ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬ್ರಾಹ್ಮಣನ ಒಡಲಾಳವನ್ನು ಕೇಳುವವರಾರು?

02:30 AM Nov 25, 2024 IST | Samyukta Karnataka

ಕಳೆದ ವಾರ ನಾಥು ರಾಮ್ ಗೋಡ್ಸೆ ಬಲಿದಾನ ದಿನವೆಂದು ಸಂದೇಶ ಹರಿದಾಡುತಿತ್ತು, ಕೆಲವರು ಆ ಸಂದೇಶವನ್ನು ಯಥಾವತ್ತಾಗಿ ಕಳಿಸಿ ಇದಕ್ಕೇನಂತೀರಾ ಎಂದರು. ಕೆಲವರು ದೂರವಾಣಿ ಕರೆ ಮಾಡಿ ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಒಟ್ಟಾರೆಯಾಗಿ ತಾತ್ಪರ್ಯವಿಷ್ಟೇ ಗಾಂಧೀಜಿ ಅವರನ್ನು ಕೊಂದವನನ್ನು ಹುತಾತ್ಮ ಎನ್ನುವುದು ಎಷ್ಟು ಸರಿ ಎಂಬ ಅವರ ಪ್ರಶ್ನೆ. ಅವರ ಪ್ರಶ್ನೆಯನ್ನು ಆಲಿಸಿ ನೀವು ಹೇಳಿದ್ದು ಸರಿ ಇದು ಅಕ್ಷಮ್ಯ ಅಪರಾಧ. ಗೋಡ್ಸೆ ಹುತಾತ್ಮನಲ್ಲ ಅವನೊಬ್ಬ ದಾರಿ ತಪ್ಪಿದ್ದ ದೇಶ ಭಕ್ತ ಕೊಲೆಗಾರನಾದ ದಾರುಣ ಪ್ರಸಂಗ ಎಂದು ಹೇಳಿದೆ. ಆಗ ಆಚೆ ಬದಿಯಿಂದ ಧ್ವನಿ ಇನ್ನಷ್ಟು ಜೋರಾಯಿತು. ಓಹೋ ಅವನೊಬ್ಬ ದೇಶಭಕ್ತನೇ ಎಂದು? ಹೌದು ಗೋಡ್ಸೆ ಗಾಂಧಿಯನ್ನು ಕೊಂದ ಕೊಲೆಗಾರ ಹಾಗೂ ಅವನೊಬ್ಬ ದಾರಿ ತಪ್ಪಿದ ದೇಶ ಭಕ್ತ ಎಂದು ಮತ್ತೆ ಉತ್ತರಿಸಿದೆ. ಯಾರನ್ನೇ ಆಗಲಿ ಕೊಲ್ಲುವುದಿದೆಯಲ್ಲ ಅದು ಪರಮ ಅಪರಾಧ. ಗಾಂಧೀಜಿಯನ್ನು ಕೊಂದ ಎಂಬುದಕ್ಕಾಗಿ ಅವನು ಏನಾಗಿದ್ದ ಎಂದು ಹೇಳದೆ ಇದ್ದರೆ ಅದು ಗಾಂಧೀಜಿ ಅವರು ಪ್ರತಿಪಾದಿಸಿದ ಸತ್ಯಕ್ಕೆ ಮಾಡುವ ಅಪಚಾರವಾಗುತ್ತದೆ. ಆದ್ದರಿಂದ ಗೋಡ್ಸೆ ದಾರಿ ತಪ್ಪಿದ ದೇಶ ಭಕ್ತನೆಂದು ಹೇಳುವುದರೊಂದಿಗೆ ಗಾಂಧಿ ಹತ್ಯೆಯ ನಂತರ ಗಾಂಧೀಜಿ ಅನುಯಾಯಿಗಳು ಎಂದು ಹೇಳಿಕೊಂಡು ನಡೆಸಿದ ಬ್ರಾಹ್ಮಣರ ಮಾರಣ ಹೋಮವಿದೆಯಲ್ಲ ಅದನ್ನು ಹೇಳಬೇಕು. ಏಕೆಂದರೆ ಇತಿಹಾಸವನ್ನು