ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಭಾರತದ ಹೆಚ್ಚಾದ ವರ್ಚಸ್ಸಿನ ಫಲ

01:30 AM Feb 25, 2024 IST | Samyukta Karnataka

ಇತ್ತ ಭಾರತದ ಅಯೋಧ್ಯೆಯಲ್ಲಿ ಬಾಲರಾಮ ವಿರಾಜಮಾನನಾಗುತ್ತಿದ್ದಂತೆ ಅತ್ತ ಅರಬ್ ದೇಶ ಅಬುದಾಬಿಯಲ್ಲಿ ಶ್ರೀಸ್ವಾಮಿನಾರಾಯಣ ಮಂದಿರದ ಅನಾವರಣವಾಗಿದೆ. ಒಂದು ಮುಸ್ಲಿಂ ರಾಷ್ಟ್ರದಲ್ಲಿ ೨೭ ಎಕರೆಯಷ್ಟು ಭೂಮಿಯನ್ನು ಹಿಂದೂ ಸಂಪ್ರದಾಯದ ಶೈಲಿಯ ಭವ್ಯ ದೇವಾಲಯಕ್ಕಾಗಿ ಶಾಶ್ವತವಾಗಿ ಬಿಟ್ಟುಕೊಡಲಾಗಿದೆ. ಅಮೇರಿಕ, ಬ್ರಿಟನ್ ಮುಂತಾದೆಡೆಗಳಲ್ಲಿ ಜೈ ಶ್ರೀರಾಮ'' ಘೋಷಣೆ ಕೇಳಲಾರಂಭಿಸಿದೆ. ಬರೀ ಭಾರತೀಯರಷ್ಟೇ ಅಲ್ಲದೆ ವಿದೇಶಿಗರು ಕೂಡ ಜೈ ಶ್ರೀರಾಮ ಹೇಳತೊಡಗಿದ್ದಾರೆ. ವಿದೇಶಿ ಸಂಸತ್ತುಗಳಲ್ಲಿಯೂ ಈ ದೇವಜಯಕಾರ ಪ್ರತಿಧ್ವನಿಸಿತೆಂದರೆ ಶ್ರೀರಾಮನಾಮ ಬಲವೇನೆಂದು ಗೊತ್ತಾಗುತ್ತದೆ. ಭಾರತದ ಈ ರಾಜತಾಂತ್ರಿಕ ಯಶಸ್ಸು ಇಡೀ ಜಗತ್ತನ್ನೇಇದು ಹೇಗೆ ಸಾಧ್ಯ?!'' ಎಂದು ಬೆರಗುಗೊಳಿಸಿದೆ. ಒಂದು ದೇಶಕ್ಕಿರುವ ನೇತೃತ್ವ, ಅದರ ವರ್ಚಸ್ಸುಗಳ ಕಾರಣದಿಂದ ಮಾತ್ರ ಇದು ಸಾಧ್ಯ. ನೇತಾರರ ವ್ಯಕ್ತಿತ್ವದ ಪ್ರಖರತೆಯಲ್ಲಿ ಮೊದಲಿದ್ದ ಅಭಾಸಗಳು, ತಪ್ಪು ತಿಳುವಳಿಕೆ ಮತ್ತು ಕಲ್ಪನೆಗಳು ಕರಗಿ ಹೋಗುತ್ತವೆ. ಸೂರ್ಯನ ಪ್ರಕಾಶದೆದಿರು ಕತ್ತಲೆಯೆಲ್ಲ ಕಾಣೆಯಾದಂತೆ!
