ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬೈಗುಳದ ರಾಜಕೀಯ ಜಾತ್ರೆ

02:30 AM Aug 09, 2024 IST | Samyukta Karnataka

ಜನತಂತ್ರ ಪದ್ಧತಿಯಲ್ಲಿ ರಾಜಕೀಯ ಪಕ್ಷಗಳು ತಮ್ಮ ವೈಚಾರಿಕ ದೃಷ್ಟಿಕೋನ ಹಾಗೂ ನೀತಿ ನಿಲುವುಗಳನ್ನು ಜನರ ಮೇಲೆ ವಿಶ್ಲೇಷಿಸಿ ಬೆಂಬಲ ಪಡೆಯಲು ಕಂಡುಕೊಂಡಿರುವ ಮಾರ್ಗವೆಂದರೆ ಜನಾಂದೋಲನ, ಪಾದಯಾತ್ರೆ, ಸಮಾವೇಶ, ರ‍್ಯಾಲಿ ಮುಂತಾದ ಹೆಸರಿನಲ್ಲಿ ಜರುಗುವ ಕಾರ್ಯಕ್ರಮಗಳು. ಹಾಗೆ ನೋಡಿದರೆ ಈ ಕಾರ್ಯಕ್ರಮಗಳು ಏರ್ಪಾಡಾಗುವುದು ಜನಸಂಪರ್ಕ ಹಾಗೂ ರಾಜಕೀಯ ಪಕ್ಷಗಳ ಮುಖಂಡರ ನಡೆನುಡಿಯನ್ನು ನೇರವಾಗಿ ಕಂಡರಸಲು ಜನರಿಗೆ ಮುಕ್ತ ಮಾರ್ಗವೂ ಕೂಡಾ. ಹೀಗಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ಏಳು ದಿನಗಳ ಕಾಲ ಬಿಜೆಪಿ-ಜೆಡಿಎಸ್ ಆಶ್ರಿತ ಪಾದಯಾತ್ರೆ ಹಾಗೂ ಅಧಿಕಾರಾರೂಢ ಕಾಂಗ್ರೆಸ್ ಪಕ್ಷ ರೂಪಿಸಿಕೊಂಡಿರುವ ಜನಾಂದೋಲನ ಕಾರ್ಯಕ್ರಮಗಳು ಜನಾಭಿಪ್ರಾಯದ ದೃಷ್ಟಿಯಿಂದ ಸ್ವಾಗತಾರ್ಹ. ಆದರೆ ಈ ಎರಡು ಕಾರ್ಯಕ್ರಮಗಳು ಬಳಕೆಯಾಗುತ್ತಿರುವುದು ಬಹುತೇಕ ನಿಂದನಾಸ್ತುತಿಗಾಗಿ. ಆತ್ಮಶ್ಲಾಘನೆ-ಪರನಿಂದನೆಗೆ ನೀತಿಯಾಗಿರುವಂತೆ ಕಂಡುಬರುತ್ತಿರುವ ಈ ಬೆಳವಣಿಗೆಯಲ್ಲಿ ಕೇಂದ್ರ ಸಚಿವರು ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಣ ಏಕವಚನದ ದೋಷಾರೋಪಗಳು ನಿಜಕ್ಕೂ ರೇಜಿಗೆ ಹೊತ್ತಿಸುವ ಸ್ವರೂಪವನ್ನು ಹೊಂದಿರುವುದು ಬೇಸರದ ಸಂಗತಿ. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಾ ಜನಾಂದೋಲನದ ಹೊರಗಿನ ವೇದಿಕೆಯಲ್ಲಿ ಕಠಿಣವಾಗಿ ಎದುರಾಳಿಗಳ ಮೇಲೆ ಹರಿಹಾಯುತ್ತಿರುವುದು ಸಾರ್ವಜನಿಕ ಬದುಕಿನಲ್ಲಿ ಏನಾಗುತ್ತಿದೆ ಎಂಬುದರ ಒಂದು ದಿಕ್ಸೂಚಿಯಷ್ಟೇ.
