ಬೋಗಸ್ ರೇಷನ್ ಕಾರ್ಡ್ ಪತ್ತೆ: ಜೇನುಗೂಡಿಗೆ ಕಲ್ಲು
ರಾಜ್ಯ ಸರ್ಕಾರ ಬೋಗಸ್ ರೇಷನ್ ಕಾರ್ಡ್‌ಗಳನ್ನು ಪತ್ತೆ ಮಾಡಿ ಬಿಪಿಎಲ್ ಇರುವುದರಲ್ಲಿ ಕೆಲವನ್ನು ಎಪಿಎಲ್‌ಗೆ ಪರಿವರ್ತಿಸಿ ಉಳಿದದ್ದನ್ನು ರದ್ದುಪಡಿಸುವುದಾಗಿ ಪ್ರಕಟಿಸಿ ಜೇನುಗೂಡಿಗೆ ಕಲ್ಲು ಒಗೆದಿದೆ. ಇದರಿಂದ ಎಲ್ಲೆಲ್ಲಿ ಜೇನು ಏಳುತ್ತದೋ ತಿಳಿಯದು. ವಕ್ಛ್ ಆಸ್ತಿಯ ಹಗರಣವಾದ ಮೇಲೆ ಈಗ ರೇಷನ್ ಕಾರ್ಡ್ ಹಗರಣಕ್ಕೆ ಸರ್ಕಾರ ಕೈಹಾಕಿದೆ. ಬೋಗಸ್ ರೇಷನ್ ತಲೆ ಎತ್ತಲು ಯಾರು ಕಾರಣ ಎಂಬುದನ್ನು ಅಧಿಕಾರದಲ್ಲಿ ಇರುವವರು ಹಾಗೂ ಅಧಿಕಾರ ಕಳೆದುಕೊಂಡವರು ತಮ್ಮ ತಮ್ಮ ಆತ್ಮಸಾಕ್ಷಿಗೆ ಕೇಳಿಕೊಳ್ಳುವುದು ಒಳಿತು. ಒಟ್ಟು ಎಷ್ಟು ರೇಷನ್ ಕಾರ್ಡ್ ಇದೆ ಎಂಬುದೇ ಗೊತ್ತಿಲ್ಲ. ಬೀರ್‌ಬಲ್ ಕಾಗೆ ಎಣಿಸಿದಂತೆ ಆಗಿದೆ. ಒಂದು ವರದಿಯ ಪ್ರಕಾರ ೧.೨೬ ಕೋಟಿ ಬಿಪಿಎಲ್ ಕಾರ್ಡ್ ಇದೆ. ದಕ್ಷಿಣ ಭಾರತದಲ್ಲಿ ಕರ್ನಾಟಕವೇ ಅತಿ ಹೆಚ್ಚು ಬಿಪಿಎಲ್ ಕಾರ್ಡ್ ಹೊಂದಿದೆ. ಬಿಪಿಎಲ್ ಕಾರ್ಡ್ ಕೊಡಿಸುವುದು ಈಗಲೂ ರಾಜಕೀಯ ಸಾಧನೆಯಲ್ಲಿ ಸೇರಿದೆ. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವವರು ತಮ್ಮ ಸಾಧನೆಯ ಪಟ್ಟಿಯಲ್ಲಿ ಬಿಪಿಎಲ್ ಕಾರ್ಡ್ ಕೊಡಿಸಿದ್ದನ್ನು ಹೇಳಿಕೊಳ್ಳುತ್ತಾರೆ. ಒಂದು ಹಳ್ಳಿಗೆ ಅಂಚೆ ಕಚೇರಿ ಯಾವ ಶಾಸಕರ ಬೆಂಬಲವೂ ಇಲ್ಲದೆ ಬರುತ್ತದೆ. ಆದರೆ ಕಡು ಬಡವರಿಗೆ ರೇಷನ್ ಕಾರ್ಡ್ ಸುಲಭವಾಗಿ ಸಿಗುವುದಿಲ್ಲ.