ಇತಿಹಾಸದಂತೆ ಕಾಣಬೇಕು. ಗೋಡ್ಸೆ ಖಂಡಿತ ಹುತಾತ್ಮನಲ್ಲ ಅವನೊಬ್ಬ ಕೊಲೆಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವನೊಬ್ಬ ದಾರಿ ತಪ್ಪಿದ ದೇಶ ಭಕ್ತನೂ ಅಲ್ಲ ಎಂಬ ನಿಲುವಿದೆಯಲ್ಲ ಇದು ಸಮೂಹ ಸನ್ನಿಗೊಳಗಾದವರ ವರ್ತನೆಯಂತೆ ಕಾಣುತ್ತದೆ. ಬಹುಶಃ ಅಂದು ಗಾಂಧೀಜಿ ಹತ್ಯೆಯ ಸಂಚಿನಿಂದ ಬದುಕುಳಿದಿದ್ದರೆ ಬ್ರಾಹ್ಮಣರ ಮೇಲಾದ ಹಲ್ಲೆಯನ್ನು ಖಂಡಿಸಿ ಅವರೇ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು. ಆದರೆ ಗಾಂಧಿ ಅವರ ಅನುಯಾಯಿಗಳಿಗೆ ಗಾಂಧಿ ಹೇಳಿದ ಅಹಿಂಸೆಯ ಪಾಠ ಸ್ಮೃತಿಪಟಲದಿಂದ ಅಂದೊಂದು ದಿವಸ ಅಳಿಸಿ ಹೋಗಿರಬೇಕು. ಇಲ್ಲದಿದ್ದರೆ ಗೋಡ್ಸೆ ಒಬ್ಬ ಬ್ರಾಹ್ಮಣ ಎಂದು ತಿಳಿಯುತ್ತಿದ್ದಂತೆ ಒಂದಿಡೀ ಸಮೂಹದ ಮೇಲೆ ಹಲ್ಲೆ ನಡೆಯಿತಲ್ಲ ಅದರ ಹೊಣೆ ಯಾರದ್ದು? ಯಾವ ಸೋಶಿಯಲ್ ಮೀಡಿಯಾಗಳು ಇಲ್ಲದ ಹೊತ್ತಿನಲ್ಲಿ ಗಾಂಧೀಜಿಯವರನ್ನು ಕೊಂದವನ ಜಾತಕ ಜಾಲಾಡಿ ಅವನೊಬ್ಬ ಚಿತ್ಪಾವನ ಬ್ರಾಹ್ಮಣ ಎಂದು ದಿನ ಬೆಳಗಾಗುವುದರ ಒಳಗೆ ಮೊದಲಿಗೆ ಚಿತ್ಪಾವನರ ನಂತರ ಸಿಕ್ಕ ಸಿಕ್ಕ ಬ್ರಾಹ್ಮಣ ಮನೆಗಳ ಮೇಲಾದ ದಾಳಿಗಳಿಗೆ ಉತ್ತರ ಕೊಡುವವರಾರು? ಇದು ಯಾರ ಹೊಣೆಗೇಡಿತನ? ಅದಿರಲಿ ಕಾಶ್ಮೀರಿ ಪಂಡಿತರ ವಲಸೆ ಹಾಗೂ ಅವರ ಮೇಲಾದ ದೌರ್ಜನ್ಯ ಹಲವು ಚರ್ಚೆಗಳಿಗೆ ನಾಂದಿ ಹಾಡಿತು. ಅವರ ಹಕ್ಕಿಗಾಗಿ ಹೋರಾಟದ ಕೂಗು ಅಲ್ಲಲ್ಲಿ ಕೇಳಿ ಬಂದಿತು. ಸರ್ಕಾರಗಳು ಅದನ್ನೆಷ್ಟು ಕೇಳಿಸಿಕೊಂಡಿತು ಎಂಬುದು ಬೇರೆ ವಿಷಯ. ಆದರೆ ಕೂಗು ಆಗಾಗ ಕೇಳಿಸುತಿತ್ತು ಎನ್ನುವುದೇ ಒಂದು ಸಮಾಧಾನ. ಆದರೆ ಚಿತ್ಪಾವನ ಬ್ರಾಹ್ಮಣರ ಮಾರಣ ಹೋಮದ ಸಂಗತಿ ಇತಿಹಾಸದ ಗರ್ಭದಲ್ಲಿ ಹುದುಗಿ ಹೋಯಿತು.
