ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿ ಹೆಚ್ಚಳ
ಬೆಂಗಳೂರು: ಹೆಸರುಕಾಳು ಖರೀದಿಯ ಪ್ರಮಾಣ ಹೆಚ್ಚಿಸಲು 38,320 ಮೆಟ್ರಿಕ್ ಟನ್ ಖರೀದಿಗೆ ಅವಕಾಶ ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಭಾರತೀಯ ಆಹಾರ ನಿಗಮದ ವರ್ಕಿಂಗ್ ಕ್ಯಾಪಿಟಲ್‌ಗೆ ಆರ್ಥಿಕ ವರ್ಷ 2025 ಕ್ಕೆ ₹10,700 ಕೋಟಿಗಳ ಈಕ್ವಿಟಿ ಇನ್ಫ್ಯೂಷನ್ ಅನ್ನು ಕ್ಯಾಬಿನೆಟ್ ಇಂದು ಅನುಮೋದಿಸಿದೆ. ಈ ಮಹತ್ವದ ಹೆಜ್ಜೆಯು ಭಾರತೀಯ ಆಹಾರ ನಿಗಮ ತನ್ನ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ನಮ್ಮ ರೈತರಿಗೆ ಬೆಂಬಲವನ್ನು ನೀಡಲು, ಮಾರುಕಟ್ಟೆಯಲ್ಲಿ ಆಹಾರ ಧಾನ್ಯದ ಬೆಲೆಗಳನ್ನು ಸ್ಥಿರಗೊಳಿಸಲು ಮತ್ತು ನಮ್ಮ ಸಾರ್ವಜನಿಕ ವಿತರಣಾ ವ್ಯವಸ್ಥೆಯ (PDS) ದಕ್ಷತೆಯನ್ನು ಮತ್ತಷ್ಟು ಸಕ್ರಿಯಗೊಳಿಸಲು ಉಪಯೋಗಕಾರಿಯಾಗಿದೆ. ಭಾರತದ ಆಹಾರ ಭದ್ರತೆಗೆ ಆಧಾರ ಸ್ತಂಭವಾದ ಭಾರತೀಯ ಆಹಾರ ನಿಗಮವನ್ನು ಬಲಪಡಿಸುವ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ಎಂದಿದ್ದಾರೆ.
ಕೇಂದ್ರ ಸರ್ಕಾರದ ಈ ಉಪಕ್ರಮದಿಂದ ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ಅನುಕೂಲವಾಗಲಿದೆ. ಈ ಮೊದಲು 22 ಸಾವಿರದ 215 ಮೆಟ್ರಿಕ್ ಟನ್ ಹೆಸರುಕಾಳು ಖರೀದಿಗೆ ಅವಕಾಶ ನೀಡಲಾಗಿತ್ತು. ಬೆಲೆ ಕುಸಿತದಿಂದಾಗಿ ಖರೀದಿ ಪ್ರಮಾಣವನ್ನು ಹೆಚ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಲ್ಲಿ ತಾವು ಮನವಿ ಮಾಡಿದ್ದಾಗಿ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರ 16 ಸಾವಿರದ 105 ಮೆಟ್ರಿಕ್ ಟನ್ ಹೆಚ್ಚುವರಿ ಒಳಗೊಂಡಂತೆ ಒಟ್ಟು 38 ಸಾವಿರದ 320 ಮೆಟ್ರಿಕ್ ಟನ್ ಖರೀದಿಗೆ ಅವಕಾಶ ನೀಡಿದೆ. ಈಗಾಗಲೇ 22 ಸಾವಿರದ 215 ಮೆಟ್ರಿಕ್ ಟನ್ ಸಂಗ್ರಹವಾಗಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರದ ನೋಡಲ್ ಏಜೆನ್ಸಿಗಳು ತಕ್ಷಣವೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದು ಅವರು ಸೂಚಿಸಿದ್ದಾರೆ.