ಬೆನ್ನುಮೂಳೆಯೇ ಆಧಾರಸ್ತಂಭ
ಇಂದು, ಅಕ್ಟೋಬರ್ ೧೬ರಂದು ವಿಶ್ವ ಬೆನ್ನುಹುರಿ ದಿನ ಆಚರಿಸಲಾಗುತ್ತಿದೆ. ಈ ದಿನದ ಉದ್ದೇಶವೇ ಬೆನ್ನುಹುರಿ ಸಮಸ್ಯೆಗಳು, ಅದಕ್ಕೆ ಸೂಕ್ತ ಚಿಕಿತ್ಸೆ, ಬೆನ್ನುಹುರಿಯನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದರ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.
ಇಂದು ವಿಶ್ವದಾದ್ಯಂತ ಲಕ್ಷಾಂತರ ಜನರು ಬೆನ್ನುನೋವು ಮತ್ತು ತತ್ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಬೆನ್ನುಮೂಳೆಯ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದರ ಪ್ರಾಮುಖ್ಯತೆಯನ್ನೇ ಯಾರೂ ಒತ್ತಿ ಹೇಳುವುದಿಲ್ಲ.
ಬೆನ್ನುನೋವು ಅಂಗವೈಕಲ್ಯದ ಪ್ರಮುಖ ಕಾರಣಗಳಲ್ಲೊಂದಾಗಿದ್ದು, ಇದು ಎಲ್ಲ ವಯಸ್ಸಿನ ಜನರ ಮೇಲೂ ಪರಿಣಾಮ ಬೀರುತ್ತದೆ. ದೇಹವನ್ನು ಬೆಂಬಲಿಸಿ ಮುನ್ನಡೆಸುವಲ್ಲಿ, ನರಮಂಡಲವನ್ನು ರಕ್ಷಿಸುವಲ್ಲಿ ಮತ್ತು ಚಲನೆಯನ್ನು ಸಕ್ರಿಯಗೊಳಿಸುವಲ್ಲಿ ಬೆನ್ನುಮೂಳೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೂ, ಕಳಪೆ ಭಂಗಿ, ಜಡ ಜೀವನಶೈಲಿ ಮತ್ತು ವಸ್ತುಗಳನ್ನು ಅಸಮರ್ಪಕವಾಗಿ ಎತ್ತುವ ತಂತ್ರಗಳಂಥ ಅಂಶಗಳು ಬೆನ್ನುಮೂಳೆಯ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿಬಿಡುತ್ತವೆ.
ವಿಶ್ವ ಬೆನ್ನುಹುರಿಯ ದಿನದ ಈ ಸಂದರ್ಭದಲ್ಲಿ, ಬೆನ್ನುಮೂಳೆಯ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಜನರಿಗೆ ಸರಳ ಮತ್ತು ಪರಿಣಾಮಕಾರಿ ಬದಲಾವಣೆಗಳನ್ನು ಮಾಡಿಕೊಳ್ಳಲು ಈ ಕೆಳಗಿನ ಸಲಹೆಗಳನ್ನು ನೀಡಲಾಗಿದೆ.
ನಿಂತಿರುವಾಗ, ಕುಳಿತುಕೊಳ್ಳುವಾಗ ಇಲ್ಲವೇ ನಡೆಯುವಾಗ, ಬೆನ್ನುಮೂಳೆಯನ್ನು ನೇರವಾಗಿ ಜೋಡಿಸುವುದು ಅತ್ಯಗತ್ಯ. ಬೆನ್ನು ನೇರವಾಗಿರುವಂತೆ ಕುಳಿತುಕೊಳ್ಳಿ, ಭುಜಗಳನ್ನು ಸಡಿಲಗೊಳಿಸಿ ಮತ್ತು ಪಾದಗಳು ನೆಲದ ಮೇಲೆ ಚಪ್ಪಟೆಯಾಗಿರುವಂತೆ ನೋಡಿಕೊಳ್ಳಿ. ಪ್ರಮುಖ ಸ್ನಾಯುಗಳನ್ನು ಬಲಪಡಿಸುವಂಥ ವ್ಯಾಯಾಮಗಳನ್ನು ಮಾಡಿ, ಉದಾಹರಣೆಗೆ ಈಜು, ಸೂರ್ಯನಮಸ್ಕಾರದಂತಹ ಯೋಗ ಸಹಾಯಕಾರಿಯಾಗಿವೆ. ನಿಯಮಿತ ದೈಹಿಕ ಚಟುವಟಿಕೆಯು ನಮ್ಯತೆಯನ್ನು ಸುಧಾರಿಸುತ್ತದಲ್ಲದೇ ಗಾಯದ ಅಪಾಯವನ್ನು ತಗ್ಗಿಸುತ್ತದೆ.
