ಭಾವನೆ ಸಾಲದು, ನಂಬುವ ಸಾಕ್ಷ್ಯಾಧಾರ ಬೇಕು
ಮಧ್ಯಾಹ್ನದ ಕೋರ್ಟ್ ಕಲಾಪ ಸರಿಯಾಗಿ ೩ ಗಂಟೆಗೆ ಪ್ರಾರಂಭವಾಯಿತು. ನ್ಯಾಯಾಧೀಶರು ತೆರೆದ ನ್ಯಾಯಾಲಯಕ್ಕೆ ಪ್ರವೇಶಿಸಿ, ನ್ಯಾಯಪೀಠಕ್ಕೆ ನಮಸ್ಕರಿಸಿ ಕುಳಿತು, ಬೆಂಚ್ ಕ್ಲರ್ಕ್ ಕಡೆಗೆ ನೋಡಿದರು. ಮೊದಲಿಗೆ ನನ್ನ ಕಕ್ಷಿದಾರ/ಎದುರುದಾರನ ಮೇಲ್ಮನವಿಯ ವಿಚಾರಣೆಗಿತ್ತು. ನನ್ನ ಕಕ್ಷಿದಾರನಿಗೆ ಓಪನ್ ಕೋರ್ಟ್ ಹಾಲ್‌ನಲ್ಲಿ ಬಂದು ಕುಳಿತುಕೊಳ್ಳುವಂತೆ ಸೂಚಿಸಿದೆ. ಇದು ಅನಿವಾರ್ಯ ಏಕೆಂದರೆ ನಮ್ಮ ಕಕ್ಷಿದಾರನಿಗೆ, ನಮ್ಮ ಶ್ರಮದ ಬಗ್ಗೆ ತಿಳಿಯಬೇಕಾಗುತ್ತದೆ. ಮೇಲ್ಮನವಿದಾರಳ ಪರ ವಕೀಲರು ವಾದ ಮಂಡಿಸಲು ಇನ್ನೊಂದು ಮುದ್ದತ್ತನ್ನು ನ್ಯಾಯಾಲಯಕ್ಕೆ ಕೇಳಿಕೊಂಡರು. ನ್ಯಾಯಾಧೀಶರು ಗರಂ ಆಗಿ "ನೋಡ್ರಿ ವಕೀಲರೇ, ಮುಂಜಾನೆಯೇ, ಮಧ್ಯಾಹ್ನದ ಕಲಾಪದಲ್ಲಿ ಇದೊಂದೇ ಕೇಸನ್ನು ಇಟ್ಟುಕೊಳ್ಳುವುದಾಗಿ ನಿಮಗೆ ಹೇಳಿಬಿಟ್ಟಿದ್ದೇನೆ. ಇನ್ನೊಂದು ಡೇಟ್ ಕೊಡಲು ಸಾಧ್ಯವೇ ಇಲ್ಲ. ನೀವು ವಾದ ಮಂಡನೆ ಮಾಡದಿದ್ದರೆ, ನಿಮ್ಮ ವಾದ ಇಲ್ಲವೆಂದು ಪರಿಗಣಿಸಿ ಎದುರುದಾರ ಪರ ವಕೀಲರ ವಾದವನ್ನು ಕೇಳಿ, ತೀರ್ಪಿಗಾಗಿ ಪ್ರಕರಣ ಮುಂದೂಡಲಾಗುವುದು ತಿಳಿಯಿರಿ" ಎಂದು ಖಡಕ್ಕಾಗಿ ಹೇಳಿದರು. ಅನಿವಾರ್ಯವಾಗಿ ಮೇಲ್ಮನವಿದಾರಳ ಪರ ವಕೀಲರು ತಮ್ಮ ವಾದವನ್ನು ಪ್ರಾರಂಭಿಸಿದರು.
