For the best experience, open
https://m.samyuktakarnataka.in
on your mobile browser.

ಭಾವನಾತ್ಮಕ ಸಂದೇಶ ಬರೆದು ಕುಸ್ತಿಗೆ ವಿದಾಯ ಹೇಳಿದ ವಿನೇಶ್​ ಫೋಗಟ್

11:26 AM Aug 08, 2024 IST | Samyukta Karnataka
ಭಾವನಾತ್ಮಕ ಸಂದೇಶ ಬರೆದು ಕುಸ್ತಿಗೆ ವಿದಾಯ ಹೇಳಿದ ವಿನೇಶ್​ ಫೋಗಟ್

ಪದಕ ವಿಜೇತರಂತೆ ಸ್ವಾಗತಿಸಲು ನಿರ್ಧರಿಸಿದ ಹರಿಯಾಣ ಸರ್ಕಾರ

ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಕುಸ್ತಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್‌ ಮಾಡಿದ್ದು ‘ಅಮ್ಮಾ, ನನ್ನ ವಿರುದ್ಧ ಕುಸ್ತಿ ಗೆದ್ದಿದೆ, ನಾನು ಸೋತೆ, ಕ್ಷಮಿಸಿ. ನಿನ್ನ ಕನಸು, ನನ್ನ ಧೈರ್ಯ ಎಲ್ಲ ಭಗ್ನವಾಯಿತು. ನನ್ನ ಧೈರ್ಯ ಸಂಪೂರ್ಣ ಛಿದ್ರವಾಗಿದೆ, ಈಗ ಹೆಚ್ಚಿನ ಶಕ್ತಿ ಉಳಿದಿಲ್ಲ’ ಎಂದು ವಿನೇಶ್ ಫೋಗಟ್ ಬರೆದುಕೊಂಡಿದ್ದಾರೆ. ಕುಸ್ತಿಗೆ ವಿದಾಯ. ನಿಮ್ಮೆಲ್ಲರಿಗೂ ನಾನು ಸದಾ ಋಣಿಯಾಗಿರುತ್ತೇನೆ, ಕ್ಷಮಿಸಿ ಎಂದಿದ್ದಾರೆ.

ವಿನೇಶ್ ಫೋಗಟ್ ಮೇಲ್ಮನವಿ: ವಿನೇಶ್ ಫೋಗಟ್ ಇದೀಗ ತಮ್ಮನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಅನರ್ಹಗೊಳಿಸಿರುವ ಕ್ರಮವನ್ನು ಪ್ರಶ್ನೆ ಮಾಡಿ ಕ್ರೀಡಾ ನ್ಯಾಯ ಮಂಡಳಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಮೇಲ್ಮನವಿಯಲ್ಲಿ ವಿನೇಶ್ ಫೋಗಟ್, ತಮಗೆ ಫೈನಲ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಹಾಗೂ ತಮಗೆ ಜಂಟಿ ಬೆಳ್ಳಿ ಪದಕ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ತಮ್ಮ ಅನರ್ಹತೆ ವಿರುದ್ಧ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್‌ಗೆ ವಿನೇಶ್ ಫೋಗಟ್ ಮೇಲ್ಮನವಿ ಸಲ್ಲಿಸಲಿದ್ದಾರೆ. ತುರ್ತು ವಿಚಾರಣೆಗೆ ಮನವಿ ಮಾಡಿರುವ ಅವರು, ಬೆಳ್ಳಿ ಪದಕಕ್ಕೆ ತಾವು ಅರ್ಹರು ಎಂದು ಪ್ರತಿಪಾದಿಸಿದ್ದಾರೆ.

ಪದಕ ವಿಜೇತರಂತೆ ಸ್ವಾಗತಿಸಲು ನಿರ್ಧರಿಸಿದ ಹರಿಯಾಣ ಸರ್ಕಾರ : ವಿನೇಶ್ ಫೋಗಟ್‌ಗೆ ಫೈನಲ್ ಪಂದ್ಯದಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರಬಹುದು, ಆದರೆ ವಿನೇಶ್ ಫೋಗಟ್ ನಮ್ಮೆಲ್ಲರಿಗೂ ಚಾಂಪಿಯನ್. ವಿನೇಶ್ ಫೋಗಟ್ ಅವರನ್ನು ಇತರ ಪದಕ ಗೆದ್ದ ಕ್ರೀಡಾಪಟುಗಳಂತೆ ಗೌರವಿಸಲಾಗುತ್ತದೆ. ಬೆಳ್ಳಿ ಪದಕ ಗೆದ್ದ ಕ್ರೀಡಾಪಟುವಿಗೆ ನೀಡುವ ಸೌಲಭ್ಯ, ಸಮ್ಮಾನಗಳನ್ನು ವಿನೇಶ್ ಫೋಗಟ್‌ಗೆ ನೀಡಲಾಗುತ್ತದೆ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ನಯಬ್ ಸೈನಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

Tags :