ಭಾರತೀಯರ ಕನಸಿನ ಸಂಪೂರ್ಣ ಸಾಕ್ಷಾತ್ಕಾರ
೫೦೦ ವರ್ಷಗಳ ಭಾರತೀಯರ ಕನಸಿನ ಕೂಸಾಗಿದ್ದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಸಂಸ್ಥಾಪನೆ ಇದೀಗ ಸಾಕ್ಷಾತ್ಕಾರಗೊಂಡಿರುವುದು ಒಂದರ್ಥದಲ್ಲಿ ನಾಡಿನಲ್ಲಿ ಸ್ವರ್ಗಸೀಮೆಯ ಅನುಭವ. ಇಂತಹ ಅನುಭವಕ್ಕೆ ಸಂಸರ್ಗವಾಗಿರುವುದು ವೈವಿಧ್ಯತೆಯಲ್ಲಿ ಏಕತೆಯನ್ನು ಬಿಂಬಿಸುವ ಜೊತೆಗೆ ವೈಚಾರಿಕತೆಯನ್ನು ಮೀರಿದ ಜನಸಮ್ಮತವಾದ ನಿಲುವು.
ಪ್ರತಿಯೊಂದು ನಾಡಿಗೂ ಒಂದು ಪರಂಪರೆ ಜೊತೆಗೆ ರೀತಿ ರಿವಾಜುಗಳು ಇರುವ ಹಾಗೆ ಭಾರತದಲ್ಲಿರುವ ಪರಂಪರೆಗೆ ಆಧ್ಯಾತ್ಮಿಕತೆಯ ಪ್ರಜ್ಞೆ ಒಂದು ಹೆಗ್ಗುರುತು. ಇಂತಹ ಆಧ್ಯಾತ್ಮಿಕ ಪ್ರಜ್ಞೆಯನ್ನು ರೂಡಿಸಿಕೊಂಡು ಬರುವ ಜನರಿಗೆ ನಂಬಿಕೆ ಎಂಬುದು ಯಾವತ್ತಿಗೂ ಪ್ರಶ್ನಾತೀತ ದೇವರ ಸಮಾನ. ಜೀವಮಾನದ ಗುರಿ ಎನ್ನುವ ಹಾಗೆ ನಂಬಿಕೆಗಳನ್ನು ಸಾಕ್ಷಾತ್ಕರಿಸಿಕೊಳ್ಳುವ ನಿಟ್ಟಿನಲ್ಲಿ ಅವಿರತ ಪ್ರಯತ್ನ ನಡೆಸುವಾಗ ಎದುರಾಗುವ ಸವಾಲುಗಳಿಗಿಂತ ತಮ್ಮವರಿಂದಲೇ ಸೃಷ್ಟಿಯಾಗುವ ಒಳಸುಳಿಗಳನ್ನು ನಿಗ್ರಹಿಸಿಕೊಂಡು ಮುಂದೆ ಬರುವುದು ನಿಜಕ್ಕೂ ಒಂದು ಅಗ್ನಿಪರೀಕ್ಷೆ. ೫೦೦ ವರ್ಷಗಳ ಭಾರತೀಯರ ಕನಸಿನ ಕೂಸಾಗಿದ್ದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಸಂಸ್ಥಾಪನೆ ಇದೀಗ ಸಾಕ್ಷಾತ್ಕಾರಗೊಂಡಿರುವುದು ಒಂದರ್ಥದಲ್ಲಿ ನಾಡಿನಲ್ಲಿ ಸ್ವರ್ಗಸೀಮೆಯ ಅನುಭವ. ಇಂತಹ ಅನುಭವಕ್ಕೆ ಸಂಸರ್ಗವಾಗಿರುವುದು ವೈವಿಧ್ಯತೆಯಲ್ಲಿ ಏಕತೆಯನ್ನು ಬಿಂಬಿಸುವ ಜೊತೆಗೆ ವೈಚಾರಿಕತೆಯನ್ನು ಮೀರಿದ ಜನಸಮ್ಮತವಾದ ನಿಲುವು. ಹೀಗಾಗಿಯೇ ಅಯೋಧ್ಯೆಯಲ್ಲಿ ಜರುಗಿರುವ ವೈಭವದ ಬಾಲರಾಮನ ವಿಗ್ರಹದ ಪ್ರತಿಷ್ಠಾಪನೆ ಇಡೀ ನಾಡಿನಲ್ಲಷ್ಟೇ ಅಲ್ಲ ವಿಶ್ವದಲ್ಲಿ ಶ್ರೀರಾಮನ ಮೂಲಕ ಆಧ್ಯಾತ್ಮಿಕತೆಯ ಭಾವತರಂಗಗಳನ್ನು ಎಬ್ಬಿಸಿರುವುದು ಭಾರತದ ಭವ್ಯ ಪರಂಪರೆಗೆ ಇನ್ನೊಂದು ದಿಕ್ಸೂಚಿ.