ಚುನಾವಣೆ ಬಂದಾಗ ಎಲ್ಲರೂ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಾಗುತ್ತಾರೆ. ಚುನಾವಣೆ ಮುಕ್ತಾಯಗೊಂಡ ಮೇಲೆ ಅನರ್ಹರ ಸಂಖ್ಯೆ ಬೆಳೆಯುತ್ತ ಹೋಗುತ್ತದೆ. ಇದಕ್ಕೆ ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ ನಡೆಯುವುದೇ ಕಾರಣ. ಇದುವರೆಗೆ ಯಾವ ಸರ್ಕಾರವೂ ಬಿಪಿಎಲ್ ಕಡಿಮೆ ಮಾಡಲು ಕೈಹಾಕಿರಲಿಲ್ಲ. ಇದರಿಂದ ಎಷ್ಟು ಅಪಾಯ ಇದೆ ಎಂದು ಗ್ರಹಿಸಿ ಆಯಾ ಸರ್ಕಾರಗಳು ಬಿಪಿಎಲ್ ಕಾರ್ಡ್ ರದ್ದುಪಡಿಸುವ ಕೆಲಸವನ್ನು ಮುಂದೂಡುತ್ತ ಬಂದಿದೆ. ಈಗ ಇದಕ್ಕೆ ರಾಜ್ಯ ಸರ್ಕಾರ ಮುಹೂರ್ತ ನಿಗದಿಪಡಿಸಲು ಹೊರಟಿದೆ.
ರೇಷನ್ ಕಾರ್ಡ್ ಪಡೆಯಲು ಹಿಂದೆ ಹೆಚ್ಚಿನ ನಿಯಮಗಳು ಇರಲಿಲ್ಲ. ಗ್ರಾಮಸಭೆಯಲ್ಲಿ ನಿರ್ಧರಿಸಲು ಅವಕಾಶವಿತ್ತು. ಆಯಾ ಗ್ರಾಮದಲ್ಲಿ ಕಡುಬಡವರು ಯಾರು ಎಂದು ಗುರುತಿಸುವುದು ಸುಲಭ. ಆದರೆ ಈಗ ರೇಷನ್ ಕಾರ್ಡ್ ಸಂಖ್ಯೆ ಬೃಹದಾಕಾರವಾಗಿ ಬೆಳೆದಿದೆ. ಅದರಲ್ಲಿ ಬೋಗಸ್ ಎಷ್ಟು ತಿಳಿಯದು. ಈಗ ಸಮೀಕ್ಷೆ ಆರಂಭಗೊಂಡಿದೆ. ಕಡು ಬಡವರನ್ನು ಗುರುತಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮದೇ ಆದ ನಿಯಮಗಳನ್ನು ರಚಿಸಿಕೊಂಡಿದೆ. ನೀತಿ ಆಯೋಗ ಕಡು ಬಡವರು ಯಾರು ಎಂಬುದನ್ನು ಸ್ಪಷ್ಟಪಡಿಸಿದೆ. ಅದನ್ನು ರಾಜ್ಯ ಸರ್ಕಾರಗಳು ಅನುಸರಿಸುವುದಿಲ್ಲ. ರಾಜ್ಯ ಸರ್ಕಾರದ ನಿಯಮದಂತೆ ಆದಾಯ ತೆರಿಗೆ ಪಾವತಿ ಮಾಡುವವರು, ಸರ್ಕಾರಿ ನೌಕರರು ಹಾಗೂ ವಾರ್ಷಿಕ ೧.೨೦ ಲಕ್ಷ ರೂ. ಆದಾಯ ತೆರಿಗೆ ಹೊಂದಿದ ಕುಟುಂಬದವರು ರೇಷನ್ ಕಾರ್ಡ್ ಪಡೆಯಲು ಅನರ್ಹರು. ಸ್ವಂತ ಮನೆ, ೮ ಎಕರೆ ಭೂಮಿ, ನಾಲ್ಕು ಚಕ್ರದ ವಾಹನ ಹೊಂದಿದವರು ರೇಷನ್ ಕಾರ್ಡ್ ಪಡೆಯುವ ಹಾಗಿಲ್ಲ. ಈ ನಿಯಮಗಳನ್ನು ಅನ್ವಯಿಸಿ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆ ಕಡಿಮೆ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಮುಖ್ಯಮಂತ್ರಿ ಅರ್ಹರಿಗೆ ಅನ್ಯಾಯ ಮಾಡೋಲ್ಲ ಎಂದು ಹೇಳಿದ್ದಾರೆ. ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ. ಅದರಿಂದ ಎಷ್ಟು ಬೋಗಸ್ ಕಾರ್ಡ್ ರದ್ದಾಗುತ್ತದೋ ತಿಳಿಯದು.