ಅಂದು ಬಾಪು ಹಾಕಿ ಕೊಟ್ಟ ಮಾರ್ಗ ನಿಜಕ್ಕೂ ಶ್ಲಾಘನೀಯ, ಆದರೆ ಅಂದು ನೀವು ಮಾಡುತ್ತಿರುವುದು ಸರಿಯಲ್ಲ, ನಿಮ್ಮ ನಡೆಯ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡುತ್ತೇವೆಂದರೆ ವಿರೋಧಿ ಪಾಳಯದವರು ಒಂದಿನಿತು ನಿಂತು, ಕೇಳಿ ಮೊಮ್ಮಲು ಮರುಗುವಷ್ಟು ಹೃದಯವಂತರಾಗಿರುತ್ತಿದ್ದರು. ಆದರೆ ಇಂದು ಕೇಳುವ ಕಿವಿಗಳಿಗೆ ವ್ಯವಧಾನವಿಲ್ಲ, ಆದ್ದರಿಂದ ಬಾಪೂಜಿ, ಇಂದು ನೀವು ಇದ್ದಿದ್ದರೆ ಏನು ಮಾಡುತ್ತಿದಿರಿ ಎಂದು ಕೇಳಬೇಕೆಂದೆನಿಸುತ್ತದೆ. ಏಕೆಂದರೆ ಯಾವ ಶಾಂತಿ, ಅಹಿಂಸೆ, ಸಮಾನತೆ ಎಂದು ಜೀವನವಿಡೀ ಹೊರಡಿದಿರೋ ಅದ್ಯಾವುದು ಇಂದು ಜೀವನ ಮೌಲ್ಯವಾಗಿ ಉಳಿದಿಲ್ಲ. ಅಷ್ಟೇ ಅಲ್ಲ ಅಂದು ನೀವು ಶೋಷಿತ ವರ್ಗಗಳ ಒಳಿತಿಗಾಗಿ ನಡೆಸಿದ ಒಂದು ಹೊಸ ಮನ್ವಂತರಕ್ಕೆ ನಾಂದಿ ಹಾಡಿತ್ತು. ಇಂದು ಆರ್ಥಿಕವಾಗಿ ಜರ್ಜರಿತರಾದವರ ಬಗ್ಗೆ ನಿಮ್ಮ ನಿಲುವೇನು ಎಂದು ಕೇಳಬೇಕು ಅನಿಸುತ್ತದೆ.
