ಬ್ಲ್ಯಾಕ್ ಮೇಲ್, ಜೀವ ಬೆದರಿಕೆ: ಮಂಜುಳಾ ಪೂಜಾರಿ ವಿರುದ್ಧ ದೂರು
ಹುಬ್ಬಳ್ಳಿ: ಮಾಜಿ ಸಚಿವ ಹಾಗೂ ಶಾಸಕ ವಿನಯ ಕುಲಕರ್ಣಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದ ರೈತ ಹೋರಾಟಗಾರ್ತಿ ಮಂಜುಳಾ ಪೂಜಾರ ವಿರುದ್ಧ ಗುತ್ತಿಗೆದಾರರೊಬ್ಬರು ತಮಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪದಡಿ ಹುಬ್ಬಳ್ಳಿಯಲ್ಲಿ ಪ್ರಕರಣ ದಾಖಲಾಗಿದೆ.
ನೀರಾವರಿ ಇಲಾಖೆ ಗುತ್ತಿಗೆದಾರ ಅರ್ಜುನ ಗುಡ್ಡದ ಅವರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ರೈತ ಹೋರಾಟಗಾರ್ತಿ ಮಂಜುಳಾ ಪೂಜಾರ ಮತ್ತು ಪತಿ ಜಗದೀಶ ಸಣ್ಣಕ್ಕಿ ಸೇರಿ ನಾಲ್ವರ ವಿರುದ್ಧ ಇಲ್ಲಿಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಅ. ೧೧ರಂದು ಪ್ರಕರಣ ದಾಖಲಾಗಿದೆ.
ಹತ್ತಿ ಬಿತ್ತನೆ ಬೀಜಕ್ಕಾಗಿ ಕೆಲ ಪೂರೈಕೆದಾರರನ್ನು ಸಂಪರ್ಕಿಸಿದ್ದೆ. ಸಂಪರ್ಕದ ಮಾಹಿತಿ ಪಡೆದಿದ್ದ ಮಂಜುಳಾ ಪೂಜಾರ, ನಾನು ಹತ್ತಿ ಬೀಜ ಕಂಪನಿಯ ಅಂಬಾಸಿಡರ್ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದಳು. ಆಗಾಗ ಫೋನ್ ಮಾಡಿ, ನಾನಿದ್ದಲ್ಲಿಗೆ ಬಂದು ಆತ್ಮೀಯತೆಯಿಂದ ನಟಿಸುತ್ತಿದ್ದಳು. ಜಗದೀಶ ಸಣ್ಣಕ್ಕಿಯನ್ನು ತನ್ನ ಗಂಡ ಎಂದು ಪರಿಚಯಿಸಿಕೊಂಡಿದ್ದಳು. ಅಲ್ಲದೇ ಹಾವೇರಿ ಮೂಲದ ಹನುಮಂತಪ್ಪ ಬಂಡಿವಡ್ಡರ, ಸಿದ್ದಪ್ಪ ಹೊಸಮನಿಯನ್ನು ಪರಿಚಯಿಸಿದ್ದಳು. ಅತೀ ಸಲುಗೆ ಇರುತ್ತಿದ್ದ ಕಾರಣ ಸಂಶಯದಿಂದ ನಾನು ಈಕೆಯ ಮಾಹಿತಿ ಸಂಗ್ರಹಿಸಿದ್ದೆ. ಜಗದೀಶ ಸಣ್ಣಕ್ಕಿ ಮಂಜುಳಾಗೆ ಮೂರನೇ ಪತಿ ಎಂಬುದು ಗೊತ್ತಾಯಿತು. ಅದಾದ ಬಳಿಕ ಇವರೆಲ್ಲ ಕೂಡಿ ನಕಲಿ ಫೋಟೋ, ವಿಡಿಯೋ ಸೃಷ್ಟಿಸಿ ನನಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ೨೦೨೨ರ ಅಕ್ಟೋಬರ್‌ನಲ್ಲಿ ೨೦ ಲಕ್ಷ ರೂ. ಸುಲಿಗೆ ಕೂಡ ಮಾಡಿದ್ದರು, ಅಲ್ಲದೇ ಜೀವ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಕಲಿ ದಾಖಲೆ ಇಟ್ಟುಕೊಂಡು ಪದೇ ಪದೆ ಹಣ ಕೊಡುವಂತೆ ಬೇಡಿಕೆ ಇಟ್ಟು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಅರ್ಜುನ ಗುಡ್ಡದ ಅವರು ಮಂಜುಳಾ ಪೂಜಾರ, ಜಗದೀಶ ಸಣ್ಣಕ್ಕಿ, ಹಾವೇರಿ ಮೂಲದ ಹನುಮಂತಪ್ಪ ಬಂಡಿವಡ್ಡರ, ಸಿದ್ದಪ್ಪ ಹೊಸಮನಿ ವಿರುದ್ಧ ದೂರು ಜೀವ ಬೆದರಿಕೆ ಹಾಗೂ ವಂಚನೆ ದೂರು ದಾಖಲಿಸಿದ್ದಾರೆ.