಅಧ್ಯಕ್ಷರು, ಮಾಜಿ ಶಾಸಕರೇ ಜೈಲಿನಲ್ಲಿದ್ದು ಹೊರ ಬಂದಿದ್ದಾರೆ. ಹಾಗೆ ನೋಡಿದರೆ ಯಾವ ನಿಗಮ, ಮಂಡಳಿ, ಪ್ರಾಧಿಕಾರಗಳೂ ಭ್ರಷ್ಟಾಚಾರ ಮತ್ತು ದುರ್ವಿನಿಯೋಗದ ಕಳಂಕದಿಂದ ದೂರ ಉಳಿದಿಲ್ಲ. ಗಂಜಿ ಕೇಂದ್ರ, ಹುಲುಸಾದ ಹುಲ್ಲುಗಾವಲು ಎನ್ನುವುದು ಹಳೆಯ ಮಾತಾಯಿತು. ಈ ನಿಗಮ ಮಂಡಳಿಗಳ ಸ್ಥಿತಿ ನೋಡಿದರೆ ಊಟಗಾಗಿಯೇ ಇವೆಲ್ಲ ಸ್ಥಾಪಿತವಾದವು ಎಂಬುದು ಸ್ಪಷ್ಟ.
ಒಂದು ನೂರ ಅರವತ್ತೆಂಟು ನಿಗಮ ಮಂಡಳಿ, ಪ್ರಾಧಿಕಾರಗಳು ರಾಜ್ಯದಲ್ಲಿವೆ. ಪ್ರತಿ ಜಾತಿಗೊಂದು ನಿಗಮ, ಸಮಾಜ, ಪ್ರದೇಶಕ್ಕೊಂದು ಅಭಿವೃದ್ಧಿ ಮಂಡಳಿ, ನಗರಗಳಿಗೊಂದು ಪ್ರಾಧಿಕಾರ. ಇನ್ನು ಮಹಾನುಭಾವರು ಸ್ಥಾಪಿಸಿದ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳಿಗೆ, ಉದ್ದಿಮೆಗಳಿಗೆಲ್ಲ ಸರ್ಕಾರ ಬದಲಾದಂತೆ ಅಧ್ಯಕ್ಷರು, ಸದಸ್ಯರುಗಳ ನೇಮಕ!

ಉದ್ದೇಶ ಸ್ಪಷ್ಟ ಈ ನಿಗಮ ಮಂಡಳಿಗಳಿಂದ ಸಾರ್ವಜನಿಕ ಕಲ್ಯಾಣ, ಸಾರ್ವಜನಿಕ ಉದ್ದಿಮೆಗಳ ರಕ್ಷಣೆ, ಬೆಳವಣಿಗೆ, ಅವುಗಳ ಜೊತೆಗೆ ಸ್ವತಂತ್ರವಾಗಿ ಇವು ಕಾರ್ಯನಿರ್ವಹಿಸಬೇಕು ಎನ್ನುವುದು. ಆದರೆ ಬಹುತೇಕ ನಿಗಮ ಮಂಡಳಿಗಳೆಲ್ಲ ಸರ್ಕಾರದ ಅನುದಾನದ ಭಿಕ್ಷೆಯಲ್ಲೇ ಮಜಾ ಉಡಾಯಿಸುವ ತಾಣಗಳಾಗಿರುವುದು ಸ್ಪಷ್ಟ.
ಯಾವ ನಿಗಮ ಮಂಡಳಿ ಶುದ್ಧವಾಗಿದೆ ಹೇಳಿ? ಸಮುದಾಯಗಳ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು 1975ರಿಂದ ಈಚೆಗೆ ಅಭಿವೃದ್ಧಿ ನಿಗಮಗಳು ಆಸ್ತಿತ್ವಕ್ಕೆ ಬಂದವು. ಮೊದಲು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಹಿಂದಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ನಿಗಮ, ಅಸ್ತಿತ್ವಕ್ಕೆ ಬಂತು, ಉದ್ದೇಶ, ದಟ್ಟ ದಾರಿದ್ರವಂತರನ್ನು, ದಲಿತರನ್ನು ಗುರುತಿಸಿ ಅವರಿಗೆ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಹೇಗೆ ದಸ್ತಾವೇಜುದಾರರು, ನೆರವಾಗುವುದು.
