ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಭಗವದ್ಗೀತೆ ಮತ್ತು ಕಾನೂನು

05:19 AM Dec 10, 2024 IST | Samyukta Karnataka

ಭಗವದ್ಗೀತೆ ಮತ್ತು ಕಾನೂನುಗಳಲ್ಲಿ ಸಂಬಂಧವಿದೆ. ಹಿಂದೆ ನ್ಯಾಯಾಲಯಗಳಲ್ಲಿ ಸಾಕ್ಷಿ ಹೇಳುವಾಗ ಭಗವದ್ಗೀತೆಯನ್ನು ಮುಟ್ಟಿ ತಾನು ಸತ್ಯವನ್ನೇ ಹೇಳುತ್ತೇನೆಂದು ಪ್ರಮಾಣ ಮಾಡುವ ರೂಢಿ ಇತ್ತು. ಇದು ಭಗವದ್ಗೀತೆಯೊಡನೆ ಕಾನೂನಿಗೆ ಇರುವ ಸಂಬಂಧವನ್ನು ಸೂಚಿಸುತ್ತದೆ. ಆದರೆ ಈಗ ಭಗವದ್ಗೀತೆಯನ್ನು ಮುಟ್ಟಿ ಪ್ರಮಾಣ ಮಾಡಿಸುವ ಪರಿಪಾಠವನ್ನು ಬಿಡಲಾಗಿದೆ. ಯಾಕೆಂದರೆ ಭಗವದ್ಗೀತೆಯನ್ನು ಮುಟ್ಟಿಯೂ ಅನೇಕರು ಸುಳ್ಳು ಹೇಳುತ್ತಾರೆ. ಭಗವದ್ಗೀತೆಯ ಬಗ್ಗೆ ಶ್ರದ್ಧೆ ಕಡಿಮೆಯಾದದ್ದು ಇದಕ್ಕೆ ಕಾರಣ. ಮೊದಲಿನಂತೆಯೇ ಧರ್ಮಗ್ರಂಥಗಳಲ್ಲಿ ಶ್ರದ್ಧೆ ಇದ್ದಿದ್ದರೆ ಹೊಸದಾಗಿ ಇಷ್ಟೊಂದು ಕಾನೂನುಗಳನ್ನು ರಚಿಸುವ ಅಗತ್ಯವೇ ಬರುತ್ತಿರಲಿಲ್ಲ. ಕಾನೂನು ಮತ್ತು ಶಾಂತಿಪಾಲನೆಗೆ ಇಷ್ಟೊಂದು ಕಷ್ಟಪಡಬೇಕಿರಲಿಲ್ಲ. ಆದರೂ ಈಗ ಭಗವದ್ಗೀತೆಯ ಬಗ್ಗೆ ಜಾಗೃತಿ ಹೆಚ್ಚುತ್ತಿರುವುದರಿಂದ ಮುಂದೆ ಒಂದು ದಿನ ಭಗವದ್ಗೀತೆಯ ಬಗ್ಗೆ ಶ್ರದ್ಧೆ ಹೆಚ್ಚಾಗಿ ಮೂಡುವಂತಹ ಕಾಲ ಬರಲಿ ಎಂದು ಆಶಿಸೋಣ.
ಭಗವದ್ಗೀತೆಯೊಡನೆ ಕಾನೂನಿಗೆ ಇನ್ನೊಂದು ಸಂಬಂಧವಿದೆ. ಸಂವಿಧಾನದ ರಚನೆಯಾಗುವ ವೇಳೆಯಲ್ಲಿ ಶ್ರೀ ಬಾಬಾಸಾಹೇಬ್ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಅನೇಕ ಚರ್ಚೆಗಳಾಗಿವೆ. ಆ ಚರ್ಚೆಗಳು ಸುಮಾರು ೧೧ ಸಂಪುಟಗಳಲ್ಲಿ (Volumes) ಪ್ರಕಟಗೊಂಡಿವೆ. ಆ ಚರ್ಚೆಗಳಲ್ಲಿ ನಮ್ಮ ದೇಶದ ಪ್ರಾಚೀನ ಕಾಲದ ಕಾನೂನುಗಳೆನಿಸಿರುವ ಧರ್ಮಶಾಸ್ತ್ರ ಮೊದಲಾದ ಗ್ರಂಥಗಳು ಮತ್ತು