For the best experience, open
https://m.samyuktakarnataka.in
on your mobile browser.

ಭಾರತ ಭಾಗ್ಯ ವಿಧಾತ ಭುವನದ ಭಾಗ್ಯ

01:57 AM Sep 30, 2024 IST | Samyukta Karnataka
ಭಾರತ ಭಾಗ್ಯ ವಿಧಾತ ಭುವನದ ಭಾಗ್ಯ

ಸತ್ಯವೆಂಬ ಹಾಲಿಗೆ ಸತ್ವವೆಂಬ ಜೇನನ್ನು ಬೆರೆಸಿದರೆ ಸೃಷ್ಟಿಯಾಗುವುದು ಮೈಮನಗಳಿಗೆ ಮಧುರವಾದ ಪೇಯ; ಇದು ಹಿತಕರವೂ ಹೌದು ಆರೋಗ್ಯಕರವೂ ಹೌದು. ಇದೊಂದು ನೈಸರ್ಗಿಕ ಸೃಷ್ಟಿ. ಇದಲ್ಲದೆ ಇಂತಹ ಮಧುರವಾದ ಪೇಯಕ್ಕೆ ವಿಚಾರವೆಂಬ ನೇಮ ಹಾಗೂ ಆಚಾರವೆಂಬ ನಿಷ್ಠೆ ಜೊತೆಗೂಡಿದರೆ ಅದೊಂದು ನಿಜಕ್ಕೂ ಭುವನದ ಭಾಗ್ಯ ಎನಿಸುವಂತಹ ವ್ಯಕ್ತಿತ್ವ. ನಿರ್ದಾಕ್ಷಿಣ್ಯವಾಗಿ ಹಾಗೂ ಹೆಮ್ಮೆಯಿಂದ ಹೇಳಬಹುದಾದರೆ ಭಾರತದ ರಾಷ್ಟ್ರಪಿತ ಮಹಾತ್ಮಗಾಂಧಿ ಇಂತಹ ಭುವನದ ಭಾಗ್ಯದಂತಹ ವ್ಯಕ್ತಿತ್ವ.
ಗುಜರಾತಿನ ಫೋರಬಂದರಿನಲ್ಲಿ ಮೋಹನದಾಸ ಕರಮಚಂದ್ ಗಾಂಧಿಯಾಗಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಓದಿ ಬೆಳೆದ ನಂತರ ಬದುಕುವ ದಾರಿಯನ್ನು ಅರಸಿ ದಕ್ಷಿಣ ಆಫ್ರಿಕಾದಲ್ಲಿ ನೆಲೆಯೂರಲು ಹೊರಟಾಗ ಸ್ವಾಭಿಮಾನ, ಸ್ವಾತಂತ್ರ್ಯ ಹಾಗೂ ಸಮಾನತೆಯ ಅಂಶಗಳು ಮನುಷ್ಯನಿಗೆ ನಿರ್ಣಾಯಕ ಎಂಬುದು ಅನುಭವ ವೇದ್ಯವಾದ ಮೇಲೆ ಕಠೋರ ತಪಸ್ಸಿನ ರೀತಿಯಲ್ಲಿ ಕೈಗೊಂಡ ಹೋರಾಟ ಹಾಗೂ ಸತ್ಯಾಗ್ರಹಗಳ ಪರಿಣಾಮವಾಗಿ ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ ರಾಷ್ಟ್ರಪತಿ ಎಂಬ ಗೌರವಕ್ಕೂ ಪಾತ್ರವಾದದ್ದು ಅಖಂಡ ಭಾರತ ವಿಭಜನೆಯಾಗಿ ನಂತರ ನರಳಿ ಹಂತ ಹಂತವಾಗಿ ಅರಳಿದ ರೋಚಕ ಕಥೆ. ಗಾಂಧಿ ಮಹಾತ್ಮ ಎಂಬುದು ಈಗಿನ ಮಟ್ಟಿಗೆ ಭಾರತ ಮೂಲದ ಒಂದು ಜಾಗತಿಕ ಹೆಗ್ಗುರುತು. ಸತ್ಯ ಧರ್ಮಗಳ ಮೂಲಕ ಮನುಷ್ಯತ್ವವನ್ನು ಸಾಕ್ಷಾತ್ಕಾರ ಮಾಡಿಕೊಂಡು ಕೂಡಿಬಾಳಿದರೆ ಸ್ವರ್ಗ ಸುಖ ಎಂಬ ಅನುಭವವೇದ್ಯ ದಿವ್ಯ ಮಂತ್ರವನ್ನು ಭಾರತೀಯರಿಗೆ ಕೊಡುಗೆಯಾಗಿ ನೀಡಿರುವುದು ಬತ್ತಲಾರದ ಹೃದಯ ಶ್ರೀಮಂತಿಕೆಯ ಬತ್ತಳಿಕೆ.
