For the best experience, open
https://m.samyuktakarnataka.in
on your mobile browser.

ಭಾಗವತ್ ಮಾತಿಗೆ ಕಿವಿಗೊಡದ ಮೋದಿ

07:30 AM Oct 20, 2024 IST | Samyukta Karnataka
ಭಾಗವತ್ ಮಾತಿಗೆ ಕಿವಿಗೊಡದ ಮೋದಿ

ಮೋಹನ್ ಭಾಗವತ್ ಆರ್‌ಎಸ್‌ಎಸ್ ಸಂಘಟನೆಯ ಮುಖ್ಯಸ್ಥರು. ಅವರ ಮಾತಿಗೆ ಎಲ್ಲ ಕಡೆ ಬೆಲೆ ಇದೆ. ಆದರೆ ಮೋದಿ ಇವರ ಮಾತಿಗೆ ಬೆಲೆ ಕೊಟ್ಟಂತೆ ಕಂಡು ಬರುತ್ತಿಲ್ಲ. ಆರ್‌ಎಸ್‌ಎಸ್- ಬಿಜೆಪಿ ನಡುವೆ ಅಂತರ ಅಧಿಕಗೊಂಡಂತೆ ಕಂಡು ಬರುತ್ತಿದೆ. ಭಾಗವತ್ ಸಕಾಲಕ್ಕೆ ಏನನ್ನು ಹೇಳಬೇಕೋ ಅದನ್ನು ಹೇಳುತ್ತ ಬಂದಿದ್ದಾರೆ. ಅವರು ಬಳಸುವ ಪದಗಳನ್ನೂ ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಂಡು ಬಳಸುತ್ತಾರೆ. ಅದರಿಂದ ಅವರ ಮಾತುಗಳನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸುತ್ತಾರೆ. ಅವರ ಪ್ರತಿಯೊಂದು ಮಾತಿಗೂ ವಿಶೇಷ ಅರ್ಥ ಇರುತ್ತದೆ. ೨೦೧೪ ರಿಂದ ಅವರ ಹೇಳುತ್ತ ಬಂದಿರುವ ಮಾತುಗಳನ್ನು ನೋಡಿದರೆ ಇದರ ಮಹತ್ವ ತಿಳಿಯುತ್ತದೆ. ಜೂನ್ ೨೪ ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿತು. ಕೂಡಲೇ ಅವರು ನೀಡಿದ ಮೊದಲ ಪ್ರತಿಕ್ರಿಯೆ: ಅಹಂಕಾರ ಬಿಡಿ, ಸೌಜನ್ಯ ಬೆಳೆಸಿಕೊಳ್ಳಿ. ಇದನ್ನು ಯಾರನ್ನು ಕುರಿತು ಹೇಳಿದರು ಎಂದು ವಿವರಿಸುವ ಅಗತ್ಯವಿಲ್ಲ. ನಾಗರಿಕ ಸಭ್ಯತೆ ಇಲ್ಲ. ರಾಜಕೀಯವಾಗಿ ವಿರೋಧಿಸುವವರು ನಿಮ್ಮ ವೈರಿಗಳಲ್ಲ. ಅವರದು ಮತ್ತೊಂದು ಅಭಿಪ್ರಾಯ ಎಂದು ಬೆಲೆ ಕೊಡಬೇಕು. ನಿಜವಾದ ಕಾರ್ಯಕರ್ತ ಮರ್ಯಾದ ಪುರುಷೋತ್ತಮನಾಗಿರುತ್ತಾನೆ. ನಾನೇ ಎಲ್ಲವನ್ನೂ ಮಾಡುತ್ತೇನೆ ಎಂಬ ಅಹಂಕಾರ ಬೇಡ. ಈ ಮಾತುಗಳು ಬಹುತೇಕ ಮೋದಿಗೆ ಅನ್ವಯಿಸುವುದರಲ್ಲಿ ಸಂದೇಹ ಇಲ್ಲ. ಯಾರೇ ಸೂಪರ್ ಮ್ಯಾನ್ ಆಗಬೇಕು ಎಂದರೆ ಮೊದಲು ದೇವನಾಗಬೇಕು. ಮೋದಿ ಒಂದು ಅವತಾರ ಎಂದು ಭಾವಿಸುವವರು ಇದನ್ನು ತಿಳಿದುಕೊಳ್ಳಬೇಕು. ವಿಜಯದಶಮಿ ದಿನದಂದು ಕೂಡ ಭಾಗವತ್ ಮಾಡಿದ ಭಾಷಣ ಉಲ್ಲೇಖಾರ್ಹ. ಮೊದಲು ಇಂದಿನ ಸ್ಥಿತಿಯನ್ನು ವಿವರಿಸಿ ಕೊನೆಯಲ್ಲಿ ಎಂದಿನಂತೆ ದೇಶದ ಪ್ರಗತಿಯ ಬಗ್ಗೆ ಹೊಗಳಿಕೆ ಮಾತುಗಳನ್ನು ಹೇಳಿದ್ದಾರೆ. ಧರ್ಮ, ಸಂಸ್ಕೃತಿ, ವ್ಯಕ್ತಿತ್ವ, ಚಾರಿತ್ಯ ಸೇರಿದಂತೆ ಎಲ್ಲವನ್ನೂ ಪ್ರಸ್ತಾಪಿಸಿ ವಿಜಯದಶಮಿ ಮಹತ್ವವನ್ನೂ ಹೇಳಿದ್ದಾರೆ. ಇಸ್ರೇಲ್- ಹಮಾಸ್ ಯುದ್ಧವನ್ನು ಪ್ರಸ್ತಾಪಿಸಿದರೂ ಅಲ್ಲಿ ೪೩ ಸಾವಿರ ಜನ ಸತ್ತಿರುವ ಬಗ್ಗೆ ಚಕಾರ ಎತ್ತಿಲ್ಲ. ಜಮ್ಮ ಮತ್ತು ಕಾಶ್ಮೀರದ ಬಗ್ಗೆ ಮಾತನಾಡಿ ಹೊಸ ಸರ್ಕಾರ ರಚನೆಯಾಗಿರುವ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನು ಹೇಳಿಲ್ಲ. ಮಣಿಪುರ ಪ್ರಕ್ಷಬ್ಧ ಎಂದು ಮಾತ್ರ ಹೇಳಿದ್ದಾರೆ. ಅದಕ್ಕೆ ಕಾರಣವನ್ನು ಪ್ರಸ್ತಾಪಿಸಿಲ್ಲ. ವಿದೇಶಗಳಲ್ಲಿ ಕೆಲವು ದೇಶಗಳು ವಾಕ್ ಸ್ವಾತಂತ್ರ್ಯದ ಬಗ್ಗೆ ಉದಾರ ನಿಲುವು ತಳೆಯುತ್ತವೆ. ಆದರೆ ಅದು ಚುನಾಯಿತ ಸರ್ಕಾರಕ್ಕೆ ಅಡ್ಡಿಯಾಗಬಾರದು ಎಂಬುದನ್ನು ಪರಿಗಣಿಸುತ್ತಿಲ್ಲ ಎಂದು ಅವರು ಹೇಳಿರುವುದಲ್ಲದೆ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ ಉತ್ತಮಗೊಂಡಿದೆ ಎಂದು ಹೇಳಿದ್ದಾರೆ.
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯ ಇಡೀ ಜಗತ್ತಿನಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಲ್ಲೆಯ ಪ್ರತೀಕ ಎಂದು ಪ್ರಸ್ತಾಪಿಸಿದ ಅವರು ಜಗತ್ತಿನಲ್ಲಿ ಎಲ್ಲ ಕಡೆ ಇರುವ ಹಿಂದೂಗಳು ಒಂದುಗೂಡುವುದು ಅಗತ್ಯ ಎಂದು ಹೇಳಿದ್ದಾರೆ. ಬಾಂಗ್ಲಾದಲ್ಲಿ ವಿದ್ಯಾರ್ಥಿಗಳು ದಬ್ಬಾಳಿಕೆ ವಿರುದ್ಧ ಹೋರಾಟ ಎಂಬುದನ್ನು ಭಾಗವತ್ ಪರಿಗಣಿಸಿಲ್ಲ. ಅಲ್ಲಿ ಪ್ರತಿಪಕ್ಷದವರನ್ನು ಜೈಲಿಗೆ ಹಾಕಿ ಅಧಿಕಾರಕ್ಕೆ ಬಂದರೆ ಅಲ್ಲಿಯ ಜನ ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂಬುದು ಹಿಂಸಾಕೃತ್ಯಗಳಿಂದ ಸ್ಪಷ್ಟಗೊಂಡಿದೆ. ಭಾಗವತ್ ಹಿಂದೂಗಳ ಬಗ್ಗೆ ಹೇಳಿದ ಮಾತುಗಳು ಭಾರತದಲ್ಲಿ ದಲಿತರು ಮತ್ತು ಮುಸ್ಲಿಮರಿಗೆ ಅನ್ವಯಿಸುತ್ತದೆ ಎಂಬುದನ್ನು ಭಾಗವತ್ ಒಪ್ಪಿಕೊಳ್ಳುವುದಿಲ್ಲ. ಎಲ್ಲ ದೇಶಗಳಲ್ಲೂ ದಮನಿತರು ದಂಗೆ ಏಳುವುದು ಸಹಜ. ಅದು ಯಶಸ್ಸು ಕಾಣಬಹುದು, ಇಲ್ಲವೆ ವಿಫಲವಾಗಬಹುದು. ಹೋರಾಟವಂತೂ ವಾಸ್ತವ. ಅದನ್ನು ಮುಚ್ಚಿಡಲು ಬರುವುದಿಲ್ಲ.
