ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸ ಕಚೇರಿ ಉದ್ಘಾಟನೆ
ಸುಮಾರು 25 ವರ್ಷಗಳಿಂದ ಪ್ರಯತ್ನ
ಬೆಂಗಳೂರು: ಮುಂಬೈ ಬಳಿಕ ಬೆಂಗಳೂರಿನಲ್ಲಿ ಅಮೆರಿಕ ದೂತವಾಸ ಕಚೇರಿ ಆರಂಭವಾಗಿದೆ, ಅಮೆರಿಕ ಕಾನ್ಸುಲೆಟ್ ಕಚೇರಿ ಸ್ಥಾಪನೆಯಿಂದ ಸಾಕಷ್ಟು ಅನುಕೂಲವಾಗಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸ ಕಚೇರಿ ಆರಂಭಿಸಲು ಸುಮಾರು 25 ವರ್ಷಗಳಿಂದ ಪ್ರಯತ್ನ ನಡೆದಿತ್ತು. ಆದರೆ ಕಾರಣಾಂತರಗಳಿಂದ ಸಾಕಾರಗೊಂಡಿರಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಯಾಗಿದ್ದಾಗ ಮನವಿ ಸಲ್ಲಿಕೆ ಮಾಡಲಾಗಿತ್ತು. ಆಗ ಕರ್ನಾಟಕದಲ್ಲಿ ಎಸ್ಎಂ ಕೃಷ್ಣ ಮುಖ್ಯಮಂತ್ರಿ ಆಗಿದ್ದರು. ಅವರ ನೇತೃತ್ವದಲ್ಲಿ ಮನವಿ ಮಾಡಿದ್ದೆವು. ಅದಾದ ನಂತರ ಎಸ್ಎಂ ಕೃಷ್ಣ ವಿದೇಶಾಂಗ ಸಚಿವರಾದರು. ಆಗಲೂ ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಆರಂಭಿಸಲು ಪ್ರಯತ್ನಿಸಲಾಗಿತ್ತು. ಆದರೆ ಸಾಕಾರಗೊಂಡಿರಲಿಲ್ಲ, ಇದೀಗ ಅಂತಿಮವಾಗಿ ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸ ಕಚೇರಿ ಉದ್ಘಾಟನೆಯಾಗಿರುವುದು ಸಂತಸ ತಂದಿದೆ ಐಟಿ-ಬಿಟಿ, ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ ಅನುಕೂಲವಾಗಲಿದೆ. ಮುಂಬೈ ಬಳಿಕ ಬೆಂಗಳೂರಿನಲ್ಲಿ ಅಮೆರಿಕ ದೂತವಾಸ ಕಚೇರಿ ಆರಂಭವಾಗಿದೆ ಎಂದರು. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಎಂಬಿ ಪಾಟೀಲ್, ಸಚಿವ ಪ್ರಿಯಾಂಕ್ ಖರ್ಗೆ, ಸಂಸದ ತೇಜಸ್ವಿ ಸೂರ್ಯ, ಸಂಸದ ಡಾ ಮಂಜುನಾಥ್ ಮತ್ತು ಅಮೆರಿಕಾ ರಾಯಭಾರಿ ಅಧಿಕಾರಿಗಳು ಭಾಗಿಯಾಗಿದ್ದರು. ಹಾಗೇ ಖ್ಯಾತ ಉದ್ಯಮಿ ಕಿರಣ್ ಮಜುಂದಾರ್ ಷಾ, ಕ್ರಿಸ್ ಗೋಪಾಲಕೃಷ್ಣನ್ ಕೂಡ ಭಾಗವಹಿಸಿದ್ದರು.