ಭಾರತೀಯ ಸಂಸ್ಕೃತಿಯ ಅಧ್ವರ್ಯುಗಳು
`ಸಮೃದ್ಧ ಇತಿಹಾಸ, ಸರ್ವಶ್ರೇಷ್ಠ ಸಂಸ್ಕೃತಿ, ಉತ್ಕೃಷ್ಟ ಪರಂಪರೆಯ ವಾರೀಸುದಾರರು ನಾವೆಂಬ ಅಭಿಮಾನ ಮರೆತು ಪಶ್ಚಿಮದ ಕಡೆಗೆ ನೋಡುವ ದೈನ್ಯಸ್ಥಿತಿ ಭಾರತೀಯರಿಗೆ ಶೋಭೆಯಲ್ಲ. ಪುರಾಣ, ಉಪನಿಷತ್ತುಗಳ ಅಧ್ಯಯನ ಕಡೆಗಣಿಸಿ ಮುಂದೆ ಸಾಗುವ ಯೋಚನೆಯನ್ನು ಕೈಬಿಟ್ಟು ವೇದಗಳಿಗೆ ಹಿಂತಿರುಗುವ ಸಂಕಲ್ಪವೇ ಸನಾತನತೆಯ ದಿಗ್ವಿಜಯಕ್ಕೆ ರಹದಾರಿ' ಎಂಬ ಸ್ಫೂರ್ತಿವಾಣಿಯಿಂದ ರಾಷ್ಟ್ರೀಯ-ಧಾರ್ಮಿಕ ಆಂದೋಲನಕ್ಕೆ ಹೊಸದಿಕ್ಕು ತೋರಿದ ಹನುಮಾನ್ ಪ್ರಸಾದ್ ಪೊದ್ದಾರ್, ಸಂಸಾರಿ ಸಂನ್ಯಾಸಿಯೆಂದೇ ಲೋಕಪ್ರಸಿದ್ಧರು. ಲಾಲಾ ಭೀಮರಾಜ ಅಗರ್ವಾಲ್-ರಿಖಿಬಾಯಿ ದಂಪತಿಗಳ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ಹನುಮಾನ್ ಪ್ರಸಾದರು ಬಾಲ್ಯದಲ್ಲೇ ಪರಂಪರಾಗತ ಶಿಕ್ಷಣ ಪಡೆದರು. ಅಜ್ಜಿಯ ಆಧ್ಯಾತ್ಮಿಕ ನೆರಳಲ್ಲಿ ಬೆಳೆದ ಪೊದ್ದಾರ್ ತಂದೆಯ ವ್ಯಾಪಾರ ವಹಿವಾಟು ಮುಂದುವರಿಸುವ ನಿಟ್ಟಿನಲ್ಲಿ ಇಂಗ್ಲಿಷ್ ಭಾಷೆಯನ್ನು ಕಲಿತರು. ಉತ್ತರ ಭಾರತದಾದ್ಯಂತ ರೈಲು, ಎತ್ತಿನ ಗಾಡಿ, ಸಾರೋಟು ಗಾಡಿಗಳಲ್ಲಿ ಸಂಚರಿಸಿ ಗ್ರಾಮಜೀವನ ವ್ಯವಸ್ಥೆ, ವ್ಯವಹಾರಜ್ಞಾನ ವರ್ಧಿಸಿ ಇಪ್ಪತ್ತರ ಹರೆಯದಲ್ಲೇ ಯಶಸ್ವಿ ಉದ್ಯಮಪತಿಯೆಂಬ ಗೌರವ ಸಂಪಾದಿಸಿದರು. ಬ್ರಿಟಿಷರು ಕಲ್ಕತ್ತಾವನ್ನು ಕೇಂದ್ರವಾಗಿ ನಡೆಸುತ್ತಿದ್ದ ವ್ಯಾಪಾರ ಹಾಗೂ ಗಳಿಸುತ್ತಿದ್ದ ಲಾಭದಿಂದ ಪ್ರೇರಿತರಾದ ಪೊದ್ದಾರ್, ತಾನು ಆರ್ಥಿಕ ಬಲಾಢ್ಯನಾಗಿ ಇತರರನ್ನೂ ಬೆಳೆಸಬೇಕು; ಬ್ರಿಟಿಷರನ್ನು ಸೋಲಿಸಿ ಸ್ವದೇಶೀ ಉದ್ಯಮವನ್ನು ವಿಸ್ತರಿಸಿ ಭಾರತೀಯತೆಯ ಪ್ರಸಾರಕ್ಕೆ ಹೆಜ್ಜೆಯಿಡಬೇಕೆಂದು ಪ್ರತಿಜ್ಞೆಗೈದರು.
