ಭಂಡಾರದ ಒಡೆಯ ಬೀರೇಶ್ವರ ಜಾತ್ರೆ
ಬಾಗಲಕೋಟೆ(ಕುಳಗೇರಿ ಕ್ರಾಸ್): ಕುಳಗೇರಿ ಗ್ರಾಮದ ಭಂಡಾರಮಯ ಬೀರೇಶ್ವರನ ೬೬ನೇ ರಥೋತ್ಸವ ಭಾನುವಾರ ಸಂಜೆ ೫.೩೦ಕ್ಕೆ ಸಾವಿರಾರು ಭಕ್ತರ ಮಧ್ಯ ಸಡಗರ-ಸಂಭ್ರಮದಿಂದ ಜರುಗಿತು.
`ಚಾಂಗಭಲೆರೆ' ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಭಂಡಾರದಲ್ಲಿ ಮಿಂದೆದ್ದ ಭಕ್ತರು ಚಿಲಗಟ್ಟಲೇ ಭಂಡಾರ ಎರಚಿ ತಮ್ಮ ಹರಕೆ ತಿರಿಸಿದರು. ಭಕ್ತಿಯಿಂದ ಬೀರೇಶ್ವರನ ತೇರು ಎಳೆದು ಸಂತಸದಿಂದ ಚಪ್ಪಾಳೆ ತಟ್ಟಿದರು. ಭಕ್ತರು ತಮ್ಮ ಕರಗಳನ್ನು ಜೋಡಿಸಿ ಶ್ರದ್ಧೆ-ಭಕ್ತಿ-ಭಾವ ಸಮರ್ಪಿಸಿದರು. ಸಾವಿರಾರು ಭಕ್ತರ ಆಗಮನದಿಂದ ರಥೋತ್ಸವಕ್ಕೆ ಎಲ್ಲಿಲ್ಲದ ಕಳೆ ತುಂಬಿಕೊಂಡಿತ್ತು.
ಯುವಕರು ಸೇರಿದಂತೆ ಮಹಿಳೆಯರು, ಮಕ್ಕಳು, ವೃದ್ಧರು ಸಹ ಭಂಡಾರ ಎರಚಾಟದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಪ್ರತಿ ಮನೆಯಲ್ಲೂ ಮಹಿಳೆಯರು ರಂಗೋಲಿಯ ಚಿತ್ತಾರ ಕಂಗೊಳಿಸುತ್ತಿದ್ದವು. ಪ್ರತಿಯೊಂದು ಮನೆ ಹಸಿರು ತೋರಣಗಳಿಂದ ಶೃಂಗಾರಗೊಂಡಿದ್ದವು. ಎಲ್ಲರ ಮನೆಯಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಜಾತ್ರೆಗೆ ಆಗಮಿಸಿದ ಬಂಧು, ಬಾಂಧವರು, ಸ್ನೇಹಿತರೊಡನೆ ರಸಬೂರಿ ಭೋಜನದ ಸವಿರುಚಿ ಸವಿದು ಜಾತ್ರೆಗೆ ಮೆರಗು ತಂದರು.
ಜಾತ್ರೆ ನಿಮಿತ್ತ ಬೀರೇಶ್ವರ ದೇವಸ್ಥಾನದಲ್ಲಿ ಅಭಿಷೇಕ, ವಿಶೇಷ ಪೂಜೆ-ಪುನಸ್ಕಾರಗಳು ನಡೆದವು. ಭಕ್ತರು ಹಣ್ಣುಕಾಯಿ ಸಮರ್ಪಿಸಿ ಹರಕೆ ತೀರಿಸಿದರು.