ಬೋಟ್ ಮಗುಚಿ ಹನ್ನೊಂದು ಮೀನುಗಾರರು ದಡಕ್ಕೆ..
ಪಣಜಿ: ಮೀನುಗಾರರ ಬೋಟ್ ಮಗುಚಿದ ಮತ್ತೊಂದು ಘಟನೆ ವಾಡಿ ಬಾನಾವಳಿ ಸಮುದ್ರದಲ್ಲಿ ನಡೆದಿದೆ. ಬೋಟ್‌ನಲ್ಲಿದ್ದ ೧೧ ಮಂದಿ ಮೀನುಗಾರರು ಈಜಿಕೊಂಡು ದಡ ಸೇರಿದ್ದಾರೆ. ದೋಣಿಯನ್ನೂ ಮರಳಿ ದಡಕ್ಕೆ ತರಲಾಗಿದೆ.
ಕೆಟ್ಟ ವಾತಾವರಣದಲ್ಲಿಯೂ ಮೀನುಗಾರಿಕೆಗೆ ಹೋಗಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಪೋಪು ಅಲಿಯಾಸ್ ಗ್ರಾಫೈನ್ಸ್ ಫೆರ್ನಾಂಡಿಸ್ ಎಂಬುವವರ ಮಾಲಿಕತ್ವದ ಮೆನಿನೋ ಜೀಸಸ್ ಎಂಬ ಹೆಸರಿನ ಬೋಟ್ ಭಾರೀ ಅಲೆಗಳ ರಭಸಕ್ಕೆ ೧೧ ಮೀನುಗಾರರಿದ್ದ ಬೋಟ್ ದಡದಿಂದ ಸುಮಾರು ೧೦೦ ಮೀಟರ್ ದೂರದಲ್ಲಿ ಮಗುಚಿ ಬಿದ್ದಿದೆ.
ಬೋಟ್‌ನಲ್ಲಿದ್ದ ಎಲ್ಲಾ ಮೀನುಗಾರರು ಆಂಧ್ರಪ್ರದೇಶ ಮತ್ತು ಜಾರ್ಖಂಡ್ ನಿವಾಸಿಗಳಾಗಿದ್ದು, ಅವರು ಸಮುದ್ರತೀರಕ್ಕೆ ಈಜಿ ಬಂದರು. ಕೆಲ ದಿನಗಳ ಹಿಂದೆ ಗ್ರಿಫಿನ್ಸ್ ಫರ್ನಾಂಡಿಸ್ ಎಂಬುವರಿಗೆ ಸೇರಿದ ಬೋಟ್‌ವೊಂದು ಮಗುಚಿ ಬಿದ್ದಿದ್ದು, ೧೩ ಮೀನುಗಾರರನ್ನು ಪೊಲೀಸರು, ಜೀವರಕ್ಷಕರು ರಕ್ಷಿಸಿದ್ದರು. ಬೋಟ್ ಪಲ್ಟಿಯಾದ ನಂತರ ಸ್ಥಳೀಯ ಮೀನುಗಾರರು ದೋಣಿಯನ್ನು ಹಗ್ಗದಿಂದ ಕಟ್ಟಿ ಹನ್ನೆರಡು ಗಂಟೆ ಸುಮಾರಿಗೆ ದಡಕ್ಕೆ ತಂದರು.
ಪ್ರತಿಕೂಲ ಹವಾಮಾನದಲ್ಲೂ ಬೋಟ್‌ಗಳನ್ನು ಸಮುದ್ರಕ್ಕೆ ಇಳಿಸಲಾಗುತ್ತಿದ್ದು ಇದರಿಂದ ಇಂತಹ ಘಟನೆ ಮರುಕಳಿಸುತ್ತಿದೆ ಎನ್ನಲಾಗಿದೆ. ಹೀಗಾಗಿ ಮೀನುಗಾರಿಕೆ ಸೀಸನ್ ಆರಂಭವಾಗಿದ್ದರೂ ಯಾವುದೇ ಅಹಿತಕರ ಘಟನೆ ನಡೆಯುವ ಮುನ್ನ ಮೀನುಗಾರಿಕೆ ಇಲಾಖೆಯಿಂದ ಸೂಕ್ತ ಸೂಚನೆ ನೀಡಬೇಕಿದೆ.