ಬೆಂಗಾಲಿ ಕ್ರಾಂತಿಕಾರಿಗಳ ಸಂಪರ್ಕದಿಂದ ಸ್ವಾತಂತ್ರ‍್ಯ ಹೋರಾಟದಲ್ಲೂ ಸಕ್ರಿಯರಾದ ಪೊದ್ದಾರ್, ಪೊಲೀಸರ ತಪ್ಪು ಗ್ರಹಿಕೆಯಿಂದ ಬಂಧಿತರಾಗಿ ಜೈಲುಶಿಕ್ಷೆ ಅನುಭವಿಸಿದರು. ಬಿಡುಗಡೆಯ ಬಳಿಕ ಅರವಿಂದ, ಚಿತ್ತರಂಜನ್, ತಿಲಕ್, ಗೋಖಲೆ, ಮಾಲವೀಯ, ಗಾಂಧೀಜಿ ಮಾತುಕೃತಿಗಳಿಂದ ಪ್ರೇರಿತರಾಗಿ ಸ್ವದೇಶೀ ವೃತಧಾರಿಯಾದ ಹನುಮಾನ್ ಪ್ರಸಾದರು ವೀರ ಸಾವರ್ಕರರ ಲೇಖನ, ಪುಸ್ತಕಗಳ ಅಧ್ಯಯನವನ್ನು ತಪದಂತೆ ಸ್ವೀಕರಿಸಿದರು. ರಾಮಾಯಣ, ಮಹಾಭಾರತದ ಆದರ್ಶಗಳು ಸ್ವಾತಂತ್ರ‍್ಯ ಚಳವಳಿಗೆ ಸ್ಫೂರ್ತಿ ತುಂಬಬೇಕೆಂಬ ಹಿನ್ನೆಲೆಯಲ್ಲಿ 'ಕಲ್ಯಾಣ್' ಪತ್ರಿಕೆಯನ್ನು ಆರಂಭಿಸಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಸ್ಥಳೀಯ ಭಾಷೆಯಲ್ಲಿ ಸರಳವಾಗಿ ಪುಸ್ತಕಗಳನ್ನು ರಚಿಸಿ, ವಿಷ್ಣು ದಿಗಂಬರ ಫಲುಸ್ಕರರ ಸಹಕಾರದಿಂದ ದೇಶಭಕ್ತಿ-ದೇವಭಕ್ತಿಯ 'ಪತ್ರಪುಷ್ಪ' ಸಂಕಲನವನ್ನೂ ಹೊರತಂದರು. ಎಲ್ಲವೂ ಇದ್ದು ಅನಾಥರಂತೆ ಬಾಳುವ ಭಾರತೀಯರ ಆಧ್ಯಾತ್ಮಶೂನ್ಯ ಬದುಕನ್ನು ಕಂಡು ಮರುಗಿದ ಪೊದ್ದಾರ್, ಸಮಾನ ಮನಸ್ಕರೊಡಗೂಡಿ ಆರಂಭಿಸಿದ ಗೀತಾಪ್ರೆಸ್, ಗೋರಖಪುರ ಅತ್ಯಂತ ಕಡಿಮೆ ಬೆಲೆಗೆ ಹಿಂದೂ ಸಂಸ್ಕೃತಿಯ ಸಾರಸರ್ವಸ್ವವನ್ನು ಕೃತಿರೂಪದಲ್ಲಿ ಪ್ರಕಟಿಸಲು ಕಟಿಬದ್ಧ ಸಂಸ್ಥೆ. ತಮ್ಮ ಜೀವನವನ್ನು ತತ್ವಪ್ರಸಾರಕ್ಕಾಗಿಯೇ ಮುಡಿಪಿಟ್ಟು ಪೂಜಾವಿಧಿ, ಉಪಾಸನೆ, ಮಂತ್ರ, ಗೀತೆ, ಪುರಾಣ ಯಾವುದನ್ನೂ ಬಿಡದಂತೆ ಜ್ಞಾನಭಂಡಾರದ ಕೀಲಿಕೈಯನ್ನು