ಬೆಂಗಳೂರು- ವಿಜಯಪುರ ರೈಲು ಪ್ರಯಾಣದ ಅವಧಿ 14ರಿಂದ 10 ಗಂಟೆಗೆ ಇಳಿಸಲು ಕ್ರಮ
ಬೆಂಗಳೂರು- ವಿಜಯಪುರ ರೈಲು ಪ್ರಯಾಣದ ಅವಧಿಯನ್ನು 14ರಿಂದ 10 ಗಂಟೆಗೆ ಇಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ವೆಚ್ಚ ಹಂಚಿಕೆಯ 9 ರೈಲ್ವೆ ಯೋಜನೆಗಳಿಗೆ ಕಟ್ಟುನಿಟ್ಟಿನ ಕಾಲಮಿತಿ ನಿಗದಿ ಮಾಡಿದ್ದು ರೈಲು ಪ್ರಯಾಣವನ್ನು ಅನುಕೂಲಕರ ಮತ್ತು ಸುಖದಾಯಕವನ್ನಾಗಿ ಮಾಡಲು ಹಾಗೂ ವೆಚ್ಚ ಹಂಚಿಕೆಯ 9 ರೈಲು ಯೋಜನೆಗಳ ಸ್ಥಿತಿಗತಿ ಬಗ್ಗೆ ಚರ್ಚಿಸಲು ಖನಿಜ ಭವನದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಮತ್ತು ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ.
ರಾಜಧಾನಿಯಿಂದ ವಿಜಯಪುರ ಮತ್ತು ಬಾಗಲಕೋಟೆಗಳಿಗೆ ರೈಲು ಪ್ರಯಾಣಕ್ಕೆ ಈಗ ಸುಮಾರು 14 ಗಂಟೆಗಳ ಕಾಲ ಹಿಡಿಸುತ್ತಿದ್ದು, ಇದನ್ನು 10 ಗಂಟೆಗಳಿಗೆ ಇಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಇದರಿಂದಾಗಿ, ವಾಯವ್ಯ ಕರ್ನಾಟಕದ ಜನರು ಬೆಂಗಳೂರಿಗೆ ಬಂದುಹೋಗಲು ಅನುಕೂಲವಾಗಲಿದೆ.
ಈ ಕ್ರಮಗಳ ಜೊತೆಗೆ ಬೆಂಗಳೂರಿನಿಂದ ವಿಜಯಪುರ, ಬಾಗಲಕೋಟೆಗಳಿಗೆ ವಿಶೇಷ ರೈಲುಗಳನ್ನು ಓಡಿಸಬೇಕಾದ ಅಗತ್ಯವಿದೆ. ಮಿಗಿಲಾಗಿ, ವಿದ್ಯುದೀಕರಣ ಕಾಮಗಾರಿ ಮುಗಿದರೆ ವಿಜಯಪುರ, ಬಾಗಲಕೋಟೆಗಳಿಗೆ `ವಂದೇ ಭಾರತ್’ ಎಕ್ಸಪ್ರೆಸ್ ರೈಲು ಸೇವೆ ಆರಂಭಿಸುವಂತೆ ರೈಲ್ವೆ ಮಂಡಳಿಯನ್ನು ಕೋರಲಾಗುವುದು.
ವೆಚ್ಚ ಹಂಚಿಕೆ ಯೋಜನೆಗಳಿಗೆ ಗಡುವು
ರಾಜ್ಯದಲ್ಲಿ ರೈಲ್ವೆಯೊಂದಿಗೆ ವೆಚ್ಚ ಹಂಚಿಕೆ ಆಧಾರದ ಮೇಲೆ 9 ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ. ಆದರೆ, ಇವು ಕಾಲಮಿತಿಯಲ್ಲಿ ಪೂರ್ಣಗೊಳ್ಳದೆ ಇರುವುದರಿಂದ ವೆಚ್ಚ ಮಿತಿ ಮೀರುತ್ತಿದೆ. ಆದ್ದರಿಂದ ಇವುಗಳ ವೆಚ್ಚ ಹೆಚ್ಚಾಗದಂತೆ ನೋಡಿಕೊಂಡು, ತ್ವರಿತ ಗತಿಯಲ್ಲಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದೆ ಎಂದಿದ್ದಾರೆ.