For the best experience, open
https://m.samyuktakarnataka.in
on your mobile browser.

ಬುಲ್ಡೋಜರ್ ನ್ಯಾಯ ಅನಾಗರಿಕ

02:20 AM Aug 27, 2024 IST | Samyukta Karnataka
ಬುಲ್ಡೋಜರ್ ನ್ಯಾಯ ಅನಾಗರಿಕ

ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕಲು ಅವರ ಮನೆಗಳನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡುವ ಅನಾಗರಿಕ ಕ್ರಮವನ್ನು ಅನುಸರಿಸಲಾಗುತ್ತಿದೆ. ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಇದನ್ನು ಖಂಡಿಸಿರುವುದು ಸಕಾಲಿಕ. ಯಾರೇ ತಪ್ಪು ಮಾಡಲಿ ಅವರನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸುವುದು ಪೊಲೀಸರು ಮತ್ತು ಅಧಿಕಾರಿಗಳ ಕರ್ತವ್ಯ. ಅವರೇ ಶಿಕ್ಷಿಸಲು ಬರುವುದಿಲ್ಲ. ನ್ಯಾಯಾಲಯ ವಿಚಾರಣೆ ನಡೆಸಿ ಶಿಕ್ಷೆ ವಿಧಿಸುವುದು ವಿಳಂಬವಾಗುತ್ತದೆ ಎಂದು ನೇರ ಕ್ರಮ ಕೈಗೊಳ್ಳುವುದು ಆಕರ್ಷಕವಾಗಿ ಕಾಣುತ್ತದೆ. ಆದರೆ ಅದು ತಪ್ಪು ಕ್ರಮ. ಹಿಂದೆ ಕ್ರಿಮಿನಲ್‌ಗಳನ್ನು ದಮನ ಮಾಡಲು ಎನ್‌ಕೌಂಟರ್ ಅಸ್ತ್ರವನ್ನು ಬಳಸುತ್ತಿದ್ದರು. ಇದು ಜನರಲ್ಲಿ ಭೀತಿ ಮೂಡಿಸುತ್ತದೇ ಹೊರತು ನ್ಯಾಯ ವಿಧಾನದ ಬಗ್ಗೆ ಗೌರವ ಮೂಡಿಸುತ್ತಿರಲಿಲ್ಲ. ಎಷ್ಟೋ ಸಿನಿಮಾದಲ್ಲಿ ಹೀರೋ ಈ ಕೆಲಸ ಮಾಡುವುದನ್ನು ಜನ ನೋಡಿ ಆನಂದಿಸುತ್ತಾ ಇದ್ದಿದ್ದು ಉಂಟು. ಆದರೆ ನಿಧಾನವಾಗಿ ಯೋಚಿಸಿದಲ್ಲಿ ಇದು ಸರಿಯಾದ ಕ್ರಮವಲ್ಲ ಎಂಬುದು ಮನವರಿಕೆಯಾಗುತ್ತದೆ. ಇದರಲ್ಲಿ ಅಮಾಯಕರೂ ಬಲಿಯಾಗುವ ಅಪಾಯವಿದೆ. ಅದೇ ರೀತಿ ರೌಡಿಗಳು ಮತ್ತು ಕ್ರಿಮಿನಲ್‌ಗಳ ಮನೆಗಳನ್ನು ಬುಲ್ಡೋಜರ್ ಬಳಸಿ ನೆಲಸಮಮಾಡಿದರೆ ಅವರ ಕುಟುಂಬದವರು ಎಲ್ಲಿ ಹೋಗಬೇಕು. ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ತಪ್ಪು ಮಾಡಿದವರಿಗೆ ಮಾತ್ರ ಶಿಕ್ಷೆ ವಿಧಿಸಲು ಮಾತ್ರ ಅವಕಾಶವಿದೆ. ಅವರ ಕುಟುಂಬದವರಿಗೆ ಶಿಕ್ಷಿ ವಿಧಿಸಲು ಬರುವುದಿಲ್ಲ. ಯಾವ ಕ್ರಿಮಿನಲ್‌ಗೂ ಅವರ ಕುಟುಂಬದವರು ಬೆಂಬಲ ನೀಡಿರುವುದಿಲ್ಲ. ಅದರಲ್ಲೂ ಉಗ್ರರ ಕುಟುಂಬದವರಿಗೆ ಏನೂ ತಿಳಿದಿರುವುದಿಲ್ಲ. ಅವರ ಮನೆಯನ್ನು ನೆಲಸಮ ಮಾಡುವುದು ಅನಾಗರಿಕವಲ್ಲದೆ ಮತ್ತೇನೂ ಅಲ್ಲ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ೨೦೧೭ರಲ್ಲಿ ಬುಲ್ಡೋಜರ್ ರಾಜಕೀಯ ಅಸ್ತçವಾಗಿ ಮೊದಲು ಬಳಸಿದರು. ಅದರಲ್ಲೂ ಅಲ್ಪಸಂಖ್ಯಾತರ ಮನೆಗಳ ಮೇಲೆ ಕಣ್ಣಿಡಲಾಯಿತು. ಯಾರೋ ಕೆಲವರು ತಪ್ಪು ಮಾಡಿದರು ಎಂದು ಅವರ ಕುಟುಂಬದವರ ಮನೆಗಳ ಮೇಲೆ ಬುಲ್ಡೋಜರ್ ದಾಳಿ ನಡೆಸುವುದು ಯಾವ ನ್ಯಾಯ? ಖರ್ಗೆ ಅವರ ಪ್ರಶ್ನೆ ಸೂಕ್ತವಾಗಿದೆ. ಈ ವಿಷಯದಲ್ಲಿ ನ್ಯಾಯಾಂಗ ಕೂಡ ಮೌನವಹಿಸಬಾರದು. ಶಿಕ್ಷೆ ವಿಧಿಸುವುದಕ್ಕೆ ರೀತಿ ನೀತಿ ಇದೆ. ಅದನ್ನು ಬೇರೆಯವರು ಚಲಾಯಿಸಲು ಬರುವುದಿಲ್ಲ. ಹಿಂದೆ ಕಳ್ಳತನ ಮಾಡಿದವರಿಗೆ ಛಡಿ ಏಟುಕೊಡುವ ಪದ್ಧತಿ ಇತ್ತು. ಆಣೆ ಪ್ರಮಾಣದ ಮೂಲಕ ಜನರನ್ನು ತಪ್ಪದಾರಿಗೆ ಹೋಗದಂತೆ ತಡೆಯುವ ಪದ್ಧತಿಗಳು ಈಗಲೂ ಕೆಲವು ಕಡೆ ಜಾರಿಯಲ್ಲಿವೆ. ನಮ್ಮ ನ್ಯಾಯ ವಿತರಣೆಯಲ್ಲಿ ತಪ್ಪು ಮಾಡಿದವರು ಪಶ್ಚಾತ್ತಾಪ ಪಟ್ಟು ಒಳ್ಳೆಯವರಾಗಲು ಅವಕಾಶವಿದೆ. ಆದರೆ ಈ ರೀತಿ ಬುಲ್ಡೋಜರ್ ಬಳಸಿದರೆ ಅವರು ಶಾಶ್ವತವಾಗಿ ಕ್ರಿಮಿನಲ್‌ಗಳಾಗುವ ಅಪಾಯವಿದೆ. ಇದು ಜನಪರ ಸರ್ಕಾರ ಅನುಸರಿಸುವ ಪದ್ಧತಿಯಲ್ಲ.
ನಾವು ಮರಣದಂಡನೆಯನ್ನೇ ಒಪ್ಪುವುದಿಲ್ಲ. ಯಾರೇ ತಪ್ಪು ಮಾಡಲಿ ಅವರಿಗೆ ಉಗ್ರ ಶಿಕ್ಷೆ ವಿಧಿಸುವುದನ್ನು ಒಪ್ಪುವುದಿಲ್ಲ. ಕೊಲೆ, ದೇಶದ್ರೋಹ, ಅತ್ಯಾಚಾರದಂಥ ಹೀನ ಕೃತ್ಯಕ್ಕೆ ಮಾತ್ರ ಯಾವುದೇ ದಯೆ ತೋರುವುದಿಲ್ಲ. ನ್ಯಾಯಾಧೀಶರು ಕೂಡ ತಪ್ಪು ಮಾಡಿದವರನ್ನು ಎಲ್ಲ ರೀತಿ ಪರೀಕ್ಷಿಸಿ ಖಚಿತಪಡಿಸಿಕೊಂಡು ಶಿಕ್ಷೆ ವಿಧಿಸುತ್ತಾರೆ. ಇದರಿಂದ ವಿಳಂಬವಾಗುವುದು ಸಹಜ. ನಮ್ಮಲ್ಲಿ ನೂರು