ಒಟ್ಟಾರೆಯಾಗಿ ಬಾಪು ಆಶಯಗಳು ಅವರೊಂದಿಗೆ ಸ್ವರ್ಗ ಸೇರಿದೆ ಎಂದರೆ ತಪ್ಪಾಗಲಾರದು. ಹೀಗೇಕೆ ಎಂದು ಪ್ರಶ್ನೆ ಮಾಡಿ ನೋಡಿ, ಆಳುವವರು ಒಂದು ಕಮಿಟಿ ಕರೆದು ಕೂಲಂಕಷವಾಗಿ ಪರಿಶೀಲಿಸುತ್ತೇವೆ ಎನ್ನುತ್ತಾರೆ. ವಿರೋಧ ಪಕ್ಷಗಳಾಗಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂಬ ಹೇಳಿಕೆಯೊಂದಿಗೆ ಸಮಸ್ಯೆಗೆ ಅಲ್ಪ ವಿರಾಮ ಹಾಕುತ್ತಾರೆ. ಇಲ್ಲದಿದ್ದರೆ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳನ್ನು ಗಮನದಲ್ಲಿಟ್ಟು ೨೦೧೯ರಲ್ಲಿ ಕೇಂದ್ರ ಸರ್ಕಾರವು ೧೦೩ನೇ ಸಾಂವಿಧಾನಿಕ ತಿದ್ದುಪಡಿಯ ಅಡಿಯಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳ ಜನರಿಗೆ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇ. ೧೦ರಷ್ಟು ಮೀಸಲಾತಿಯನ್ನು ಅನುಮತಿಸುವ ನಿಬಂಧನೆಯನ್ನು ಜಾರಿ ಮಾಡಿತು. ಕೆಲವರು ಈ ನಡೆಯನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಲನ್ನು ಏರಿದ್ದರು. ಆದರೆ ಈ ತಿದ್ದುಪಡಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಆದರೂ ಈ ಮೀಸಲಾತಿಯನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ತೋರುತ್ತಿರುವ ಉದಾಸೀನ ಹಾಗೂ ದಿವ್ಯ ಮೌನ ಗಮನಿಸಿದರೆ ಸಂವಿಧಾನ ಸಂಕಷ್ಟದಲ್ಲಿದೆ ಎಂದು ರಾಹುಲ್ ಗಾಂಧಿ ಹೇಳುವ ನಲ್ನುಡಿ ಸತ್ಯ ಅನಿಸದೇ ಇರಲಾರರದು.
ಒಂದು ಪಕ್ಷ ಈ ಮೀಸಲಾತಿ ನಿಯಮವನ್ನು ಜಾರಿಗೆ ತರದೇ ಇದ್ದಿದ್ದರೆ ಬ್ರಾಹ್ಮಣರಾಗಲಿ ಅಥವಾ ಆರ್ಯ ವೈಶ್ಯರಾಗಲಿ ೧೦ರಷ್ಟು ಮೀಸಲಾತಿ ಜಾರಿ ಮಾಡಿ ಎಂದು ಖಂಡಿತ ದುಂಬಾಲು ಬೀಳುತ್ತಿರಲಿಲ್ಲ. ಆದರೆ, ಮೀಸಲಾತಿ ಜಾರಿ ಮಾಡಿದ ಮೇಲೂ ಅದರ ಅನುಷ್ಠಾನ ಮಾಡದೆ ಇರುವುದು ಎಷ್ಟು ಸರಿ ಹಾಗೆ ಮಾಡುವ ಬದಲು ನಿಯಮವನ್ನು ಜಾರಿ ತರದೇ ಇದ್ದರೂ ರೊಚ್ಚಿಗೆದ್ದು