ಬಿ.ಕೆ. ಹರಿಪ್ರಸಾದ ಮುಖ್ಯಮಂತ್ರಿಯಾಗಲಿ
ಯಾದಗಿರಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಪರ, ವಿರೋಧಗಳು ಕೇಳಿಬರುತ್ತಿದ್ದಾಗಲೇ ಕಾಂಗ್ರೆಸ್ ಹಿರಿಯ ನಾಯಕರಾದ ಬಿ.ಕೆ.ಹರಿಪ್ರಸಾದ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಈಡಿಗ ಸಮುದಾಯದ ಪ್ರಣಾವಾನಂದ ಸ್ವಾಮೀಜಿ ಹೇಳಿದ್ದಾರೆ.
ಇಂದಿಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರಿಗಳು, ರಾಜ್ಯದಲ್ಲಿ ಈಡಿಗ ಸಮುದಾಯವು ತನ್ನದೇ ಆದ ರಾಜಕೀಯ ಪ್ರಾಬಲ್ಯ ಹೊಂದಿದೆ. ಮುಖ್ಯಮಂತ್ರಿ ಸ್ಥಾನ ಬದಲಾವಣೆ ಮಾಡುವುದಾದರೆ ನಮ್ಮ ಸಮಾಜದ ಬಿ.ಕೆ.ಹರಿಪ್ರಸಾದ್ ಅವರನ್ನು ಮುಖ್ಯಮಂತ್ರಿಯನ್ನಾಗಿಸಬೇಕು. ಇದರಿಂದ ಸಾಮಾಜಿಕ ನ್ಯಾಯ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.
ಹರಿಪ್ರಸಾದ ಅವರು ಕಳೆದ ನಾಲ್ಕು ದಶಕಗಳಿಂದಲೂ ಕಾಂಗ್ರೆಸ್ ಕಟ್ಟಾಳು ಆಗಿದ್ದಾರೆ ಪಕ್ಷದ ನಿಷ್ಠಾವಂತರಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿನ ನಾಯಕರಂತೆ ವಲಸೆ ಬಂದವರಲ್ಲ ಮೂಲ ಕಾಂಗ್ರೆಸ್‌ನವರಾದ ಇವರನ್ನು ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾದರೆ ಕೆಪಿಸಿಸಿ ಅಧ್ಯಕ್ಷರನ್ನಾಗಿಯಾದರೂ ಮಾಡಬೇಕು ಎಂದು ಹೇಳಿದ್ದಾರೆ.
ಸ್ವಾಮೀಜಿಗಳು ರಾಜಕೀಯಕ್ಕೆ ಬರಬೇಡಿ ಎಂಬ ಡಿಕೆಶಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಹೊರತು ರಾಜಕೀಯ ಮಾಡಿಲ್ಲ. ಅವರ ಅಭಿಪ್ರಾಯ ವ್ಯಕ್ತಪಡಿಸುವಾಗ ಮಂತ್ರಿಗಳು, ರಾಜಕೀಯ ನಾಯಕರು ಅವರನ್ನು ಕುರಿತು ಅಪಮಾನ ಮಾಡುವ ಮಾತುಗಳು, ಟೀಕೆಗಳು ಮಾಡಬಾರದು. ರಾಜಕಾರಣಿಗಳು ಮಾಡಿದ್ದೆಲ್ಲಾ ಸರಿ ಅಂತ ಒಪ್ಪಿಕೊಳ್ಳೋಕೆ ಸಮುದಾಯದ ಸ್ವಾಮೀಜಿಗಳು ಸಿದ್ಧರಿಲ್ಲ ಎಂದರು.
ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಕುರಿತು ಚಂದ್ರಶೇಖರ ಸ್ವಾಮೀಜಿಗಳು ಪ್ರತಿಕ್ರಿಯಿಸಿದಾಗ ಡಿ.ಕೆ.ಸುರೇಶ, ಬಾಲಕೃಷ್ಣ ಹಾಗೂ ಚೆಲುವರಾಯಸ್ವಾಮಿ ಅವರು ಸ್ವಾಗತ ಮಾಡಿದರು.
ಒಂದು ಕಡೆ ಸ್ವಾಗತ ಮಾಡೋದು, ಮತ್ತೊಂದು ಕಡೆ ರಾಜಕೀಯಕ್ಕೆ ಬರಬೇಡ ಅಂತ ಹೇಳೋದು ರಾಜಕೀಯ ಗಿಮಿಕ್ ಎಂದು ಟೀಕಿಸಿದರು.