ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ೫೬.೩೦ ಲಕ್ಷ ಮೌಲ್ಯದ ಆಭರಣ ನಾಪತ್ತೆ
ಹುಬ್ಬಳ್ಳಿ: ಬ್ಯಾಂಕ್ ಖಾತೆ ಅಷ್ಟೇ ಅಲ್ಲ ಬ್ಯಾಂಕ್ ಲಾಕರ್ ಕೂಡಾ ಸೇಫ್ ಅಲ್ಲ ಎಂಬುದಕ್ಕೆ ಬ್ಯಾಂಕ್ ಲಾಕ್‌ರನಲ್ಲಿದ್ದ ಬರೋಬ್ಬರಿ ೫೬,೩೦ ಲಕ್ಷ ರೂ (೨೦೧೩ ರ ಮೌಲ್ಯದ) ಮೌಲ್ಯದ ಆಭರಣ ನಾಪತ್ತೆಯಾಗಿದ್ದು, ಆಭರಣ ಇಟ್ಟ ನಗರದ ಉದ್ಯಮಿ ಪರಿತಪಿಸುತ್ತಿದ್ದಾರೆ.
ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಎಚ್. ಪಾಟೀಲ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕಿನಲ್ಲಿ ಇಂತಹ ಪ್ರಕರಣ ನಡೆದಿದ್ದು, ಉದ್ಯಮಿಯೊಬ್ಬರಿಗೆ ಸೇರಿದ ಲಾಕರ್‌ನಲ್ಲಿದ್ದ ೫೬,೩೦ ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನವಾಗಿವೆ.
ಮಹಾವೀರ ಕಾಲೋನಿಯ ಈಶ ಬೋನೇಶ್ವರದಾಸ ಕೋಹಿಲಿ ಎಂಬುವವರ ಲಾಕ್‌ರನಲ್ಲಿದ್ದ ಆಭರಣ ಕಳ್ಳತನವಾಗಿದ್ದು, ತಾಯಿಯ ಮಾಂಗಲ್ಯ ಸರ, ಎರಡು ಬಂಗಾರದ ಚೈನ್, ಪಂಜಾಬಿ ಕಳ, ಲಕ್ಷ್ಮೀ ಲಾಕೇಟ್, ಸಿಲ್ವರ್ ಕ್ವಾಯಿನ್ಸ್, ಕಿವಿಯೋಲೆ, ಡೈಮಂಡ್ ನೆಕ್ಲೆಸ್, ಡೈಮಂಡ್ ರಿಂಗ್, ಡೈಮಂಡ್ ಬಳೆ ಸೇರಿ ೫೬,೩೦ ಲಕ್ಷ (೨೦೧೩ ರ ಮೌಲ್ಯದ) ಆಭರಣ ಕಳ್ಳತನವಾಗಿವೆ.
ಇದೀಗ ಉದ್ಯಮಿ ಈಶ ಅವರು ಕೇಶ್ವಾಪುರ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಲಾಕರ್‌ನಲ್ಲಿದ್ದ ಆಭರಣವನ್ನು ಬ್ಯಾಂಕಿನ ಅಧಿಕಾರಿಗಳ ಸಮ್ಮುಖದಲ್ಲಿ ನೋಡಲು ಹೋದವರಿಗೆ ಲಾಕರ್ ಓಪನ್ ಇರುವುದು ತಿಳಿದು ಶಾಕ್‌ಗೆ ಒಳಗಾಗಿದ್ದಾರೆ. ಲಾಕರ್‌ನಲ್ಲಿಟ್ಟದ ಆಭರಣ ಇಲ್ಲ. ಇದಕ್ಕೆ ಬ್ಯಾಂಕಿನ ಅಧಿಕಾರಿಗಳೇ ಹೊಣೆ ಎಂದು ಆರೋಪಿಸಿ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಎಸ್‌ಬಿಐ ಬ್ಯಾಂಕಿನ ನಾಲ್ವರು ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಿದ್ದಾರೆ.
ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ಆಭರಣ ಕಳ್ಳತನವಾಗಿರುವ ಕುರಿತು ಪ್ರಕರಣ ದಾಖಲಾಗಿದೆ. ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಕೇಶ್ವಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?
ಕೇಶ್ವಾಪುರದ ಈಶ ಬೋನೇಶ್ವರ ಕೋಹಿಲಿ ಅವರ ತಂದೆ ಬೋನೇಶ್ವರ ಅವರು ೧೯೭೨ ರಿಂದ ಬ್ಯಾಂಕ್ ಲಾಕರ್ ಬಳಸುತ್ತಿದ್ದಾರೆ. ಅದರಂತೆ ೨೦೧೩ ರಲ್ಲಿ ಬೋನೇಶ್ವರ ಅವರು ಈಶ ಹಾಗೂ ಅವರ ಪತ್ನಿಯೊಂದಿಗೆ ತೆರಳಿ ಎಸ್‌ಬಿಐ ಲಾಕರ್‌ನಲ್ಲಿಟ್ಟಿದ್ದ ಆಭರಣ ತೋರಿಸಿದ್ದಾರೆ. ನಂತರ ೨೦೧೪ ರಲ್ಲಿ ಬೋನೇಶ್ವರ ದಾಸ ಅವರು ಮೃತಪಟ್ಟಿದ್ದಾರೆ. ಇದಾದ ಬಳಿಕ ಈಶ ಮತ್ತು ಅವರ ತಾಯಿ ತೆರಳಿ ೨೦೧೪ ರಲ್ಲಿ ಲಾಕರ್ ಚೆಕ್ ಮಾಡಿಕೊಂಡು ಬಂದಿದ್ದಾರೆ.
ಆದರೆ, ನಂತರ ೨೦೨೩ ರವರೆಗೆ ಬ್ಯಾಂಕ್‌ನತ್ತ ಹೋಗಿಲ್ಲ. ಕಳೆದ ಡಿಸೆಂಬರ್ ೧ ರಂದು ಬ್ಯಾಂಕಿಗೆ ಹೋಗಿ ಲಾಕರ್ ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಒಟ್ಟು ಈಶ ಅವರ ಎರಡು ಲಾಕರ್ ಇದ್ದು, ಅದರಲ್ಲಿ ಒಂದು ಲಾಕರ್ ಓಪನ್ ಆಗಿ ಅದರಲ್ಲಿದ್ದ ೫೬,೩೦ ಲಕ್ಷ(೨೦೧೩ನೇ ವರ್ಷದ ಮೌಲ್ಯ) ಈಗಿನ ಮೌಲ್ಯ ೧,೫ ಕೋಟಿ ಮೌಲ್ಯದ ಆಭರಣ ಕಳ್ಳತನವಾಗಿವೆ. ಇನ್ನೊಂದು ಲಾಕರ್ ಕೂಡ ಇದುವರೆಗೂ ಓಪನ್ ಆಗಿಲ್ಲ.