1985ರಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಅಸ್ತಿತ್ವಕ್ಕೆ ಬಂತು. ಆ ನಂತರ ಒಂದೊಂದಾಗಿ ಸರ್ಕಾರಗಳು ತಮ್ಮ ಮೇಲೆ ಬಂದ ವಿವಿಧ ಜಾತಿಗೊಂದು ನಿಗಮ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ, ಬೋವಿ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮ, ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮ ಸೇರಿದಂತೆ ಇತ್ತೀಚೆಗೆ ಜಾತಿ ಆಧಾರಿತ ಮಂಡಳಿಗಳು ರಚನೆಯಾದವು.
ಮೀಸಲಾತಿ ಹೋರಾಟ ಹೇಗೆಲ್ಲ ಬೆಳವಣಿಗೆಯಾಯಿತು, ಹೇಗೆಲ್ಲ ಕಾವು ಪಡೆದುಕೊಳ್ಳತೊಡಗಿತು ಹಾಗೆ ಈ ಜಾತಿಗೊಂದು ನಿಗಮ ಮಂಡಳಿಗಳು ಆಸ್ತಿತ್ವಕ್ಕೆ ಬಂದವು. ಇವೆಲ್ಲವುಗಳ ಜೊತೆಗೆ ಕರಾವಳಿ ಅಭಿವೃದ್ಧಿ ಮಂಡಳಿ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ, ಪಶ್ಚಿಮ ಘಟ್ಟ ಅಭಿವೃದ್ಧಿ ಮಂಡಳಿ, ಮಲೆನಾಡು ಅಭಿವೃದ್ಧಿ ಮಂಡಳಿ, ಈ ರೀತಿ ಹಲವಾರು. ಇವುಗಳ ಜೊತೆಗೆ ಕಾಡಾಗಳು ಪ್ರದೇಶವಾರು ರಚನೆಯಾದವು.
ಆ ನಂತರ ನಗರಗಳು ಅವ್ಯವಸ್ಥಿತವಾಗಿ ಬೆಳೆಯುತ್ತಿವೆ ಎಂದು. ಅವುಗಳಿಗೊಂದೊಂದು ಪ್ರಾಧಿಕಾರಗಳು ರಚಿತವಾದವು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಆರಂಭವಾಗಿ ಇತ್ತೀಚೆಗೆ, ನಗರಸಭೆಗಳು ಅಸ್ತಿತ್ವದಲ್ಲಿ ಇದ್ದರೂ, ನಗರಾಭಿವೃದ್ಧಿ ಪ್ರಾಧಿಕಾರಗಳು ಎಲ್ಲೆಡೆ ಹುಟ್ಟಿಕೊಂಡವು. ಇವಕ್ಕೊಂದು ಅಧ್ಯಕ್ಷ, ಸದಸ್ಯರು. ಕಾರ್ಯದರ್ಶಿ, ಕಚೇರಿ, ವಾಹನ ಸೌಲಭ್ಯ ಇತ್ಯಾದಿ ಎಲ್ಲವೂ ಮಾಡುವ ಕೆಲಸ ಆಯಾ ಇಲಾಖೆಗಳು ಮಾಡುವಂಥವೇ.
ಇಲಾಖೆಗಳು ವಿಳಂಬವಾಗಿ ಕಾರ್ಯನಿರ್ವಹಿಸುತ್ತಿದ್ದವು ಮತ್ತು ತಳಹಂತದಿಂದ ಮೇಲ್ಮಟ್ಟದವರೆಗಿನ ಪರವಾನಗಿ ಬೇಕು ಎನ್ನುವ ಕಾರಣಕ್ಕೆ ಈ ನಿಗಮ, ಮಂಡಳಿ, ಪ್ರಾಧಿಕಾರಗಳನ್ನು ಅಸ್ತಿತ್ವಕ್ಕೆ ತಂದು, ಅದೇ ಕೆಲಸವನ್ನು ಇವು ಈಗ ಮಾಡುತ್ತಿವೆ.