ಗಾಂಧಿ ಮಹಾತ್ಮ ಎಂಬ ವ್ಯಕ್ತಿಯೇ ಇಲ್ಲದಿದ್ದರೆ ಭಾರತೀಯ ಉಪ ಖಂಡ ಹೇಗಿರುತ್ತಿತ್ತು ಎಂಬುದನ್ನು ಊಹಿಸಿಕೊಳ್ಳುವುದೇ ಕಷ್ಟ. ಅಖಂಡ ಭಾರತ ಬ್ರಿಟಿಷರ ದಾಸ್ಯ ಸಂಕೊಲೆಯಿಂದ ಬಿಡುಗಡೆಯಾಗುವ ಹೊತ್ತಿಗೆ ವಿಭಜನೆಯಾದ ನಂತರವೂ ಈ ಪ್ರದೇಶದಲ್ಲಿ ಸತ್ತ ಮಹಾತ್ಮರ ನೆರಳಿನಂತೆ ವೈಚಾರಿಕವಾಗಿ ತಂಪೆರೆಯುತ್ತಿರುವ ಅನುಭವವಾಗಲು ಬೇಕಾದದ್ದು ಜನತಂತ್ರದ ಎಲ್ಲರನ್ನೂ ಒಳಗೊಳ್ಳುತ್ತಲೇ ವಿಶಿಷ್ಟವಾದದ್ದನ್ನು ಸಾಧಿಸುವ ಗುಣ.
ನಿಜ. ಕಾಲದ ಬದಲಾವಣೆಗೆ ಅನುಗುಣವಾಗಿ ಗಾಂಧಿ ಮಹಾತ್ಮರ ಧ್ಯೇಯೋದ್ದೇಶಗಳು ಕೂಡಾ ಬದಲಾಗಬೇಕು. ಹಾಗೆಂದಾಕ್ಷಣ ಗಾಂಧಿ ತತ್ವಗಳು ಬದಲಾಗಬೇಕು ಎಂದಲ್ಲ. ಆಚರಣೆಯ ವಿಚಾರದಲ್ಲಿ ಬದುಕಿನ ಪರಿಪಾಠಗಳು ಕಾಲಾನುಕ್ರಮದಲ್ಲಿ ಪಡಿಪಾಟಲಿನ ರೂಪ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ತಲೆಮಾರಿನ ದೃಷ್ಟಿಕೋನಕ್ಕೆ ಹೊಂದುವ ರೀತಿಯಲ್ಲಿ ಸುಧಾರಣೆ ಆಗಬೇಕು ಎಂಬುದಷ್ಟೆ ಇದರ ವಿವರಣೆ. ಸಾಮಾನ್ಯರಲ್ಲಿ ಸಾಮಾನ್ಯನನ್ನು ಕೇಂದ್ರಬಿಂದುವಾಗಿಸಿದರೆ ಆಗ ಸಾಮಾಜಿಕ ಸುಧಾರಣೆ ಹೊಸ ದಾರಿ ಕಂಡುಕೊಂಡು ಇಡೀ ಸಾಮಾಜಿಕ ವ್ಯವಸ್ಥೆಯಲ್ಲಿ ಆತ್ಮವಿಶ್ವಾಸದ ಕಳೆ ಉಕ್ಕಿದಾಗ ದೇಶದಲ್ಲಿ ಹೊಸ ಆಸೆ-ಹೊಸ ಭಾಷೆಗಳ ಕಾಲ ಆರಂಭವಾಗುವುದು ನಿಶ್ಚಿತ ಎಂಬ ಭವಿಷ್ಯವಾಣಿಯನ್ನು ನಾನಾ ರೂಪದಲ್ಲಿ ಪ್ರತಿಪಾದಿಸಿದ್ದ ಗಾಂಧೀಜಿ ಈಗ ಸದ್ದು ಗದ್ದಲಗಳ ನಡುವೆಯೂ ಪ್ರಸ್ತುತವಾಗಿರಲು ಕಾರಣ ಅವರ ದೂರದೃಷ್ಟಿಯ ಚಿಂತನಾಕ್ರಮ. ದೇಶ ಮೊದಲು-ಉಳಿದದ್ದು ನಂತರ ಎಂಬುದನ್ನು ಮೊದಲು ಮನವರಿಕೆ ಮಾಡಿಕೊಟ್ಟ ಮಹಾತ್ಮ ಅವರು.