ಏಳು ದಿನಗಳ ಈ ಪಾದಯಾತ್ರೆ-ಜನಾಂದೋಲನದ ಕಾರ್ಯಕ್ರಮಗಳಲ್ಲಿ ಬಹುವಚನಕ್ಕೆ ದರಿದ್ರ ಕಟ್ಟಿರುವುದು ಕನ್ನಡಿಗರ ಸಂಸ್ಕೃತಿಗೆ ಒಂದು ದೊಡ್ಡ ಕಳಂಕ. ಏಕವಚನದಲ್ಲಿಯೇ ಎದುರಾಳಿಗಳನ್ನು ನಿಂದಿಸುತ್ತಾ ವೈಯಕ್ತಿಕ ನೆಲೆಗಟ್ಟಿನಲ್ಲಿ ಅಕ್ರಮ ಮಾರ್ಗದಲ್ಲಿ ಆಸ್ತಿ ಲೂಟಿ ಹೊಡೆದಿರುವ ನಾನಾ ವಿವರಗಳನ್ನು ಎರಡು ಪಕ್ಷಗಳ ಧುರೀಣರು ಪರಸ್ಪರ ಮೈಮೇಲೆ ಎರಚಿಕೊಳ್ಳುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂಬುದು ಅರ್ಥವಾಗುತ್ತಿಲ್ಲ. ಏಕೆಂದರೆ ಈ ದೋಷಾರೋಪಗಳಲ್ಲಿ ಸಾರ್ವಜನಿಕ ಹಿತ ಎಳ್ಳಷ್ಟು ಇಲ್ಲ. ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ ಕೊಡುವುದು ಸಾರ್ವಜನಿಕ ಹಿತರಕ್ಷಣೆಯಾಗದು. ಚುನಾವಣೆಯ ಪೂರ್ವದ ಬಹಿರಂಗ ಸಭೆಗಳಲ್ಲಿ ಇಂತಹ ವಾಗ್ವಿಲಾಸವನ್ನು ಪ್ರದರ್ಶಿಸಿದರೆ ಬಹುಶಃ ಅದನ್ನು ಯಾರೂ ಪ್ರಶ್ನಿಸಲಾರರು. ಏಕೆಂದರೆ ರಾಜಕಾರಣವೆಂಬುದು ಜನರನ್ನು ಓಲೈಸಲು ಬಳಸುವ ಮಾರ್ಗ. ಗುರಿ ಯಾವುದಾದರೂ ಆಗಿರಲಿ, ಮಾರ್ಗಗಳನ್ನು ಅನುಸರಿಸುವ ವಿಧಾನ ಮಾತ್ರ ಪವಿತ್ರವಾಗಿರಬೇಕು. ಗುರಿಯೇ ಸೊಟ್ಟದಾಗಿರುವಾಗ ಇನ್ನು ಮಾರ್ಗಗಳು ನೆಟ್ಟಗಾಗಿರುವುದು ಹೇಗೆ ಸಾಧ್ಯ ಎಂಬುದು ಜನರ ಪ್ರಶ್ನೆಗಳಿಗೆ ಉತ್ತರ ಕೊಡುವುದು ಕಷ್ಟವೇ. ಈ ಐದಾರು ದಿನಗಳಲ್ಲಿ ವ್ಯಕ್ತವಾಗಿರುವ ದೋಷಾರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಬಹುಶಃ ಆಯೋಗಗಳ ಮೇಲೆ ಆಯೋಗವನ್ನು ರಚಿಸಿದರೂ ಉದ್ದೇಶ ಸಾರ್ಥಕವಾಗಲಾರದೇನೋ.
ಎಚ್.ಡಿ. ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್ ಅವರು ಜವಾಬ್ದಾರಿ ಸ್ಥಾನದಲ್ಲಿರುವವರು ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿಯಾಗಿ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಇನ್ನು ಡಿ.ಕೆ ಶಿವಕುಮಾರ್ ಅವರು ಸುದೀರ್ಘಕಾಲ ಮಂತ್ರಿಯಾಗಿ ಕಾರ್ಯನಿರ್ವಹಿಸಿ ಉಪಮುಖ್ಯಮಂತ್ರಿಯಾಗಿ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೂ ಆಗಿದ್ದಾರೆ. ಅಂದಮೇಲೆ ಇವರಿಬ್ಬರ ಗುರುತ್ವಾಕರ್ಷಣ ಶಕ್ತಿ ಬಲವಾದದ್ದೇ. ಇಂತಹ ಶಕ್ತಿಗಳನ್ನು ಸದ್ವಿನಿಯೋಗ ಮಾಡಿಕೊಳ್ಳುವುದು ಅಧಿಕಾರ ದೊರೆತಾಗ ಆಗಬೇಕಾದ ಕೆಲಸ. ತಮ್ಮ ಕಾರ್ಯನಿರ್ವಹಣೆಯಲ್ಲಿ ಇಬ್ಬರೂ ಕೂಡಾ ಹಿಂದೆ ಬಿದ್ದಿರಲಾರರು. ಆದರೆ ಬಹಿರಂಗವಾಗಿ ರಾಜಕೀಯ ಎದುರಾಳಿಗಳ ವಿರುದ್ಧ ಅವರು ನಡೆದುಕೊಳ್ಳುತ್ತಿರುವ ರೀತಿ ಸಾರ್ವಜನಿಕ ಬದುಕಿಗೆ ಔಚಿತ್ಯಪೂರ್ಣವಾಗಿಲ್ಲ.
