ಭಾರೀ ಮಳೆ: ಶಾಲಾ-ಕಾಲೇಜುಗಳಿಗೆ ರಜೆ, ಮೀನುಗಾರಿಕೆ ನಿಷೇಧ
07:03 PM Dec 02, 2024 IST | Samyukta Karnataka
ಮಂಗಳೂರು: ಫೆಂಗಲ್ ಚಂಡಮಾರುತದ ಪರಿಣಾಮ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡಕ್ಕೂ ತಟ್ಟಿದೆ. ಜಿಲ್ಲೆಯಾದ್ಯಂತ ದಿನಪೂರ್ತಿ ಮೋಡ ಕವಿದ ವಾತಾವರಣವಿದ್ದು ಸಂಜೆ ವೇಳೆ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಅನಿರೀಕ್ಷಿತವಾಗಿ ಭಾರೀ ಮಳೆಯಿಂದಾಗಿ ಜನಜೀವನ ತತ್ತರಿಸಿದೆ. ಸಂಜೆ ವೇಳೆ ಶಾಲೆ, ಕಾಲೇಜುಗಳಿಂದ ಮರಳುವ ವಿದ್ಯಾರ್ಥಿಗಳು, ಉದ್ಯೋಗಿಗಳು ಪರದಾಡುವಂತಾಯಿತು. ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿ ಕೃತಕ ನೆರೆಯಾಗಿದೆ. ಕೃಷಿ ಭೂಮಿಗೂ ನೀರು ನುಗ್ಗಿ ವ್ಯಾಪಕ ಹಾನಿಯಾಗಿದೆ. ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.
ಶಾಲೆ, ಕಾಲೇಜುಗಳಿಗೆ ರಜೆ:
ಫೆಂಗಲ್ ಚಂಡಮಾರುತದ ಕಾರಣ ಭಾರೀ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲಾ, ಕಾಲೇಜು(ಪದವಿ, ಸ್ನಾತಕೋತ್ತರ ಹೊರತು)ಗಳಿಗೆ ಡಿ. ೩ರಂದು ರಜೆ ಘೋಷಿಸಿ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನೀಡಿದ್ದಾರೆ.