ಬ್ಯಾಂಕ್ ಏಜೆನ್ಸಿ ಸಿಬ್ಬಂದಿ ಮೇಲೆ ಗುಂಡಿನ ದಾಳಿ: ಓರ್ವ ಸಾವು
ಬೀದರ್ : ಬೆಳಂ ಬೆಳಗ್ಗೆ ಬೀದರ್ ಎಟಿಎಂಗೆ ಹಣ ತುಂಬುವ ವ್ಯಾನ್ ಮೇಲೆ ಹಣ ದೋಚಲು ದರೋಡೆಕೋರರು ದಾಳಿ ನಡೆಸಿದ ಘಟನೆ ನಡೆದಿದೆ,
ಐದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಓರ್ವ ಭದ್ರತಾ ಸಿಬ್ಬಂದಿಯ ಹತ್ಯೆ ನಡೆಸಿ ಓರ್ವನನ್ನು ಗಂಭೀರವಾಗಿ ಗಾಯಗೊಳಿಸಿ ಹಣದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬೀದರ್ ಎಸ್ ಪಿ ಪ್ರದೀಪ್ ಗುಂಟಿ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.
ಎಟಿಎಂಗೆ ಹಣ ಹಾಕಲು ಏಜೆನ್ಸಿಯ ಸಿಬ್ಬಂದಿಗಳು ವಾಹನದಲ್ಲಿ ಬಂದಿದ್ದಾಗ ಇಬ್ಬರು ದುಷ್ಕರ್ಮಿಗಳು ಬಂದು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಏಜೆನ್ಸಿಯ ಒಬ್ಬ ವ್ಯಕ್ತಿ ಸ್ಥಳದಲ್ಲಿಯೇ ಸಾವು ಕಂಡಿದ್ದರೆ, ಇನ್ನೋರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದೆ. ಆ ಬಳಿಕ ಉಳಿದ ಸಿಬ್ಬಂದಿ ಮೇಲೆ ಕಣ್ಣಿಗೆ ಖಾರದ ಪುಡಿ ಎರಚಿ ಹಣವನ್ನು ಖದೀಮರು ಕದ್ದೊಯ್ದಿದ್ದಾರೆ. ಎಟಿಎಂಗೆ ಹಾಕಲು ಪಿಎಸ್‌ಸಿ ವಾಹನದಲ್ಲಿ ಲಕ್ಷಾಂತರ ರೂ. ಹಣ ತಂದಿದ್ದರು. ಬ್ಯಾಂಕ್ ಹಾಗೂ ಎಟಿಎಂಗೆ ಹಣ ಹಾಕುವ ವಾಹನದ ಸಿಬ್ಬಂದಿ ಮೇಲೆ ಗುಂಡಿನ ದಾಳಿಯಾಗಿದೆ. ಐದು ಸುತ್ತಿನ ಗುಂಡಿನ ದಾಳಿ ನಡೆದ ಬಳಿಕ ಹಣ ತೆಗೆದುಕೊಂಡು ಖದೀಮರು ಪರಾರಿಯಾಗಿದ್ದಾರೆ. ಬೀದರ್‌ನ ಎಸ್‌ಬಿಐ ಮುಖ್ಯ ಕಚೇರಿ ಮುಂದೆ ಗುಂಡಿನ ದಾಳಿ ನಡೆದಿದ್ದು, ಬ್ಯಾಂಕ್ ಕಚೇರಿಯ ಮುಂದೆಯೇ ಮೃತದೇಹ ಬಿದ್ದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.