For the best experience, open
https://m.samyuktakarnataka.in
on your mobile browser.

ಬಿಷ್ಣೋಯಿ ಸಹಚರರು-ಕೆನಡಾದ ಹತಾಶೆ

03:32 AM Oct 19, 2024 IST | Samyukta Karnataka
ಬಿಷ್ಣೋಯಿ ಸಹಚರರು ಕೆನಡಾದ ಹತಾಶೆ

ಭಾರತ ಮತ್ತು ಕೆನಡಾಗಳ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತೊಮ್ಮೆ ಹದಗೆಟ್ಟಿದೆ. ಕಾನೂನುಬಾಹಿರ ಹತ್ಯೆಗೆ ಸಂಬಂಧಿಸಿದಂತೆ ಪರಸ್ಪರರ ಮೇಲೆ ಆರೋಪಗಳನ್ನು ಹೊರಿಸಿ, ಭಾರತ ಮತ್ತು ಕೆನಡಾಗಳು ರಾಜತಾಂತ್ರಿಕ ಸಿಬ್ಬಂದಿಗಳನ್ನು ವಜಾಗೊಳಿಸಿವೆ. ಅದೇ ದಿನದಂದು, ಕೆನಡಾ ಪೊಲೀಸ್ ಇಲಾಖೆ ಪತ್ರಿಕಾಗೋಷ್ಠಿಯೊಂದನ್ನು ನಡೆಸಿ, ಇನ್ನೊಂದು ಆಘಾತಕಾರಿ ಹೇಳಿಕೆಯನ್ನು ನೀಡಿದೆ. ಭಾರತ ಸರ್ಕಾರದ ಪ್ರತಿನಿಧಿಗಳು ಭಾರತದ ಕುಖ್ಯಾತ ದುಷ್ಕರ್ಮಿ, ಲಾರೆನ್ಸ್ ಬಿಷ್ಣೋಯಿ ಮತ್ತು ಆತನ ಸಹಚರರೊಡನೆ ಸಂಪರ್ಕ ಹೊಂದಿದ್ದಾರೆ, ಆ ಗುಂಪನ್ನು ತನ್ನ ಅವಶ್ಯಕತೆಗೆ ತಕ್ಕಂತೆ ಬಳಸುತ್ತಿದ್ದಾರೆ ಎಂದು ಕೆನಡಾ ಪೊಲೀಸ್ ಇಲಾಖೆ ಆರೋಪಿಸಿದೆ. ಆದರೆ, ಪತ್ರಿಕಾಗೋಷ್ಠಿಯಲ್ಲಿ ಭಾರತದ ವಿರುದ್ಧ ಆರೋಪಗಳನ್ನು ಹೊರಿಸಿದ ಪೊಲೀಸರು, ತಮ್ಮ ಆರೋಪಗಳಿಗೆ ಪೂರಕವಾಗುವಂತಹ ಯಾವುದೇ ಸಾಕ್ಷಿಗಳನ್ನು ಒದಗಿಸಲು ಶಕ್ತವಾಗಿಲ್ಲ.