ಬಿಜೆಪಿ- ಆರ್‌ಎಸ್‌ಎಸ್ ನಡುವೆ ಅಂತರ ಅಧಿಕಗೊಳ್ಳುತ್ತಿದೆ. ಹಣದುಬ್ಬರ, ನಿರುದ್ಯೋಗ, ಆರ್ಥಿಕ ಅಸಮಾನತೆ, ವಂದಿ ಮಾಗಧರ ಬಂಡವಾಳಶಾಹಿ ಧೋರಣೆ, ಸಾಮಾಜಿಕ ದಬ್ಬಾಳಿಕೆ ಮುಂದುವರಿದಿರುವುದಂತೂ ಖಚಿತ. ಕೋಮ ಸಂಘರ್ಷ ಸಮಾಜದ ಸೌಹಾರ್ದವನ್ನು ಹಾಳು ಮಾಡುತ್ತಿದೆ. ಇಂದಿನ ಪರಿಸ್ಥಿತಿಯ ಬಗ್ಗೆ ಪರೋಕ್ಷವಾಗಿ ಭಾಗವತ್ ಪರೋಕ್ಷವಾಗಿ ಪ್ರಸ್ತಾಪಿಸಿರುವುದು ಸ್ಪಷ್ಟ. ಅದರಿಂದಲೇ ಭಾಗವತ್ ಮಾತುಗಳಿಗೆ ಪ್ರತಿಕ್ರಿಯೆ ಕಂಡು ಬರುತ್ತಿಲ್ಲ. ಮೊದಲನಿಂದಲೂ ಭಾಗವತ್ ವಸ್ತುನಿಷ್ಠವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತ ಬಂದಿದ್ದಾರೆ. ಇದು ಕೆಲವರಿಗೆ ಪ್ರಿಯವಾಗಬಹುದು. ಮತ್ತೆ ಕೆಲವರಿಗೆ ಕಹಿಗುಳಿಗೆಯಾಗಿ ಕಂಡು ಬಂದಿದ್ದರೆ ಆಶ್ಚರ್ಯವೇನೂ ಇಲ್ಲ. ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವೆ ಅವಿನಾವ ಸಂಬಂಧವಿದೆ. ಎಷ್ಟೋ ವಿಚಾರಗಳು ಆರ್‌ಎಸ್‌ಎಸ್‌ನಲ್ಲಿ ಚರ್ಚೆಯಾಗುತ್ತವೆ. ಅವುಗಳಿಗೆ ಬಿಜೆಪಿ ನಾಯಕರು ಪ್ರತಿಕ್ರಿಯೆ ಸೂಚಿಸುತ್ತಿಲ್ಲ. ಇದಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಆರ್‌ಎಸ್‌ಎಸ್ ಮಾತುಗಳಿಗೆ ಬೆಲೆ ಕೊಟ್ಟಿದ್ದಲ್ಲಿ ಹಲವು ಬದಲಾವಣೆಗಳು ಬರಬೇಕಿತ್ತು. ಮುಖ್ಯವಾಗಿ ಪ್ರತಿಪಕ್ಷದವರನ್ನು ನೋಡುವ ರೀತಿ ಬದಲಾಗಬೇಕಿತ್ತು. ಭಾಗವತ್ ತಮ್ಮ ನಿಲುವನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳಲು ಹೋಗಿಲ್ಲ. ಹಿಂದೆ ಇದ್ದ ಅವರ ರೀತಿ ರಿವಾಜು ಈಗಲೂ ಮುಂದುವರಿದಿದೆ. ಬಿಜೆಪಿ ನಾಯಕರು ಆರ್‌ಎಸ್‌ಎಸ್ ಮುಖಂಡರ ಅಭಿಪ್ರಾಯಗಳಿಗೆ ಕಿವಿಗೊಡುವುದು ಅನಿವಾರ್ಯವಾಗಬಹುದು.