ಈಗ ೧೧ ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸಲಾಗುವುದು ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ. ಕೇಂದ್ರ ಸರ್ಕಾರ ಎಲ್ಲದ್ದಕ್ಕೂ ಆಧಾರ್ ಕಾರ್ಡ್ ಕಡ್ಡಾಯ ಮಾಡಿದ ಮೇಲೆ ಹಾಗೂ ಎಲ್ಲ ಬ್ಯಾಂಕ್‌ಗಳು ಗ್ರಾಹಕರಿಂದ ಆಧಾರ್ ಮತ್ತು ಪ್ಯಾನ್ ಕಾರ್ಡ್ ಕೇಳಲು ಆರಂಭಿಸಿದ ಮೇಲೆ ಎಲ್ಲರ ಬಳಿ ಈ ಎರಡೂ ಕಾರ್ಡ್‌ಗಳಿವೆ. ಇದರಿಂದ ರೇಷನ್ ಕಾರ್ಡ್ ಹೊಂದಿದವರ ಬಳಿ ಪ್ಯಾನ್ ಕಾರ್ಡ್ ಇರುವುದು ಸಹಜ. ಇದಕ್ಕೇ ಆಧಾರವಾಗಿಟ್ಟು ರೇಷನ್ ಕಾರ್ಡ್ ರದ್ದುಪಡಿಸುವ ಕೆಲಸ ನಡೆಯುತ್ತಿದೆ. ಹೀಗಾಗಿ ಯರ‍್ಯಾರು ರೇಷನ್ ಕಾರ್ಡ್ ಕಳೆದುಕೊಳ್ಳುತ್ತಾರೋ ತಿಳಿಯದು. ಈಗ ಬೆಳಗಾವಿ ಜಿಲ್ಲೆಯಿಂದ ಲಭಿಸಿರುವ ಮಾಹಿತಿ ಪ್ರಕಾರ ೧೧.೩ ಲಕ್ಷ ಕುಟುಂಬಗಳು ಅಂತ್ಯೋದಯ, ೬,೬೮೮ ಕುಟುಂಬ ಆದಾಯ ಪಾವತಿ ಮಾಡುತ್ತಿದೆ, ೫೪,೨೨೨ ಕುಟುಂಬಗಳು ಆದಾಯ ಮಿತಿ ಮೀರಿ ಸಂಪಾದನೆ ಮಾಡುತ್ತಿವೆ. ೩೦೬ ಕುಟುಂಬದ ಸದಸ್ಯರು ಸರ್ಕಾರ ನೌಕರರು. ಈಗ ಆಧಾರ್ ಕಾರ್ಡ್ ಮೂಲಕ ಸಿಗುವ ಮಾಹಿತಿ ಮಹತ್ವ ಪಡೆದುಕೊಂಡಿದೆ. ಒಂದು ಮಾಹಿತಿ ಪ್ರಕಾರ ಬೆಳಗಾವಿ ಜಿಲ್ಲೆಯೊಂದರಲ್ಲೇ ೪೫,೮೦೪ ಕಾರ್ಡ್ ಸರ್ಕಾರ ಸವಲತ್ತು ಪಡೆಯುವಂತಿಲ್ಲ. ಇದೇ ನಿಯಮ ಎಲ್ಲ ಜಿಲ್ಲೆಗಳಿಗೆ ಅನ್ವಯವಾದಲ್ಲಿ ಎಷ್ಟು ರೇಷನ್ ಕಾರ್ಡ್ ರದ್ದಾಗುತ್ತದೋ ತಿಳಿಯದು. ಬೋಗಸ್ ಕಾರ್ಡ್ ಪರಿವರ್ತನೆ ಹಾಗೂ ರದ್ದುಪಡಿಸುವುದು ಎಂದಿನಿಂದ ಎಂಬುದು ಇನ್ನೂ ಅಸ್ಪಷ್ಟ.