ಬೀಜ ಗ್ರಾಮ ಯೋಜನೆ ಆರಂಭಿಸಿದ ರೈತರ ಅತ್ಯಂತ ಪ್ರೀತಿಪಾತ್ರ ವಿಜ್ಞಾನಿ ಇನ್ನಿಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಸಂತಾಪ
ಬೆಂಗಳೂರು: ಖ್ಯಾತ ಕೃಷಿ ವಿಜ್ಞಾನಿ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಎಸ್. ಎ. ಪಾಟೀಲ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ನಾಡಿನ ಹೆಮ್ಮೆಯ ಕೃಷಿ ವಿಜ್ಞಾನಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ಡಾ|| ಎಸ್.ಎ.ಪಾಟೀಲ್ ಅವರ ನಿಧನದ ಸುದ್ದಿ ತಿಳಿದು ಬೇಸರವಾಯಿತು.
ಕುಲಪತಿಗಳಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯವನ್ನು ದೇಶದಲ್ಲೇ ಅತ್ಯುನ್ನತ ಶಿಕ್ಷಣ ಕೇಂದ್ರವಾಗಿ ಕಟ್ಟಿಬೆಳೆಸಿದ ಪಾಟೀಲರು ಹೈಬ್ರಿಡ್ ಹತ್ತಿ ತಳಿ ಸಂಶೋಧನೆ, ಗುಣಮಟ್ಟದ ಬೀಜ ವಿತರಣೆಗಾಗಿ "ಬೀಜ ಗ್ರಾಮ ಯೋಜನೆ" ಆರಂಭಿಸಿ ದೇಶದ ರೈತರ ಪಾಲಿಗೆ ಅತ್ಯಂತ ಪ್ರೀತಿಪಾತ್ರ ವಿಜ್ಞಾನಿಯಾಗಿದ್ದರು. ಪಾಟೀಲರ ಅಗಲಿಕೆಯಿಂದ ನಾಡಿನ ಕೃಷಿ ಮತ್ತು ಸಂಶೋಧನಾ ವಲಯ ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಎಂ. ಬಿ .ಪಾಟೀಲ್ : ನಾಡಿನ ಹೆಮ್ಮೆಯ ಕೃಷಿ ವಿಜ್ಞಾನಿ ಡಾ|| ಎಸ್.ಎ.ಪಾಟೀಲ್ ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ, ರಾಷ್ಟ್ರದಲ್ಲೇ ಅತ್ಯುತ್ತಮ ಶಿಕ್ಷಣ ಕೇಂದ್ರವಾಗಿ ಕಟ್ಟಿಬೆಳೆಸಿದರು. ರೈತಸ್ನೇಹಿ ವಿಜ್ಞಾನಿಯಾಗಿ ಅನೇಕ ಯಶಸ್ವಿ ಸಂಶೋಧನೆಗಳಿಗೂ ಅವರು ಕಾರಣಕರ್ತರಾಗಿದ್ದರು. ಅವರ ನಿಧನದಿಂದ ರಾಜ್ಯದ ಕೃಷಿ ಮತ್ತು ಸಂಶೋಧನಾ ವಲಯಕ್ಕೆ ತುಂಬಲಾಗದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ, ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿಯನ್ನು ಪರಮಾತ್ಮ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಬಸವರಾಜ ಬೊಮ್ಮಾಯಿ: ಖ್ಯಾತ ಕೃಷಿ ವಿಜ್ಞಾನಿ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಎಸ್. ಎ. ಪಾಟೀಲ್ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ಅತ್ಯಂತ ದುಖವಾಯಿತು. ಕೃಷಿ ಕ್ಷೇತ್ರದಲ್ಲಿ ಹೊಸ ತಳಿಗಳ ಸಂಶೋದನೆ ಮಾಡುವ ಮೂಲಕ ರೈತರ ಉತ್ಪಾದನೆ ಹಾಗೂ ಆದಾಯ ಹೆಚ್ಚಳ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿಯೂ ರೈತ ಪರ ಯೋಜನೆಗಳು ಜಾರಿಯಾಗುವಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದರು. ಅವರ ಅಗಲಿಕೆಯಿಂದ ಕೃಷಿ ಕ್ಷೇತ್ರ ಒಬ್ಬ ಕೃಷಿ ವಿಜ್ಞಾನಿಯನ್ನು ಕಳೆದುಕೊಂಡಂತಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಪ್ರಲ್ಹಾದ ಜೋಶಿ: ದೇಶದ ಅತ್ಯುನ್ನತ ಕೃಷಿ ವಿಜ್ಞಾನಿ ಹಾಗೂ ಶಿಕ್ಷಣ ತಜ್ಞರಾಗಿದ್ದ ಡಾ. ಎಸ್.ಎ. ಪಾಟೀಲ ಅವರ ಅಗಲಿಕೆಯ ಸುದ್ದಿ ತೀವ್ರ ನೋವನ್ನುಂಟು ಮಾಡಿದೆ. ನಮ್ಮ ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದ ಪಾಟೀಲರು, ಕರ್ನಾಟಕ ಕೃಷಿ ಮಿಷನ್ ನ ಅಧ್ಯಕ್ಷರು ಹಾಗೂ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕರೂ ಆಗಿದ್ದರು. ಪ್ರಮುಖ ವಾಣಿಜ್ಯ ಬೆಳೆಗಳಾದ ಹತ್ತಿ, ಶೇಂಗಾ, ನೈಜರ್, ಸೂರ್ಯಕಾಂತಿ ಮತ್ತು ಕ್ಯಾಸ್ಟರ್‌ಗಳಲ್ಲಿ ಒಟ್ಟು 16 ಮಿಶ್ರತಳಿಗಳನ್ನು ಮತ್ತು ಹೆಚ್ಚು ಇಳುವರಿ ನೀಡುವ ತಳಿಗಳನ್ನು ಅಭಿವೃದ್ಧಿಪಡಿಸಿದ ಖ್ಯಾತಿ ಡಾ.ಪಾಟೀಲ್ ಅವರದ್ದು. ಅವರು ಅಭಿವೃದ್ಧಿಪಡಿಸಿದ ಹತ್ತಿ ಹೈಬ್ರಿಡ್ ವರಲಕ್ಷ್ಮಿ ಪ್ರಪಂಚದ ಮೊದಲ ಅಂತರ-ನಿರ್ದಿಷ್ಟ ಉದ್ದದ ಪ್ರಧಾನ ಹತ್ತಿ ಹೈಬ್ರಿಡ್ ಆಗಿದೆ. ಇಂಥ ಹತ್ತುಹಲವು ಸಾಧನೆಗಳನ್ನು ಕೃಷಿ ಕ್ಷೇತ್ರಕ್ಕೆ ಅರ್ಪಿಸಿದ್ದ ಅವರ ಕೊಡುಗೆ ಅಪಾರ. ಭಾರತೀಯ ಕೃಷಿ ತಜ್ಞ ಕ್ಷೇತ್ರವು ಓರ್ವ ದಿಗ್ಗಜನನ್ನು ಕಳೆದುಕೊಂಡಿದೆ. ಆ ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿ ಕರುಣಿಸಿ ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.