೨೦೨೨ರ ಆಗಸ್ಟ್ನಲ್ಲಿ ಕತಾರನ ದಹ್ರಾ ಗ್ಲೋಬಲ್ ಕಂಪನಿಗಾಗಿ ಕೆಲಸ ಮಾಡುತ್ತಿದ್ದ ಭಾರತೀಯ ನೌಕಾಪಡೆಯ ಎಂಟು ನಿವೃತ್ತ ಅಧಿಕಾರಿಗಳನ್ನು ಇಸ್ರೇಲ್ ಪರ ಬೇಹುಗಾರಿಕೆ ಮಾಡಿರುವ ಆರೋಪದಡಿ ಬಂಧಿಸಲಾಯಿತು. ನಿರಪರಾಧಿಗಳಾಗಿದ್ದರೂ ಹೀಗೆ ಬಂಧಿಸಲ್ಪಟ್ಟು ಮೂರುವರೆ ವರ್ಷಗಳಿಂದ ಕತಾರನ ಸೆರೆಮನೆಯಲ್ಲಿದ್ದರು. ಅವರ ತಲೆಯ ಮೇಲೆ ಗಲ್ಲು ಶಿಕ್ಷೆಯ ತೂಗುಕತ್ತಿ ಬೇರೆ ತೂಗಾಡುತ್ತಿತ್ತು. ಇನ್ನೇನು ತಮ್ಮ ಜೀವನ ಮುಗಿದಂತೆ ಎಂದು ಯೋಧರು ಅಂದುಕೊಂಡಿದ್ದರು. ಅವರ ಕುಟುಂಬದ ಸದಸ್ಯರಿಗೆ ದಿಕ್ಕು ತೋಚದೇ ಒದ್ದಾಡುತ್ತಿದ್ದರು. ಕೇಂದ್ರ ಸರಕಾರದ ಸತತ ರಾಜತಾಂತ್ರಿಕ ಪ್ರಯತ್ನಗಳಿಂದ ಆ ಯೋಧರ ಮರಣ ಶಿಕ್ಷೆ ಜೈಲು ಶಿಕ್ಷೆಯಾಗಿ ಬದಲಾಯಿತು. ೪೬ ದಿನಗಳ ಸೆರೆವಾಸದ ನಂತರ ಕತಾರ್ ಸರಕಾರ ಅವರನ್ನು ಬಿಡುಗಡೆ ಮಾಡಿತು. ಯೋಧರ ಕುಟುಂಬಗಳು ಇಷ್ಟೊಂದು ಬೇಗ ಈ ಕ್ಷಣ ಬರುತ್ತದೆಂದು ನಿರೀಕ್ಷಿಸಿರಲಿಲ್ಲ. ಹೀಗಾಗಿ ಅವರ ಸಂತಸಕ್ಕೆ ಮೇರೆಯೇ ಇರಲಿಲ್ಲ. ದುರದೃಷ್ಟಕರವಾದ ಈ ಮಾಜಿ ನೌಕಾಧಿಕಾರಿಗಳ ಕೇಸ್ ಬಗ್ಗೆ ಪ್ರಧಾನಿ ಮೋದಿ ಸ್ವತಃ ಅಸಕ್ತಿಯಿಂದ ನಿರಂತರ ಪ್ರಯತ್ನದಲ್ಲಿದ್ದು, ಅವರನ್ನು ಬಿಡುಗಡೆಗೊಳಿಸುವ ಯಾವುದೇ ಕ್ರಮಕ್ಕೂ ಹಿಂದೆ ಮುಂದೆ ನೋಡಲಿಲ್ಲ. ನೌಕಾಧಿಕಾರಿಗಳಿಗೆ ಪುನರ್ಜನ್ಮ ಪಡೆದಂತಾಯಿತು. ಇದು ಭಾರತ ಮತ್ತು ನರೇಂದ್ರ ಮೋದಿಯವರ ಪ್ರಭಾವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟೊಂದು ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಸಾಕ್ಷಿ ಆಗಿದೆ. ಅಲ್ಲದೇ ಭಾರತ ಮತ್ತು ಕತಾರ ನಡುವೆ ದ್ವಿಪಕ್ಷೀಯ ಸಂಬಂಧವೂ ಸುಧಾರಿಸಿದೆ. ತನ್ನವರನ್ನು ಯಾವ ಬೆಲೆ ತೆತ್ತಾದರೂ ರಕ್ಷಿಸಬೇಕೆನ್ನುವ ಕೇಂದ್ರ ಸರಕಾರದ ನೀತಿಯಿಂದ ಎಂಟು ಕುಟುಂಬಗಳು ಸಮಾಧಾನದ ಉಸಿರು ಬಿಡುವಂತಾಗಿದೆ. ಇದೇ ರೀತಿ ರಶಿಯಾ, ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಮತ್ತು ಹಮಾಸ್ ಯುದ್ಧದ ಸಂದರ್ಭದಲ್ಲಿ ಅಲ್ಲಿ ಸಿಲುಕಿದ ಭಾರತೀಯರ ರಕ್ಷಣೆಯಲ್ಲಿ ಭಾರತೀಯ ವಿದೇಶಾಂಗ ಖಾತೆ, ಪ್ರಧಾನ ಮಂತ್ರಿಗಳು ತೋರಿದ ರಾಜತಾಂತ್ರಿಕ ಪ್ರಭುದ್ಧತೆಯನ್ನು ಜಗತ್ತು ಗಮನಿಸಿದೆ.
