ಭಾರತ-ಚೀನಾ ಸ್ನೇಹ ಸಂಬಂಧ ಮೊದಲ ಹೆಜ್ಜೆ
ಪೂರ್ವ ಲಡಾಖ್‌ನಲ್ಲಿ ಭಾರತ-ಚೀನಾ ಎರಡೂ ದೇಶದ ಸೈನಿಕರು ಗಡಿಯಲ್ಲಿ ಒಟ್ಟಿಗೆ ಗಸ್ತು ತಿರುಗಲು ಒಪ್ಪಿರುವುದು ಎರಡೂ ದೇಶಗಳ ನಡುವೆ ಇರುವ ವೈಷಮ್ಯ ಕಡಿಮೆಯಾಗಿ ಸ್ನೇಹ ಸಂಬಂಧ ಬೆಳೆಯಲು ಮೊದಲ ಹೆಜ್ಜೆಯಾಗಿದೆ. ಇದನ್ನು ಎರಡೂ ದೇಶದವರು ಬಹಳ ಎಚ್ಚರಿಕೆಯಿಂದ ಸ್ವಾಗತಿಸಿದ್ದಾರೆ. ಇದರಿಂದ ಎಲ್ಲ ವಿವಾದ ತತ್‌ಕ್ಷಣ ಬಗೆಹರಿಯುವುದಿಲ್ಲ. ಆದರೆ ಮುಂದಿನ ಹೆಜ್ಜೆ ಇಡಲು ಅನುಕೂಲವಾಗಲಿದೆ ಎಂದು ಎರಡೂ ದೇಶಗಳ ರಾಜತಾಂತ್ರಿಕ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಬ್ರಿಕ್ಸ್ ಸಮಾವೇಶದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ದ್ವಿಪಕ್ಷೀಯ ಮಾತುಕತೆಗೆ ಇಂಬು ಕೊಟ್ಟಿದೆ. ಜೂನ್ ೨೦೨೦ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾ-ಭಾರತ ಸೈನಿಕರ ನಡುವೆ ಮುಷ್ಠಿ ಕಾಳಗ ನಡೆದು ೨೦ ಭಾರತೀಯ ಸೈನಿಕರು, ೪ ಚೀನಾ ಸೈನಿಕರು ಬಲಿಯಾದರು. ಆಮೇಲೆ ೨೧ ಸುತ್ತಿನ ಮಿಲಿಟರಿ ಅಧಿಕಾರಗಳ ಮಾತುಕತೆ, ೩೧ ಸುತ್ತಿನ ಅಧಿಕಾರಿಗಳ ಸಭೆ ನಡೆದು ಕೊನೆಗೆ ವಾಸ್ತವ ಗಡಿ ರೇಖೆಯಲ್ಲಿ ಎರಡು ದೇಶಗಳ ಸೈನಿಕರು ಗಸ್ತು ತಿರುಗಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿ ತಿಂಗಳು ಎರಡೂ ದೇಶಗಳ ನಡುವೆ ಮಾತುಕತೆ ನಡೆಸಲು ತೀರ್ಮಾನಿಸಲಾಗಿದೆ. ಈ ಕ್ರಮವನ್ನು ಎಲ್ಲರೂ ಎಚ್ಚರಿಕೆಯ ಮಾತುಗಳೊಂದಿಗೆ ಸ್ವಾಗತಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಖಚಿತತೆ ಮೂಡಲಿದೆ. ಜೂನ್ ೨೦ರಿಂದ ಭಾರತ ದ್ವಿಪಕ್ಷೀಯ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಬೇಕೆಂದು ಹೇಳುತ್ತ ಬಂದಿತ್ತು. ಗಡಿಯಲ್ಲಿ ದ್ವೇಷಮಯ ವಾತಾವರಣ ಕಂಡು ಬಂದಿದ್ದರಿಂದ ಎರಡು ದೇಶಗಳ ನಡುವ ವೈಮಾನಿಕ ಸಂಪರ್ಕ, ವ್ಯಾಪಾರ ಸಂಬಂಧಗಳು ನಿಂತು ಹೋಗಿತ್ತು. ಚೀನಾದ ಮೂಲದ ಆಪ್‌ಗಳನ್ನು ಭಾರತ ನಿಷೇಧಿಸಿತ್ತು. ಈಗ ಇದಕ್ಕೆ ಜೀವ ಬರಬಹುದು ಎಂದು ನಿರೀಕ್ಷಿಸಲಾಗಿದೆ.