ಅನಾಮಧೇಯವಾಗಿರಲು ಇಚ್ಛಿಸಿರುವ ಭಾರತೀಯ ಅಧಿಕಾರಿಯೊಬ್ಬರು ಕೆನಡಾದ ಆರೋಪಗಳ ಕುರಿತು ಹೇಳಿಕೆ ನೀಡಿದ್ದು, ಕೆನಡಾ ಸುಳ್ಳು ಆರೋಪಗಳನ್ನು ಭಾರತದ ವಿರುದ್ಧ ಹೊರಿಸಿದೆ. ಇದನ್ನು ಭಾರತ ಬಲವಾಗಿ ಅಲ್ಲಗಳೆಯಬೇಕು ಎಂದಿದ್ದಾರೆ. ಇದೇ ಸಂದರ್ಭದಲ್ಲಿ, ಅಮೆರಿಕ ಮತ್ತು ಕೆನಡಾದ ಅಧಿಕಾರಿಗಳು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತ ವಿದೇಶೀ ನೆಲದಲ್ಲಿ ಹತ್ಯೆ ನಡೆಸಿರುವ ಸಾಧ್ಯತೆಗಳಿವೆಯೇ ಎಂಬ ಕುರಿತು ಅವಲೋಕನ ನಡೆಸುತ್ತಿದ್ದಾರೆ. ಭಾರತದ ಪಾಶ್ಚಾತ್ಯ ಸಹಯೋಗಿಗಳು ಚೀನಾದ ಪ್ರಾಬಲ್ಯವನ್ನು ತಗ್ಗಿಸಲು ಭಾರತ ಮುಖ್ಯ ಜೊತೆಗಾರ ಎಂದು ಪರಿಗಣಿಸಿದ್ದು, ಅವುಗಳಿಗೆ ಭಾರತದ ಜೊತೆಗಿನ ಬಾಂಧವ್ಯ ಅನಿವಾರ್ಯವಾಗಿದೆ.
ಅಕ್ಟೋಬರ್ ೧೪, ಸೋಮವಾರದಂದು ಒಟ್ಟಾವಾದಲ್ಲಿ ಮಾತನಾಡಿದ ರಾಯಲ್ ಕೆನೆಡಿಯನ್ ಮೌಂಟೆಡ್ ಪೊಲೀಸ್‌ನ ಸಹಾಯಕ ಆಯುಕ್ತ, ಬ್ರಿಗಿಟ್ ಗಾವಿನ್ ಅವರು, ಭಾರತದ ಪಂಜಾಬಿನಲ್ಲಿ ಖಲಿಸ್ತಾನ್ ಎಂಬ ಪ್ರತ್ಯೇಕ ಸಿಖ್ ರಾಷ್ಟ್ರಕ್ಕಾಗಿ ಹೋರಾಟ ನಡೆಸಿರುವ ಹರ್ದೀಪ್ ಸಿಂಗ್ ನಿಜ್ಜರ್‌ನಂತಹ ಸಿಖ್ ಕೆನೆಡಿಯನ್ನರ ವಿರುದ್ಧ 'ಸಂಘಟಿತ ಅಪರಾಧಿ ಗುಂಪುಗಳನ್ನು' ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಗಾವಿನ್ ತನ್ನ ಹೇಳಿಕೆಯಲ್ಲಿ ಬಿಷ್ಣೋಯಿ ನೇತೃತ್ವದ ಗುಂಪನ್ನು ನಿರ್ದಿಷ್ಟವಾಗಿ ಹೆಸರಿಸಿದ್ದಾರೆ. ಅಂದರೆ, ಕೆನಡಾದಲ್ಲಿರುವ ಸಿಖ್ ಪ್ರತ್ಯೇಕತಾವಾದಿಗಳನ್ನು ಹತ್ತಿಕ್ಕಲು ಭಾರತ ಲಾರೆನ್ಸ್ ಬಿಷ್ಣೋಯಿ ಗುಂಪನ್ನು ಬಳಸುತ್ತಿದೆ ಎನ್ನುವುದು ಅವರ ನೇರ ಆರೋಪವಾಗಿದೆ.
