For the best experience, open
https://m.samyuktakarnataka.in
on your mobile browser.

ಭಜರಂಗಿಗಳಾಗ್ತೇವೆ ಹುಷಾರ್

10:18 PM Dec 12, 2023 IST | Samyukta Karnataka
ಭಜರಂಗಿಗಳಾಗ್ತೇವೆ ಹುಷಾರ್

ಬೆಳಗಾವಿ: ಉತ್ತರ ಕರ್ನಾಟಕದ ಜನರ ಸಹನೆಯನ್ನು ಇನ್ನು ಕೆಣಕಬೇಡಿ. ನಾವೀಗ ಜಾಗೃತರಾಗಿದ್ದೇವೆ. ಉತ್ತರ ಕರ್ನಾಟಕಕ್ಕೆ ಇದೇ ರೀತಿಯ ಅನ್ಯಾಯ ಮುಂದುವರಿದರೆ ನಾವು ಭಜರಂಗಿಗಳಾಗುತ್ತೇವೆ ಹುಷಾರ್ ಎಂದು ಬಸನಗೌಡ ಪಾಟೀಲ ಯತ್ನಾಳ ಮಂಗಳವಾರ ವಿಧಾನಸಭೆಯಲ್ಲಿ ಎಚ್ಚರಿಸಿದರು.
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ' ರಚಿಸಬೇಕು ಮತ್ತು ಪ್ರತಿ ಶಾಸಕರಿಗೆ ೫೦ ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ಉತ್ತರ ಕರ್ನಾಟಕ ಚರ್ಚೆಯಲ್ಲಿ ಭಾಗವಹಿಸಿ ಸುದೀರ್ಘವಾಗಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ ಯತ್ನಾಳ, ಇಲ್ಲಿನವರ ರಾಜಕೀಯ ಪ್ರಜ್ಞೆ ಸಮರ್ಪಕವಾಗಿ ಇರದ ಕಾರಣಕ್ಕೇ ಪ್ರದೇಶ ಹಿಂದುಳಿದಿದೆ ಎಂದರು.೧೯೬೪ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಂದ ಶಿಲಾನ್ಯಾಸವಾದ ಆಲಮಟ್ಟಿ ಯೋಜನೆ ಇನ್ನೂ ಪೂರ್ಣಗೊಂಡೇ ಇಲ್ಲ. ಯೋಜನೆ ಪೂರ್ಣಗೊಂಡರೆ ರಾಜ್ಯದ ಶೇಕಡಾ ೬೦ರಷ್ಟು ಪ್ರದೇಶದ ರೈತನ ಬದುಕು ಬಂಗಾರವಾಗುತ್ತದೆ.
`ಆದರೆ ಪೂರ್ಣಗೊಳ್ಳಲು ಬೇಕಿರುವುದು ಸುಮಾರು ಒಂದು ಲಕ್ಷ ಕೋಟಿ ರೂಪಾಯಿ. ಬಜೆಟ್‌ನಲ್ಲಿ ಎಷ್ಟು ಹಣ ಇಡುತ್ತಿದ್ದೀರಿ? ಕನಿಷ್ಠ ೨೫ ಸಾವಿರ ಕೋಟಿಯನ್ನು ತಕ್ಷಣಕ್ಕೆ ಕೊಟ್ಟು ಕೃಷ್ಣೆಯ ನೆರವಿಗೆ ಬನ್ನಿ' ಎಂದು ಯತ್ನಾಳ ಸರ್ಕಾರಕ್ಕೆ ಆಗ್ರಹಿಸಿದರು.
ಕಾವೇರಿ-ಕೃಷ್ಣೆಯರು ನಾಡಿನ ಎರಡು ಕಣ್ಣುಗಳು ಎಂಬುದು ಮಾತಿನಲ್ಲೇ ಉಳಿದಿದೆ. ಕೃಷ್ಣೆಯ ಕಣ್ಣಿಗೆ ಸದಾ ಸುಣ್ಣ ಮತ್ತು ಕಾವೇರಿಗೆ ಬೆಣ್ಣೆ ಎಂಬುದೇ ವಾಸ್ತವ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಹೊರತುಪಡಿಸಿ ಉಳಿದವರು ಕೃಷ್ಣೆಗೆ ಗಮನವನ್ನೇ ಕೊಡಲಿಲ್ಲ ಎಂದು ಯತ್ನಾಳ ಅಭಿಪ್ರಾಯಪಟ್ಟರು.