ಮೊದಲು ಒಂದು ಮನೆ ಕಟ್ಟಿಕೊಳ್ಳಲು ಸ್ಥಳೀಯ ನಗರಸಭೆಗೋ, ಪುರಸಭೆಗೋ ಅಥವಾ ಮಹಾನಗರ ಪಾಲಿಕೆಗೋ ಅರ್ಜಿ ಗುಜರಾಯಿಸಿ ಪರವಾನಗಿ ಪಡೆದರಾಗುತ್ತಿತ್ತು. ಅಲ್ಲೊಂದು ಯೋಜನಾ ಶಾಖೆ ಇರುತ್ತಿತ್ತು ಅಷ್ಟೇ, ಈಗ ಹಾಗಲ್ಲ. ಯೋಜನಾ ಶಾಖೆಯೂ ಇದೆ. ಪ್ರಾಧಿಕಾರಗಳೂ ಇವೆ. ಅವು ಒಂದಿಷ್ಟು ಕಟ್ಟಳ ವಿಧಿಸುತ್ತಿವೆ. ಇವು ಒಂದಿಷ್ಟು ಕಾನೂನು ಹೇಳುತ್ತಿವೆ. ಹಾಗಂತ ಜನಕ್ಕೆ ಸುಲಭವಾಗಿ ಪರವಾನಗಿ ಸಿಕ್ಕಿತೆ? ಇಲ್ಲ ಒಬ್ಬ ಸಾಮಾನ್ಯ ವ್ಯಕ್ತಿ ಒಂದು ನಗರದಲ್ಲಿ, ಸ್ವಂತ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ನೂರಾರು ದಿನ ಅಲೆದಾಡಬೇಕು. ಹತ್ತಾರು ಕಚೇರಿ ಸುತ್ತಾಡಬೇಕು. ಅಧಿಕಾರಿಗಳು, ಅಧಿಕಾರೇತರರ ಹಿಂದೆ ಅಲೆಯಬೇಕು. ಇಪಾದರೂ ಆತ ಮನೆ ಕಟ, ಮನೆಯ ತೆರಿಗೆ ನಿರ್ಧರಿಸಿ ಪೂರ್ಣಾವಧಿ ಪತ್ರ ಪಡೆಯುವವರೆಗೆ ಅರ್ಧ ಜೀವ ಹಣ್ಣಾಗಿರುತ್ತದೆ.
ಈ ನಿಗಮ ಮಂಡಳಿ, ಅಭಿವೃದ್ಧಿ ಪ್ರಾಧಿಕಾರಗಳು ಸ್ಥಾಪನೆಯಿಂದ ಹುಟ್ಟಿಕೊಂಡವರು ಮಧ್ಯವರ್ತಿಗಳು. ಸರ್ಕಾರ ಯಾವುದೇ ಬರಲಿ, ಬದಲಾಗಲಿ ಮಧ್ಯವರ್ತಿಗಳು ಕಾಯಂ ವಾಲ್ಮೀಕ ಅಭಿವೃದ್ಧಿ ಮಂಡಳ ಇರಲಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಇರಲಿ, ಅಲ್ಪಸಂಖ್ಯಾತರ ಕಲ್ಯಾಣ ಮಂಡಳಿ ಇರಲಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳ ಇರಲಿ, ಬಿಡಿಎ, ಮೂಡಾದಿಂದ ರೂಡಾವರೆಗೂ ಮಧ್ಯವರ್ತಿಗಳು, ಏಜೆಂಟರು, ಹಣ ಪೀಕುವವರಿಗೆ ಇವೆಲ್ಲವೂ ಕೂಡ ಸದಾ ದಂಧೆಯಾಗಿವೆ.
ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಹೇಗೆ ದಸ್ತಾವೇಜುದಾರರು, ಏಜೆಂಟರಿದ್ದಾರೋ ಹಾಗೇ ಪ್ರತಿ ನಿಗಮ ಮಂಡಳಿಗಳ ಕಚೇರಿಗಳಲ್ಲಿ ವಿಜೆಂಟರದ್ದೇ ಕಾರುಬಾರು. ಖೊಟ್ಟಿ ವಿಳಾಸ, ಖೊಟ್ಟಿ ಫಲಾನುಭವಿ, ಖೊಟ್ಟಿ ಕಾಮಗಾರಿ, ಕಳಪೆ ದಂಧೆ, ಅಧ್ಯಕ್ಷರಿಂದ ಸಿಪಾಯಿಯವರೆಗೂ ಮಿಲಾನಿ ದಂಧೆ.. ಇದು ನಿಗಮ ಮಂಡಳಿಗಳ ವಾಸ್ತವ ಕರಾಳ ಚಿತ್ರ.