ಕೆನಡಾ ಪೊಲೀಸರು ಹೇಳಿಕೆ ನೀಡಿದ ದಿನವೇ ಭಾರತ ಬಲವಾಗಿ ಪ್ರತಿಕ್ರಿಯೆ ನೀಡಿದ್ದು, ಕೆನಡಾದ ಆರೋಪಗಳನ್ನು ಆಧಾರ ರಹಿತ, ಹಾಸ್ಯಾಸ್ಪದ ಆರೋಪಗಳು ಎಂದು ತಳ್ಳಿಹಾಕಿತು. ಕೆನಡಾ ಭಾರತೀಯ ಹೈಕಮಿಷನರ್ ಸಂಜಯ್ ವರ್ಮಾ ಸೇರಿದಂತೆ ಆರು ಜನ ಭಾರತೀಯ ಅಧಿಕಾರಿಗಳನ್ನು ದೇಶದಿಂದ ತೆರಳಲು ಸೂಚಿಸಿದ ಬೆನ್ನಲ್ಲೇ ಭಾರತವೂ ಕೆನಡಾದ ಆರು ಜನ ರಾಜತಾಂತ್ರಿಕರನ್ನು ಹೊರಹಾಕಿತು. ಭಾರತ ತನ್ನ ರಾಜತಂತ್ರಜ್ಞರು ತಮ್ಮ ಸುರಕ್ಷತೆಯ ಕಾರಣದಿಂದ ಕೆನಡಾದಿಂದ ತೆರಳಿದ್ದಾರೆ ಎಂದಿದೆ. ಕೆನಡಾದ ವಿದೇಶಾಂಗ ಸಚಿವರಾದ ಮೆಲಾನಿ ಜೋಲಿ ಅವರು ಭಾರತದ ಆರು ಜನ ರಾಜತಂತ್ರಜ್ಞರು ನಿಜ್ಜರ್ ಹತ್ಯೆಯಲ್ಲಿ `ಪರ್ಸನ್ಸ್ ಆಫ್ ಇಂಟ್ರೆಸ್ಟ್' (ಪ್ರಕರಣದಲ್ಲಿ ಹಿತಾಸಕ್ತಿ ಹೊಂದಿರುವವರು) ಎಂದಿದ್ದರು.
ಅಂದರೆ, ನಿಜ್ಜರ್ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆರು ಜನರನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿತ್ತು. ಭಾರತ ಸರ್ಕಾರದ ಏಜೆಂಟ್‌ಗಳು ಕೆನಡಾ ನಾಗರಿಕರ ಸುರಕ್ಷತೆಗೆ ತೊಂದರೆ ಉಂಟುಮಾಡುವಂತಹ ಕ್ರಮಗಳನ್ನು ಕೈಗೊಂಡಿರುವುದಕ್ಕೆ ಕೆನಡಾ ಪೊಲೀಸರಿಗೆ ಬಲವಾದ ಸಾಕ್ಷಿಗಳು ಲಭಿಸಿವೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಹೇಳಿದ್ದಾರೆ. ಇದೇ ವೇಳೆ, ಕೆನಡಾ ಸಿಖ್ ಪ್ರತ್ಯೇಕತಾವಾದಿಗಳು ಮತ್ತು ಅಪರಾಧಿಗಳಿಗೆ ಆಶ್ರಯ ನೀಡುತ್ತಿದೆ ಎಂದು ಭಾರತ ಆರೋಪಿಸಿದೆ.
೧೦ ವರ್ಷಗಳಿಂದ ಸೆರೆಯಲ್ಲಿರುವ ಬಿಷ್ಣೋಯಿ
ಈ ಪ್ರಕರಣಗಳ ಕೇಂದ್ರಬಿಂದುವಾಗಿರುವ, ೩೧ ವರ್ಷದ ಬಿಷ್ಣೋಯಿ ಈಗಾಗಲೇ ಭಾರತದಲ್ಲಿ ಕುಖ್ಯಾತಿ ಪಡೆದಿದ್ದಾನೆ. ಆತ ಪಂಜಾಬ್ ರಾಜ್ಯದಲ್ಲಿ, ಪಾಕಿಸ್ತಾನದ ಗಡಿಯ ಸನಿಹದ ಪ್ರದೇಶದಲ್ಲಿ, ೧೯೯೩ರಲ್ಲಿ ಜನಿಸಿದ್ದ. ಪಂಜಾಬಿನಿಂದಲೇ ಕೆನಡಾ, ಅಮೆರಿಕ, ಯುಕೆಯಂತಹ ರಾಷ್ಟ್ರಗಳಿಗೆ ಜನರ ವಲಸೆ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದೆ.
