For the best experience, open
https://m.samyuktakarnataka.in
on your mobile browser.

ಭಾರತ ಮಹಿಳಾ ತಂಡದ ಐತಿಹಾಸಿಕ ಸಾಧನೆ

11:55 PM Feb 18, 2024 IST | Samyukta Karnataka
ಭಾರತ ಮಹಿಳಾ ತಂಡದ ಐತಿಹಾಸಿಕ ಸಾಧನೆ

ಸೆಲಂಗೋರ್(ಮಲೇಷ್ಯಾ): ಇಲ್ಲಿ ನಡೆದ ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮಹಿಳಾ ಬ್ಯಾಡ್ಮಿಂಟನ್ ತಂಡವು ಪ್ರಶಸ್ತಿಯನ್ನು ಗೆದ್ದು ಹೊಸ ಇತಿಹಾಸ ನಿರ್ಮಿಸಿದೆ.
ಭಾನುವಾರ ಶಾ ಆಲಂ ಕೋರ್ಟ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ, ಥಾಯ್ಲೆಂಡ್ ತಂಡವನ್ನು ೩-೨ ರಿಂದ ಮಣಿಸಿ ಮೊಟ್ಟ ಮೊದಲ ಬಾರಿ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ಹಿರಿಮೆ ಮೆರೆಯಿತು.
ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಭಾರತ ತಂಡವು ಪ್ರತಿಷ್ಠಿತ ಏಷ್ಯನ್ ಟೀಮ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಪಡೆದಿರುವುದು ಇದೇ ಮೊಟ್ಟ ಮೊದಲ ಬಾರಿಯಾಗಿದೆ.
ಸಿಂಧು ಜಯಭೇರಿ
ಗಾಯದಿಂದ ವಾಪಸಾದ ನಂತರ, ಮೊದಲ ಪಂದ್ಯಾವಳಿಯನ್ನಾಡಿದ ಭಾರತದ ಪ್ರಮುಖ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು, ಸುಪಾನಿಂದಾ ಕಟೆಥಾಂಗ್ ಅವರನ್ನು ಕೇವಲ ೩೯ ನಿಮಿಷಗಳಲ್ಲಿ ೨೧-೧೨, ೨೧-೧೨ ಎರಡು ನೇರ ಗೇಮ್‌ಗಳಿಂದ ಸೋಲಿಸಿ ಭಾರತಕ್ಕೆ ೧-೦ ಮುನ್ನಡೆ ನೀಡಿದರು.
ಭಾರತದ ಗಾಯತ್ರಿ ಗೋಪಿಚಂದ್ ಮತ್ತು ಜಾಲಿ ಟ್ರೀಸಾ ಜೋಡಿಯು ಥೈಲ್ಯಾಂಡ್‌ನ ಜೋಂಗ್‌ಕೋಲ್ಫಾಮ್ ಕಿಟಿತಾರಾಕುಲ್ ಮತ್ತು ರಾವ್ವಿಂದಾ ಪ್ರಜೊಂಗ್ಜಲ್ ಜೋಡಿಯನ್ನು ಮೂರು ಗೇಮ್‌ಗಳ ಕಠಿಣ ಹೋರಾಟದಲ್ಲಿ ೨೧-೧೬, ೧೮-೨೧, ೨೧-೧೬ ಗೆದ್ದು ಭಾರತಕ್ಕೆ ೨-೦ ರ ಮುನ್ನಡೆ ನೀಡಿದರು.
ಗಾಯತ್ರಿ ಗೋಪಿಚಂದ್ ಮತ್ತು ಜಾಲಿ ಟ್ರೀಸಾ ಜೋಡಿ ಅಂತಿಮ ಗೇಮ್‌ನಲ್ಲಿ ೬-೧೧ ಅಂತರದಲ್ಲಿ ಹಿನ್ನಡೆ ಸಾಧಿಸಿದ್ದ ೫ ಪಂದ್ಯಗಳ ಟೈನ ಮೊದಲ ಡಬಲ್ ಪಂದ್ಯದಲ್ಲಿ ತಮ್ಮ ಆಕ್ರಮಣಕಾರಿ ಆಟದ ಮೂಲಕ ತಿರುಗೇಟು ನೀಡಿ ಥಾಯ್ಲೆಂಡ್ ಜೋಡಿಯನ್ನು ಸೋಲಿಸಿದರು.
ಅಶ್ಮಿತಾಗೆ ಸೋಲು
ಆದರೆ, ಜಪಾನ್ ವಿರುದ್ಧದ ಸೆಮಿಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ನೊಜೊಮಿ ಒಕುಹರಾ ಅವರನ್ನು ಸೋಲಿಸಿದ್ದ ಅಶ್ಮಿತಾ ಚಲಿಹಾ ೧೧-೨೧, ೧೪-೨೧ ರಿಂದ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ಕೈಯಲ್ಲಿ ಸೋಲು ಅನುಭವಿಸಿದರು.
ಎರಡನೇ ಡಬಲ್ಸ್ ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿದಾಗ ಸ್ಕೋರು ೨-೨ ರಿಂದ ಸಮ ಸ್ಥಿತಿಗೆ ತಲುಪಿತು.
ಆದರೆ ನಿರ್ನಾಯಕ ಎನಿಸಿದ್ದ ಐದನೇ ಪಂದ್ಯದಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ೪೭೨ನೇ ಸ್ಥಾನದಲ್ಲಿರುವ ೧೬ರ ಹರೆಯದ ಅನ್ಮೋಲ್ ಖರ್ಬ್ ಉತ್ತಮ ಆಟದ ಪ್ರದರ್ಶನ ನೀಡಿ, ವಿಶ್ವ ರ‍್ಯಾಂಕಿಂಗ್‌ನಲ್ಲಿ ೪೫ನೇ ಸ್ಥಾನದಲ್ಲಿರುವ ಪೋರ್ನ್ಪಿಚಾ ಚೋಯಿಕೀವಾಂಗ್ ಅವರನ್ನು ಎರಡು ನೇರ ಗೇಮ್‌ಗಳ ಆಟದಲ್ಲಿ ಸೋಲಿಸಿ ಭಾರತಕ್ಕೆ ಪ್ರತಿಷ್ಠಿತ ಪ್ರಶಸ್ತಿ ಲಭಿಸುವಲ್ಲಿ ಪ್ರಮುಖ ಪಾತ್ರವನ್ನಾಡಿದರು.
ಭಾರತ ಪ್ರತಿಷ್ಠಿತ ಥಾಮಸ್ ಕಪ್ ಗೆದ್ದ ಎರಡು ವರ್ಷಗಳ ನಂತರ, ಭಾರತ ಮಹಿಳಾ ಬ್ಯಾಡ್ಮಿಂಟನ್ ತಂಡವು ಏಷ್ಯನ್ ಪಂದ್ಯಾವಳಿಯಲ್ಲಿ ಸೊಗಸಾಗಿ ಆರಂಭಿಸಿತು. ಚೀನಾ, ಹಾಂಗ್ ಕಾಂಗ್, ಜಪಾನ್ ಮತ್ತು ಫೈನಲ್‌ನಲ್ಲಿ ಥಾಯ್ಲೆಂಡ್‌ನಂಥ ಬಲಿಷ್ಠ ತಂಡಗಳನ್ನು ಸೋಲಿಸಿ ಐತಿಹಾಸಿಕ ಸಾಧನೆ ಮಾಡಿತು.