ಬ್ರಾಹ್ಮಣ ಸಮಾಜದ ಬೃಹತ್ ಸಮಾವೇಶ
ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಜ. ೧೮ ಮತ್ತು ೧೯ರಂದು ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡು ದಿನ ನಡೆಯುವ ಸಮಾವೇಶದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಚರ್ಚಾಗೋಷ್ಠಿ ನಡೆಯಲಿದ್ದು, ಸುಮಾರು ೧ ಲಕ್ಷಕ್ಕೂ ಅಧಿಕ ಜನ ಭಾಗಿಯಾಗಲಿದ್ದಾರೆ. ಸಮ್ಮೇಳನದಲ್ಲಿ ಉತ್ತರಾಧಿ ಮಠದ ಶ್ರೀ ಸತ್ಯಾತ್ಮತೀರ್ಥ ಮಹಾ ಸ್ವಾಮಿಗಳು, ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರಭಾರತೀ, ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು, ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ, ಸೋಂದಾ ಸ್ವರ್ಣವಲ್ಲಿ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಶೃಂಗೇರಿ ಶಿವಗಂಗಾ ಮಠದ ಶ್ರೀ ಪುರುಷೋತ್ತಮ ಭಾರತೀ ಸ್ವಾಮಿಗಳು, ಶ್ರೀ ಸಂಸ್ಥಾನ ಗೋಕರ್ಣದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಮನ್ನೆಲೆಮಾವಿನ ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ, ಅವನಿ ಶೃಂಗೇರಿ ಮಠದ ಶ್ರೀ ಅದ್ವೈತಾನಂದ ಭಾರತೀ ಸ್ವಾಮೀಜಿ ಮತ್ತು ಬೆಳಗಾವಿ ಜಿಲ್ಲೆಯ ಮುರುಗೋಡು ಚಿದಂಬರ ಮಠದ ಶ್ರೀ ದಿವಾಕರ ದೀಕ್ಷಿತರು ಸೇರಿದಂತೆ ಇನ್ನೂ ಅನೇಕ ಪ್ರಮುಖ ಪೀಠಾಧಿಪತಿಗಳು ಭಾಗವಹಿಸಿ ಮಾರ್ಗದರ್ಶನ ಮಾಡಲಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ನಿತಿನ್ ಗಡ್ಕರಿ, ಸಚಿವರಾದ ದಿನೇಶ್ ಗುಂಡೂರಾವ್, ಆರ್.ವಿ ದೇಶಪಾಂಡೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ಶಿಕ್ಷಣ ತಜ್ಞ ಗುರುರಾಜ್ ಕರಜಗಿ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿ ಸಭಾಂಗಣದಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದೆ ಇದಕ್ಕಾಗಿ ಬ್ರಾಹ್ಮಣ ಸಮಾಜದ ಎಲ್ಲ ಮಠಾಧೀಶರನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ನಡೆದಿದೆ. ಅಷ್ಟೇ ಅಲ್ಲ ಎಲ್ಲರೂ ಸಮಾವೇಶಕ್ಕೆ ಬರಲು ಸಮ್ಮತಿಸಿದ್ದಾರೆಂದರು, ಸಂಸ್ಕಾರ, ಸಂಘಟನೆ, ಸ್ವಾವಲಂಬನೆ, ವೇದ, ಧರ್ಮ, ಸಂಸ್ಕೃತಿಗಳ ಸಂರಕ್ಷಣೆ, ಏಕತೆಯ ಅನುಪಾಲನೆ ಹಾಗೂ ಸದೃಢ ರಾಷ್ಟç ನಿರ್ಮಾಣವೇ ಈ ಸಮಾವೇಶದ ಉದ್ದೇಶವಾಗಿದೆ. ಪ್ರಮುಖವಾಗಿ ಈ ಸಮಾವೇಶದಲ್ಲಿ ಬ್ರಾಹ್ಮಣ ಸಮಾಜದ ಪ್ರಮುಖ ಪೀಠಾಧಿಪತಿಗಳು, ಬಾಂಧವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವೇದ ಪಾರಾಯಣ, ಧರ್ಮ ಸಭೆ, ವಿಚಾರ ಗೋಷ್ಠಿಗಳು, ಸಾಧಕರಿಗೆ ಸನ್ಮಾನಿಸಲಾಗುವುದು. ಜೊತೆಗೆ ಸಮ್ಮೇಳನದ ಮತ್ತೊಂದು ವೇದಿಕೆಯಲ್ಲಿ ವ್ಯಾಪಾರ, ವಾಣಿಜ್ಯ ಸಮಾವೇಶ, ವಧು-ವರರ ಸಮಾಗಮ, ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ತಮಗಳನ್ನು ಆಯೋಜಿಸಲಾಗುವುದು ಎಂದರು.