ಹಲವಾರು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಲಾರೆನ್ಸ್ ಬಿಷ್ಣೋಯಿ, ಕಳೆದ ಹತ್ತು ವರ್ಷಗಳಿಂದ ಸೆರೆಮನೆಯಲ್ಲಿದ್ದಾನೆ. ಪ್ರಸ್ತುತ ಆತ ಪ್ರಧಾನಿ ನರೇಂದ್ರ ಮೋದಿಯವರ ರಾಜ್ಯವಾದ ಗುಜರಾತಿನ ಜೈಲಿನಲ್ಲಿದ್ದಾನೆ. ಆತ ಜೈಲಿನಲ್ಲಿದ್ದೇ ಸುಲಿಗೆ, ಕೊಲೆಯಂತಹ ಅಪರಾಧಗಳನ್ನು ನಡೆಸುತ್ತಿದ್ದಾನೆ ಎಂದು ಪಂಜಾಬ್, ಮುಂಬೈ ಮತ್ತು ಇತರ ಪೊಲೀಸರು ಆರೋಪಿಸಿದ್ದಾರೆ.
ಬಿಷ್ಣೋಯಿ ೩೬ಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ. ಹತ್ಯಾ ಪ್ರಯತ್ನ, ಅಕ್ರಮ ಆಯುಧ ಸಾಗಾಟ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆತ ದೋಷಿ ಎಂದು ಸಾಬೀತಾಗಿದೆ. ಹಲವಾರು ಪ್ರಕರಣಗಳಿಗೆ ಸಂಬಂಧಿಸಿದ ತೀರ್ಪು ಇನ್ನೂ ಹೊರಬರಬೇಕಿದೆ. ಬಿಷ್ಣೋಯಿ ಮತ್ತು ಆತನ ೭೦೦ ಜನ ಸದಸ್ಯರ ಗ್ಯಾಂಗ್ ಮೇಲೆ ಗುಂಡಿನ ದಾಳಿ ಸೇರಿದಂತೆ ಹಲವಾರು ಪ್ರಕರಣಗಳಿವೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಜೈಲಿನಿಂದಲೇ ಆತ ಸಂದರ್ಶನಗಳನ್ನು ನೀಡಿದ್ದು, ಅವನಿಗೆ ಸೆರೆಮನೆಯಲ್ಲಿ ಫೋನ್ ಮತ್ತಿತರ ಸೌಲಭ್ಯಗಳು ಲಭಿಸುತ್ತಿವೆ ಎಂಬ ಅನುಮಾನ ಮೂಡಿಸಿದೆ.
ಬಿಷ್ಣೋಯಿ ಹೆಸರು ಭಾರತೀಯ ಟ್ಯಾಬ್ಲಾಯ್ಡ್‌ಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ. ಈ ವಾರದಲ್ಲಿ ಎರಡನೇ ಬಾರಿಗೆ ಆತನ ಹೆಸರು ಮತ್ತೊಮ್ಮೆ ಚಾಲ್ತಿಗೆ ಬಂದಿದೆ. ಅಕ್ಟೋಬರ್ ೧೩ರಂದು, ಬಿಷ್ಣೋಯಿ ಗುಂಪಿನ ಓರ್ವ ಸದಸ್ಯ ಬಾಲಿವುಡ್ ನಟರೊಂದಿಗೆ ನಿಕಟ ಸಂಬಂಧ ಹೊಂದಿರುವ ಮುಂಬೈನ ರಾಜಕಾರಣಿ ಬಾಬಾ ಸಿದ್ದಿಕಿ ಹತ್ಯೆಯ ಹೊಣೆ ಹೊತ್ತುಕೊಂಡಿದ್ದ.