ಯಾವ ನಿಗಮ ಮಂಡಳಿ ಹಗರಣ ಮುಕ್ತವಾಗಿದೆ? ಈಗ ವಾಲ್ಮೀಕಿ ನಿಗಮದ ಉದಾಹರಣೆ ನೋಡಿ. ನೂರಾರು ಕೋಟಿ ರೂಪಾಯಿ ಹಗರಣ ಫಲಾನುಭವಿಯೊಬ್ಬ ಬೆಳಕಿಗೆ ತಾರದೇ ಇದ್ದರೆ ಹಾಗೇ ಮುಚ್ಚಿ ಹೋಗುತ್ತಿತ್ತು ಅಲ್ಲವೇ? ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದಲ್ಲಿ ಆಟೊ ಖರೀದಿ ಸಾಲ ದುರ್ಬಳಕೆಯಾಯಿತು. ಎಸಿದಜಿ, ಲೋಕಾಯುಕ್ತರಲ್ಲಿ ಸಾವಿರಾರು ದೂರುಗಳು ದಾಖಲಾದವು. ಗಂಗಾ ಕಲ್ಯಾಣ ಯೋಜನೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಹೊಡೆದಿರುವುದು ತನಿಖೆಯಿಂದ ಬಯಲಾಯಿತು.
ಯಾವ ನಿಗಮದಲ್ಲಿ ಏನಾಗುತ್ತಿದೆ ಎಂಬುದು ಸರ್ಕಾರಕ್ಕೂ ನಿಯಂತ್ರಣ ಇಲ್ಲದ, ಪಾರದರ್ಶಕತೆಯೇ ಇಲ್ಲದೇ, ನಾಯಕರ ಪುಂಡಾಟಿಕೆಯ ಸ್ಥಿತಿಯಾಯಿತು. ಕರ್ನಾಟಕದ ಅತ್ಯಂತ ಪ್ರತಿಷ್ಠಿತ ಸೋಪು ಕಾರ್ಖಾನೆಯ ಟೆಂಡರ್ ಹಗರಣ, ಆಗ ಅಧ್ಯಕ್ಷರಾಗಿದ್ದ ಮಾಡಾಳು ಅವರ ಮನೆಯ ಮೇಲಿನ ದಾಳಿ, ನೂರಾರು ಕೋಟಿ ರೂಪಾಯಿ ನಗದು ಸಿಕ್ಕಿದ್ದು, ಇಂತಹ ಒಂದು ಸಂಸ್ಥೆಯ ಘನತೆ, ಗೌರವ ಬೀದಿಪಾಲಾಗುವಂತಾಯಿತು. ಏನೆಲ್ಲ ಅವ್ಯವಹಾರ ಹೊರಬಂತು ನೋಡಿ.
ಇದೇ ಸ್ಥಿತಿ ಕರ್ನಾಟಕ ವಿದ್ಯುತ್ ಉಪಕರಣ ಕಾರ್ಖಾನೆ, ಎಂಎಸ್ಐಎಲ್, ಮಾಲಿನ್ಯ ನಿಯಂತ್ರಣ ಮಂಡಳಿ, ಕೆಐಎಡಿಬಿ, ಇತ್ಯಾದಿ ಸಾರ್ವಜನಿಕ ಉದ್ದಿಮೆಗಳನ್ನು ಅವುಗಳ ತಾಣ ಹೀರುವಷ್ಟು ಹೀರಲಾಗುತ್ತಿದೆ. ನಿಗಮಗಳ ಕಥೆಯನ್ನೇ ನೋಡಿ, ಬಸ್ಸುಗಳ ಖರೀದಿಗೆ ಇರುವ ಉಮೇದಿ ಅವುಗಳ ನಿರ್ವಹಣೆಗೆ ಇಲ್ಲ. ಏಕೆಂದರೆ ಹತ್ತು ಬಸ್ ಖರೀದಿಸಿದರೆ ಒಂದು ಬಸ್ ಉಚಿತ ಎನ್ನುವ ಒಪ್ಪಂದ ನೂರಾರು ಬಸ್ ಖರೀದಿಸಿದರೆ ಅಧ್ಯಕ್ಷರು, ವ್ಯವಸ್ಥಾಪಕರುಗಳಿಗೆಲ್ಲ ಭರಪೂರ ಉಡುಗೊರೆ, ಒಂದೊಂದು ಮಂಡಳಿಗಳ ಅಧ್ಯಕ್ಷರಾಗಬೇಕಿದ್ದರೂ ದರ ನಿಗದಿ, ಬಿಡಿಎ ಅಧ್ಯಕ್ಷತೆಗೆ ಮಂತ್ರಿಗಿರುವಷ್ಟೇ ಅಧಿಕಾರ ಮತ್ತು ಡಿಮ್ಯಾಂಡ್!!