ಎರಡೂ ದೇಶದ ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ಹೆಜ್ಜೆಯನ್ನಿಡಲು ತೀರ್ಮಾನಿಸಿದ್ದಾರೆ. ಚೀನಾ ನೇರ ವೈಮಾನಿಕ ಸಂಪರ್ಕ ಬಯಸಿದೆ. ಭಾರತವೇ ಇದಕ್ಕೆ ಇನ್ನೂ ಒಪ್ಪಿಲ್ಲ. ಅದೇರೀತಿ ಭಾರತ ಅತಿ ಹೆಚ್ಚು ಚೀನಾ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಅದೆಲ್ಲ ಈಗ ನಿಂತು ಹೋಗಿದೆ. ಶೇಕಡ ೫೬ ರಷ್ಟು ಆಮದು ಚೀನಾವಸ್ತುಗಳು ಎಂಬುದು ಗಮನಾರ್ಹ. ಅದರಲ್ಲೂ ಭಾರತ ಸ್ಮಾರ್ಟ್ ಫೋನ್, ಸೋಲಾರ್ ಫಲಕ ಮತ್ತು ಔಷಧಗಳ ತಯಾರಿಕೆ ಹೆಚ್ಚಿಸಬೇಕು ಎಂದರೆ ಚೀನಾದ ನೆರವು ಬೇಕೇ ಬೇಕು. ಇದಕ್ಕಾಗಿ ಎರಡೂ ದೇಶದ ಉದ್ಯಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ವಿದೇಶಾಂಗ ಸಚಿವಾಲಯ ಮಾತ್ರ ಇನ್ನೂ ಚಕಾರ ಎತ್ತಿಲ್ಲ.
ಈಗ ದೇಪಸಾಂಗ್ ಮತ್ತು ದೆಮ್ಚೋಕ್ ಪ್ರದೇಶದಲ್ಲಿ ಎರಡೂ ದೇಶಗಳ ಸೈನಿಕರು ಗಡಿಯಲ್ಲಿ ಗಸ್ತು ತಿರುಗಲಿದ್ದಾರೆ ಎಂಬುದು ಭಾರತದ ದೃಷ್ಟಿಯಿಂದ ಅಗತ್ಯ ಎಂದು ಬಣ್ಣಿಸಲಾಗಿದೆ. ದೇಪಸಾಂಗ್ ಬಯಲು ಪ್ರದೇಶ ಇದ್ದಂತೆ. ದೆಮ್ಚೋಕ್ ಸಿಂಧು ನದಿಗೆ ಸಮೀಪ ಇದೆ. ಪೂರ್ವ ಲಡಾಖ್ ಆಯಕಟ್ಟಿನ ಸ್ಥಳದಲ್ಲಿದ್ದು ಭಾರತ ಮತ್ತು ಚೀನಾ ನಡುವೆ ೩೪೪೦ ಕಿಮೀ ಗಡಿ ಇದೆ. ಇಲ್ಲಿ ನಿಕರವಾಗಿ ಗಡಿಯನ್ನು ಗುರುತಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕಳೆದ ೪ ವರ್ಷಗಳಿಂದ ಎರಡೂ ದೇಶಗಳ ನಡುವೆ ಮಾತುಕತೆ ಮುಂದುವರಿದಿತ್ತು. ತಾಳಿದವನು ಬಾಳಿಯಾನು ಎಂಬಂತೆ ಭಾರತದ ತಾಳ್ಮೆ ಈಗ ಫಲ ನೀಡಿದೆ. ಚೀನಾ ಬಹಳ ಎಚ್ಚರಿಕೆಯಿಂದ ಹೆಜ್ಜೆಯನ್ನಿಡಲು ಒಪ್ಪಿದೆ.