ದೆಹಲಿ ಚಲೋ ಎನ್ನುತ್ತಿರಲಿಲ್ಲ. ನಿಯಮ ಕೇಂದ್ರದಲ್ಲಿ ಜಾರಿ ಆಗಿದ್ದರೂ ರಾಜ್ಯ ಮಟ್ಟದಲ್ಲಿ ಜಾರಿ ಮಾಡದೇ ಮೀನಾ ಮೇಷ ಮಾಡುವುದನ್ನು ನೋಡಿದರೆ ಇವರಿಗೆ ಜಾರಿ ಮಾಡುವ ಆಶಯವಂತೂ ಇಲ್ಲವೆಂಬ ಗ್ಯಾರಂಟಿ ಬ್ರಾಹ್ಮಣ ಸಮುದಾಯಕ್ಕಿದೆ. ಹೇಳಿ ಕೇಳಿ ಇದು ಗ್ಯಾರಂಟಿ ಸರ್ಕಾರ ಅಲ್ಲವೇ. ಇನ್ನು ಬಿ ಜೆ ಪಿ ವಿಷಯಕ್ಕೆ ಬಂದರೆ ಈ ಮೀಸಲಾತಿ ಬಿಜೆಪಿಯ ಕೂಸು. ಆದರೆ ಕರ್ನಾಟಕದಲ್ಲಿ ಬಿಜೆಪಿ ಈ ಮೀಸಲಾತಿಯನ್ನು ಜಾರಿಗೆ ತರಲಿಲ್ಲ ಕಾರಣ ೧೦ರಷ್ಟು ಮೀಸಲಾತಿಯ ಫಲಾನುಭವಿಗಳು ಯಾರು ಅದೇ ಸಂಖ್ಯಾ ಬಾಹುಳ್ಯದಲ್ಲಿ ಕಡಿಮೆಯಿರುವ ಬ್ರಾಹ್ಮಣರು ಹಾಗೂ ಆರ್ಯ ವೈಶ್ಯರು ಇವೆರಡು ಸಮುದಾಯ ಏನಕೇನ ಕೆಲವು ನಿರ್ಧಿಷ್ಟ ಕಾರಣಗಳಿಗೆ ಬೆಂಬಲಿಸುವುದು ಬಿಜೆಪಿಯನ್ನು. ಆದ್ದರಿಂದ ಇನ್ನೇನು ಚುನಾವಣೆಗೆ ಕೆಲವೇ ಗಂಟೆಗಳಿವೆ ಎನ್ನುವಾಗ ಕರ್ನಾಟಕದ ಬಿಜೆಪಿ ಜಾರಿಯಾಗದ ಮೀಸಲಾತಿ ಕರುಡನ್ನು ಪ್ರಕಟಿಸಿ ಗೆದ್ದೇ ಬಿಟ್ಟೆವೆಂದು ಬೀಗಿತ್ತು. ಬಿಜೆಪಿ ಪಕ್ಷವೇ ಈ ಮೀಸಲಾತಿಯನ್ನು ಜಾರಿಗೆ ತರದಿದ್ದ ಮೇಲೆ ಇನ್ನು ಕಾಂಗ್ರೆಸ್ ಜಾರಿಗೆ ತರಬಹುದೆಂಬ ನಂಬಿಕೆ ಇಟ್ಟರೆ ಅದು ಶುದ್ಧ ಅಪದ್ಧ. ಅಲ್ಲದೆ ಪ್ರಸ್ತುತ ಕಾಲ ಘಟ್ಟದಲ್ಲಿ ವಿಪ್ರ ಶಾಸಕರು ಕಾಂಗ್ರೆಸ್ ಪಕ್ಷದಿಂದ ಆರಿಸಿ ಬರುವುದೇ ವಿಪ್ರರಿಗೆ ಕೊಡಬಹುದಾದ ಬಹು ದೊಡ್ಡ ಕೊಡುಗೆ. ಇನ್ನು ವಿಪ್ರರನ್ನು ಮಂತ್ರಿ ಮಾಡಿದರೆ ಬಿಡಿ ಸ್ವರ್ಗಕ್ಕೆ ಮೂರೇ ಗೇಣು. ಇನ್ನು ಬಿಜೆಪಿಯ ವಿಪ್ರ ಶಾಸಕರು ಈ ಒಂದು ಕಾರಣಕ್ಕಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ವಲಸೆ ಬಂದರೆ ಅದು ತಮ್ಮ ರಾಜಕೀಯ ಜೀವನದ ಆತ್ಮಹತ್ಯೆಯೇ ಸೈ, ಆದ್ದರಿಂದ ಅವರವರು ಎಲ್ಲೆಲ್ಲಿದ್ದಾರೋ ಅಲ್ಲಲ್ಲಿ ಸುಮ್ಮನಿದ್ದು ಬಿಡಬೇಕು. ಬೇರೆ ಸಮುದಾಯದವರು ಮಾತ್ರ ಸಮುದಾಯದ ಪರ ಆಗಾಗ ದನಿ ಎತ್ತಿ ಸಮುದಾಯದ ಕೆಲಸ ಮಾಡಿ ಕೊಳ್ಳುತ್ತಿರಬೇಕು.