ಅಮೆರಿಕದ ಗುರ್‌ಪತ್ವಂತ್ ಪ್ರಕರಣ
ಅಮೆರಿಕದಲ್ಲಿನ ಒಂದು ಪ್ರತ್ಯೇಕ ಪ್ರಕರಣದಲ್ಲಿ, ಫೆಡರಲ್ ಪ್ರಾಸಿಕ್ಯೂಟರ್‌ಗಳು ನಿಖಿಲ್ ಗುಪ್ತಾ ಎಂಬ ಓರ್ವ ಭಾರತೀಯ ಪ್ರಜೆಯ ಮೇಲೆ ಅಮೆರಿಕ ಮೂಲದ ಸಿಖ್ ಪ್ರತ್ಯೇಕತಾವಾದಿ ಗುರ್‌ಪತ್ವಂತ್ ಸಿಂಗ್ ಪನ್ನುನ್ ಎಂಬಾತನ ಹತ್ಯೆ ನಡೆಸಲು ಬಾಡಿಗೆ ಹಂತಕರನ್ನು ಪಡೆಯಲು ಪ್ರಯತ್ನಿಸಿದ ಆರೋಪ ಹೊರಿಸಿದ್ದಾರೆ. ಈ ದಾಳಿ ಕಾರ್ಯರೂಪಕ್ಕೆ ಬರುವ ಮುನ್ನವೇ ಅದನ್ನು ತಡೆಯಲಾಗಿತ್ತು. ಅಮೆರಿಕನ್ ಅಧಿಕಾರಿಗಳು ಇದರ ಹಿಂದೆ ಭಾರತೀಯ ಅಧಿಕಾರಿಯ ಪಾತ್ರವಿದೆ ಎಂದಿದ್ದು, ಗುಪ್ತಾ ಈ ಆರೋಪವನ್ನು ತಳ್ಳಿಹಾಕಿದ್ದಾನೆ. ಈ ಪ್ರಕರಣ ವಾಷಿಂಗ್ಟನ್‌ನಲ್ಲಿ ಸಾಕಷ್ಟು ಕಳವಳ ಮೂಡಿಸಿದೆ.
ಭಾರತೀಯ ವಿಚಾರಣಾ ಸಮಿತಿ ಈ ಪ್ರಕರಣದ ಕುರಿತು ಮಾಹಿತಿ ಕಲೆಹಾಕಲು ಮಂಗಳವಾರದಿಂದ ಅಮೆರಿಕಗೆ ಭೇಟಿ ನೀಡಲಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ತಿಳಿಸಿದೆ.
ನಿಜ್ಜರ್ ಹತ್ಯೆ ಮತ್ತು ಗುರ್‌ಪತ್ವಂತ್ ಸಿಂಗ್ ಹತ್ಯಾ ಯತ್ನಗಳಲ್ಲಿ ತನ್ನ ಪಾತ್ರವನ್ನು ಭಾರತ ನಿರಾಕರಿಸಿದ್ದರೂ, ಈ ಕುರಿತು ವಿಚಾರಣೆ ನಡೆಸಲು ಮುಂದಾಗಿರುವುದು ಭಾರತ ಅಮೆರಿಕದೊಡನೆ ಉತ್ತಮ ಸಂಬಂಧ ಮುಂದುವರಿಸುವ, ಅಮೆರಿಕಗೆ ನೀಡುತ್ತಿರುವ ಮಹತ್ವದ ಸಂಕೇತವಾಗಿದೆ.
ರಾಜಸ್ತಾನದ ಕೃಷ್ಣಮೃಗ ಪ್ರಕರಣ
೧೯೯೮ರಲ್ಲಿ ರಾಜಸ್ತಾನದ ಜೋಧ್‌ಪುರದಲ್ಲಿ ಜಿಂಕೆಯ ವರ್ಗಕ್ಕೆ ಸೇರಿದ, ಸಂರಕ್ಷಿತ ಪ್ರಬೇಧದ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣದಲ್ಲಿ ಸಲ್ಮಾನ್ ಖಾನ್ ದೋಷಿ ಎಂದು ಸಾಬೀತಾಗಿತ್ತು. ಸ್ವತಃ ಸಸ್ಯಾಹಾರಿಗಳಾಗಿರುವ ಬಿಷ್ಣೋಯಿ ಸಮುದಾಯ ಕೃಷ್ಣಮೃಗವನ್ನು ಪವಿತ್ರ ಎಂದೇ ಪರಿಗಣಿಸುತ್ತದೆ.