ಇತ್ತೀಚೆಗೆ ಬ್ರಿಟನ್ ಸಂಸತ್ತು ರೆಸಲೂಷನ್ ಡೇ ಕಾರ್ಯಕ್ರಮವನ್ನು ಆಯೋಜಿಸಿತ್ತು. ಅದರಲ್ಲಿ ಜಮ್ಮು ಕಾಶ್ಮೀರದ ಸಾಮಾಜಿಕ ಕಾರ್ಯಕರ್ತೆ ಮತ್ತು ಪತ್ರಕರ್ತೆಯಾದ ಯಾನ ಮೀರ್ ಅವರು ಭಾರತದ ಅವಿಭಾಜ್ಯ ಭಾಗವಾಗಿರುವ ಕಾಶ್ಮೀರದಲ್ಲಿ ನಾನು ಸಂಪೂರ್ಣ ಸುರಕ್ಷಿತವಾಗಿ ಸ್ವತಂತ್ರವಾಗಿದ್ದೇನೆ. ನನ್ನ ಭಾರತ ಯಾವಾಗಲೂ ಬಲಿಷ್ಠವಾಗಿದೆ. ಭಯೋತ್ಪಾದಕ ಶಕ್ತಿಗಳ ವಿರುದ್ಧ ಹೋರಾಡುತ್ತದೆ. ನಾನೆಂದಿಗೂ ಮಲಾಲಳಂತೆ ಅನ್ಯದೇಶಕ್ಕೆ ಓಡಿ ಹೋಗಿ ಆಶ್ರಯ ಪಡೆಯುವುದಿಲ್ಲ'' ಎಂದು ಹೇಳಿದರು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಮಾಡುತ್ತಿರುವ ಅಪಪ್ರಚಾರಕ್ಕೆ ಆಕೆ ಕೊಟ್ಟ ಪ್ರತ್ಯುತ್ತರವಾಗಿತ್ತು. ಇದು ಬದಲಾದ ಭಾರತಕ್ಕೆ ಬಲವಾದ ಪುರಾವೆ ಆಗಿದೆ. ೨೦೨೭ ರಷ್ಟೊತ್ತಿಗೆ ಭಾರತ ಆರ್ಥಿಕತೆಯಲ್ಲಿ ಜರ್ಮನ್ ಮತ್ತು ಜಪಾನ್‌ಗಳನ್ನು ಹಿಂದಿಕ್ಕಲಿದೆ. ೫ ಟ್ರಿಲಿಯನ್ ಡಾಲರ್ ವಹಿವಾಟಿನೊಂದಿಗೆ ಜಗತ್ತಿನಲ್ಲೇ ೩ನೇ ಸ್ಥಾನಕ್ಕೇರಲಿದೆ. ೨೦೩೦ರಷ್ಟೊತ್ತಿಗೆ ಭಾರತವು ೧೦ ಟ್ರಿಲಿಯನ್ ಡಾಲರ್ ಮೊತ್ತದ ಮಾರುಕಟ್ಟೆಯಾಗಲಿದೆ. ಇದನ್ನು ಹೂಡಿಕೆ ಬ್ಯಾಂಕಿಂಗ್ ಕಂಪನಿ, ಜೆಫ್ರಿಶ್ ಈಕ್ವಿಟೀಸ್ ರಿಸರ್ಚ್ ಹೇಳಿದೆ. ಎಲ್ಲ ದೊಡ್ಡ ಹೂಡಿಕೆದಾರರಿಗೆ ಭಾರತ ಅನಿವಾರ್ಯವಾಗಲಿದೆ. ನೋಟು ಅಮಾನ್ಯೀಕರಣ, ದಿವಾಳಿ ತಡೆ ಕಾನೂನು, ಜಿಎಸ್ಟಿ ಅನುಷ್ಠಾನ, ರಿಯಲ್ ಎಸ್ಟೇಟ್ ನಿಯಂತ್ರಣ ಕಾನೂನುಗಳಂತಹ ಅಧಿಕ ಸುಧಾರಣಾ ಕಾನೂನುಗಳು ಭಾರತದ ಜಿಡಿಪಿ ಬೆಳವಣಿಗೆಗೆ ಕಾರಣಗಳಾಗಿವೆ. ಖರೀದಿ ಶಕ್ತಿಯ ಸಮಾನತೆ ಆಧಾರದಲ್ಲಿ ಭಾರತದ ಜೆಡಿಪಿ ೧೩.