ಇಂತಹ ಮಹಾತ್ಮ ಉದಿಸಿದ ದಿನ ಅಕ್ಟೋಬರ್ ೨ ಜಾಗತಿಕವಾಗಿ ಒಂದು ಮಹತ್ವದ ದಿನ. ನೆಲ್ಸನ್ ಮಂಡೆಲಾ, ಮಾರ್ಟಿನ್ ಲೂಥರ್ ಕಿಂಗ್ ಮೊದಲಾದ ಕ್ರಾಂತಿಕಾರಿ ನಾಯಕರು ರೂಪುಗೊಳ್ಳಲು ಪ್ರೇರಣೆಯಾಗಿದ್ದು ಗಾಂಧೀಜಿ. ಇನ್ನು ಭಾರತದಲ್ಲಿ ಗಾಂಧಿ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ದೇಶದ ರಥವನ್ನು ಎಳೆದವರು ಲೆಕ್ಕಕ್ಕೆ ಸಿಗದಷ್ಟು ಗಣ್ಯರು. ಇಷ್ಟೆಲ್ಲಾ ಮೆಚ್ಚುಗೆ ಅಭಿಮಾನಗಳ ನಡುವೆಯೂ ಕೂಡಾ ಟೀಕಾಕಾರರ ಕೂರಂಬಗಳು ಗಾಂಧಿ ಮಹಾತ್ಮನ ಕಡೆ ಗುರಿ ಇಡುವುದು ಇನ್ನೂ ನಿಂತಿಲ್ಲ. ಕೆಲವರಿಗೆ ವೈಚಾರಿಕ ದೃಷ್ಟಿಕೋನದಿಂದ ಗಾಂಧಿ ಅಪಥ್ಯ ಎನಿಸಿದರೆ ಇನ್ನು ಕೆಲವರಿಗೆ ಆಚಾರದ ದೃಷ್ಟಿಯಿಂದ ಅಪಥ್ಯ. ಆದರೆ, ಈ ಎರಡೂ ಬಣಗಳನ್ನು ನಿವಾಳಿಸುವ ರೀತಿಯಲ್ಲಿ ಅಭಿಮಾನಿಗಳ ಸಂಸರ್ಗ ಗಾಂಧಿ ಮಹಾತ್ಮನ ಆರಾಧಕರಾಗಿರುವ ಹಿಂದಿರುವುದು ನುಡಿದಂತೆ ನಡೆದು ದೇಶಕ್ಕೆ - ಜಗತ್ತಿಗೆ ಮಾದರಿಯಾಗಿರುವ ಬೆಳವಣಿಗೆ.