ಭಾರವಾದ ವಸ್ತುಗಳನ್ನು ಎತ್ತುವಾಗ, ಮೊಣಕಾಲುಗಳಿಗೆ ಬಾಗಿ, ಬೆನ್ನನ್ನು ನೇರವಾಗಿ ಇರಿಸಿ ಮತ್ತು ಕಾಲುಗಳನ್ನು ಎತ್ತುವಂತೆ ಬಳಸಿ. ಇದು ಕೆಳ ಬೆನ್ನಿನ ಒತ್ತಡವನ್ನು ತಡೆಯಲು ಸಹಾಯ ಮಾಡುತ್ತದೆ. ಒಳ್ಳೆಯ-ಗಟ್ಟಿಯಾದ ಹಾಸಿಗೆ ಬಳಸಿ ಮತ್ತು ಹೊಟ್ಟೆಯ ಮೇಲೆ ಮಲಗುವುದನ್ನು ತಪ್ಪಿಸಿ, ಇದು ಬೆನ್ನುಮೂಳೆಯ ನೋವಿಗೆ ಕಾರಣವಾಗಬಹುದು. ಬೆನ್ನುಮೂಳೆ ಉತ್ತಮವಾಗಿರುವಲ್ಲಿ ಕುತ್ತಿಗೆಯನ್ನು ಇರಿಸುವ ಉತ್ತಮ ದಿಂಬು ಕೂಡ ಪ್ರಮುಖವಾಗಿದೆ.
ಹೀಗೆಲ್ಲ ಮಾಡಬೇಡಿ
ಒಂದೇ ಕಡೆ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಬೆನ್ನುಮೂಳೆಯ ಮೇಲೆ ಒತ್ತಡವುಂಟಾಗುತ್ತದೆ. ನಿಲ್ಲಲು, ಹಿಗ್ಗಿಸಲು ಅಥವಾ ಸುತ್ತಲೂ ನಡೆಯಲು ಪ್ರತಿ ೩೦ ನಿಮಿಷಗಳಿಗೊಮ್ಮೆ ವಿರಾಮಗಳನ್ನು ತೆಗೆದುಕೊಳ್ಳಿ.
ನಿರಂತರ ಬೆನ್ನು ನೋವನ್ನು ಕಡೆಗಣಿಸಬಾರದು. ಆರಂಭಿಕ ಹಂತದಲ್ಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಸಲಹೆ, ಚಿಕಿತ್ಸೆ ಪಡೆದುಕೊಳ್ಳುವುದರಿಂದ ಹೆಚ್ಚಿನ ತೊಂದರೆಗಳನ್ನು ತಡೆಯಬಹುದು.
ಕುಳಿತುಕೊಳ್ಳುವ ಕಳಪೆ ಭಂಗಿಯು ಅದರಲ್ಲೂ ವಿಶೇಷವಾಗಿ ಕೆಲಸ ಮಾಡುವಾಗ ಅಥವಾ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವಾಗ ಬೆನ್ನಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಭಂಗಿಯ ಬಗ್ಗೆ ಯಾವಾಗಲೂ ಗಮನವಿರಲಿ.
ಡಾ. ಶಿವಕುಮಾರ್ ಎಸ್.ಕುಪನೂರ್, ನರವಿಜ್ಞಾನ ನಿರ್ದೇಶಕರು, ಬೆಂಗಳೂರು