ಭಾರತೀಯರಿಗಿತ್ತರು. ಸುಮಾರು ಇಪ್ಪತ್ತೈದು ಸಾವಿರಕ್ಕೂ ಅಧಿಕ ಪುಟಗಳ ಬೃಹತ್ ಸಾಹಿತ್ಯ ರಚಿಸಿದ ಪೊದ್ದಾರ್ ವಿದ್ವತ್ತು ಋಷಿಮುನಿಗಳಿಗಿಂತ ಕಡಿಮೆಯಿಲ್ಲವೆಂಬ ಪ್ರಶಂಸೆಯೇ ಅವರ ಮೇಧಾಶಕ್ತಿಗೆ ಸಾಕ್ಷಿ. ಮನೆಮನಗಳಲ್ಲಿ ಧಾರ್ಮಿಕ ಭಾವನೆ ಮೂಡಿ ರಾಷ್ಟ್ರೀಯತೆಯ ಕಲ್ಪನೆ ಹಾಗೂ ದೇಸೀಭಾವದ ಉದಯಕ್ಕೂ ಗೀತಾಪ್ರೆಸ್ ಸಾಕ್ಷಿಯಾದುದು ಪೊದ್ದಾರರ ಶ್ರಮ, ಕರ್ತವ್ಯನಿಷ್ಠೆಗೆ ಉದಾಹರಣೆ. ವಿದ್ವಾಂಸರಿಂದ ಮೌಲಿಕ ಲೇಖನಗಳನ್ನು ಬರೆಯಿಸಿ ಎಳೆಯ ಮಕ್ಕಳಲ್ಲಿ ಸಂಸ್ಕಾರ ಮೂಡಿಸಲು ಬಹುಮುಖ್ಯ ಪಾತ್ರವಹಿಸಿದ ಪೊದ್ದಾರ್ ಹೆಸರು 'ಭಾರತ ರತ್ನ' ಪ್ರಶಸ್ತಿಗೆ ಚರ್ಚೆಯಾದಾಗ ಅದನ್ನು ನಯವಾಗಿಯೇ ತಿರಸ್ಕರಿಸಿ ಧರ್ಮದ ಸೇವೆಗೆ ಭಗವಂತನ ಕೃಪೆಗಿಂತ ಮಿಗಿಲಾದ ಪ್ರಶಸ್ತಿ ಬೇಕಿಲ್ಲವೆಂದು ಮೇಲ್ಪಂಕ್ತಿ ಹಾಕಿದರು. ೧೯೭೧ರ ಮಾರ್ಚ್ ಇಪ್ಪತ್ತೆರಡರಂದು ಇಹಲೋಕದ ವ್ಯಾಪಾರ ಮುಗಿಸಿದ ಆಧ್ಯಾತ್ಮಸೂರ್ಯನ ಬದುಕು ನಾಡಿಗೆ ಬೆಳಕು.
ಕಲೆಯ ಮೂಲಕ ಭಗವಂತನನ್ನು ಆರಾಧಿಸಿ, ಅನುಗ್ರಹೀತರಾದ ಲಕ್ಷಾಂತರ ಸಾಧಕರ ಬೀಡು ಭಾರತ. ಎಲ್ಲವೂ ಭಗವದರ್ಪಿತವೆಂಬ ಭಾವದೊಂದಿಗೆ ಮತದ ಎಲ್ಲೆ ಮೀರಿ ಕಲಾಸರಸ್ವತಿಯ ಸೇವೆಗೈದ ಮಹಾಮಹಿಮ ಶಹನಾಯಿ ಮಾಂತ್ರಿಕ ಬಿಸ್ಮಿಲ್ಲಾ ಖಾನ್, ಭಾರತ ರತ್ನ ಪುರಸ್ಕೃತ ಕಲಾಮಾಣಿಕ್ಯ. ಮುತ್ತಜ್ಜನ ಕಾಲದಿಂದಲೂ ರಾಜಾಸ್ಥಾನದಲ್ಲಿ ಸಂಗೀತ ಸಮಾರಾಧನೆಗೈಯುತ್ತಿದ್ದ ಬಿಹಾರದ ಪಂಡಿತ ಪರಂಪರೆಯ ಬಕ್ಷ್ ಖಾನ್ ದಂಪತಿಗೆ ೧೯೧೬ರ ಮಾರ್ಚ್ ೨೧ರಂದು ಜನಿಸಿದ ಬಿಸ್ಮಿಲ್ಲಾ ಖಾನ್, ಸುಸ್ವರ ಸಂಗೀತದ ವಾತಾವರಣದಲ್ಲೇ ತಮ್ಮ ಬೆರಗಿನ ಬಾಲ್ಯವನ್ನು ಕಳೆದರು. ದೊಡ್ಡಪ್ಪ, ಅಪ್ಪ, ಸೋದರಮಾವನ ಪ್ರಭಾವ ಹಾಗೂ ಸಹಕಾರದಿಂದ ಆರನೆಯ ವಯಸ್ಸಿಗೆ ಆಧ್ಯಾತ್ಮ ರಾಜಧಾನಿ ವಾರಾಣಸಿಗೆ ತೆರಳಿದ ಖಾನ್ ಮತ್ತೆಂದೂ ಕಾಶಿ ವಿಶ್ವನಾಥನ ಸನ್ನಿಧಾನದಿಂದ ದೂರಾಗಲಿಲ್ಲ. ಸಂಬಂಧಿಯ ನಿರಂತರ ಬೆಂಬಲ, ಸಾಧಿಸಬೇಕೆಂಬ ಹುಮ್ಮಸ್ಸು, ಕಲಾಕ್ಷೇತ್ರದೆಡೆಗಿನ ಒಲವು ಸಂಗೀತ ಕಛೇರಿ ನೀಡುವವರೆಗೆ ವಿಸ್ತರಿಸಿತು. ಶಹನಾಯಿ ವಾದನದಲ್ಲಿ ಪರಿಣತಿ ಸಾಧಿಸಿ ಶಾಲಾ ಸಮಾರಂಭಗಳಿಗೆ, ಮದುವೆ ಕಾರ್ಯಕ್ರಮಗಳಿಗೆ, ಸ್ವಾಗತ ಸಂಪ್ರದಾಯಗಳಿಗಷ್ಟೇ ಮೀಸಲಾಗಿದ್ದ ವಾದನಕ್ಕೆ ಹೊಸರೂಪು ನೀಡಲು ಕಟಿಬದ್ಧರಾದರು. ನೋಡನೋಡುತ್ತಿದ್ದಂತೆ ಶಹನಾಯಿಯನ್ನು ಪ್ರಸಿದ್ಧಗೊಳಿಸಿ ಪ್ರಯೋಗಗಳಲ್ಲೂ ನಿರತರಾದ ಖಾನ್ ಸಂಗೀತಸುಧೆ ದೇಶವಿದೇಶಗಳಿಗೆ ಹರಿಯಿತು. ಕೆಂಪುಕೋಟೆಯಲ್ಲಿ ಮಾರ್ದನಿಸಿದ ಶಹನಾಯಿಯ ನಾದಮಾಧುರ್ಯ ಬಿಸ್ಮಿಲ್ಲಾ ಖಾನ್‌ರ ಕೀರ್ತಿಗೌರವವನ್ನು ನೂರ್ಮಡಿಗೊಳಿಸಿತು. ವಿದೇಶಗಳಲ್ಲೂ ಸಾವಿರಾರು ಅಭಿಮಾನಿಗಳನ್ನು ಹೊಂದಿ ಜಾಗತಿಕ ಪ್ರಶಂಸೆಗೆ ಪಾತ್ರರಾಗಿ ಖಾಯಂ ನಿವಾಸಿಯಾಗುವ ಅವಕಾಶ ಲಭಿಸಿದರೂ, ಅವೆಲ್ಲವನ್ನೂ ನಯವಾಗಿಯೇ ತಿರಸ್ಕರಿಸಿ, 'ಗಂಗಾತೀರವನ್ನು ಬಿಟ್ಟು, ಕಾಶಿಯ ಆರಾಧ್ಯದೈವ ವಿಶ್ವನಾಥನನ್ನು ಮರೆತು, ಭಾರತವೆಂಬ ಸ್ವರ್ಗತುಲ್ಯ ದೇಶವನ್ನು ಮರೆಯುವುದು ಅಸಾಧ್ಯದ ಮಾತು' ಎಂದುತ್ತರಿಸಿದ ಬಿಸ್ಮಿಲ್ಲಾ ಖಾನರ ರಾಷ್ಟ್ರನಿಷ್ಠೆ ಅತ್ಯುತ್ಕೃಷ್ಟ.
