For the best experience, open
https://m.samyuktakarnataka.in
on your mobile browser.

ಭಯದಿಂದ ಊರನ್ನೇ ತೊರೆದ ಗ್ರಾಮಸ್ಥರು

04:38 AM May 30, 2024 IST | Samyukta Karnataka
ಭಯದಿಂದ ಊರನ್ನೇ ತೊರೆದ ಗ್ರಾಮಸ್ಥರು

ಶ್ರೀನಿವಾಸ್ ಮಹೇಶ್
ಚನ್ನಗಿರಿ: ಚನ್ನಗಿರಿ ಪ್ರಕರಣದ ಘಟನೆಯಲ್ಲಿ ಭಾಗಿಯಾದವರನ್ನು ಪೊಲೀಸರು ಹೆಡೆಮುರಿ ಕಟ್ಟಲು ಮುಂದಾಗಿರುವ ಹಿನ್ನೆಲೆಯಲ್ಲಿ ಹೊನ್ನೇಬಾಗಿ ಗ್ರಾಮದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದ್ದು, ಮನೆಗಳಿಗೆ ಬೀಗ ಹಾಕಲಾಗಿದೆ.
ಕಳೆದ ಶುಕ್ರವಾರ ರಾತ್ರಿ ಪಟ್ಟಣದ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ ೭ ಪೊಲೀಸ್ ವಾಹನಗಳು ಜಖಂಗೊಂಡು, ೧೧ ಜನ ಪೊಲೀಸರು ಗಾಯಗೊಂಡಿದ್ದರು.
ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗಳನ್ನು ಪತ್ತೆಹಚ್ಚುವ ಕೆಲಸಕ್ಕೆ ಪೊಲೀಸರು ಶನಿವಾರ ಸಂಜೆಯಿಂದಲೇ ಕಾರ್ಯಾಚರಣೆ ಪ್ರಾರಂಭಿಸಿದ್ದು, ಇಲ್ಲಿಯವರೆಗೆ ೨೯ ಜನರನ್ನು ಬಂಧಿಸಿದ್ದು ಪೊಲೀಸ್ ಠಾಣೆಯ ಕಲ್ಲು ತೂರಾಟದಲ್ಲಿ ಚನ್ನಗಿರಿ ಪಟ್ಟಣ ಸೇರಿದಂತೆ ತಾಲೂಕಿನ ಹೊನ್ನೇಬಾಗಿ, ಕೆರೆಬಿಳಚಿ, ನಲ್ಲೂರು, ಸಂತೆಬೆನ್ನೂರು ಗ್ರಾಮಗಳಿಂದ ಬಂದ ಜನರು ಭಾಗಿಯಾಗಿದ್ದು, ಇವರನ್ನು ಬಂಧಿಸಲು ಪೊಲೀಸರು ಆರು ತಂಡಗಳನ್ನು ರಚಿಸಿಕೊಂಡು ಪತ್ತೆಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಈ ಘಟನೆಯಲ್ಲಿ ಭಾಗಿಯಾದ ಆರೋಪಿಗಳು ಗೋವಾ, ಮಂಗಳೂರು, ಬೆಂಗಳೂರಿಗೆ ಹೋಗಿರುವ ಶಂಕೆ ಇದ್ದು, ಇವರ ಜಾಡನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ತಾಲೂಕಿನ ಹೊನ್ನೇಬಾಗಿ ಗ್ರಾಮವು ಮೃತ ಆದಿಲ್‌ನ ಪತ್ನಿಯ ತವರುಮನೆ ಇರುವ ಗ್ರಾಮವಾಗಿದ್ದು, ಕಲ್ಲು ತೂರಾಟ ಪ್ರಕರಣದಲ್ಲಿ ಇದೇ ಗ್ರಾಮದ ಹೆಚ್ಚು ಜನರು ಭಾಗಿಯಾಗಿದ್ದರು ಎಂಬ ಶಂಕೆ ಇದ್ದು, ಇದೇ ಗ್ರಾಮದಲ್ಲಿ ಸುಮಾರು ೮ರಿಂದ ೯ ಜನರನ್ನು ಬಂಧಿಸಿದ್ದಾರೆ. ಇವರ ಬಂಧನದ ಹಿನ್ನೆಲೆಯಲ್ಲಿ ಈ ಗ್ರಾಮದ ಬಹುತೇಕರು ತಮ್ಮ ಮನೆಗಳಿಗೆ ಬೀಗ ಹಾಕಿಕೊಂಡು ಊರನ್ನೇ ತೊರೆದಿದ್ದಾರೆ.

ಈ ಗ್ರಾಮದಲ್ಲಿ ಬಹುತೇಕ ಮುಸ್ಲಿಮರೇ ವಾಸಿಸುವ ಗ್ರಾಮವಾಗಿದ್ದು, ಈ ಗ್ರಾಮದಲ್ಲಿನ ಎಲ್ಲಾ ಯುವಕರು ತಮ್ಮ ಅಂಗಡಿ ಮುಂಗಟ್ಟನ್ನು ಮುಚ್ಚಿಕೊಂಡು ಗ್ರಾಮ ತೊರೆದಿದ್ದರಿಂದ ಅಘೋಷಿತ ಬಂದ್‌ನ ವಾತಾವರಣ ನಿರ್ಮಾಣವಾಗಿದೆ.