ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬೆಂಗಳೂರಿಗೆ ಮಳೆಕಾಟ ಜನಸಾಮಾನ್ಯರ ಪರದಾಟ

02:30 AM Oct 17, 2024 IST | Samyukta Karnataka

ಬೆಂಗಳೂರು ಈಗ ಮಳೆಯಿಂದ ತತ್ತರಿಸಿದೆ. ಹಿಂಗಾರು-ಮುಂಗಾರು ನಡುವೆ ಅಂತರವೇ ಇಲ್ಲದಂತಾಗಿದೆ. ರೈತರಿಗೆ ಮುಂಗಾರು ಬೆಳೆ ಕಟಾವು ಮಾಡಿಕೊಳ್ಳುವುದೇ ಕಷ್ಟವಾಗಿದೆ. ಇಂಥ ಸಂದರ್ಭದಲ್ಲಿ ಚಂಡಮಾರುತ ಚೆನ್ನೈ ಮತ್ತು ಬೆಂಗಳೂರು ಸೇರಿದಂತೆ ಹಲವು ನಗರಗಳನ್ನು ಕಾಡುತ್ತಿದೆ. ಇದಕ್ಕೆ ನಿಸರ್ಗ ಕಾರಣವಲ್ಲ. ನಾವು ಮಾಡಿಕೊಂಡ ಎಡವಟ್ಟುಗಳ ಪರಿಣಾಮವನ್ನು ಎದುರಿಸಬೇಕಾಗಿ ಬಂದಿದೆ. ಅದರಲ್ಲೂ ಪ್ರತಿದಿನ ಕೆಲಸಕ್ಕೆ ಹೋಗುವವರ ಪರದಾಟವಂತೂ ಹೇಳುವಂತಿಲ್ಲ. ಆಟೋಗಳ ದರ ಗಗನಕ್ಕೇರಿದೆ. ಮೆಟ್ರೋ ಸಾರಿಗೆ ಮಾತ್ರ ನಿರಂತರ ನಡೆದಿದೆ. ಇಂಥ ಸಂದರ್ಭದಲ್ಲಿ ಜನರ ನೆರವಿಗೆ ಬರುವುದು ಸರ್ಕಾರದ ಕರ್ತವ್ಯ. ಮೊದಲು ಮಳೆನೀರು ಹರಿದುಹೋಗಲು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ನೊಂದವರಿಗೆ ಪರಿಹಾರ ನೀಡಬೇಕು. ವೈಜ್ಞಾನಿಕವಾಗಿ ರಾಜಾಕಾಲುವೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು.
ಇಂದಿನ ಎಡವಟ್ಟುಗಳಿಗೆ ಬಡವರು ಯಾರೂ ಕಾರಣರಲ್ಲ. ಉಳ್ಳವರು ಹಾಗೂ ಹಣವಂತರು ಮನಬಂದಂತೆ ನಿರ್ಮಿಸಿದ ಫ್ಲ್ಯಾಟ್‌ಗಳು, ಮುಚ್ಚಿದ ಕೆರೆಗಳು, ರಾಜಕಾಲುವೆಗಳು ಇಂದು ಅವರಿಗೆ ಭೂತವಾಗಿ ಕಾಡುತ್ತಿವೆ. ಮಾಡಿದ್ದುಣ್ಣೊ ಮಾರಾಯ. ಕೆಂಪೇಗೌಡ ಕೆರೆ ಕಟ್ಟೆ ಕಟ್ಟಿಸಿ ಬೆಂಗಳೂರು ಉಳಿಸಿ ಬೆಳೆಸಿದ. ಅವನ ಹೆಸರು ಹೇಳಿಕೊಂಡು ಬಂದವರು ಕೆರೆ-ರಾಜಕಾಲುವೆಗಳನ್ನು ನುಂಗಿದರು. ಬಹುಮಹಡಿ ಮನೆಗಳನ್ನು ಕಟ್ಟಿ ಮಾರಿದರು. ಈಗ ಮಳೆ ನೀರು ಎಲ್ಲಿ ಹೋಗಬೇಕು ಎಂದರೆ ಉತ್ತರವಿಲ್ಲ. ಬ್ರ್ಯಾಂಡ್ ಬೆಂಗಳೂರು ಹೋಗಿ ಕಸ-ಕೊಳೆನೀರಿನ ನಗರವಾಗಿದೆ. ಐಟಿಬಿಟಿಯವರು ಬೆಂಗಳೂರು ಬಿಟ್ಟು ಹೋಗುತ್ತೇವೆ ಎಂದು ಹೆದರಿಸುತ್ತಾರೆ. ಸರ್ಕಾರಕ್ಕೂ ಅವರು ಬಿಟ್ಟು ಹೋಗುವುದಿಲ್ಲ ಎಂಬುದು ಗೊತ್ತಿವೆ. ಸಮೀಪದ ಹೈದರಾಬಾದ್-ಚೆನ್ನೈಗೆ ಹೋಲಿಸಿದರೆ ಬೆಂಗಳೂರು ಸಾವಿರ ಪಾಲು ಮೇಲು.