"ಯುವರ್ ಆನರ್, ಮೇಲ್ಮನವಿದಾರಳು ಕೆಳ ನ್ಯಾಯಾಲಯದಲ್ಲಿ, ಎದುರುದಾರನ ಮೇಲೆ ತನ್ನ ಜೀವನಾಂಶಕ್ಕಾಗಿ ಪ್ರಾರ್ಥನೆ ಮಾಡಿ ಸಿವಿಲ್ ದಾವೆಯನ್ನು ಸಲ್ಲಿಸಿದ್ದಳು. ಕೆಳ ನ್ಯಾಯಾಲಯವು ದಾವೆಯನ್ನು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಈ ಮೇಲ್ಮನವಿಯನ್ನು ಸಲ್ಲಿಸಿದ್ದಾಳೆ. ಮೇಲ್ಮನವಿದಾರಳು ಎದುರುದಾರನ ಹೆಂಡತಿ ಇರುತ್ತಾಳೆ. ಅವರ ಲಗ್ನವು ಸುಮಾರು ೨೫ ವರ್ಷಗಳ ಹಿಂದೆ ಆಗಿರುತ್ತದೆ. ಈಗ ಏಳೆಂಟು ವರ್ಷಗಳ ಹಿಂದೆ ಎದುರುದಾರನು ಅವಳನ್ನು ಮನೆಯಿಂದ ಹೊರಗೆ ಹಾಕಿರುತ್ತಾನೆ ಅವಳಿಗೆ ಜೀವನಾಂಶದ ವ್ಯವಸ್ಥೆ ಮಾಡಿರುವುದಿಲ್ಲ. ಎದುರುದಾರರು ಮೇಲ್ಮನವಿದಾರಳಿಗೆ ವರದಕ್ಷಿಣೆ ಹಿಂಸೆ ನೀಡಿ ಕ್ರೂರತನದಿಂದ ನಡೆದುಕೊಂಡಿರುತ್ತಾನೆ. ಎದುರುದಾರನು ವಕೀಲರ ಮುಖಾಂತರ ಹಾಜರಾಗಿ ಮೇಲ್ಮನವಿದಾರಳು ನನ್ನ ಹೆಂಡತಿ ಅಲ್ಲ ತನಗೆ ಹೆಂಡತಿ ಇದ್ದು, ನಾಲ್ಕು ಮಕ್ಕಳು ಇರುತ್ತವೆ ಎಂದು ವಾದಿಸಿ ಲಿಖಿತ ಹೇಳಿಕೆ ಸಲ್ಲಿಸಿದ್ದಾನೆ. ಎದುರುದಾರನು ತನ್ನ ಗಂಡ ಎಂದು ರುಜುವಾತುಪಡಿಸುವ ಜವಾಬ್ದಾರಿ ಮೇಲ್ಮನವಿದಾರಳ ಹೆಗಲೇರಿತು. ತನ್ನ ಹಾಗೂ ತನ್ನ ಪರ ಇಬ್ಬರು ಸಾಕ್ಷಿದಾರರನ್ನು ಸಾಕ್ಷಿ ಹೇಳಿಸಿದಳು. ಎದುರುದಾರ ತನ್ನ ಹಾಗೂ ತನ್ನ ಹೆಂಡತಿ ಅನ್ನುವಳ ಸಾಕ್ಷಿ ಹೇಳಿಸಿದನು. ಯುವರ್ ಆನರ್, ಯಾವ ಹೆಣ್ಣು ಮಗಳೂ ದಾರಿಹೋಕನು ತನ್ನ ಗಂಡನೆಂದು ವಾದಿಸುವುದಿಲ್ಲ. ಮೇಲ್ಮನವಿದಾರಳು ಬಡ ಕುಟುಂಬದಿಂದ ಬಂದವಳು. ಅವಳ ಮದುವೆ ಸರಳವಾಗಿ ಎದುರುದಾರನ ಜೊತೆ ಆಗಿದೆ. ಮದುವೆಯ ಆಮಂತ್ರಣ ಪತ್ರಿಕೆ ಮುದ್ರಿಸಿಲ್ಲ, ಫೋಟೊ ತೆಗೆದಿಲ್ಲ, ವಿಡಿಯೋ ಶೂಟ್ ಮಾಡಿಸಿಲ್ಲ. ಅವಳ ವೋಟರ್ ಕಾರ್ಡಲ್ಲಿ ಗಂಡ ಎಂದು ಎದುರುದಾರನ ಹೆಸರು ಇದೆ. ಎದುರುದಾರನಿಗೆ ಹೆಂಡತಿ, ಮಕ್ಕಳು ಇದ್ದಾರೆಂದು ವಾದಿಸಿದ್ದು, ಅವಳು ಅನೈತಿಕ ಸಂಬಂಧ ಇಟ್ಟುಕೊಂಡವಳು, ಅವಳಿಗೆ ಹುಟ್ಟಿದ ಮಕ್ಕಳು ಅನೈತಿಕ ಸಂಬಂಧದಿಂದ ಹುಟ್ಟಿದ ಮಕ್ಕಳು. ಜೀವನಾಂಶದ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪಲಾಯನವಾದ ಎದುರುದಾರ ಮಾಡಿದ್ದಾನೆ. ಕೆಳ ನ್ಯಾಯಾಲಯವು ನಿಸರ್ಗದತ್ತ ತೀರ್ಪು ನೀಡದೆ ಮೇಲ್ಮನವಿದಾರಳ ದಾವೆಯನ್ನು ಸಮಂಜಸವಾದ ಕಾರಣ ನೀಡದೆ ಏಕಪಕ್ಷೀಯವಾಗಿ ವಜಾಗೊಳಿಸಿದೆ. ಕೆಳ ನ್ಯಾಯಾಲಯವು, ಮೇಲ್ಮನವಿದಾರಳು ತನ್ನ ಮದುವೆ ಎದುರುದಾರನ ಜೊತೆ ಆಗಿದ್ದನ್ನು ರುಜುವಾತುಪಡಿಸಲು ವಿಫಲ ಆಗಿದ್ದಾಳೆ, ವೋಟರ್ ಕಾರ್ಡ್ ಆಧಾರದಿಂದ ಹೆಂಡತಿ ಎಂದು ನಿರ್ಣಯಿಸಲಾಗದು ಎಂದು ತಪ್ಪು ಅಭಿಪ್ರಾಯಕ್ಕೆ ಬಂದಿದೆ ಯುವರ್ ಆನರ್. ಕೆಳ ನ್ಯಾಯಾಲಯ ವಾದಿಯ ಭಾವನೆಗೆ ಬೆಲೆ ನೀಡಿ ಅನುಕಂಪದಿಂದ, ಮಾನವೀತೆ ಆಧಾರದಿಂದ ನನ್ನ ಕಕ್ಷಿದಾರಳಿಗೆ ಜೀವನಾಂಶ ಆದೇಶ ಮಾಡಬೇಕಿತ್ತು, ಆದ್ದರಿಂದ ಕೆಳ ನ್ಯಾಯಾಲಯದ ತೀರ್ಪಿನಲ್ಲಿ ಈ ನ್ಯಾಯಾಲಯ ಹಸ್ತಕ್ಷೇಪ ಮಾಡುವದು ಅವಶ್ಯ ಇದೆ. ಆದ್ದರಿಂದ ಈ ಮೇಲ್ಮನವಿಯನ್ನು ಪುರಸ್ಕರಿಸಿ, ಕೆಳ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸಿ, ಮೇಲ್ಮನವಿದಾರಳ ದಾವೆಯನ್ನು ಡಿಕ್ರಿಗೊಳಿಸಿ ಅವಳಿಗೆ ಜೀವನಾಂಶ ಆದೇಶ ಮಾಡಬೇಕೆಂದು ಪ್ರಾರ್ಥಿಸುತ್ತೇನೆ. ಇಷ್ಟು ನನ್ನ ವಾದ, ಯುವರ್ ಆನರ್" ಎಂದು ತಮ್ಮ ಸುದೀರ್ಘವಾದಕ್ಕೆ ವಿರಾಮ ಹೇಳಿ, ಹೇಗೆ ಹೇಳಿದೆ ಎನ್ನುವಂತೆ ನನ್ನೆಡೆಗೆ ದೃಷ್ಟಿ ಬೀರಿದರು. ವಾದದ ಶೈಲಿ ಚೆನ್ನಾಗಿದೆ, ಕೇಸಲ್ಲ ಎನ್ನುವಂತೆ ಮುಗುಳುನಗೆ ಬೀರಿ ಮೆಚ್ಚುಗೆ ಸೂಚಿಸಿದೆ.
