For the best experience, open
https://m.samyuktakarnataka.in
on your mobile browser.

“ಭರತ್ ಶೆಟ್ರೇ ತಾಕತ್ತಿದ್ದರೆ ನಮ್ಮ ಕೆನ್ನೆಗೆ ಹೊಡೆಯಿರಿ” -ಇನಾಯತ್ಅಲಿ

07:21 PM Jul 11, 2024 IST | Samyukta Karnataka
“ಭರತ್ ಶೆಟ್ರೇ ತಾಕತ್ತಿದ್ದರೆ ನಮ್ಮ ಕೆನ್ನೆಗೆ ಹೊಡೆಯಿರಿ”  ಇನಾಯತ್ಅಲಿ

ಸುರತ್ಕಲ್: ಗುರುಪುರ ಮತ್ತು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವಿರುದ್ಧ ಪ್ರತಿಭಟನೆ ಬುಧವಾರ ಸಂಜೆ ಕಾವೂರು ಜಂಕ್ಷನ್ ನಲ್ಲಿ ನಡೆಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, “ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಮಾಡಿರುವ ಭರತ್ ಶೆಟ್ಟಿ ಅವರು ರಾಹುಲ್ ಗಾಂಧಿಯವರ ವಿರುದ್ಧ ಕೆಟ್ಟ ಪದ ಬಳಕೆ ಮಾಡಿ ಮಾತಾಡುವ ಮೂಲಕ ತಮ್ಮ ಇರುವಿಕೆಯನ್ನು ತೋರಿಸಲು ಯತ್ನಿಸುತ್ತಿದ್ದಾರೆ. ಅವರು ರಾಹುಲ್ ಗಾಂಧಿಯವರಿಗೆ ಕೆನ್ನೆಗೆ ಹೊಡೆಯುವುದು ಬಿಡಿ ತಾಕತ್ತಿದ್ದರೆ ನಮ್ಮಂತಹ ಸಾಮಾನ್ಯ ಕಾರ್ಯಕರ್ತರ ಮೈಮುಟ್ಟಿ ನೋಡಲಿ. ನಾವು ಬಿಜೆಪಿ ಕಚೇರಿಗೆ ಬರುತ್ತೇವೆ ನೀವು ನಮ್ಮ ಕೆನ್ನೆಗೆ ಹೊಡೆಯಿರಿ“ ಎಂದು ಸವಾಲು ಹಾಕಿದರು.
ಸಾಮಾಜಿಕ ಹೋರಾಟಗಾರ ಎಂ.ಜಿ. ಹೆಗಡೆ ಮಾತಾಡಿ, “ಬಿಜೆಪಿಯದ್ದು ಬ್ಯಾಲೆಟ್ ಪೇಪರ್ ಹಿಂದುತ್ವ, ಭರತ್ ಶೆಟ್ರು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಹಿಂದಿನಿಂದಲೂ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿರುವ ಭರತ್ ಶೆಟ್ಟಿ ಅವರು ಕಾರ್ಯಕರ್ತರನ್ನು ಖುಷಿ ಪಡಿಸಲು ಈ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಕಾರ ಬಿಜೆಪಿಯದ್ದು ಮಾತ್ರ ಅಸಲಿ ಹಿಂದುತ್ವ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹಿಂದುಗಳೇ ಇಲ್ಲ. ನಾವೂ ಹಿಂದೂಗಳು ಎಲ್ಲರೊಂದಿಗೆ ಸಹಬಾಳ್ವೆಯಿಂದ ಬದುಕುತ್ತಿದ್ದೇವೆ“ ಎಂದರು.
ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೋ ಮಾತನಾಡಿ, “ಡಾ.ಭರತ್ ಶೆಟ್ಟಿ ಅವರು ವೈದ್ಯ ಪದವಿಗೆ ಅವಮಾನ ಮಾಡುವ ಕೃತ್ಯ ಎಸಗಿದ್ದಾರೆ. ಕೊರೋನ ಸಮಯದಲ್ಲಿ ಬಡ ಹಿಂದೂ ಮಹಿಳೆಯ ಶವ ಸಂಸ್ಕಾರ ಮಾಡಲು ಬಿಡದ ಇವರಿಗೆ ಅವರ ಮನೆಯವರು ಚಪ್ಪಲಿಯಲ್ಲಿ ಹೊಡೆಯಬೇಕು. ಆ ಮಹಿಳೆ ಹಿಂದೂ ಹೌದಾ ಅಲ್ಲವಾ ತಿಳಿಸಿ. ನೀವು ಕ್ಷೇತ್ರದಲ್ಲಿ ಅಭಿವೃದ್ಧಿ ಏನು ಮಾಡುತ್ತಿದ್ದೀರಿ ತಿಳಿಸಿ, ಮಳೆಯಿಂದ ಹಾನಿಗೊಳಗಾದವರನ್ನು ಭೇಟಿ ಮಾಡಿದ್ದೀರಾ ತಿಳಿಸಿ. ಜನರನ್ನು ದ್ವೇಷ ಭಾಷಣದಿಂದ ವಿಂಗಡಣೆ ಮಾಡುವುದು ಸುಲಭ. ನೀವು ಇದೇ ರೀತಿ ಹೇಳಿಕೆ ಕೊಡುತ್ತ ಬಂದರೆ ನಾವು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಾಗಿ ನಿಮಗೆ ಚಪ್ಪಲಿ ಸೇವೆ ಮಾಡುತ್ತೇವೆ, ಎಚ್ಚರಿಕೆ“ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾವೂರಿನ ಬಿಜೆಪಿ ಕಚೇರಿಗೆ ನುಗ್ಗಲು ಯತ್ನಿಸಿದರು. ಪೊಲೀಸರು ತಡೆದು ಬಂಧನ ಪ್ರಕ್ರಿಯೆ ನಡೆಸಿದರು. ಪ್ರತಿಭಟನೆಯಿಂದಾಗಿ ಕೆಲಹೊತ್ತು ವಾಹನ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು.
ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ್ ಚಿತ್ರಾಪುರ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಮಾಜಿ ಮೇಯರ್ ಶಶಿಧರ್ ಶೆಟ್ಟಿ, ರಾಜೇಶ್ ಕುಳಾಯಿ, ರೆಹಮಾನ್ ಖಾನ್, ಗಿರೀಶ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.