For the best experience, open
https://m.samyuktakarnataka.in
on your mobile browser.

ಭಾರತದ ಮೇಲೆ ವಿದೇಶಗಳ ಕಣ್ಣು

02:00 AM Apr 03, 2024 IST | Samyukta Karnataka
ಭಾರತದ ಮೇಲೆ ವಿದೇಶಗಳ ಕಣ್ಣು

ಜಾಗತಿಕ ರಾಜಕಾರಣದ ಹಲವಾರು ಪ್ರಸ್ತಾಪಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಮರ್ಥ್ಯ ಗಳಿಸಿಕೊಂಡಿರುವ ಭಾರತದ ಆಂತರಿಕ ಬೆಳವಣಿಗೆ ಮೇಲೆ ಇಡೀ ಜಗತ್ತಿನ ಕಣ್ಣು ಬೀಳಲು ಲೋಕಸಭಾ ಚುನಾವಣೆಯೂ ಒಂದು ಬಲವಾದ ಕಾರಣ. ಭವಿಷ್ಯ ಭಾರತದ ನೀತಿ ನಿಲುವುಗಳನ್ನು ರೂಪಿಸುವ ನಿಟ್ಟಿನಲ್ಲಿ ಜನಾದೇಶ ಪಡೆಯಲು ಲೋಕಸಭಾ ಚುನಾವಣೆ ರಾಜಕೀಯ ಪಕ್ಷಗಳಿಗೆ ಒಂದು ವೇದಿಕೆ. ಜಗತ್ತಿನ ರಾಷ್ಟ್ರಗಳಿಗೆ ತಮ್ಮ ನಿಲುವಿಗೆ ತಕ್ಕಂತಹ ಸರ್ಕಾರ ಭಾರತದಲ್ಲಿ ಬರುತ್ತದೆಯೋ ಇಲ್ಲವೋ ಎಂಬ ತವಕ. ಇದರ ಪರಿಣಾಮವೆಂದರೆ ಭಾರತದ ಮೇಲೆ ಕಾರಣವಿರಲಿ ಇಲ್ಲದಿರಲಿ ಪ್ರತಿಕ್ರಿಯೆಯನ್ನು ಹಲವಾರು ದೇಶಗಳು ವ್ಯಕ್ತಪಡಿಸುತ್ತಿರುವುದು ಅಪ್ಪಟ ರಾಜಕೀಯ ನಡೆ. ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ, ಜರ್ಮನಿ ರಾಷ್ಟ್ರಗಳು ಜನತಂತ್ರ ಪದ್ಧತಿಯ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಚಾರಣೆ ನಡೆಸುವುದು ಸೂಕ್ತ ಎನ್ನುವ ಭಾವನೆಯನ್ನು ವ್ಯಕ್ತಪಡಿಸಿದ ಬೆನ್ನ ಹಿಂದೆಯೇ ವಿಶ್ವಸಂಸ್ಥೆಯೂ ಕೂಡಾ ಅದೇ ಧಾಟಿಯಲ್ಲಿ ತನ್ನ ನಿಲುವನ್ನು ವ್ಯಕ್ತಪಡಿಸಿದ್ದು ಕೇವಲ ಕಾಕತಾಳೀಯವಾಗಲಾರದು. ಇವೆಲ್ಲವೂ ಕೂಡಾ ಬುದ್ಧಿಪೂರ್ವಕ ಪ್ರತಿಕ್ರಿಯೆಗಳು. ಸಹಜವಾಗಿಯೇ ಆಂತರಿಕ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ದೇಶಗಳ ಬಗ್ಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿರುವುದು ಸಹಜವಾಗಿಯೇ ಇದೆ. ಏಕೆಂದರೆ, ಇದು ಭಾರತದ ಸಾರ್ವಭೌಮತ್ವದ ಪ್ರಶ್ನೆ. ಇದರಲ್ಲಿ ಭಾರತೀಯರು ಬಿಟ್ಟು ಬೇರೆಯವರು ಮಧ್ಯಪ್ರವೇಶಿಸುವುದು ಅಧಿಕಪ್ರಸಂಗವಷ್ಟೆ.
