For the best experience, open
https://m.samyuktakarnataka.in
on your mobile browser.

ಭಾರತದಲ್ಲೇ ಮೊಟ್ಟಮೊದಲ ಯೋಜನೆ

12:58 PM Feb 19, 2024 IST | Samyukta Karnataka
ಭಾರತದಲ್ಲೇ ಮೊಟ್ಟಮೊದಲ ಯೋಜನೆ

ಬೆಂಗಳೂರು: ಟಾಟಾ ಸಮೂಹದ ಸಂಸ್ಥೆಗಳು ರಾಜ್ಯದಲ್ಲಿ ವಿವಿಧ ಯೋಜನೆಗಳಿಗೆ 2,300 ಕೋಟಿ ರೂ. ಹೂಡಿಕೆಗೆ ಮುಂದಾಗಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೋಸ್ಟ್‌ ಮಾಡಿರುವ ಅವರು ಟಾಟಾ ಸಮೂಹದ ಭಾಗವಾಗಿರುವ ಏರ್ ಇಂಡಿಯಾ ಮತ್ತು ಟಾಟಾ ಅಡ್ವಾನ್ಸಡ್ ಸಿಸ್ಟಮ್ಸ್ ಲಿಮಿಟೆಡ್ ರಾಜ್ಯದಲ್ಲಿ ವಿವಿಧ ಯೋಜನೆಗಳಿಗೆ 2,300 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿವೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ರಾಜ್ಯ ಸರ್ಕಾರದ ಜೊತೆ ಒಡಂಬಡಿಕೆಗೆ ಸಹಿ ಹಾಕಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಮುಂದಾಳತ್ವದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಏರ್ ಇಂಡಿಯಾದ ಮುಖ್ಯ ವಾಣಿಜ್ಯ ವ್ಯವಹಾರ ಅಧಿಕಾರಿ ನಿಪುಣ್ ಅಗರವಾಲ್ ಹಾಗೂ ಟಿಎಎಸ್ಎಲ್ ಸಿಇಒ ಸುಕರಣ್ ಸಿಂಗ್ ಒಡಂಬಡಿಕೆ ಪತ್ರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

'ಟಾಟಾ ಸಮೂಹದ ಈ ಹೂಡಿಕೆಯಿಂದ ನೇರವಾಗಿ 1,650 ಉದ್ಯೋಗಗಳು ಸೃಷ್ಟಿಯಾಗಲಿವೆ. ಒಟ್ಟು ಹೂಡಿಕೆಯ ಪೈಕಿ ಏರ್ ಇಂಡಿಯಾ ಕಂಪನಿಯು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಓವರ್-ಹಾಲ್ (ಎಂಆರ್ ಒ) ಘಟಕವನ್ನು ಸ್ಥಾಪಿಸಲು 1,300 ಕೋಟಿ ರೂ. ಹೂಡುತ್ತಿದೆ. ಇದರಿಂದಾಗಿ 1,200 ಜನರಿಗೆ ನೇರವಾಗಿ ಉದ್ಯೋಗ ಸಿಗಲಿದ್ದು, ಪರೋಕ್ಷವಾಗಿ 25 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ಇಡೀ ಭಾರತದಲ್ಲೇ ಇದು ಮೊಟ್ಟಮೊದಲ ಯೋಜನೆಯಾಗಿದೆ’.

ಟಾಟಾ ಅಡ್ವಾನ್ಸಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಕಂಪನಿಯು ಮೂರು ಯೋಜನೆಗಳಿಗೆ 1,030 ಕೋಟಿ ರೂ. ಬಂಡವಾಳ ಹೂಡಲಿದೆ. ಇವುಗಳ ಪೈಕಿ 420 ಕೋಟಿ ರೂ.ಗಳು ನಾಗರಿಕ ವಿಮಾನಗಳನ್ನು ಸರಕು ಸಾಗಣೆ ವಿಮಾನಗಳನ್ನಾಗಿ (ಫ್ರೈಟರ್) ಪರಿವರ್ತಿಸುವ ಘಟಕ ಸ್ಥಾಪನೆಗೆ ವಿನಿಯೋಗಿಸಲಿದೆ. ಜೊತೆಗೆ 310 ಕೋಟಿ ರೂ. ಹೂಡಿಕೆಯೊಂದಿಗೆ ಗನ್ ತಯಾರಿಕೆ ಘಟಕ ಮತ್ತು 300 ಕೋಟಿ ರೂ. ವೆಚ್ಚದಲ್ಲಿ ವಿಮಾನಯಾನ ಮತ್ತು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಿದೆ. ಇದರಿಂದ 450 ಉದ್ಯೋಗಗಳು ಸೃಷ್ಟಿಯಾಗಲಿವೆ.

ಬೆಂಗಳೂರು ವಿಮಾನ ನಿಲ್ದಾಣದ ಸಮೀಪ ಮತ್ತು ಕೋಲಾರದಲ್ಲಿ ಟಿಎಎಸ್ಎಲ್ ಸ್ಥಾಪಿಸಲಿರುವ ಗನ್ ತಯಾರಿಕೆ ಘಟಕದ ಮೂಲಕ ಕಂಪನಿಗೆ ಅಗತ್ಯವಿರುವ 13 ಸಾವಿರ ಬಿಡಿಭಾಗಗಳ ಪೈಕಿ ಶೇಕಡ 50ರಷ್ಟನ್ನು ಪೂರೈಸಿಕೊಳ್ಳುವ ಆಲೋಚನೆ ಹೊಂದಿದೆ. ಇದರಿಂದಾಗಿ 300ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ 2-3 ಸಾವಿರ ಜನರಿಗೆ ಉದ್ಯೋಗಗಳು ಸಿಗಲಿವೆ. 1939ರಷ್ಟು ಹಿಂದೆಯೇ ಬೆಂಗಳೂರಿನಲ್ಲಿ ಎಚ್ಎಎಲ್ ಸ್ಥಾಪನೆಯಾಗುವುದರೊಂದಿಗೆ ರಾಜ್ಯವು ವೈಮಾನಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ.

ರಕ್ಷಣಾ ಇಲಾಖೆಗೆ ಬೇಕಾಗುವ ವಿಮಾನಗಳು ಮತ್ತು ಹೆಲಿಕಾಪ್ಟರುಗಳ ಪೈಕಿ ಶೇಕಡ 67ರಷ್ಟು ಕರ್ನಾಟಕದಲ್ಲೇ ತಯಾರಾಗುತ್ತಿದೆ. ಜತೆಗೆ ದೇಶದ ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದ ರಫ್ತು ವಹಿವಾಟಿಗೆ ರಾಜ್ಯವು ಶೇಕಡ 65ರಷ್ಟು ಕೊಡುಗೆ ನೀಡುತ್ತಿದೆ. ದೇಶದಲ್ಲಿ ಈ ವಲಯದಲ್ಲಿರುವ ಕಂಪನಿಗಳ ಪೈಕಿ ಶೇ.70ರಷ್ಟು ಕಂಪನಿಗಳು ಕರ್ನಾಟಕದಲ್ಲೇ ನೆಲೆ ಹೊಂದಿವೆ.

ಒಡಂಬಡಿಕೆಯ ವೇಳೆ ಸರಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್, ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಕಂಪನಿಗಳ ಪ್ರತಿನಿಧಿಗಳು ಹಾಜರಿದ್ದರು ಎಂದಿದ್ದಾರೆ.