೨೦೨೨ರಲ್ಲಿ, ಪಂಜಾಬಿ ಗಾಯಕ ಸಿಧು ಮೂಸೇವಾಲ ಹತ್ಯೆಯಲ್ಲೂ ಬಿಷ್ಣೋಯಿ ಹೆಸರು ಕೇಳಿಬಂದಿತ್ತು. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಆ ಹತ್ಯೆಯ ಜವಾಬ್ದಾರಿ ಹೊತ್ತರೂ ಬಿಷ್ಣೋಯಿ ಅದನ್ನು ಒಪ್ಪಿಕೊಂಡಿರಲಿಲ್ಲ. ಬಿಷ್ಣೋಯಿ ಮತ್ತು ಇತರರ ಮೇಲೆ ಮೊಕದ್ದಮೆ ದಾಖಲಾದರೂ, ಈ ಹತ್ಯೆಯಲ್ಲಿ ತನ್ನ ಪಾತ್ರವಿಲ್ಲ ಎಂದಿದ್ದಾನೆ.
ಇತ್ತೀಚಿನ ಬೆಳವಣಿಗೆಗಳು
ಸಲ್ಮಾನ್ ಖಾನ್ ಮನೆಯ ಮುಂದೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನವಿ ಮುಂಬೈ ಪೊಲೀಸರು ಬಿಷ್ಣೋಯಿ ಗುಂಪಿನ ಓರ್ವ ಸದಸ್ಯನನ್ನು ಬಂಧಿಸಿದ್ದಾರೆ. ಆತನನ್ನು ಹರಿಯಾಣದ ಪಾಣಿಪತ್‌ನ, ಸೆಕ್ಟರ್ ೨೯ರ, ರೈಲ್ ಕಾಲನ್ ಗ್ರಾಮದ ನಿವಾಸಿಯಾದ ಸುಕ್ಖಾ ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ ೧೨ರಂದು, ಜಿಮ್ ತರಬೇತುದಾರ ನಾದಿರ್ ಶಾ ಎಂಬಾತನ ಹತ್ಯೆಯಲ್ಲಿ ಮುಖ್ಯ ಆರೋಪಿಯಾಗಿದ್ದ, ಬಿಷ್ಣೋಯಿ ಮತ್ತು ಹಕೀಂ ಬಾಬಾ ಗುಂಪಿನ ಶಾರ್ಪ್ ಶೂಟರ್ ಆಗಿರುವ ಯೋಗೇಶ್ ಎಂಬಾತನನ್ನು ಅಕ್ಟೋಬರ್ ೧೭, ಗುರುವಾರದಂದು ಪೊಲೀಸರ ಜೊತೆಗಿನ ಗುಂಡಿನ ಚಕಮಕಿಯ ಬಳಿಕ ಬಂಧಿಸಲಾಗಿದೆ. ಮಥುರಾ ಹೆದ್ದಾರಿಯಲ್ಲಿ ಪೊಲೀಸರ ಜೊತೆಗೆ ಚಕಮಕಿಗಿಳಿದ ಯೋಗೇಶನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು. ಈ ಕಾರ್ಯಾಚರಣೆಯನ್ನು ದೆಹಲಿ ಪೊಲೀಸರ ವಿಶೇಷ ತಂಡ ಮತ್ತು ಮಥುರಾದ ಉತ್ತರ ಪ್ರದೇಶ ಪೊಲೀಸರು ಜಂಟಿಯಾಗಿ ಕೈಗೊಂಡಿದ್ದರು. ಯೋಗೇಶನ ಸಹಚರ, ಮಧುರ್ ಅಕ್ಟೋಬರ್ ೧೨ರಂದು ಪೊಲೀಸರ ಬಂಧನಕ್ಕೆ ಒಳಗಾಗಿದ್ದ.