For the best experience, open
https://m.samyuktakarnataka.in
on your mobile browser.

ಬಿ.ವೈ.ವಿಜಯೇಂದ್ರ ಹನುಮಮಾಲಾ‌ಧಾರಣೆ

07:13 PM Nov 30, 2024 IST | Samyukta Karnataka
ಬಿ ವೈ ವಿಜಯೇಂದ್ರ ಹನುಮಮಾಲಾ‌ಧಾರಣೆ

ಕೊಪ್ಪಳ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗಂಗಾವತಿ ತಾಲ್ಲೂಕಿನ ಪಂಪಾಸರೋವರದಲ್ಲಿ ಡಿ. ೧೨ರಂದು ಹನುಮಮಾಲಾ ಧಾರಣೆ ಮಾಡಲಿದ್ದಾರೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

೧೧ರಿಂದ ೧೩ರ ವರೆಗೆ ಹನುಮ ಮಾಲೆ ವಿಸರ್ಜನಾ ಕಾರ್ಯಕ್ರಮ ನೆರವೇರಲಿದ್ದು, ಕಳೆದ ಬಾರಿಯೇ ಬಿ.ವೈ.ವಿಜಯೇಂದ್ರಗೆ ಹನುಮ ಮಾಲೆ ಹಾಕಬೇಕು ಎಂಬ ಬಯಕೆ ಇತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಬಾರಿ ಹನುಮಮಾಲೆ ಹಾಕಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಹನುಮಮಾಲೆ ಹಾಕಲಿದ್ದಾರೆ ಎಂದರು.

ಅಂಜನಾದ್ರಿಯಲ್ಲಿ ಹನುಮಮಾಲಾಧಾರಿಗಳಿಗೆ ಎಲ್ಲ ವ್ಯವಸ್ಥೆ ಕೈಗೊಳ್ಳಲು ಸಭೆ ನಡೆಸಲಾಗಿದೆ. ಎಲ್ಲ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಾರಿ ಡಿ. ೧೧ರಿಂದ ೧೩ನೇ ತಾರೀಖಿನವರೆಗೆ ಮೂರು ದಿನಗಳ ಕಾಲ ಮೂರು ಹೊತ್ತು ಹನುಮಮಾಲಾಧಾರಿಗಳಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ೧೫೦೦ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಅಂಜನಾದ್ರಿ ಬೆಟ್ಟಕ್ಕೆ ಮತ್ತು ರಸ್ತೆಗಳ ಪಕ್ಕದಲ್ಲಿ‌ ದೀಪಾಲಂಕಾರ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಎಲ್ಲ ರಸ್ತೆಗಳಿಂದ ಬರುವ ಭಕ್ತರಿಗೆ ಹನುಮನಾಮ ಸ್ಮರಣೆಯ ಹಾಡುಗಳನ್ನು ಹಾಕಲು ತಿಳಿಸಲಾಗಿದೆ ಎಂದರು.

ಅಂಜನಾದ್ರಿಯ ಆಂಜನೇಯ ದೇವಸ್ಥಾನ ಅಭಿವೃದ್ಧಿಗೆ ೧,೩೫೦ ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪೈಕಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ೧೦೦ ಕೋಟಿ ರೂ., ಮುಖ್ಯಮಂತ್ರಿ ಸಿದ್ದರಾಮಯ್ಯ ೧೦೦ ಕೋಟಿ ರೂ., ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ೪೦ ಕೋಟಿ ರೂ. ಸೇರಿ ಒಟ್ಟು ೨೪೦ ಕೋಟಿ ರೂ.ಗೆ ಕಾಮಗಾರಿಗಳ ವಿವರ ಸಿದ್ಧಪಡಿಸಲಾಗಿದೆ. ಉಳಿದ ಬಾಕಿ ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲೀನಿ ರಜನೀಶ ಬಳಿಯು ಚರ್ಚಿಸಿದ್ದು, ನಾವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇವೆ ಎಂದಿದ್ದಾರೆ. ನಾವು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ, ಅನುದಾನ ತರಲು ಪ್ರಯತ್ನಿಸುತ್ತೇನೆ. ಗಂಗಾವತಿ ರೈಲುನಿಲ್ದಾಣಕ್ಕೆ ಅಂಜನಾದ್ರಿಯ ಹೆಸರಿಡಲು ಕೇಂದ್ರದ ರಾಜ್ಯ ಸಚಿವ ವಿ.ಸೋಮಣ್ಣನವರ ಮೂಲಕ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ ಎಂದರು.

ಎಂಎಲ್ಸಿ ಹೇಮಲತಾ ನಾಯಕ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಇದ್ದರು.