ಶ್ರೀಮಂತರ ಮನೆಗಳು, ದೇವಸ್ಥಾನ, ಪ್ರಾಸಾದಗಳ ಅಂಗಣ ದಾಟದ ಶಹನಾಯಿಗೆ ವಿಶ್ವದರ್ಜೆಯ ಗೌರವ ಲಭಿಸುವಲ್ಲಿ ಬಿಸ್ಮಿಲ್ಲಾ ಖಾನರ ಪಾತ್ರ ಅಪಾರ. ಒಂದೊಂದು ಸಂಗೀತ ಸಹಮಿಲನ ಕಾರ್ಯಕ್ರಮಗಳಲ್ಲೂ 'ಶಹನಾಯಿ ಸರಸ್ವತಿಯೇ ಅನುಗ್ರಹಿಸಿದ ವಾದ್ಯ'ವೆಂದು ವಿನೀತರಾಗಿ ನುಡಿದು ತನ್ನ ಪ್ರಸಿದ್ಧಿ ಮಾನ್ಯತೆಗಳೆಲ್ಲವೂ ದೇವರ ದಯೆಯೇ ಹೊರತು ಮಾನವ ಪರಿಶ್ರಮವಲ್ಲವೆಂದ ಭಾವಜೀವಿ ಬಿಸ್ಮಿಲ್ಲಾರು ಜನಸಾಮಾನ್ಯರಿಗೆ ಸುಲಭದಲ್ಲಿ ಎಟುಕಿದ್ದು ಅವರ ಆಪ್ತತೆಯಿಂದಲೇ. ಒಂದೊಮ್ಮೆ ಪ್ರಾಕೃತಿಕ ವಿಕೋಪಗಳಿಂದ ಜಗತ್ತೇ ಅಂತ್ಯವಾದರೂ ಸಂಗೀತ ಅವಿನಾಶಿಯೆಂದು ಸಾರಿದ ಬಿಸ್ಮಿಲ್ಲಾ ಖಾನ್ ಮತಜಂಜಾಟದಿಂದ ಸದಾ ಹಿಂದೆ. ಜನ್ಮಮುಸಲ್ಮಾನರಾಗಿ, ಕರ್ಮಹಿಂದುವಾಗಿದ್ದ ಖಾನ್ ನಡೆಯನ್ನು ಪ್ರಶ್ನಿಸಿದ ವಿತಂಡವಾದಿಗಳ ಅಹಂಕಾರಕ್ಕೆ ಔದಾಸೀನ್ಯದ ಮದ್ದರೆದ ಸಂಗೀತೋಪಾಸಕನ ಬದುಕು ಸರಳ. ಸೈಕಲ್ ಪ್ರಯಾಣ, ನಿಯಮಿತ ಶುದ್ಧ ಆಹಾರ, ನಿತ್ಯ ದೇವದರ್ಶನದಿಂದ ಸಾತ್ವಿಕ ಜೀವನ ನಡೆಸಿದ ಖಾನರ ಗರಡಿಯಲ್ಲಿ ನೂರಾರು ವಿದ್ಯಾರ್ಥಿಗಳು ಬೆಳೆದರು. ಬನಾರಸ್ ವಿಶ್ವವಿದ್ಯಾಲಯ, ವಿಶ್ವಭಾರತಿ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್, ಪದ್ಮಪ್ರಶಸ್ತಿ ಸರಣಿ, ಭಾರತ ರತ್ನ ಸಹಿತ ಜಾಗತಿಕ ಮಾನಸಮ್ಮಾನಗಳಿಗೆ ಪಾತ್ರರಾದ ಬಿಸ್ಮಿಲ್ಲಾ, ಹುತಾತ್ಮ ಯೋಧರಿಗೆ ಸಂಗೀತ ನಮನ ಸಲ್ಲಿಸುವ ಕನವರಿಕೆಯೊಂದಿಗೆಯೇ ೨೦೦೬ರ ಆಗಸ್ಟ್ ೨೧ರಂದು ಶಿವಪಾದ ಸೇರಿದರು. ಕಲೆಯನ್ನು ತಮ್ಮ ವೈಯಕ್ತಿಕ ಸುಖಾಪೇಕ್ಷೆಗಳ ಪೂರೈಕೆಗೆ ಉಪಯೋಗಿಸದೆ, ವೈಭೋಗದ ಜೀವನಕ್ಕೆ ಮೆಟ್ಟಿಲಾಗಿಸದೆ, ಕಲೆ ಆತ್ಮವಿಕಾಸದ ಹೆದ್ದಾರಿಯೆಂದು ಘೋಷಿಸಿದ ಸಂಗೀತಸಂತನ ಬದುಕು ಸದಾ ಸ್ಫೂರ್ತಿ.
ಬಹುತ್ವವೆಂಬುದು ಭಾರತದ ಆಂತರ್ಯ. ಆ ಶಕ್ತಿಯ ಜಾಗೃತಿಗಾಗಿ ಕಲೆಯನ್ನು ಮಾಧ್ಯಮವನ್ನಾಗಿಸಿದ ಮಹಾಮಹಿಮರನ್ನು ನೆನೆಯುವುದು ಮತ್ತು ಆ ಆದರ್ಶವನ್ನು ಅನುಸರಿಸುವುದು ಕಾಲದ ಅಪೇಕ್ಷೆ.