೨ ಟ್ರಿಲಿಯನ್ ದಾಟಿದೆ. ಈ ಮೊದಲು ಅಮೆರಿಕದ ಡಾಲರ್, ಇಂಗ್ಲೆಂಡಿನ ಪೌಂಡು, ಮತ್ತು ಯುರೋಪಿನ ಯುರೋಗಳು ಜಾಗತಿಕ ಮಾರುಕಟ್ಟೆಯಲ್ಲಿ ರಾಜಭಾರವನ್ನು ಮಾಡುತ್ತಿದ್ದವು. ಆದರೆ ಇಂದು ಭಾರತದ ಕರೆನ್ಸಿ ಆದ ರೂಪಾಯಿಯನ್ನು ಜಗತ್ತಿನ ೧೮ ದೇಶಗಳು ಒಪ್ಪಿಕೊಂಡಿದ್ದು, ಭಾರತದೊಡನೆ ವಹಿವಾಟು-ವ್ಯಾಪಾರಗಳನ್ನು ರೂಪಾಯಿಯಲ್ಲಿ ಮಾಡುತ್ತಿವೆ. ಈಗ ಇದಕ್ಕೆ ಇನ್ನೊಂದು ಗರಿ ಮೂಡಿದೆ. ಭಾರತದಲ್ಲಿ ಚಾಲ್ತಿಯಲ್ಲಿರುವ ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ಫೇಸ್) ತನ್ನ ಕಾರ್ಯವಿಸ್ತಾರವನ್ನು ಹಿಗ್ಗಿಸಿಕೊಳ್ಳುತ್ತಿದೆ. ಫ್ರಾನ್ಸ್, ಯುಎಇ, ಭೂತಾನ್, ಸಿಂಗಾಪುರ, ನೇಪಾಳ, ಶ್ರೀಲಂಕಾ, ಮಾರಿಷಸ್ ಸೇರಿದಂತೆ ಏಳು ರಾಷ್ಟçಗಳು ಭಾರತೀಯ ಪ್ರವಾಸಿಗರು ಯುಪಿಐ ಮೂಲಕ ಹಣ ಪಾವತಿಸಲು ಮಾನ್ಯತೆಯನ್ನು ನೀಡಿವೆ. ಇದರ ಜೊತೆಗೇ ಅನೇಕ ದೇಶಗಳಲ್ಲಿ ಭಾರತದ ರುಪೇ ಕಾರ್ಡ್ ಸೇವೆಯನ್ನು ಆರಂಭಿಸಲಾಗಿದೆ. ಒಂದು ಕಾಲದಲ್ಲಿ ಭಾರತವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅಷ್ಟಾಗಿ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಅಲ್ಲದೇ ಚೀನಾ, ಪಾಕ್ ಕುತಂತ್ರದಿಂದಾಗಿ ಭಾರತವನ್ನು ನಿರ್ಲಕ್ಷಿಸಲಾಗುತ್ತಿತ್ತು. ಮತ್ತೆ ಹತ್ತಿಕ್ಕಲಾಗುತ್ತಿತ್ತು. ಅಮೆರಿಕದ, ದೊಡ್ಡಣ್ಣನ ರೀತಿಯ ನಡತೆಯಿಂದ ಮತ್ತು ಚೀನಾದ ವಸಹಾತು ವಿಸ್ತಾರ ನೀತಿಗೆ ವಿರುದ್ಧವಾದ ಭಾರತವನ್ನು ತುಂಬ ಕೀಳಾಗಿ ಕಾಣುತ್ತಿದ್ದವು. ಕಳೆದ ಹತ್ತು ವರ್ಷಗಳಲ್ಲಿ ಜಾಗತಿಕ ಚಿತ್ರಣ ಬದಲಾಗಿದೆ. ಭಾರತದ ಶಕ್ತಿಯ ಪರಿಚಯ ಜಗತ್ತಿಗೆ ಆಗುತ್ತಿದೆ. ಕೊರೊನಾ ಕಾಲದಲ್ಲಿ ಲಸಿಕೆ ಆವಿಷ್ಕಾರ, ತನ್ನ ದೇಶದ ೧೦೦ ಕೋಟಿ ಜನರಿಗೆ ಕ್ಷಿಪ್ರವಾಗಿ ಕೊರೊನಾ ಕಿಟ್‌ಗಳನ್ನು ಒದಗಿಸಿದ್ದು, ಎರಡೆರಡು ಡೋಸ್ ಲಸಿಕೆಯನ್ನು ವ್ಯವಸ್ಥಿತವಾಗಿ ಹಂಚಿದ್ದು ಮತ್ತು ಉಚಿತವಾಗಿ ಎಲ್ಲ ದೇಶಗಳಿಗೂ ಹಂಚಿದ್ದು ಈಗ ಇತಿಹಾಸ. ಆಹಾರೋತ್ಪಾದನೆಯಲ್ಲಿ ಭಾರತ ಸ್ವಾವಲಂಬನೆಯನ್ನು ಸಾಧಿಸಿದೆ. ಜಗತ್ತಿನ ಹಲವಾರು ದೇಶಗಳಿಗೆ ಅಕ್ಕಿಯನ್ನು ರಫ್ತು ಮಾಡುತ್ತಿದೆ. ಸಾಫ್ಟವೇರ್‌ನಲ್ಲಂತೂ ಜಗತ್ತೇ ಬೆರಗಾಗುವಷ್ಟು ಸಾಧನೆ ಮಾಡಿದೆ. ಉತ್ಪಾದನಾ ಉದ್ದಿಮೆಗಳಲ್ಲೂ ಧಾಪುಗಾಲಿಟ್ಟಿದೆ. ಡಿಜಿಟಲ್ ತಾಂತ್ರಿಕತೆಯಲ್ಲೂ ಸಾಕಷ್ಟು ಮುಂದಿದೆ. ಅಂತರಿಕ್ಷ ತಂತ್ರಜ್ಞಾನದಲ್ಲಿ ಚಂದ್ರನ ಮೇಲೆ ನೌಕೆಯುನ್ನಿಳಿಸಿ, ಸೂರ್ಯನೆಡೆ ದೃಷ್ಟಿ ಬೀರುತ್ತಿದೆ. ಹಲವಾರು ದೇಶಗಳು ತಾವು ನಿರ್ಮಿಸಿರುವ ಸೌರ ನೌಕೆಗಳನ್ನು, ಉಪಗ್ರಹಗಳನ್ನು ಉಡಾಯಿಸಲು ಭಾರತಕ್ಕೆ ತರುತ್ತಿವೆ. ಯೋಗ, ಕೌಟುಂಬಿಕ ಜೀವನ ಪದ್ಧತಿ, ಸಾಮಾಜಿಕ ಜೀವನ, ಸಮತೋಲಿತ ಆಹಾರ, ಆಧ್ಯಾತ್ಮಿಕತೆ ಹಾಗೂ ಸೇವಾ ಕಾರ್ಯಗಳಲ್ಲೂ ಭರತವರ್ಷ ತನ್ನ ಪ್ರಭಾವವನ್ನು ಬೀರಿದೆ. ಹಾಗೆ ನೋಡಿದರೆ ಬೇರೆ ದೇಶದವರಾರೂ ಭಾರತಕ್ಕೆ ಹೆದರಬೇಕಿಲ್ಲ. ಭಾರತದಿಂದ ಯುದ್ಧದ ಹೆದರಿಕೆ ಇಲ್ಲ. ಅದು ಒತ್ತಡ ಹೇರುವುದಿಲ್ಲ. ಮೋದಿಯೆಂಬ ಪ್ರಧಾನಿಯೇ ಒಂದು ಶಕ್ತಿಯಾಗಿ ಇಂದು ಎದ್ದು ನಿಂತಿದ್ದಾರೆ. ಅವರ ವರ್ಚಸ್ಸಿನಿಂದಾಗಿಭಾರತ'' ಇಂದು ಒಂದು ಮಹತ್ವದ ವಿಶ್ವಾಸಾರ್ಹವಾದ ಬ್ರ್ಯಾಂಡ್ ಆಗಿದೆ. ಮೋದಿ-ಶಾ-ದಾವಲ್ ಸೇರಿ ಯೋಚಿಸಿದರೆಂದರೆ ಅದೊಂದು ಚಾಣಕ್ಯ ನಡೆಯೇ ಆಗಿರುತ್ತದೆ. ಯಶವು ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ನಿರ್ಣಯ, ನಿರ್ಧಾರ, ನಡೆಗಳು