ಶಾಸಕರು ಹಾಗೂ ಸಂಸದರು ಈ ಮೀಸಲಾತಿ ಹೊಣೆಯನ್ನು ಹೊರದಿದ್ದರೂ ಚಿಂತೆಯಿಲ್ಲ, ಶಾಸನಗಳನ್ನು ನಿರ್ವಹಿಸುವ ಸಂಪೂರ್ಣ ಜವಾಬ್ದಾರಿ ಮತ್ತು ಹಕ್ಕು ಶಾಸಕರ ಹಾಗೂ ಸಂಸದರ ಪರಿಧಿಯಲ್ಲಿದ್ದರೂ ಈ ವಿಷಯದ ಬಗ್ಗೆ ಒಂದೇ ಒಂದು ಮಾತನಾಡದೆ ಸುಮ್ಮನಿರಬಹುದು. ಅದು ಅವರ ಜನ್ಮ ಸಿದ್ಧ ಹಕ್ಕು. ಆದರೆ ಬ್ರಾಹ್ಮಣ ಸಂಘ ಸಂಸ್ಥೆಗಳು ಅದರಲ್ಲೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಮಾತ್ರ ಉಗ್ರ ಹೋರಾಟ ಮಾಡಬೇಕು. ಏಕೆಂದರೆ ಸಂಘ ಸಂಸ್ಥೆಗಳನ್ನು ಮಹಾಸಭೆಯನ್ನು ಅದರ ಅಧ್ಯಕ್ಷರನ್ನು ಹೇಗೆ ಬೇಕು ಹಾಗೆ ಪ್ರಶ್ನೆ ಮಾಡಬಹುದು. ಬಡ ಬ್ರಾಹ್ಮಣನ ಸಿಟ್ಟು ತಣ್ಣಗಾಗಬೇಕು ಅದು ಸಂಘ ಸಂಸ್ಥೆಗಳಿಗೆ ಹಾಗೂ ಮಹಾಸಭೆಗೆ ಪ್ರಶ್ನಿಸುವುದರಿಂದ ಸಾಧ್ಯ. ಹೀಗೆ ಕಟ್ಟ ಕಡೆಗೆ ಬ್ರಾಹ್ಮಣರ ಒಡಲಾಳವನ್ನು ಕೇಳುವವರಾರು ಎಂಬ ಪ್ರಶ್ನೆಗೆ ಮಾತ್ರ ಉತ್ತರವಿಲ್ಲ. ಮುಂಬರುವ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಬೇಕೆಂದು ಬ್ರಾಹ್ಮಣ ಸಮುದಾಯ ಕಾಯುತ್ತ ಕುಳಿತಾಗ ಗರ್ವದಿಂದ ಹೇಳು ನಾನೊಬ್ಬ ಹಿಂದೂ ಎಂಬ ಕೂಗು ಕೇಳಿಬರುತ್ತದೆ. ಜಾತಿ ಎಂಬ ಕಿಡಿ ಜ್ವಾಲೆಯನ್ನು ಜ್ಯೋತಿ ಎಂದು ನೀ ತಿಳಿಯದಿರು ಎಂಬ ಅಶರೀರವಾಣಿ ಕಿವಿಗಳಲ್ಲಿ ರಿಂಗಣಿಸುತ್ತದೆ. ಏಮ್ಸ್, ಐಐಟಿ, ಐಐಎಂ ಹಾಗೂ ಮೆಡಿಕಲ್ ಇವೆಲ್ಲವೂ ನಮಗಲ್ಲ ಎಂದು ಪರಿಭಾವಿಸಿ ಬ್ರಾಹ್ಮಣ ಮತ್ತೆ ಬಡ ಬ್ರಾಹ್ಮಣನಾಗಿರುವ ಸಂಕಲ್ಪ ಗಟ್ಟಿ ಮಾಡಿಕೊಳ್ಳುತ್ತಾನೆ.

Next Article