ಸ್ವಾತಂತ್ರ್ಯವೆಂಬುದು ಸಮಸ್ತ ಹೋರಾಟಗಾರರ ಗುರಿಯಾಗಿದ್ದ ಸಂದರ್ಭ. ಆದರೆ, ಗುರಿ ಮುಟ್ಟುವ ಮಾರ್ಗಗಳು ಮಾತ್ರ ಬೇರೆ ಬೇರೆ. ಇಂತಹ ದಿಕ್ಕೆಡುವ ಸಂದರ್ಭದಲ್ಲಿ ಎಲ್ಲಾ ಹೋರಾಟಗಾರರನ್ನು ಅಹಿಂಸಾತ್ಮಕ ಮಾರ್ಗದಲ್ಲಿ ಒಂದೇ ಮನಸ್ಸಿನಿಂದ ಹೋರಾಡಲು ಮನವರಿಕೆ ಮಾಡಿಕೊಟ್ಟದ್ದು ಸಾಮಾನ್ಯ ಸಾಧನೆಯಾಗದು. ಬೆಂಕಿಯ ಚೆಂಡಿನಂತಹ ನೇತಾಜಿ ಸುಭಾಷ್ ಚಂದ್ರಬೋಸ್, ಭಗತ್ ಸಿಂಗ್, ಖುದಿರಾಂ ಬೋಸ್, ಚಂದ್ರಶೇಖರ ಆಜಾದ್, ಸ್ವಾತಂತ್ರ್ಯ ನಮ್ಮ ಜನ್ಮಸಿದ್ದ ಹಕ್ಕು ಎಂದ ಬಾಲಗಂಗಾಧರ ತಿಲಕ್, ಲಾಲಾ ಲಜಪತರಾಯ್, ವೈಚಾರಿಕ ಪ್ರಖರತೆಯ ಬಿ.ಆರ್. ಅಂಬೇಡ್ಕರ್, ಗೋಪಾಲಕೃಷ್ಣ ಗೋಖಲೆ, ಸರೋಜಿನಿ ನಾಯ್ಡು ಅಬ್ದುಲ್ ಕಲಾಂ ಆಜಾದ್, ದಾದಾಬಾಯಿ ನವರೋಜಿ, ಜವಹರಲಾಲ್ ನೆಹರೂ, ವಲ್ಲಬಬಾಯಿ ಪಟೇಲ್ ಮೊದಲಾದ ಧೀಮಂತ ಚೈತನ್ಯಗಳನ್ನು ಒಂದೇ ದಾರಿಗೆ ಬರುವಂತೆ ಮಾಡಿ ಸ್ವಾತಂತ್ರö್ಯ ಪ್ರಾಪ್ತವಾಗುವಂತೆ ಮಾಡಿದ ಸೂತ್ರಧಾರತ್ವ ವಹಿಸಿದ ಗಾಂಧಿಯವರಿಗೆ ಮಹಾತ್ಮ ಗೌರವ ಸಿಕ್ಕಿದ್ದು ಎಲ್ಲಾ ದೃಷ್ಟಿಕೋನದಿಂದಲೂ ಸಮರ್ಥನೀಯ. ಗಾಂಧೀಜಿಯವರ ವ್ಯಕ್ತಿತ್ವವನ್ನು ಅರಿಯಬೇಕಾದರೆ ಅವರೇ ರಚಿಸಿರುವ ಮೈ ಲೈಫ್ ಇಸ್ಸ ಮೈ ಮೇಸೇಜ್' ಹಾಗೂಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರೂಥ್' ಕೃತಿಗಳ ಅಧ್ಯಯನ ಸಾಕಷ್ಟು ಮಾಹಿತಿಯನ್ನು ಒದಗಿಸುತ್ತದೆ.
ಈ ಬಾರಿಯ ಗಾಂಧಿ ಜಯಂತಿ ಕರ್ನಾಟಕದ ಮಟ್ಟಿಗೆ ವಿಶೇಷ ಸಂಭ್ರಮಕ್ಕೆ ಕಾರಣವಾಗಬಲ್ಲದು. ಏಕೆಂದರೆ, ಬೆಳಗಾವಿಯಲ್ಲಿ ೧೯೨೪ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಮಹಾಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದು ಗಾಂಧೀಜಿ ಎಂಬುದು ಮಹತ್ವದ ಸಂಗತಿ. ಶತಮಾನದ ನೆನಪನ್ನು ಅರಳಿಸುವ ಬೆಳಗಾವಿ ಅಧಿವೇಶನ ಕರ್ನಾಟಕಕ್ಕೆ ಶತಮಾನದ ಮೆರುಗನ್ನು ತಂದು ಕೊಟ್ಟಿದೆ.