For the best experience, open
https://m.samyuktakarnataka.in
on your mobile browser.

ಬೇಲೆಕೇರಿ ಮಾಫಿಯಾಗೆ ನ್ಯಾಯಾಲಯ ಗದಾಪ್ರಹಾರ

02:23 AM Oct 26, 2024 IST | Samyukta Karnataka
ಬೇಲೆಕೇರಿ ಮಾಫಿಯಾಗೆ ನ್ಯಾಯಾಲಯ ಗದಾಪ್ರಹಾರ

೭ ಲಕ್ಷ ಟನ್ ಕಬ್ಬಿಣ ಅದಿರನ್ನು ರಾಜಾರೋಷವಾಗಿ ವಿದೇಶಗಳಿಗೆ ಅಕ್ರಮವಾಗಿ ಸಾಗಣೆ ಮಾಡಿದ್ದ ಮಾಫಿಯಾ ಮೇಲೆ ಜನಪ್ರತಿನಿಧಿಗಳ ನ್ಯಾಯಾಲಯ ನಿರ್ದಾಕ್ಷಿಣ್ಯವಾಗಿ ಗದಾಪ್ರಹಾರ ಮಾಡಿದೆ. ಶಾಸಕ ಸತೀಶ್ ಸೈಲಿ ಅವರೂ ಸೇರಿದಂತೆ ೧೭ ಜನರಿಗೆ ಜೈಲು ಶಿಕ್ಷೆ ವಿಧಿಸಿ ಉಳಿದವರಿಗೆ ಎಚ್ಚರಿಕೆ ನೀಡಿದೆ. ಜನಪ್ರತಿನಿಧಿಗಳು ಏನು ಮಾಡಿದರೂ ಶಿಕ್ಷೆ ಆಗುವುದಿಲ್ಲ ಎಂದು ಭಾವಿಸಿದವರಿಗೆ ಇದು ಎಚ್ಚರಿಕೆಯ ಗಂಟೆಯಾಗಿದೆ. ಹಣ ಮತ್ತು ಅಧಿಕಾರ ಇದ್ದಾಗ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಅಹಂಭಾವದಿಂದ ಮೆರೆದವರಿಗೆ ನ್ಯಾಯಾಲಯ ತಕ್ಕ ಪಾಠ ಕಲಿಸಿದೆ.
ಬಳ್ಳಾರಿ ಗಣಿ ಅಕ್ರಮದ ಬಗ್ಗೆ ಕೂಲಂಕಷ ತನಿಖೆ ನಡೆಸಿದ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ತಮ್ಮ ವರದಿಯಲ್ಲಿ ಬೇಲೆಕೇರಿ ಬಂದರಿನಲ್ಲಿ ಅಕ್ರಮ ಅದಿರು ದಾಸ್ತಾನು ಮಾಡಲಾಗಿದೆ ಎಂದು ಹೆಸರಿಸಿದ್ದರು. ಆದರೂ ಇದನ್ನು ಗಣಿ ಮಾಫಿಯಾ ಅಕ್ರಮವಾಗಿ ಈ ದಾಸ್ತಾನಾಗಿದ್ದ ಕಬ್ಬಿಣ ಅದಿರಿನಲ್ಲಿ ೫೦.೭೪ ಲಕ್ಷ ಮೆಟ್ರಿಕ್ ಟನ್ ವಿದೇಶಕ್ಕೆ ರವಾನಿಸಿತ್ತು. ಇದನ್ನು ೨೦೦೮ ರಿಂದ ೨೦೧೩ ವರೆಗೆ ರವಾನಿಸಲಾಗಿತ್ತು. ಇದರ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ ಸೆಪ್ಟೆಂಬರ್ ೭, ೨೦೧೨ರಂದು ಸಿಬಿಐ ತನಿಖೆಗೆ ಒಪ್ಪಿಸಿತು. ಅಲ್ಲದೆ ಅರಣ್ಯ ಇಲಾಖೆಯ ಕೇಂದ್ರೀಯ ಸಬಲೀಕರಣ ಸಮಿತಿ ಸಿಬಿಐಗೆ ನೆರವು ನೀಡಲು ಮುಂದೆ ಬಂದಿತು. ಹೀಗಾಗಿ ತನಿಖೆ ನಡೆದು ೨೫೦೦ ಕೋಟಿ ರೂ. ಅಕ್ರಮ ನಡೆದಿದೆ ಎಂದು ಸಿಬಿಐ ವರದಿ ಸಲ್ಲಿಸಿತು. ಸತೀಶ್ ಸೈಲಿ ಈ ಅಕ್ರಮ ನಡೆದಾಗ ಶಾಸಕರಾಗಿರಲಿಲ್ಲ. ೨೦೧೩ರಲ್ಲಿ ಚುನಾಯಿತರಾದರು. ಇವರೊಂದಿಗೆ ಇನ್ನೂ ಮೂವರು ಶಾಸಕರು ಭಾಗಿಯಾಗಿದ್ದರು. ಅಲ್ಲದೆ ಐಎಎಸ್ ಮತ್ತು ಅರಣ್ಯ ಅಧಿಕಾರಿ ಭಾಗಿ ಎಂದು ಸಿಬಿಐ ಹೇಳಿದೆ. ೨ ಪ್ರಕರಣಗಳಲ್ಲಿ ಕ್ರಿಮಿನಲ್ ಪಿತೂರಿ, ಅದಿರು ಕಳ್ಳಸಾಗಣೆ, ತೆರಿಗೆ ವಂಚನೆ ಎಂದು ಆರೋಪಿಸಲಾಗಿದೆ. ಜನಪ್ರತಿನಿಧಿಗಳು ಅವ್ಯವಹಾರ ನಡೆಸಿ ಬಚಾವ್ ಆಗಬಹುದು ಎಂದು ಭಾವಿಸಿದ್ದರೆ ಅದು ಸಾಧ್ಯವಿಲ್ಲ ಎಂಬುದನ್ನು ಈ ಪ್ರಕರಣ ತೋರಿಸಿಕೊಟ್ಟಿದೆ. ಇದು ಆರ್ಥಿಕ ಅಪರಾಧವಾಗಿರುವುದರಿಂದ ಶಿಕ್ಷೆಯಲ್ಲಿ ರಿಯಾಯಿತಿ ತೋರಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅದರಂತೆ ಶಿಕ್ಷೆ ವಿಧಿಸಲಾಗಿದೆ ಎಂದು ಜನಪ್ರತಿನಿಧಿಗಳ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇಂಥ ಪ್ರಕರಣಗಳಲ್ಲಿ ವಿಚಾರಣೆ ವಿಳಂಬವಾಗುತ್ತಿತ್ತು. ಈಗಲೂ ಪ್ರಕರಣ ನಡೆದು ೧೦ ವರ್ಷ ಕಳೆದಿದೆ. ಆದರೂ ಶಿಕ್ಷೆ ವಿಧಿಸಿರುವುದು ಜನರಿಗೆ ಸಮಾಧಾನ ತಂದಿದೆ. ನಮ್ಮಲ್ಲಿ ಶಾಸಕಾಂಗ, ಕಾರ್ಯಾಂಗ ಕೆಲವು ಬಾರಿ ತೃಪ್ತಿಕರವಾಗಿ ಕಾರ್ಯನಿರ್ವಹಿಸದೇ ಇರಬಹುದು. ಆದರೆ ನ್ಯಾಯಾಂಗ ಮೊದಲಿನಿಂದಲೂ ತನ್ನ ಕರ್ತವ್ಯವನ್ನು ನಿರ್ವಂಚನೆಯಿಂದ ನಿರ್ವಹಿಸುತ್ತ ಬಂದಿದೆ. ಬಳ್ಳಾರಿ ಕಬ್ಬಿಣ ಅದಿರು ಲೂಟಿಯಾದಾಗ ಇಡೀ ರಾಜ್ಯವೇ ಕಂಗೆಟ್ಟು ಹೋಗಿತ್ತು. ಅನ್ಯಾಯಕ್ಕೆ ಕಡಿವಾಣ ಹಾಕುವವರು ಯಾರು ಎಂಬ ಪ್ರಶ್ನೆ ಎದ್ದಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಹಗರಣದಲ್ಲಿ ಯಾರೇ ಭಾಗಿಯಾದರೂ ಅವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂಬುದು ಈ ಪ್ರಕರಣದಿಂದ ಸ್ಪಷ್ಟವಾಗಿದೆ. ನಮ್ಮಲ್ಲಿ ನೈಸರ್ಗಿಕ ಸಂಪತ್ತಾದ ಕಬ್ಬಿಣದ ಅದಿರನ್ನು ಹಗಲು ಹೊತ್ತೇ ದರೋಡೆ ಮಾಡಿದ ಘಟನೆಗಳು ಎಷ್ಟೋ ನಡೆದಿವೆ. ಅದರಲ್ಲಿ ಬೇಲಿಕೇರಿ ಹಗರಣದಲ್ಲಿ ಶಿಕ್ಷೆಯಾಗಿರುವುದು ಇತಿಹಾಸ ಪುಟಗಳಲ್ಲಿ ಉಳಿಯಲಿದೆ. ಇಂಥ ಘಟನೆಗಳು ರಾಜಕಾರಣಿಗಳಿಗೆ ಎಚ್ಚರಿಕೆಯ ಗಂಟೆ ಎಂಬುದರಲ್ಲಿ ಸಂದೇಹವಿಲ್ಲ. ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದರೆ ಎಲ್ಲರೂ ಕೈಜೋಡಿಸಬೇಕು. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಒಂದುಗೂಡಿ ಕೆಲಸ ಮಾಡಿದರೆ ಭ್ರಷ್ಟಾಚಾರವನ್ನು ಮೊಳಕೆಯಲ್ಲೇ ಚಿವುಟಿ ಹಾಕಬಹುದು. ನಮ್ಮಲ್ಲಿ ಅರಣ್ಯ ಕಾಯ್ದೆ ಪ್ರಬಲವಾಗಿದೆ. ಆದರೂ ಪ್ರಭಾವಿ ರಾಜಕಾರಣಿಗಳು ಎಲ್ಲ ಕಾಯ್ದೆಗಳನ್ನು ಗಾಳಿಗೆ ತೂರಲು ಸಿದ್ಧವಾಗಿರುತ್ತಾರೆ. ಅವರಿಗೆ ಬುದ್ಧಿ ಹೇಳುವ ಕೆಲಸವನ್ನು ನ್ಯಾಯಾಂಗ ಕೈಗೊಂಡಿದೆ. ಅದರಿಂದಲೇ ಜನರಿಗೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಉಳಿದುಕೊಂಡಿದೆ. ಇನ್ನುಮುಂದೆ ಪ್ರಕರಣಗಳ ಮೇಲೆ ನ್ಯಾಯಾಂಗ ಬಿರುಸಾಗಿ ಚಾಟಿ ಬೀಸುತ್ತದೆ ಎಂಬುದು ಸ್ಪಷ್ಟ. ಪರಿಸರ ರಕ್ಷಣೆಯ ವಿಷಯದಲ್ಲಿ ಯಾವುದೇ ರೀತಿಯಲ್ಲೂ ಹೊಂದಾಣಿಕೆಗೆ ಅವಕಾಶವಿಲ್ಲ. ಗಣಿಗಾರಿಕೆ ದೇಶದ ಆರ್ಥಿಕ ಪ್ರಗತಿಗೆ ಪೂರಕವಾಗಿರಬೇಕು. ಅಲ್ಲದೆ ಪರಿಸರ ಸಮತೋಲನ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಕಬ್ಬಿಣದ ಅದಿರು ತೆಗೆಯುವಾಗ ಈ ಎಚ್ಚರ ಅತ್ಯಗತ್ಯ. ಬಳ್ಳಾರಿಯಲ್ಲಿ ನಿಯಮಬಾಹಿರವಾಗಿ ಗಣಿಗಾರಿಕೆ ನಡೆಯಿತು ಎಂಬುದರಲ್ಲಿ ಸಂದೇಹವಿಲ್ಲ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದ ಪರಿಸರ ರಕ್ಷಣೆಗೆ ಸ್ವಲ್ಪವಾದರೂ ನ್ಯಾಯ ಒದಗಿಸಲು ಸಾಧ್ಯವಾಯಿತು. ಅರಣ್ಯ ಮತ್ತು ಗಣಿ ದೇಶದ ಸಂಪತ್ತು ಎಂಬುದನ್ನು ಮರೆಯಬಾರದು. ಇದು ಯಾರೋ ಒಬ್ಬರ ಜೇಬು ತುಂಬಲು ಇರುವುದಿಲ್ಲ. ದೇಶದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯ ಇದನ್ನು ಆರ್ಥಿಕ ಅಪರಾಧವಾಗಿ ಪರಿಗಣಿಸಿದೆ.