ಕರ್ನಾಟಕದ ಸಾರ್ವಜನಿಕ ಬದುಕು ಸುಸಂಸ್ಕೃತಿಯ ಇತಿಹಾಸವನ್ನು ಒಳಗೊಂಡಿದೆ. ರಾಜಕಾರಣದಲ್ಲಿ ಯಾರೊಬ್ಬರೂ ವೈರಿಗಳಲ್ಲ ಎಂಬುದು ರಾಜ್ಯದ ಮಟ್ಟಿಗೆ ರಾಜಕಾರಣಿಗಳು ಅನುಸರಿಸಿಕೊಂಡು ಬರುತ್ತಿರುವ ನೀತಿ. ಪಕ್ಷಗಳು ಬದಲಾಗಬಹುದು, ಆದರೆ ಯಾರೊಬ್ಬರೂ ವೈರಿಗಳಲ್ಲ. ಹೆಚ್ಚೆಂದರೆ ಪ್ರತಿಸ್ಪರ್ಧಿಗಳು ಮಾತ್ರ ಇಂತಹ ಭಾವನೆ ಹೃತ್ಪೂರ್ವಕವಾಗಿ ಬಂದಾಗ ಪ್ರತಿಸ್ಪರ್ಧಿಗಳ ಕಾರ್ಯವನ್ನು ಗೌರವದಿಂದ ಕಾಣುವ ಮನೋಧರ್ಮ ರೂಢಿಯಾಗುತ್ತದೆ. ಕರ್ನಾಟಕದಲ್ಲಿ ಸಮ್ಮಿಶ್ರ ರಾಜಕೀಯ ವ್ಯವಸ್ಥೆಯ ಅಂಕ ಪ್ರಾರಂಭವಾದ ಮೇಲೆ ರಾಜಕಾರಣದಲ್ಲಿ ಸಜ್ಜನಿಕೆಯ ಪ್ರಮಾಣ ಕುಸಿಯುತ್ತಾ ಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಾಗದು. ಈಗಲೂ ಕಾಲ ಮಿಂಚಿಲ್ಲ, ರಾಜಕಾರಣಿಗಳು ತಮ್ಮ ವೈಚಾರಿಕಾ ನಿಲುವು ಹಾಗೂ ಆಚಾರವಂತಿಕೆಯ ಒಲವುಗಳನ್ನು ಜನರ ಮುಂದೆ ನಿವೇದಿಸಿಕೊಳ್ಳಲು ಭಾಷಾ ಲಾಲಿತ್ಯವನ್ನು ಬಳಸಿಕೊಳ್ಳುವ ಕಡೆ ಗಮನಹರಿಸುವುದು ಅತ್ಯಗತ್ಯ. ಇಲ್ಲವಾದರೆ, ಇತಿಹಾಸ ಎಂದೆಂದಿಗೂ ಇಂತಹ ಅಪಚಾರವನ್ನು ಕ್ಷಮಿಸಲಾರದು. ವೈಯಕ್ತಿಕ ನೆಲೆಗಟ್ಟಿನಲ್ಲಿ ಯಾರೊಬ್ಬರೂ ಯೋಚಿಸದೇ ಸಾರ್ವಜನಿಕ ನೆಲೆಗಟ್ಟಿನಲ್ಲಿ ಆಲೋಚಿಸಿದಾಗ ಮಾತ್ರ ಸಜ್ಜನಿಕೆಯ ನಡೆನುಡಿ ಅರಿವಿಲ್ಲದೆ ಸಂಸ್ಕೃತಿಯಾಗಿ ರೂಪುಗೊಳ್ಳುವ ಎಲ್ಲಾ ಸಾಧ್ಯತೆಗಳು ಇವೆ.

Next Article