ಬ್ರಾಹ್ಮಣ ಮಹಾಸಭೆಯಿಂದ ಬಡ ಬ್ರಾಹ್ಮಣರಿಗೆ ಸೂರು
ಬೆಂಗಳೂರು: ಇದು ಕೇವಲ ಜಾತಿ ಸಮ್ಮೇಳನ ಅಲ್ಲ, ದೇವತೆಗಳ ಸಮ್ಮೇಳನ. ಬ್ರಾಹ್ಮಣರು ಸ್ವರ್ಗದ ಪ್ರತಿನಿಧಿಗಳು ಎಂಬ ವಾಖ್ಯಾನದ ಕಾರ್ಯಕ್ರಮ ಇದಾಗಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಸಮ್ಮೇಳನ ಹಾಗೂ ಸುವರ್ಣ ಸಂಭ್ರಮ ಲಕ್ಷಾಂತರ ವಿಪ್ರ ಬಂಧುಗಳು, ವಿದ್ವಾಂಸರ, ಧರ್ಮಗುರುಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ತೆರೆಕಂಡಿತು.
ಕೊನೆ ದಿನವಾದ ಭಾನುವಾರ ಧರ್ಮ ರಕ್ಷಣೆ ಹಾಗೂ ಭಾರತೀಯ ಪರಂಪರೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಬಂದಿದ್ದ ಶಂಕರಾಚಾರ್ಯರು, ರಾಮಾನುಜಾಚಾರ್ಯರು ಹಾಗೂ ಮಧ್ವಾಚಾರ್ಯರ ತತ್ವಾದರ್ಶಗಳ ಬಗ್ಗೆ ಸಮ್ಮೇಳನದ ವೇದಿಕೆಯಲ್ಲಿ ತಜ್ಞರು, ಸ್ವಾಮೀಜಿಗಳ ಅನುಭವದ ಮಾತುಗಳು ಸಭಿಕರನ್ನು ಬೇರೊಂದು ಲೋಕಕ್ಕೆ ಕರೆದೊಯ್ದಂತಾಗಿತ್ತು.
ಭಾನುವಾರ ಬೆಳಗ್ಗೆ ಸಾಂಸ್ಕೃತಿಕ ಕಾರ್ಯಕ್ರಮ ವಿವಿಧ ಕಲಾ ತಂಡಗಳಿಂದ ನಡೆಯಿತು. ನಂತರ ಸನಾತನ ಧರ್ಮಕ್ಕೆ ಆಚಾರ್ಯತ್ರಯರ ಕೊಡುಗೆ' ಕುರಿತು ಆಧ್ಯಾತ್ಮ ಚಿಂತಕ ಡಾ.ಪಾವಗಡ ಪ್ರಕಾಶ್‌ರಾವ್, ಖ್ಯಾತ ಶಿಕ್ಷಣ ತಜ್ಞ ಡಾ.ಗುರುರಾಜ್ ಕರ್ಜಗಿ, ಖ್ಯಾತ ವಿದ್ವಾಂಸ ಶೆಲ್ವಪಿಳ್ಳೆ ಅಯ್ಯಂಗಾರ್ ಅವರು ವಿಚಾರ ಮಂಡಿಸಿದರು. ಹೈಕೋರ್ಟ್ನ ನ್ಯಾಯಮೂರ್ತಿ ಶ್ರೀಶಾನಂದ ಅವರು ಅಧ್ಯಕ್ಷತೆ ವಹಿಸಿದ್ದರು.
ನಂತರ ನಡೆದ ಧರ್ಮಸಭೆಯಲ್ಲಿ ಗೋಕರ್ಣ ರಾಮಚಂದ್ರಪುರ ಮಠದ ಪೀಠಾಧೀಶ್ವರ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಬ್ರಾಹ್ಮಣ ಎಲ್ಲಿ ಬಾಳುತ್ತಾನೋ ಆ ಪ್ರದೇಶ ತಾನಾಗಿಯೇ ಅಮರಾವತಿಯಾಗಿರುತ್ತದೆ. ಈ ಮಹಾ ಸಮ್ಮೇಳನದ ಮೂಲಕ ಜಗತ್ತಿಗೆ ಒಂದು ವಿಶೇಷ ಸಂದೇಶ ಹೋಗಲಿದೆ. ಆದರೆ, ಮುಂದೊಂದು ದಿನ ಇಡೀ ಹಿಂದೂ ಸಮಾಜಕ್ಕೆ ಆಪತ್ತು ಬರಲಿದೆ. ಈ ಮಾತನ್ನು ಭಗವದ್ಗೀತೆಯಲ್ಲೂ ಹೇಳಲಾಗಿದೆ. ಅದು ಈಗ ಸತ್ಯವಾಗುತ್ತಿರುವ ಭಾಸವಾಗುತ್ತಿದೆ ಎಂದರು.