ಸಾಮಾನ್ಯ 1,76 ಲಕ್ಷ ಮಂದಿಗೆ ಉದ್ಯೋಗ ನೀಡುತ್ತಿರುವ ರಾಜ್ಯದ ಸಾರ್ವಜನಿಕ ಉದ್ಯಮಗಳು, ಕೆಎಸ್‌ಆರ್‌ಟಿಸಿ ಸೇರಿ, ಗಳಿಸಿದ ಲಾಭ ಕೇವಲ 0.1 ಪರ್ಸೆಂಟ್ ಮಾತ್ರ ಹಾಗಂತ ಅವೆಲ್ಲ ಲಾಭ ಗಳಿಸಲು ಯೋಗ್ಯವಲ್ಲದವು ಎಂದಲ್ಲ. ಸೋಪು ಕಾರ್ಖಾನೆ, ಕೆಪಿಸಿ, ಕರ್ನಾಟಕ ಬಣ್ಣ ತಯಾರಿಕಾ ಕಾರ್ಖಾನೆ, ಖಾದಿ ಗ್ರಾಮೋದ್ಯೋಗ ಮಂಡಳಿ, ಕೈಗಾರಿಕಾ ಅಭಿವೃದ್ಧಿ ಮಂಡಳಿ ಇವೆಲ್ಲ ಸರಿಯಾಗಿ ನಿರ್ವಹಿಸಿದರೆ ನೂರಾರು ಕೋಟಿ ಲಾಭ ಗಳಿಸುವ ಸಾಮರ್ಥ್ಯ ಹೊಂದಿರುವ ಸಂಸ್ಥೆಗಳು. ಮೊದಲು ಇವೆಲ್ಲ ಲಾಭ ಗಳಿಸುತ್ತಿದ್ದವುಗಳೇ, ಸಾರ್ವಜನಿಕರಿಗೆ ಹತ್ತಿರವಾಗಿದ್ದಂಥವೇ.
ಎಂದಿಗೆ ಭ್ರಷ್ಟರ ಸಾಮಾಜ್ಯ ಸ್ಥಾಪನೆಯಾಯಿತೋ, ಹುಲ್ಲುಗಾವಲು ಎಂದು ಮೇಯುವಿಕೆ ಆರಂಭವಾಯಿತೋ, ಅಂದಿನಿಂದ ಇವೆಲ್ಲ ಈಗ ಲಾಭ ಗಳಿಸುವ ಶಕ್ತಿ ಕಳೆದುಕೊಂಡು ನಿತ್ರಾಣವಾಗಿ ಉಸಿರಾಡುತ್ತಿವೆ. ಅಳಿವಿನ ಅಂಚಿಗೆ ಬಂದಿವೆ.
ಕಳೆದ ವರ್ಷ ರಾಜ್ಯದ ನೂರಕ್ಕೂ ಹೆಚ್ಚು ನಿಗಮ ಮಂಡಳಿಗಳಿಗೆ ಸರ್ಕಾರ ಶಾಸಕರುಗಳನ್ನು ನೇಮಿಸಿತು. ಕೆಲವೇ ತಿಂಗಳುಗಳಲ್ಲಿ ಅದೇ ನಿಗಮ ಮಂಡಳಿಗಳ ಅಧ್ಯಕ್ಷರುಗಳು ಇಲಾಖೆಯ ಸಚಿವರುಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ನಿಗಮ ಮಂಡಳಿಗಳಲ್ಲಿ ಸಚಿವರು ಹಸಕ್ಷೇಪ ಮಾಡುತ್ತಿದ್ದಾರೆ ಎಂದು.
ಕರ್ನಾಟಕ ನೀರು ಸರಬರಾಜು ಅಧ್ಯಕ್ಷರಂತೂ ನೇರವಾಗಿ ಸಚಿವರ ವಿರುದ್ಧವೇ ದೂರು ಕೊಟ್ಟು ಮುಂದೆ ಹೀಗೆ ತೊಂದರೆ ಕೊಟ್ಟರೆ ರಾಜೀನಾಮೆ ಬಿಸಾಕುವೆ ಎಂದು ಮುಖ್ಯಮಂತ್ರಿಗಳ ಎದುರು ಗುಡುಗಿದರು.
