ಬಿ.ಕೆ. ಹರಿಪ್ರಸಾದ್ ಶ್ರೀಗಳಲ್ಲಿ ಕ್ಷಮೆಯಾಚಿಸಬೇಕು
ಬೆಂಗಳೂರು: ರಾಜಕಾರಣದ ಕೆಸರನ್ನು ಆಧ್ಯಾತ್ಮಿಕ ತಪಸ್ವಿಗಳ ಮೇಲೆ ಎರಚುವುದು ಸಜ್ಜನಿಕೆ ಇಲ್ಲದ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ. ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಸಾಮಾಜಿಕ ವ್ಯವಸ್ಥೆಯಲ್ಲಿನ ಸುಧಾರಣೆಯ ಹಾದಿಯಲ್ಲಿನ ವ್ಯತ್ಯಾಸಗಳ ಕುರಿತು ಅಭಿಪ್ರಾಯಿಸುವುದೂ ಕೂಡ ಆಧ್ಯಾತ್ಮಿಕ ಮಾರ್ಗದರ್ಶಕರ ಸಿದ್ಧಾಂತದ ಭಾಗವೇ ಆಗಿದೆ. ಈ ನಿಟ್ಟಿನಲ್ಲಿ ಪೂಜ್ಯ ಪೇಜಾವರ ಶ್ರೀಗಳ ಅಭಿಪ್ರಾಯವನ್ನು ಆರೋಗ್ಯಕರ ಮನಸ್ಸಿನಿಂದ ಸ್ವೀಕರಿಸಿ ಪ್ರತಿಕ್ರಿಯಿಸುವ ಬದಲು ರಾಜಕೀಯ ಓಲೈಕೆಗಾಗಿ ಹಾಗೂ ಸುದ್ದಿಯಲ್ಲಿರಬೇಕೆಂಬ ತೆವಲಿನ ಕಾರಣಕ್ಕಾಗಿ ವಿಧಾನಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದರವರು ಯತಿ ಶ್ರೇಷ್ಠರನ್ನು ಟೀಕೆಗೆ ಬಳಸಿಕೊಂಡಿರುವುದು ಅವರ ಹಿರಿತನ ಗೌರವವನ್ನು ಕುಗ್ಗಿಸಿದೆ. ರಾಜಕೀಯ ಕ್ಷೇತ್ರದ ವ್ಯಾಪ್ತಿಯನ್ನು ಮೀರಿ ರಾಜಕಾರಣದ ಕೆಸರನ್ನು ಆಧ್ಯಾತ್ಮಿಕ ತಪಸ್ವಿಗಳ ಮೇಲೆ ಎರಚುವುದು ಸಜ್ಜನಿಕೆ ಇಲ್ಲದ ವ್ಯಕ್ತಿತ್ವವನ್ನು ತೋರಿಸುತ್ತದೆ. ಪೂಜ್ಯ ಪೇಜಾವರ ಶ್ರೀಗಳು ಶತಕೋಟಿ ಭಾರತೀಯರ ಶತ, ಶತಮಾನಗಳ ತ್ಯಾಗ, ಹೋರಾಟದ ಫಲವಾಗಿ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಶ್ರೀರಾಮನಿಗಾಗಿ ಮಂದಿರ ಸ್ಥಾಪಿಸುವಲ್ಲಿ ವಹಿಸಿದ ಪಾತ್ರದಿಂದಾಗಿ ಪೇಜಾವರ ಪೀಠ ವಿಶ್ವಭೂಪಟದಲ್ಲಿ ಭಕ್ತಿಯ ಶ್ರೇಷ್ಠ ಮಾನ್ಯತೆ ಪಡೆದಿದೆ. ಪೂಜ್ಯ ಪೇಜಾವರ ಶ್ರೀಗಳ ಕುರಿತು ಬಿಕೆ ಹರಿಪ್ರಸಾದ್ ಅವರು ಬಳಸಿರುವ ವ್ಯಾಖ್ಯಾನ ಶ್ರೀಮಠದ ಭಕ್ತರು ಹಾಗೂ ಹಿಂದೂಗಳ ಮನಸ್ಸನ್ನು ವಿಚಲಿತ ಗೊಳಿಸಿದೆ. ಈ ನಿಟ್ಟಿನಲ್ಲಿ ಕೂಡಲೇ ಬಿ.ಕೆ. ಹರಿಪ್ರಸಾದ್ ಅವರು ತಮ್ಮ ಟೀಕೆಯನ್ನು ವಾಪಸ್ ಪಡೆದುಕೊಂಡು ಶ್ರೀಗಳಲ್ಲಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತೇನೆ ಎಂದಿದ್ದಾರೆ