ಇನ್ನು ಇದು ಸಾಲದು ಎಂಬಂತೆ ನೆರೆಯ ಬಾಂಗ್ಲಾ ದೇಶದಲ್ಲಿ ಭಾರತದ ಉತ್ಪನ್ನಗಳನ್ನು ಸುಡುವ ವಿಚಿತ್ರ ಚಳವಳಿ ಆರಂಭವಾಗಿರುವುದು ಪರಿಸ್ಥಿತಿಯ ಇನ್ನೊಂದು ಮಗ್ಗಲು. ಭಾರತದ ಜೊತೆ ಅಷ್ಟಾಗಿ ಸಾಂಗತ್ಯ ಇಲ್ಲದ ಬಾಂಗ್ಲಾ ದೇಶದ ಪ್ರತಿಪಕ್ಷ ಬಿಎನ್‌ಪಿ ನೇತೃತ್ವದಲ್ಲಿ ಭಾರತೀಯ ಉತ್ಪನ್ನಗಳನ್ನು ಸುಡುವ ಚಳವಳಿ ಸಹಜವಾಗಿಯೇ ಅಲ್ಲಿನ ಸರ್ಕಾರ ಹಾಗೂ ಪ್ರಧಾನಿ ಶೇಕ್ ಹಸೀನಾ ಅವರನ್ನು ಕೆರಳಿಸಿದೆ. `ನಿಮ್ಮ ತಾಯಂದಿರು ಹಾಗೂ ಸೋದರಿಯರು ಉಡುವ ಭಾರತೀಯ ಸೀರೆಗಳನ್ನು ನೀವು ಪ್ರತಿಭಟನಾಕಾರರು ಸುಡುತ್ತೀರಾ' ಎಂದು ಶೇಕ್ ಹಸೀನಾ ನೇರವಾಗಿ ಪ್ರಶ್ನಿಸಿರುವುದು ಆ ರಾಷ್ಟ್ರದ ಆಂತರಿಕ ಸಂಘರ್ಷದ ದಿಕ್ಸೂಚಿಯಷ್ಟೆ. ಹಿಂದೂ ಮಹಾಸಾಗರದಲ್ಲಿರುವ ಮಾಲ್ಡೀವ್ಸ್ ದ್ವೀಪದಲ್ಲಿ ಭಾರತ ವಿರೋಧಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲಂತೂ ಒಂದಿಲ್ಲೊಂದು ಕಾರಣಕ್ಕೆ ಭಾರತದ ಮೇಲೆ ಕೆಂಡ ಕಾರುವ ಮನಸ್ಥಿತಿ ಬಯಲಿಗೆ ಬರುತ್ತಿದೆ. ಇದೂ ಕೂಡಾ ಆ ದೇಶದ ಆಂತರಿಕ ಪರಿಸ್ಥಿತಿಯೇ. ನೆರೆ ರಾಷ್ಟ್ರವಾದ ಪಾಕಿಸ್ತಾನದ ಸ್ಥಿತಿಯನ್ನಂತೂ ಹೇಳುವುದೇ ಬೇಡ. ಹೊಸ ಸರ್ಕಾರ ಬಂದ ಮೇಲೆ ಕೆಂಡ ಕಾರುವ ಪರಿಸ್ಥಿತಿ ಕೊಂಚ ನಿಂತಂತೆ ಕಾಣಿಸುತ್ತಿದ್ದರೂ ಯಾವಾಗ ಮತ್ತೆ ಆರಂಭವಾಗುವುದೋ ತಿಳಿಯುತ್ತಿಲ್ಲ. ಏಕೆಂದರೆ, ಪಾಕಿಸ್ತಾನದ ರಾಜಕೀಯ ಮುಖಂಡರು ಹಾಗೂ ಮಿಲಿಟರಿ ಅಧಿಕಾರಿಗಳ ಧೋರಣೆ ಚಂಚಲತೆಗೆ ಇನ್ನೊಂದು ಹೆಸರು.