ಜನ ಕ್ರಿಮಿನಲ್‌ಗಳು ಕಾನೂನಿನ ಕುಣಿಕೆಯಿಂದ ಹೇಗೋ ತಪ್ಪಿಸಿ ಕೊಂಡು ಬಿಡಬಹುದು. ಆದರೆ ಒಬ್ಬನೇ ಒಬ್ಬ ಅಮಾಯಕ ಶಿಕ್ಷೆಗೆ ಗುರಿಯಾಗಬಾರದು ಎಂಬುದೇ ನೀತಿ. ಹೀಗಿರುವಾಗ ಬುಲ್ಡೋಜರ್ ಬಳಸುವುದು, ಎನ್‌ಕೌಂಟರ್ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ. ಜನರಿಗೆ ನ್ಯಾಯ ವಿತರಣೆಯಲ್ಲಾಗುತ್ತಿರುವ ವಿಳಂಬದ ಬಗ್ಗೆ ಅತೃಪ್ತಿ-ಅಸಮಾಧಾನ ಇರುವುದು ಸಹಜ. ಅದಕ್ಕೆ ನೇರ ಕ್ರಮ ಕೈಗೊಳ್ಳುವುದು ಸರ್ವಥಾ ಸರಿಯಲ್ಲ. ಇವುಗಳೆಲ್ಲ ನಮ್ಮ ಪ್ರಜಾಪ್ರಭುತ್ವದ ಬೇರುಗಳನ್ನು ಅಲುಗಾಡಿಸುವ ಕೆಟ್ಟ ಪ್ರವೃತ್ತಿಗಳಿಗೆ ಇಂಬು ಕೊಡುತ್ತವೆ. ನ್ಯಾಯಾಂಗ ವ್ಯವಸ್ಥೆ ಸ್ವತಂತ್ರವಾಗಿ ಕೆಲಸ ಮಾಡಬೇಕು. ಅದರಲ್ಲಿ ಹಸ್ತಕ್ಷೇಪ ಸಲ್ಲ. ಅನ್ಯಾಯ ನಮ್ಮ ಕಣ್ಣಿಗೆ ಕಾಣಿಸಿತು ಎಂದು ನೇರವಾಗಿ ಬಂದೂಕು ತೆಗೆದುಕೊಳ್ಳಲು ಬರುವುದಿಲ್ಲ. ನಕ್ಸಲೀಯರ ವಾದ ಇದರಿಂದಲೇ ಜನಮನ್ನಣೆ ಪಡೆಯಲಿಲ್ಲ ಎಂಬುದನ್ನು ಮರೆಯಬಾರದು. ಹಿಂಸಾಚಾರ ಯಾವುದೇ ರೂಪದಲ್ಲಿ ಬಂದರೂ ಅದನ್ನು ಒಪ್ಪಲು ಸಾಧ್ಯವಿಲ್ಲ. ಇದು ಸದ್ಯಕ್ಕೆ ಸುಖವನ್ನು ಕೊಡಬಹುದು. ಆದರೆ ಅಂತ್ಯದಲ್ಲಿ ನೋವನ್ನು ತರುತ್ತದೆ ಎಂಬುದನ್ನು ಮರೆಯಬಾರದು. ಕಾನೂನು ಪಾಲನೆ ಎಲ್ಲರ ಕರ್ತವ್ಯ. ಅದೇರೀತಿ ಕಾನೂನು ಉಲ್ಲಂಘಿಸಿದವರಿಗೆ ಶಿಕ್ಷೆ ವಿಧಿಸಲು ಕ್ರಮವಿದೆ. ಅದನ್ನು ನಾವೇ ಕೈಗೆತ್ತಿಕೊಳ್ಳಲು ಬರುವುದಿಲ್ಲ. ಪೊಲೀಸ್- ನ್ಯಾಯಾಲಯ ಎಲ್ಲವೂ ನಿಯಮಬದ್ಧವಾಗಿ ನಡೆಯಬೇಕು. ಅದಕ್ಕೆ ಅವಕಾಶ ಮಾಡಿಕೊಡಿಕೊಡುವುದು ಆಡಳಿತದಲ್ಲಿರುವವರ ಕರ್ತವ್ಯವೂ ಹೌದು. ಸರ್ಕಾರಗಳು ಬದಲಾಗಬಹುದು. ವ್ಯಕ್ತಿಗಳು ಬದಲಾಗಬಹುದು. ಕಾನೂನು ಬದಲಾಗುವುದಿಲ್ಲ. ಅಧಿಕಾರದಲ್ಲಿರುವವರು ನಾವೇ ಎಲ್ಲ ಬದಲಾವಣೆ ತಂದು ಬಿಡುತ್ತೇವೆ ಎಂಬ ಉತ್ಸಾಹದಲ್ಲಿರುವುದು ಸಹಜ. ಆದರೆ ಬದಲಾವಣೆ ವ್ಯವಸ್ಥೆಯ ಮೂಲಕ ಬರಬೇಕು. ಆಗ ಅದು ಶಾಶ್ವತವಾಗಿ ಉಳಿಯಬಲ್ಲುದು.