ಇಂದಿನ ಬೆಂಗಳೂರಿನ ಅವ್ಯವಸ್ಥೆಗೆ ಬೇರೆ ಯಾರೂ ಕಾರಣರಲ್ಲ, ನಾವೇ ಎಂಬುದನ್ನು ಒಪ್ಪಿಕೊಳ್ಳಬೇಕು. ಹಿಂದೆ ಬೆಂಗಳೂರು ಕಟ್ಟಿದವರಿಗೆ ದೂರದರ್ಶಿತ್ವ ಇತ್ತು. ಈಗಲೂ ಹಳೆ ಮಾವಳ್ಳಿಯ ಓಬಳಪ್ಪ ಬೀದಿಗೆ ಹೋಗಿ ಚಿಕ್ಕ ಚಿಕ್ಕ ಮನೆಗಳು, ಒಂದು ಪುಟ್ಟ ಕಾರುಹೋಗುವಷ್ಟು ರಸ್ತೆ. ಆದರೂ ಒಂದು ಹನಿ ಮಳೆ ನೀರು ನಿಲ್ಲುವುದಿಲ್ಲ. ಜಯನಗರ ಬಡಾವಣೆ ಈಗಲೂ ಸುಂದರ. ಒಂದು ಹನಿ ನೀರು ನಿಲ್ಲುವುದಿಲ್ಲ. ವಾಣಿಜ್ಯ ಸಂಕೀರ್ಣ-ವಸತಿ ಎಲ್ಲವೂ ವಿಶಾಲ. ಗಾಳಿ ಬೆಳಕಿಗೆ ಕೊರತೆ ಇಲ್ಲ. ಐಟಿ ಬಿಟಿ ಬಂದ ಮೇಲೆ ನಿರ್ಮಾಣಗೊಂಡ ಬಡಾವಣೆಗಳನ್ನು ನೋಡಿ ಕಾರು ನಿಲ್ಲಿಸುವ ಸ್ಥಳದಲ್ಲಿ ಮಳೆ ನೀರು. ರಸ್ತೆಗಳ ಪಕ್ಕದಲ್ಲಿ ಮಳೆ ನೀರು ಹರಿದುಹೋಗಲು ಚರಂಡಿಗಳೇ ಇಲ್ಲ. ಅದರಿಂದ ರಸ್ತೆಗಳೇ ಚರಂಡಿ. ಇದಕ್ಕೆ ಯಾರು ಹೊಣೆ? ಬೆಂಗಳೂರು ಮಹಾನಗರ ಪಾಲಿಕೆ ಇದ್ದೂ ಇಲ್ಲದಂತಾಗಿದೆ. ಈಗ ಮಳೆಗೆ ಹೆದರಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಐಟಿ ಬಿಟಿಯವರಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚನೆ ನೀಡಬೇಕಾಗಿ ಬಂದಿದೆ.
ಬೆಂಗಳೂರು ನಗರ ಮಲೆನಾಡಿನಲ್ಲಿ ಇಲ್ಲ. ಇದರ ಬಳಿ ಯಾವ ನದಿಯೂ ಹರಿಯುವುದಿಲ್ಲ. ಸಮುದ್ರ ತೀರ ಇಲ್ಲ. ಆದರೂ ಮಳೆ ನೀರಿಗೆ ಹೆದರುವ ಕಾಲ ಬಂದಿದೆ. ಬೆಂಗಳೂರು ಸಮುದ್ರ ಮಟ್ಟದಿಂದ ೯೦೦ ಮೀಟರ್ ಎತ್ತರದಲ್ಲಿದೆ. ಮಳೆನೀರು ಹರಿದು ಹೋಗಲು ಸಾಕಷ್ಟು ಅವಕಾಶಗಳಿವೆ. ಹಿಂದೆ ಬೆಂಗಳೂರು ಸುತ್ತ ೨೮೫ ಕೆರೆಗಳಿದ್ದವು. ಇವುಗಳಲ್ಲಿ ಮಳೆ ನೀರು ಸಂಗ್ರಹವಾಗುತ್ತಿತ್ತು. ತಿಪ್ಪಗೊಂಡನಹಳ್ಳಿ ಕೆರೆ ದೊಡ್ಡದು. ಕೆರೆಗಳಲ್ಲಿ ಒಂದು ರೀತಿಯ ನೈಸರ್ಗಿಕ ನಿಯಮ ಪಾಲನೆಯಾಗುತ್ತಿತ್ತು. ಪ್ರವಾಹ ನಿಯಂತ್ರಣಕ್ಕೆ ಬರುತ್ತಿತ್ತು. ಹಿಂದೆ ಬರುತ್ತಿದ್ದ ವಾಡಿಕೆ ಮಳೆ ಈಗಲೂ ಬರುತ್ತಿದೆ. ಮಳೆ ನೀರು ಹರಿದು ಹೋಗಲು ಸ್ಥಳವಿಲ್ಲ. ಅದರಿಂದ ರಸ್ತೆಗಳು ರಾಜಾಕಾಲುವೆಯಾಗಿವೆ. ಫ್ಲ್ಯಾಟ್‌ಗಳ ಪಾರ್ಕಿಂಗ್ ಸ್ಥಳ ಕೆರೆಗಳಾಗಿವೆ.