ಭಿನ್ನಮತವಿಲ್ಲದ ಸಾಮಾಜಿಕ ವ್ಯವಸ್ಥೆ ಎಂಬುದು ಅವ್ಯವಸ್ಥೆಯ ನಿಜರೂಪ. ಪ್ರತಿಯೊಂದು ವಾದಕ್ಕೂ ಪ್ರತಿವಾದ ಇರುವ ರೀತಿಯಲ್ಲಿ ವಿಭಿನ್ನ ದೃಷ್ಟಿಗಳಲ್ಲಿರುವ ಸರಿ ತಪ್ಪುಗಳನ್ನು ವಿಂಗಡಿಸಿ ಅನುಭವ ಹಾಗೂ ಜಾಣ್ಮೆಯ ಮೂಲಕ ಸರ್ವಸಮ್ಮತವಾದ ನಿಲುವನ್ನು ರೂಪಿಸುವುದು ಜನಧರ್ಮ. ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆ ಆಗಬೇಕೇ ಅಥವಾ ಬೇಡವೇ ಎಂಬ ವಿಚಾರದ ಬಗ್ಗೆ ನ್ಯಾಯಾಲಯದ ಮೊಗಸಾಲೆಗಳಲ್ಲಿ ವಿವಿಧ ಆಯಾಮಗಳಲ್ಲಿ ಜರುಗಿದ ಕಾನೂನು ಸಮರ ಒಂದರ್ಥದಲ್ಲಿ ಭಾರತದ ಧಾರ್ಮಿಕ ಪರಂಪರೆಯ ವೈವಿಧ್ಯತೆಯನ್ನು ಎತ್ತಿತೋರಿದ್ದು ಒಳ್ಳೆಯ ಬೆಳವಣಿಗೆಯೇ. ಸುದೀರ್ಘ ಕಾನೂನು ಹೋರಾಟದ ಮುಕ್ತಾಯದ ಘಟ್ಟದಲ್ಲಿ ಸುಪ್ರೀಂಕೋರ್ಟ್ನ ಐವರು ನ್ಯಾಯಮೂತಿಗಳ ಪೀಠ ಪ್ರಕರಣದ ಎಲ್ಲ ಆಯಾಮಗಳನ್ನು ವಿವೇಚಿಸಿ ಹೊರಡಿಸಿದ ಆದೇಶದ ಪರಿಣಾಮವೇ ಈಗಿನ ಬಾಲರಾಮಮಂದಿರದ ಸಂಸ್ಥಾಪನೆಗೆ ಕಾರಣ. ಸುಪ್ರೀಂಕೋರ್ಟ್ ತೀರ್ಪಿನ ನಂತರ ಮಂದಿರ ನಿರ್ಮಾಣಕ್ಕೆ ಪ್ರತಿಕೂಲವಾಗಿದ್ದ ಅಡೆತಡೆಗಳು ನಿವಾರಣೆಗೊಂಡು ಸರಯೂ ನದಿಯ ದಂಡೆಯ ಮೇಲೆ ಆಕರ್ಷಕ ವಾಸ್ತುಶಿಲ್ಪದ ದೇವಾಲಯ ಈಗ ಮೈದಳೆದಿದೆ. ರಾಜೀವ್ ಗಾಂಧಿಯವರು ಹಾಗೂ ಪಿ.ವಿ. ನರಸಿಂಹರಾಯರು ಪ್ರಧಾನಿಯಾಗಿದ್ದಾಗ ದೇವಾಲಯ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಗುಡಿಯ ಕೀಲಿಯನ್ನು ತೆಗೆಯಲು ಕಾರಣವಾಗಿದ್ದು ಈಗ ದೇವಾಲಯ ನಿರ್ಮಾಣವಾಗುವ ಹೊತ್ತಿಗೆ ಕಾಲಚಕ್ರ ಸಂಪೂರ್ಣವಾಗಿ ಉರುಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಆಡಳಿತದಲ್ಲಿ ಭಾರತೀಯರ ಕನಸಾಗಿದ್ದ ಈ ದೇವಾಲಯ ನನಸಾಗಿರುವುದು ಭಾರತೀಯರ ಸಂಕಲ್ಪ ಹಾಗೂ ದೃಢ ನಿರ್ಧಾರದಿಂದ ಎಂಬ ಮಾತನ್ನು ಸ್ಮರಿಸಿಕೊಳ್ಳಬೇಕಾದದ್ದು ಅತ್ಯಗತ್ಯ.