ಈಗ ಈ ಒಪ್ಪಂದ ಏರ್ಪಡಲು ಹಲವು ಕಾರಣಗಳಿವೆ ಎಂದು ರಾಜತಾಂತ್ರಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಚೀನಾ ತಾನು ಆಕ್ರಮಿಸಿಕೊಂಡ ಸ್ಥಳವನ್ನೂ ಎಂದೂ ಬಿಟ್ಟುಕೊಟ್ಟಿಲ್ಲ. ಈಗ ಮಾತುಕತೆಗೆ ಒಪ್ಪಿರುವುದು ಹೊಸ ಬೆಳವಣಿಗೆ ಎಂದು ಹಲವರು ಹೇಳಿದ್ದಾರೆ. ಈಗ ಚಳಿಗಾಲ ಆರಂಭವಾಗಲಿದ್ದು, ಆ ಪ್ರದೇಶದಲ್ಲಿ ಮನುಷ್ಯರು ಕಾಲಿಡುವುದೇ ಕಷ್ಟ. ಅದಕ್ಕಾಗಿ ಈಗ ಒಪ್ಪಂದ ಎಂದು ಹೇಳುವವರೂ ಇದ್ದಾರೆ. ಅಲ್ಲದೆ ಅಮೆರಿಕದ ಅಧ್ಯಕ್ಷರ ಚುನಾವಣೆ ಫಲಿತಾಂಶ ಇದರ ಮೇಲೆ ಪರಿಣಾಮ ಬೀರಲಿದೆ. ಅಮೆರಿಕದ ಅಧ್ಯಕ್ಷರು ಯಾರೇ ಬಂದರು ಚೀನಾದೊಂದಿಗೆ ಸ್ನೇಹ ಬಯಸುವುದಿಲ್ಲ. ಭಾರತ ಅಮೆರಿಕದೊಂದಿಗೆ ಸೇರದಂತೆ ಮಾಡುವ ತಂತ್ರವೂ ಇದರಲ್ಲಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಚೀನಾ ವಸ್ತುಗಳು ಅಮೆರಿಕಕ್ಕೆ ಲಗ್ಗೆ ಹಾಕುವುದನ್ನು ತಪ್ಪಿಸುವುದು ಟ್ರಂಪ್ ಸೇರಿದಂತೆ ಹಲವರ ಗುರಿ. ಅದಕ್ಕಾಗಿ ಭಾರತದ ಮಾರುಕಟ್ಟೆ ಪ್ರವೇಶಿಸಲು ಚೀನಾ ಬಯಸಿದೆ. ಭಾರತಕ್ಕೆ ಕೂಡ ಚೀನಾದ ನೆರವು ಬೇಕು. ಈ ದೃಷ್ಟಿಯಿಂದ ಎರಡೂ ದೇಶಗಳು ಒಂದಾಗಲು ಬಯಸಿದೆ ಎಂದು ಹಲವು ತಜ್ಞರು ನಿರೀಕ್ಷಿಸಿದ್ದಾರೆ. ಎರಡೂ ದೇಶಗಳ ರಾಜತಾಂತ್ರಿಕರ ಕಣ್ಣು ವ್ಯಾಪಾರ ವಹಿವಾಟಿನ ಮೇಲಿದೆ. ಗಡಿ ಸಮಸ್ಯೆ ನೆಪ ಮಾತ್ರ. ಮುಂಬರುವ ದಿನಗಳಲ್ಲಿ ವಾಣಿಜ್ಯ ಸಂಬಂಧ ಉತ್ತಮಪಡಿಸುವ ಕಡೆ ಗಮನಹರಿಯುವುದು ಸಹಜ.