ನಗರದಲ್ಲಿ ಕಳೆದ ೧೨ ಗಂಟೆಯಲ್ಲಿ ೩೦ ಮೀ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಅಧಿಕಗೊಂಡಂತಾಗಿದೆ.
ಹಿಂದೆ ಬೆಂಗಳೂರು ಕಟ್ಟಿದವರು ಮಳೆ ನೀರು ಹರಿದು ಹೋಗಲು ಮೂರು ಕಡೆ ವ್ಯವಸ್ಥೆ ಮಾಡಿದ್ದರು. ಕೋರಮಂಗಲ-ಚಲ್ಲಘಟ್ಟ ಕಣಿವೆ, ಹೆಬ್ಬಾಳ ಕಣಿವೆ, ವೃಷಭಾವತಿ ಕಣಿವೆ. ಇವುಗಳಿಗೆ ಸಂಪರ್ಕ ಕಲ್ಪಿಸಿದ್ದ ರಾಜಾಕಾಲುವೆಗಳು ಮಾಯವಾಗಿವೆ. ಇವುಗಳನ್ನು ಬಡವರು ಯಾರೂ ಕಬಳಿಸಿ ಮನೆ ಕಟ್ಟಿಕೊಂಡಿಲ್ಲ. ಶ್ರೀಮಂತರೇ ಬಂಗಲೆಗಳನ್ನು ಕಟ್ಟಿಕೊಂಡು ಬಿಬಿಎಂಪಿಯನ್ನು ಶಪಿಸುತ್ತಿದ್ದಾರೆ. ಇದು ವಾಸ್ತವ ಸಂಗತಿ. ನಾಡು ಕಟ್ಟಿದ ಕೆಂಪೇಗೌಡರು ಹಾಕಿಕೊಟ್ಟ ದಾರಿಬಿಟ್ಟಿದ್ದೇವೆ. ಸುದೈವ ಬಡವರು ಹಳೆ ಮನೆಯಲ್ಲಿ ನೆಮ್ಮದಿಯಾಗಿದ್ದಾರೆ. ಈಗಲೂ ಕಾಲ ಮಿಂಚಿಲ್ಲ. ರಸ್ತೆಗಳ ಇಕ್ಕೆಲ್ಲಗಳಲ್ಲಿರುವ ಚರಂಡಿಗಳನ್ನು ಅಭಿವೃದ್ಧಿಪಡಿಸಿ ನೀರು ಹರಿಯುವಂತೆ ಮಾಡಬೇಕು. ರಾಜಕಾಲುವೆಯನ್ನು ಆಕ್ರಮಿಸಿಕೊಂಡವರು ಸ್ವಯಂಪ್ರೇರಣೆಯಿಂದ ಬಿಟ್ಟುಕೊಡಬೇಕು. ಕುಡಿಯಲು ಕಾವೇರಿ ನೀರು ತರುವ ಹಾಗೆ ಮಳೆ ನೀರು ಸುಲಭವಾಗಿ ಹರಿದುಹೋಗಲು ವ್ಯವಸ್ಥೆ ಮಾಡಬೇಕು. ತಂತ್ರಜ್ಞಾನದ ಕೊರತೆ ಇಲ್ಲ. ರಾಜಕೀಯ ಇಚ್ಛಾಶಕ್ತಿ ಇಲ್ಲ. ರಾಜಧಾನಿಯ ಘನತೆ ಗೌರವ ಉಳಿಯಬೇಕು. ನಗರದ ಸರ್ವತೋಮುಖ ಬೆಳವಣಿಗೆ ಎಂದರೆ ಎಲ್ಲ ನಿವಾಸಿಗಳ ಸುರಕ್ಷತೆ. ಮಳೆ ನೀರು ಬೇಕು. ಅದೇರೀತಿ ಮಳೆ ನೀರು ಸುರಕ್ಷಿತವಾಗಿ ಹರಿದುಹೋಗುವಂತೆ ನೋಡಿಕೊಳ್ಳಬೇಕು. ಇದಕ್ಕೆ ಜನ ಮತ್ತು ಸರ್ಕಾರ ಒಂದುಗೂಡಿ ಕೆಲಸ ಮಾಡಬೇಕು.

Next Article