ಅದೇ ಸ್ಥಿತಿ ಹಲವು ನಿಗಮ ಮಂಡಳಿಗಳದ್ದು. ಮಹರ್ಷಿ ವಾಲ್ಮೀಕಿ ನಿಗಮದ ಕಥೆಯೂ ಅದೇ. ಅವರಿಗೇ ಗೊತ್ತಿಲ್ಲದೇ ನೂರಾರು ಕೋಟಿ ರೂಪಾಯಿ ಆಂಧ್ರದ ಬ್ಯಾಂಕಿಗೆ ವರ್ಗಾವಣೆಯಾಗಿದೆ. ಫಲಾನುಭವಿಗಳು ಇನ್ಯಾರು ಎನ್ನುವ ಅವಸ್ಥೆ ನಿಗಮಗಳಲ್ಲಿದೆ.
ಹಾಗಂತ ಯಾವುದೇ ಸಾರ್ವಜನಿಕ ಸಂಸ್ಥೆಗಳನ್ನು, ಉದ್ದಿಮೆಗಳನ್ನು ಮತ್ತು ಹಲವು ನಿಗಮ ಮಂಡಳಿಗಳನ್ನು ಸ್ವಾಯತ್ತವಾಗಿ ಬೆಳೆಸಲು ಆಸಾಧ್ಯವೆನ್ನುವ ಸ್ಥಿತಿ ಇಲ್ಲ, ಕರ್ನಾಟಕ ಸೋಪು ಕಾರ್ಖಾನ, ಕರ್ನಾಟಕ ಅರಗು ತಯಾರಿಕಾ ಕಾರ್ಖಾನೆ, ವಿದ್ಯುತ್ ಕಾರ್ಖಾನೆ, ಕರ್ನಾಟಕ ರೇಷ್ಮೆ ಮಂಡಳಿ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಮಂಡಳಿ ಇವೆಲ್ಲ ದೇಶದ ಅತ್ಯುತ್ತಮ, ಪ್ರತಿಷ್ಠಿತ, ಪ್ರಖ್ಯಾತಿ ಹೊಂದಿರುವ ಸಂಸ್ಥೆಗಳು, ಅಲ್ಲೂ ಮಟೆಲವಲ್ಲ ಈ ಭ್ರಷ್ಟಾಚಾರ ಹಗರಣ ಎನ್ನುವುದೇ ಖೇದ.
ಮುಡಾ ಹಗರಣ, ಅಧಿಕಾರಸ್ಥರು ಹೇಗೆ ತಮಗನುಕೂಲವಾಗುವ ರೀತಿನಿಯಮ, ಕಾನೂನುಗಳನ್ನು ತಿದ್ದಿ, ಸಾರ್ವಜನಿಕ ಜಾಗೆಯನ್ನು ಕಬಳಿಸಬಹುದು ಎನ್ನುವುದಕ್ಕೆ ಒಂದು ಪಾಠವಾದರೆ, ವಾಲ್ಮೀಕಿ, ದೇವರಾಜು ಅರಸು ಟರ್ಮಿನಲ್, ಅಲ್ಪಸಂಖ್ಯಾತರ ಮಂಡಳಿ, ಕೆಎಸ್‌ಡಿಎಲ್, ಕೆಐಎಡಿಬಿ ಮುಂತಾದ ಸಂಸ್ಥೆಗಳನ್ನು ಹೇಗೆ ಹುಲ್ಲುಗಾವಲನ್ನಾಗಿಸಬಹುದು ಎನ್ನುವುದನ್ನು ತೋರಿಸಿವೆ.
