For the best experience, open
https://m.samyuktakarnataka.in
on your mobile browser.

ಬ್ರಾಹ್ಮಣ ಮಹಾಸಭೆ ಸುವರ್ಣ ಸಂಭ್ರಮಕ್ಕೆ ಅದ್ಧೂರಿ ಚಾಲನೆ

10:42 PM Jan 18, 2025 IST | Samyukta Karnataka
ಬ್ರಾಹ್ಮಣ ಮಹಾಸಭೆ ಸುವರ್ಣ ಸಂಭ್ರಮಕ್ಕೆ ಅದ್ಧೂರಿ ಚಾಲನೆ

ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಗೆ ೫೦ ವರ್ಷ ಸಂದ ಹಿನ್ನೆಲೆಯಲ್ಲಿ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಏರ್ಪಡಿಸಿರುವ ೨ ದಿನಗಳ ಹನ್ನೊಂದನೇ ಬ್ರಾಹ್ಮಣ ಮಹಾ ಸಮ್ಮೇಳನ ಹಾಗೂ ಸುವರ್ಣ ಸಂಭ್ರಮ ಕಾರ್ಯಕ್ರಮಕ್ಕೆ ಶೃಂಗೇರಿ ಶಾರದಾಪೀಠಾಧೀಶ್ವರ ಶ್ರೀ ವಿಧುಶೇಖರಭಾರತೀ ಮಹಾಸ್ವಾಮೀಜಿ ಚಾಲನೆ ನೀಡಿದರು.
ಶನಿವಾರ ಬೆಳಗ್ಗೆ ೫.೩೦ಕ್ಕೆ ಗಾಯತ್ರೀ ಮಹಾಯಾಗದ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು. ಬೆಳಗ್ಗೆ ೭.೩೦ಕ್ಕೆ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ ಧ್ವಜಾರೋಹಣ ನೆರವೇರಿಸಿದರು. ಬೆಳಗ್ಗೆ ೮.೩೦ಕ್ಕೆ ಗಾಯತ್ರೀ ಮಹಾಯಾಗ ಪೂರ್ಣಾಹುತಿ ಆರಂಭವಾಯಿತು. ಯಾಗದಲ್ಲಿ ಹಾರನಹಳ್ಳಿ ದಂಪತಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಶೃಂಗೇರಿ ಶಾರದಾಪೀಠಾಧೀಶ್ವರ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಮಾತನಾಡಿ, ಭೂಮಿಯ ಮೇಲೆ ಭಗವಂತ ದಶಾವತಾರ ತಾಳಿರುವ ಉದ್ದೇಶ ಧರ್ಮೋದ್ಧಾರ. ಆಯಾ ಕಾಲಘಟ್ಟದಲ್ಲಿ ರಾಮ, ಕೃಷ್ಣ, ನರಸಿಂಹ, ಗೋವಿಂದ ಹೀಗೆ ಹಲವು ಹೆಸರಿನ ಅವ ತಾರಗಳಲ್ಲಿ ಸನಾತನ ಕಾಲದಿಂದಲೂ ಧರ್ಮ ರಕ್ಷಣೆ ಮಾಡಿಕೊಂಡು ಭಗವಂತ ಬಂದಿದ್ದಾನೆ. ಅವರ ಮಾರ್ಗದಲ್ಲಿ ನಾವುಗಳು ನಡೆದುಕೊಂಡು ಧರ್ಮಾಚರಣೆ, ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿ ಮಾತನಾಡಿ, ತಮ್ಮ ಧರ್ಮ ಆಚರಣೆ ಮಾಡಿಕೊಂಡು ಇತರ ಧರ್ಮಗಳ ಆಚರಣೆಗೆ ಸಹಕರಿಸಬೇಕು ಎಂಬುದು ನಮ್ಮ ಧರ್ಮದ ಸಾರ. ಇದನ್ನು ನಾವು ಸೆಕ್ಯುಲರಿಸಂ (ಜ್ಯಾತ್ಯತೀತತೆ) ಎನ್ನುತ್ತೇವೆ. ಆದರೆ ಕೆಲವರು ತಮ್ಮ ಧರ್ಮ ಆಚರಣೆ ಮಾಡದೆ ಇತರ ಧರ್ಮಗಳ ಆಚರಣೆಗೆ ಸಹಕರಿಸುತ್ತಿದ್ದಾರೆ. ಇದನ್ನು ಸೆಕ್ಯುಲರಿಸಂ ಎನ್ನುತ್ತಿದ್ದಾರೆ. ಇದು ತಪ್ಪು ಎಂದರು.
ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ನಾವುಗಳು ಭೂಮಿಯ ಮೇಲೆ ಪಡುವ ಕಷ್ಟ ಕ್ಷಣಿಕ, ಮೋಕ್ಷದ ನಂತರ ಪಡೆಯುವ ಸುಖ ಶಾಶ್ವತವಾಗಿದೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳುವುದು ಅವಶ್ಯಕವಾಗಿದೆ ಎಂದರು.