ಮಹಾಭಾರತ ಸಾಕಷ್ಟು ಕಡೆಗಳಲ್ಲಿ ಉಲ್ಲೇಖಗೊಂಡಿವೆ. (ಮನು, ಯಾಜ್ಞವಲ್ಕ್ಯ ಮುಂತಾದ ಕೃತಿಗಳೇ ಆ ಕಾಲದ ಕಾನೂನುಗಳು ಎಂಬುದು ನಿರ್ವಿವಾದದ ಸಂಗತಿ.) ಭಗವದ್ಗೀತೆ ಮಹಾಭಾರತದ ಒಂದು ಭಾಗ. ಅನೇಕ ಕಾಯ್ದೆಗಳಲ್ಲಿ ಭಗವದ್ಗೀತೆಯ ಶ್ಲೋಕಗಳನ್ನೇ ಉದಾಹರಿಸಲಾಗಿದೆ ಎಂಬುದು ತಿಳಿದುಬರುತ್ತದೆ.
ನ್ಯಾಯಾಧೀಶನ ದಕ್ಷತೆಯನ್ನು ಹೆಚ್ಚಿಸುವಲ್ಲಿ ಭಗವದ್ಗೀತೆ ಮುಖ್ಯ ಪಾತ್ರ ವಹಿಸಬಲ್ಲದು. ದಿಟ್ಟ ನ್ಯಾಯಾಧೀಶ ದೇಶದ ಅಭಿವೃದ್ಧಿಗೆ ಕಾರಣರಾಗುತ್ತಾನೆ. ದಕ್ಷತೆ ಎಂದರೇನು? ಒಟ್ಟಿಗೆ ಅನೇಕ ವಿಷಯಗಳು ಎದುರಿಗೆ ಬಂದಾಗ, ಗೊಂದಲಮಯ ಪರಿಸ್ಥಿತಿ ಉಂಟಾದಾಗ, ಗೊಂದಲಕ್ಕೆ ಒಳಗಾಗದೆ ಆದ್ಯತೆಯ ಮೇರೆಗೆ ವಿಷಯಗಳನ್ನು ಪರಿಶೀಲಿಸುವ ಸ್ವಸ್ಥ ಮನಸ್ಸು. ಇದು ನ್ಯಾಯಾಧೀಶನಿಗಿದ್ದರೆ ಅವನು ನೀಡುವ ನ್ಯಾಯ ಸರಿಯಾಗಿರುತ್ತದೆ. ನ್ಯಾಯಾಧೀಶನಿಗೆ ಬೇರೆಬೇರೆ ಕಾಯ್ದೆಗಳ ವಿವರವಾದ ಜ್ಞಾನ ಎಷ್ಟು ಅಗತ್ಯವೋ ಅಷ್ಟೇ ಪ್ರಮಾಣದಲ್ಲಿ ದಕ್ಷತೆಯೂ ಅಗತ್ಯ. ಸಮತ್ವ ಬುದ್ಧಿ ಆವಶ್ಯಕ. ದಕ್ಷತೆ ಮತ್ತು ಸಮತ್ವ ಬುದ್ಧಿಯನ್ನು ಸಂಪಾದಿಸಿಕೊಂಡು ಬಂದು ನ್ಯಾಯಪೀಠದಲ್ಲಿ ಕುಳಿತುಕೊಳ್ಳಬೇಕು ಎಂದು ಧರ್ಮಶಾಸ್ತ್ರವು ಹೇಳುತ್ತದೆ. ಇವುಗಳನ್ನು ಪಡೆದುಕೊಳ್ಳುವ - ಧ್ಯಾನ-ಜಪ ಮುಂತಾದ - ಉಪಾಯಗಳು ಭಗವದ್ಗೀತೆಯಲ್ಲಿ ಸಿಗುತ್ತವೆ. ಇದು ನ್ಯಾಯಪ್ರಕ್ರಿಯೆಗೂ ಭಗವದ್ಗೀತೆಗೂ ಇರುವ ಮುಖ್ಯ ಸಂಬಂಧ.

(ಶ್ರೀಮದ್ಭಗವದ್ಗೀತಾ ಅಭಿಯಾನದ ಅಂಗವಾಗಿ ವಿಜಯಪುರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ೨೦೨೪ರ ಡಿ. ೦೭ರಂದು ನಡೆದ `ಭಗವದ್ಗೀತೆ ಮತ್ತು ಕಾನೂನು' ಎಂಬ ಚಿಂತನಗೋಷ್ಠಿಯಲ್ಲಿ ಆಡಿದ ಮಾತುಗಳ ಮುಖ್ಯಾಂಶಗಳು.)

Next Article