ಕೆನಡಾ ದೇಶದ ಪ್ರವೃತ್ತಿಯಂತೂ ಅರ್ಥವಾಗದ್ದು. ಭಾರತದ ಮೇಲೆ ಕೊಲೆ ಆಪಾದನೆ ಹೊರಿಸಿ ತನಿಖೆಗೆ ಮುಂದಾಗಿರುವ ಕೆನಡಾ ಸರ್ಕಾರ ಯಾರಿಗೂ ತನ್ನ ಮರ್ಮ ತಿಳಿಯುವುದಿಲ್ಲ ಎಂದು ಭಾವಿಸಿ ಭಾರತ ವಿರೋಧಿ ಶಕ್ತಿಗಳಿಗೆ ಕೆನಡಾದಲ್ಲಿ ಪ್ರಚೋದನೆ ಕೊಡುತ್ತಿರುವ ಬೆಳವಣಿಗೆ ಸದುದ್ದೇಶದಿಂದ ಕೂಡಿದ್ದಂತೂ ಅಲ್ಲ. ಖಲಿಸ್ತಾನಿ ಸಂಘಟನೆ ಮತ್ತೆ ಚಿಗುರೊಡೆಯಲು ಅಗತ್ಯವಾದ ಬೆಂಬಲ ದೊರೆಯುತ್ತಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಿಯುತ್ತಿರುವ ಸಂದರ್ಭದಲ್ಲಿಯೇ ಭಾರತದ ಲೋಕಸಭಾ ಚುನಾವಣೆಯ ಕಾವು ಏರುತ್ತಿರುವುದು ಕಾರಣ ಹಾಗೂ ಪ್ರೇರಣೆಗಳಿಗೆ ಒಂದು ನಿದರ್ಶನ. ಹಾಗೆ ನೋಡಿದರೆ, ಕೆನಡಾದಲ್ಲಿ ಸಾಕಷ್ಟು ಪ್ರಮಾಣದ ಭಾರತೀಯರಿದ್ದಾರೆ. ಕರ್ನಾಟಕ ಮೂಲದ ತುಮಕೂರು ಜಿಲ್ಲೆ ಶಿರಾ ತಾಲೂಕಿನವರು ಸಂಸದರೂ ಆಗಿದ್ದಾರೆ. ಸೌಹಾರ್ದಯುತ ಬಾಳ್ವೆಗೆ ಹೆಸರಾದ ಭಾರತೀಯರ ಮನಸ್ಸಿನಲ್ಲಿ ಆತಂಕ ಮೂಡಿಸುವ ಕೆನಡಾದ ಈ ಪ್ರವೃತ್ತಿ ನಿಜಕ್ಕೂ ಖಂಡನಾರ್ಹ.
ಈ ವಿದೇಶಗಳ ವರ್ತನೆಯ ಹಿನ್ನೆಲೆಯಲ್ಲಿ ಭಾರತದ ಲೋಕಸಭಾ ಚುನಾವಣೆಯಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ವಿದೇಶಿಯರ ಕೈವಾಡವನ್ನು ತಳ್ಳಿಹಾಕುವಂತಿಲ್ಲ. ಎಂತಹ ಮತ್ತು ಯಾವ ಸರ್ಕಾರ ಯಾರ ನೇತೃತ್ವದಲ್ಲಿ ಬರಬೇಕು ಎಂಬುದನ್ನು ಭಾರತೀಯರೇ ತೀರ್ಮಾನಿಸಬೇಕೆ ಹೊರತು ಎಲ್ಲೋ ಕೂತಿರುವ ವಿದೇಶಿ ಶಕ್ತಿಕೂಟದ ಪಂಡಿತರಲ್ಲಾ ಎಂಬುದನ್ನು ದೇಶದ ಮತದಾರರು ಮನವರಿಕೆ ಮಾಡಿಕೊಳ್ಳಲು ಇದು ಸಕಾಲ.