For the best experience, open
https://m.samyuktakarnataka.in
on your mobile browser.

ಭಾರತದ ಉದ್ಯಮ ಕ್ಷೇತ್ರದ 'ರತ್ನ' ರತನ್ ಟಾಟಾ ಅಸ್ತಗಂತ

08:30 AM Oct 10, 2024 IST | Samyukta Karnataka
ಭಾರತದ ಉದ್ಯಮ ಕ್ಷೇತ್ರದ  ರತ್ನ  ರತನ್ ಟಾಟಾ ಅಸ್ತಗಂತ

ಮುಂಬೈ : ಭಾರತದ ಅತಿ ದೊಡ್ಡ ಸಮೂಹ ಸಂಸ್ಥೆ ಟಾಟಾ ಸನ್ಸ್‌ ನ ಗೌರವಾಧ್ಯಕ್ಷ ರತನ್ ಟಾಟಾ ಬುಧವಾರ ರಾತ್ರಿ ನಿಧನರಾದರು.

86 ವರ್ಷದ ರತನ್ ಟಾಟಾ ಅವರು ತಮ್ಮ ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಗೆ ಸೋಮವಾರ ಚಿಕಿತ್ಸೆ ಪಡೆದಿದ್ದರು.
1991ರಲ್ಲಿ ಟಾಟಾ ಸನ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷರಾಗಿದ್ದ ರತನ್ ಟಾಟಾ, ತಮ್ಮ ಸಂಸ್ಥೆಯನ್ನು 100 ಬಿಲಿಯನ್ ಡಾಲರ್ ಮೌಲ್ಯದ ಜಾಗತಿಕ ದರ್ಜೆಯ ಸಾಮ್ರಾಜ್ಯವನ್ನಾಗಿ ವಿಸ್ತರಿಸಿದ್ದರು.

ಶಿಕ್ಷಣ , ಆರೋಗ್ಯ , ಭಾರತದಲ್ಲಿನ ಬಡತನ ನಿರ್ಮೂಲ‌ನೆಗೆ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳಿಗೆ ಉದಾರ ನೆರವಿನ ಹಸ್ತ ಚಾಚಿದ್ದರು.
ಜಾಗತಿಕ ಮಟ್ಟದಲ್ಲಿ ಟಾಟಾ ಸಮೂಹ ಸಂಸ್ಥೆಗೆ ಉನ್ನತ ಸ್ಥಾನ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಮಾಧ್ಯಮಗಳಿಂದ ಪ್ರಚಾರದಿಂದ ಬಹು ದೂರ ಉಳಿದಿದ್ದ ಇವರು, ಸಾಮಾಜಿಕ ಜಾಲ ತಾಣದಲ್ಲಿ ಮಾತ್ರ ಸಕ್ರಿಯರಾಗಿದ್ದರು.ಸಾಮಾಜಿಕ ಜಾಲ ತಾಣದಲ್ಲಿ ಲಕ್ಷಾಂತರ ಜನ ಇವರಿಗೆ ಫಾಲೋವರ್ಸ್ ಇದ್ದಾರೆ.

ವಿಶೇಷವಾಗಿ ಯುವ ಸಮುದಾಯಕ್ಕೆ ಬಿಸಿನೆಸ್ ಸ್ಕೂಲ್ , ಸಮಾವೇಶಗಳಲ್ಲಿ ಅಮೂಲ್ಯ ಸಲಹೆ ನೀಡುತ್ತಿದ್ದರು. ದೇಶಿತನ ಉಳಿಸಿಕೊಂಡು ಉದ್ಯಮ, ವ್ಯವಹಾರ ಕ್ಷೇತ್ರಗಳಲ್ಲಿ ಹೇಗೆ ಯಶಸ್ಸು ಸಾಧಿಸಬಹುದು ಎಂಬ ಸಲಹೆಗಳನ್ನು ನೀಡುತ್ತಿದ್ದರು.

ದೇಶದ ಇತರ ಕಾರು ಕಂಪನಿಗಳು, ವಿದೇಶಿ ಕಂಪನಿಗಳು ಶ್ರೀಮಂತರಿಗಾಗಿ ಭಾರಿ ಬೆಲೆ ಬಾಳುವ ಕಾರು ತಯಾರಿಕೆ ಯಲ್ಲಿ ತೊಡಗಿಸಿಕೊಂಡ ವೇಳೆ ರತನ್ ಟಾಟಾ ಅವರು ಈ ದೇಶದ ಬಡ ಮತ್ತು ಮಧ್ಯಮ ವರ್ಗದ ಕುಟುಂಬದವರ ಬಗ್ಗೆ ಯೋಚಿಸಿದ ಗ್ರೇಟ್ ಬಿಸಿನೆಸ್ ಮನ್.

ಬಡ ಮತ್ತು ಮಧ್ಯಮ ವರ್ಗದವರ ಕೈಗೆಟುಕುವ ದರದಲ್ಲಿ 'ನ್ಯಾನೊ' ಕಾರು ತಯಾರಿಸಿ ಜಗತ್ತಿನ ವಾಹನೋದ್ಯಮ ಕ್ಷೇತ್ರದಲ್ಲಿ ಬೆರಗು ಮೂಡಿಸಿದ್ದರು.

ಡಿಸೆಂಬರ್ 2012ರಲ್ಲಿ ಟಾಟಾ ಸನ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಹುದ್ದೆಯಿಂದ ನಿವೃತ್ತರಾಗಿದ್ದ ರತನ್ ಟಾಟಾ, ನಂತರ ಗೌರವಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಈಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದ ರತನ್ ಟಾಟಾ ಅವರು ಬುಧವಾರ ನಿಧನರಾದರು. ಇಡೀ ದೇಶ ಅವರ ಅಗಲಿಕೆಗೆ ಕಂಬನಿ ಮಿಡಿದಿದೆ.