ಬೇಕಿತ್ತಾ ಇಷ್ಟೆಲ್ಲ ನಿಗಮ ಮಂಡಳಿಗಳು, ಒಂದೇ ಉದ್ದೇಶಕ್ಕೆ? ಉದಾಹರಣೆಗೆ, ಅರಣ್ಯ ಇಲಾಖೆ ಅಧೀನ. ಒಂದು ಪಶ್ಚಿಮ ಘಟ್ಟ ಅಭಿವೃದ್ಧಿ ಮಂಡಳಿ, ಮತ್ತೊಂದು ಅರಣ್ಯ ಅಭಿವೃದ್ಧಿ ನಿಗಮ, ಆರಣ್ಯ ಪೀಠೋಪಕರಣ ನಿಗಮ, ಜಂಗಲ್ ರೆಸಾರ್ಟ್ ಇತ್ಯಾದಿ ಇತ್ಯಾದಿ.. ಇದೇ ರೀತಿ ಹಲವು ಇಲಾಖೆಗಳು ನೀರಾವರಿ ನಿಗಮ. ನೀರಾವರಿ ಪ್ರದೇಶಾಭಿವೃದ್ಧಿ ಮಂಡಳಿ, ಕಾಡಾ ಇವೆಲ್ಲ ಒಂದಕ್ಕೊಂದು ಪೂರಕ. ಒಂದೇ ಕಾರ್ಯವನ್ನು ನಿರ್ವಹಿಸುವಂಥವು ಜನರನ್ನು ಗುತ್ತಿಗೆದಾರರಿಂದ ಹೇಗೆ ಲಪಟಾಯಿಸಬಹುದು ಎನ್ನುವುದಕ್ಕೆ ಸಂಚುಗಳು ಇವು.
ಈ ಹಿಂದೆ ಹಾರನಹಳ್ಳಿ ರಾಮಸ್ವಾಮಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿದ್ದಾಗ ಈ ನಿಗಮ ಮಂಡಳಿಗಳಿಗೆ ನಿಯಂತ್ರಣ ಹಾಕಿ, ಕೆಲವನ್ನು ಮುಚ್ಚಲು ಸಲಹೆ ಮಾಡಿದ್ದರು. ಆ ನಂತರ ವಿಜಯಭಾಸ್ಕರ ಸಮಿತಿ ಕೂಡ ಹಲವು ಶಿಫಾರಸುಗಳನ್ನು ಮಾಡಿತು.
ಈಗ ಆ‌ರ್.ವಿ.ದೇಶಪಾಂಡೆ ಮಾತನಾಡುತ್ತಿದ್ದಾರೆ. ಬಹುಶಃ ಅವರ ಮಾತು ಕೂಡ ಹಳಿಯಾಳೆದಿಂದ ಬೆಂಗಳೂರು ನಡುವಿನ ಗಾಳಿಯಲ್ಲಿ ತೇಲಿ ಹೋಗುತ್ತದೆ ಅಷ್ಟೇ, ನಿಗಮ ಮಂಡಳಿಗಳೆಲ್ಲ ವ್ಯವಸ್ಥಿತ ಕೊಳ್ಳಿ ಕೇಂದ್ರಗಳಾಗಿರುವುದು ದೇಶಪಾಂಡೆಯವರಿಗೆ ಗೊತ್ತಿಲ್ಲ ಎಂದಲ್ಲ, ಅವರು ಬಹುಕಾಲ ಕೈಗಾರಿಕಾ ಮಂತ್ರಿಯಾಗಿದ್ದವರು. ಅವರ ಅಧೀನವೇ ಆಗಲೇ ಹತ್ತಾರು ಸಾರ್ವಜನಿಕ ಸಂಸ್ಥೆಗಳು, ನಿಗಮಗಳು ಬಂದವು.
ಅವೆಲ್ಲವುಗಳ ಕಥೆ, ಅಲ್ಲಿಯ ದುಂದುವೆಚ್ಚ ದರ್ಬಾರು, ಭ್ರಷ್ಟಾಚಾರ ಎಲ್ಲವೂ ಆಗಲೂ ಇತ್ತು. ಈಗಲೂ ಇದೆ. ಅಲ್ಲವೇ? ಆದರೆ ಜಾತಿಗೊಂದು ನಿಗದು ಮಂಡಳಿ. ಪ್ರದೇಶಕ್ಕೊಂದು ಪ್ರಾಧಿಕಾರ ಇವೆಲ್ಲವುಗಳ ಪರಾಮರ್ಶೆ, ಸಾರ್ವಜನಿಕರಿಗೆ ಉತ್ತರದಾಯಿತ್ವ ಮತ್ತು ಪಾರದರ್ಶಕ ಲೆಕ್ಕಪತ್ರಗಳ ಮಂಡನೆಯಂತೂ ಜಗತ್ಯ ಅಲ್ಲವೇ?

Next Article