ಭಾರತದ ಪರ, ಭಾರತೀಯರ ಪರವಾಗಿರುತ್ತದೆ. ಆದರೆ ಅದಾವುದೂ ಒತ್ತಾಯದಿಂದ, ಭಯದಿಂದ, ಕುತಂತ್ರದಿಂದಾಗಿರುವುದಿಲ್ಲ. ಬದಲಿಗೆ ಪ್ರೀತಿ, ವಿಶ್ವಾಸ, ಸೌಹಾರ್ದದಿಂದ ಇಟ್ಟ ನಡೆಯಾಗಿರುತ್ತದೆ. ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ಭದ್ರತಾ ಸಮಿತಿಯ ಕಾಯಂ ಸದಸ್ಯತ್ವ ಕೊಡಬೇಕೆನ್ನುವ ಬಹುದಿನದ ಬೇಡಿಕೆಗೆ ಒತ್ತಾಯ ಬರುತ್ತಿದೆ. ಚೀನಾದ ದುರಾಲೋಚನೆಯಿಂದ ಅದು ನೆನೆಗುದಿಗೆ ಬಿದ್ದಿದೆ.
ಇಷ್ಟೆಲ್ಲಾ ಆಗಬೇಕೆಂದರೆ ಅದಕ್ಕೆ ದೇಶದ ನೇತೃತ್ವ ಮತ್ತು ಅವರ ಕತೃತ್ವ ಶಕ್ತಿಯೇ ಕಾರಣ. ದೇಶದ ನೇತಾರರ ಸ್ವಾಭಿಮಾನ ಮತ್ತು ಆತ್ಮ ನಿರ್ಭರ ನಡೆಯಿಂದಾಗಿ ರಾಷ್ಟ್ರಕ್ಕೆ ಒಂದು ಪ್ರತಿಮೆ ಬರುತ್ತದೆ. ಅವರ ವ್ಯಕ್ತಿತ್ವದಿಂದಾಗಿ ದೇಶದ ವರ್ಚಸ್ಸು ಜಗತ್ತಿನಾದ್ಯಂತ ಹೆಚ್ಚುತ್ತಿದೆ. ಅದರ ಪರಿಣಾಮವಾಗಿ ಅವರಾಡುವ ಪ್ರತಿ ಮಾತಿಗೂ ಇಡುವ ಪ್ರತಿ ಅಡಿಗೂ ಒಂದು ಬೆಲೆ, ಮಹತ್ವ ಬರುತ್ತದೆ. ಅವರ ದೇಶದ ಪ್ರತಿ ಪ್ರಜೆಗೂ ಒಂದು ಗೌರವ ದೊರೆಯುತ್ತದೆ. ಪ್ರಧಾನಿ ಮೋದಿ ಅವರು ಹೇಳಿದ ಹಾಗೆ ೨೧ನೇ ಶತಮಾನವು ಭಾರತದ್ದು. ಈಗ ನಮ್ಮ ಕಾಲ. ಭಾರತ ಸೊರಗಿದರೆ ಜಗತ್ತು ಕೊರಗುತ್ತದೆ. ಭಾರತ ಅರಳಿದರೆ ಜಗತ್ತು ಬೆಳಗುತ್ತದೆ. ಜಗತ್ತಿಗೆ ಭಾರತದಂತ ಸ್ಥಿತಿಪ್ರಜ್ಞವಾದ, ನಿಷ್ಪಕ್ಷಪಾತವಾದ, ಸರ್ವರ ಸುಖವನ್ನು ಬಯಸುವ, ಸುಸ್ಥಿರ ಅಭಿವೃದ್ಧಿಯನ್ನು ತರುವ ವಿಶಾಲ ಮನೋಭಾವದ ನಾಯಕತ್ವದ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ತುರ್ತಾಗಿ ಇದೆ. ಭಾರತಕ್ಕೆ ಆ ಸಾಮರ್ಥ್ಯವೂ ಇದೆ.

Next Article