ರಾಮಮಂದಿರ ನಿರ್ಮಾಣವಾದ ನಂತರ ಭಾರತ ಇಲ್ಲವೇ ಭಾರತೀಯರ ಸಮಸ್ಯೆಗಳೆಲ್ಲಾ ಪರಿಹಾರವಾದವು ಎಂದು ಬೀಗುವ ಅಗತ್ಯವಿಲ್ಲ. ದೇವಾಲಯ ನಿರ್ಮಾಣದ ಮೂಲಕ ಭಾರತೀಯರ ಆತ್ಮವಿಶ್ವಾಸ ಮತ್ತಷ್ಟು ದೃಢವಾಗುವುದು ಖಂಡಿತ. ಈಗ ಭಾರತೀಯರ ಮುಂದಿರುವುದು ನಾಡು ಕಟ್ಟುವ ಕಾಯಕದಲ್ಲಿ ತಮ್ಮನ್ನು ಕಾಯಾ ವಾಚಾ ಮನಸಾ ತೊಡಗಿಸಿಕೊಳ್ಳುವ ಅನಿವಾರ್ಯತೆ.
ಕಾಯಕ ಮಾರ್ಗದಿಂದಲೇ ನಾಡನ್ನು ಸಮೃದ್ಧಗೊಳಿಸಬಹುದೇ ವಿನಃ ಭಾವನಾತ್ಮಕ ವಿಚಾರಗಳಿಂದ ಅಲ್ಲ. ಭಾವನಾತ್ಮಕ ವಿಚಾರಗಳು ಕಾಯಕಕ್ಕೆ ಪ್ರೇರಕಶಕ್ತಿಯಾಗಿರುತ್ತವೆ ಅಷ್ಟೆ. ಬದಲಾದ ಕಾಲಘಟ್ಟದಲ್ಲಿ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಯ ಕೆಲಸ ಕಾರ್ಯಗಳು ಅರ್ಥ ಕಳೆದುಕೊಳ್ಳುತ್ತಿರುವಾಗ ಮುಂದೊಂದು ದಿನ ನಾಡಿನಲ್ಲಿ ಆಹಾರದ ಕ್ಷೆಭೆ ತಲೆದೋರಿದರೂ ಅಚ್ಚರಿಯಾಗದು. ಏಕೆಂದರೆ, ಕೃಷಿ ಉತ್ಪನ್ನವೇ ದೇಶದ ಸಮೃದ್ಧಿಗೆ ಬೆನ್ನೆಲುಬು. ಕೈಗಾರಿಕತೆ ಹಾಗೂ ಪೂರಕ ಚಟುವಟಿಕೆಗಳು ಆರ್ಥಿಕ ದೃಢತೆಯ ಮೂಲಕ ನಾಡಿನ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಆದರೆ, ಕೃಷಿ ಇಲ್ಲದೆ ದೇಶವನ್ನು ಸುಸ್ಥಿತಿಯಲ್ಲಿ ಇಡುವುದು ಕಷ್ಟ. ರಾಷ್ಟçಪಿತ ಮಹಾತ್ಮಗಾಂಧೀಜಿ ಅವರು ಕಂಡ ರಾಮರಾಜ್ಯದ ಕನಸಿನ ರೂಪವೇ ಇದು. ಈಗ ರಾಮಮಂದಿರ ಸಂಸ್ಥಾಪನೆಯಾಗಿರುವ ಸಂದರ್ಭದಲ್ಲಿ ರಾಮರಾಜ್ಯ ಸ್ಥಾಪನೆಯಾಗಬೇಕಾದರೆ ಗಾಂಧೀಜಿ ಪ್ರಣೀತ ಆರ್ಥಿಕ ನೀತಿಯನ್ನು ಸುಧಾರಿತ ರೂಪದಲ್ಲಿ ತರುವುದರಲ್ಲಿ ಜಾಣತನವಷ್ಟೆ ಅಲ್ಲ. ನಾಡಿನ ಕಲ್ಯಾಣವೂ ಅಡಗಿದೆ.