ನ್ಯಾಯಾಧೀಶರು ಕುಳಿತ ನಿಲುವನ್ನು ಬದಲಾಯಿಸಿ, ನಿಮ್ಮ ವಾದ ಹೇಳಿ ಎನ್ನುವಂತೆ ನನ್ನೆಡೆಗೆ ದೃಷ್ಟಿ ಬೀರಿದರು. "ಯುವರ್ ಆನರ್" ಎಂದು ನ್ಯಾಯಾಧೀಶರನ್ನು ಸಂಬೋಧಿಸಿ ಕಡತವನ್ನು ತಿರುವಿಹಾಕುತ್ತಿದ್ದ ಅವರ ಗಮನವನ್ನು ನನ್ನೆಡೆಗೆ ಸೆಳೆದೆನು. "ಹೇಳ್ರಿ ವಕೀಲರೆ" ಎಂದು ನನ್ನ ವಾದದ ಕಡೆ ಕಿವಿಗೊಟ್ಟರು. "ಮೇಲ್ಮನವಿದಾರಳ ಪರ ವಕೀಲರು, ಪ್ರಕರಣದ ಸಂಪೂರ್ಣ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಮೇಲ್ಮನವಿದಾರಳು, ಎದುರುದಾರನ ಹೆಂಡತಿ ಅಲ್ಲ ಅನ್ನೋದನ್ನು ಮತ್ತೊಮ್ಮೆ ಪುನರುಚ್ಚರಿಸುತ್ತೇನೆ. ಕೆಳ ನ್ಯಾಯಾಲಯದಲ್ಲಿ ಎದುರುದಾರನದು ಇದೇ ಸ್ಪಷ್ಟ ನಿಲುವು ಆಗಿರುತ್ತದೆ. ಮೇಲ್ಮನವಿದಾರಳ ಪರ ವಕೀಲರು, ಕೆಳ ನ್ಯಾಯಾಲಯದ ಆದೇಶದಲ್ಲಿ ಯಾವ ದೋಷಪೂರಿನ ಅಂಶಗಳು ಇವೆ ಅನ್ನುವುದನ್ನು ಈ ನ್ಯಾಯಾಲಯವು ಹಸ್ತಕ್ಷೇಪ ಏಕೆ ಮಾಡಬೇಕು ಅನ್ನುವುದನ್ನು ವಾದಿಸಲಿಲ್ಲ. ಕೆಳ ನ್ಯಾಯಾಲಯವು, ಮೇಲ್ಮನವಿದಾರಳು ಎದುರುದಾರರ ಹೆಂಡತಿ ಎಂದು ನಂಬಲು ಅರ್ಹವಾದ ಯಾವುದೇ ಸಾಕ್ಷ್ಯಾಧಾರ ಇರುವುದಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ. ಮೇಲ್ಮನವಿದಾರಳು ಇಬ್ಬರನ್ನು ಸಾಕ್ಷಿ ನುಡಿಸಿದ್ದಾಳೆ, ಅವರು ತಾವು ಮೇಲ್ಮನವಿದಾರಳು ಎದುರುದಾರನ ಸಂಬಂಧಿಕರು, ಪರಿಚಯದವರು ಅಲ್ಲವೆಂದು ಮದುವೆಯಲ್ಲಿ ಭಾಗವಹಿಸಿಲ್ಲ ಎಂದು ನುಡಿದಿದ್ದಾರೆ. ಮೇಲ್ಮನವಿದಾರಳು ವೋಟರ್ ಕಾರ್ಡನ್ನು ಹೊರತುಪಡಿಸಿ ಬೇರೆ ಯಾವುದೇ ಸಂಬಂಧಿಕರು ತಮ್ಮ ಕುಟುಂಬಕ್ಕೆ ಹತ್ತಿರದವರ ಸಾಕ್ಷಿಯನ್ನು ಹೇಳಿಸಿ, ಸಾಕ್ಷಿ ಅಧಿನಿಯಮದಂತೆ ರುಜುವಾತುಪಡಿಸಿರುವುದಿಲ್ಲವೆಂದು ಅಭಿಪ್ರಾಯಪಟ್ಟು ದಾವೆಯನ್ನು ಕೆಳ ನ್ಯಾಯಾಲಯ ವಜಾಗೊಳಿಸಿದೆ. ಸಿವಿಲ್ ದಾವೆಯಲ್ಲಿ ಯಾವ ವ್ಯಕ್ತಿಯು ತನ್ನ ಹಕ್ಕು ಬೇಡಿಕೊಳ್ಳುತ್ತಾನೆಯೋ ಅವನು ಸ್ವತಂತ್ರವಾಗಿ ನೇರ, ಸ್ಪಷ್ಟವಾದ ಸಾಕ್ಷಿಗಳನ್ನು ನೀಡಬೇಕು, ಅಂತಹ ಬಲವಾದ ಸಾಕ್ಷಿಗಳು ಈ ಪ್ರಕರಣದಲ್ಲಿ ಇರುವುದಿಲ್ಲ. ಮೇಲ್ಮನವಿದಾರಳ ಹಾಗೂ ಎದುರುದಾರನ ಲಗ್ನವು ಸಂಪ್ರದಾಯದಂತೆ ಆಗಿರುತ್ತದೆ ಅನ್ನುವ ಇಂಚಿಂಚು ಸಂಗತಿಗಳನ್ನು ಬಿಚ್ಚಿಡಬೇಕಾಗುತ್ತದೆ. ಮೇಲ್ಮನವಿದಾರಳು ಎದುರುದಾರನ ಹೆಂಡತಿ ಇರುವುದರಿಂದ, ತನಗೆ ಜೀವನಾಂಶ ಬೇಕು ಅನ್ನುವ ತನ್ನ ಬೇಡಿಕೆಯನ್ನು ಹೊರತುಪಡಿಸಿ ಬಲವಾದ, ನಂಬುವ ಸಾಕ್ಷಿಯನ್ನು ನೀಡಿರುವುದಿಲ್ಲ. ಮೇಲ್ಮನವಿದಾರರ ವಾದದಲ್ಲಿ ಭಾರತೀಯ ಯಾವುದೇ ಹೆಣ್ಣು ಮಗಳು ದಾರಿಹೋಕ ತನ್ನ ಗಂಡ ಎಂದು ವಾದಿಸುವದಿಲ್ಲ ಎಂದು ವಾದಿಸಿದ್ದಾರೆ. ಆದರೆ ಬದಲಾದ ಮೌಲ್ಯಗಳನ್ನು ಗಮನಿಸಿದಾಗ ಕೆಲವು ವ್ಯಕ್ತಿಗಳು ಆಸ್ತಿಗಾಗಿ, ಹಣಕ್ಕಾಗಿ ಯಾವುದೇ ನಿಲುವಿಗೆ ಹೋಗುವ ಎಲ್ಲ ಸಾಧ್ಯತೆಗಳನ್ನು ಇವೆ ಅನ್ನುವದನ್ನು ನ್ಯಾಯಾಲಯವು ಗಮನಿಸಬೇಕು. ಯಾವುದೇ ಕೋನದಿಂದ ನೋಡಿದರೂ ಮೇಲ್ಮನವಿ ಮನ್ನಿಸುವ ಅಂಶಗಳು ಇಲ್ಲ. ಮೇಲ್ಮನವಿದಾರಳು ತಾನು ಹೆಣ್ಣು ನೊಂದಿದ್ದೇನೆಂದು ಭಾವನೆಗಳ ಜಾಲವನ್ನು ಬೀಸಿ ಗಮನ ಸೆಳೆಯಲು ಯತ್ನಿಸಿದ್ದಾಳೆ, ಅದನ್ನು ಪುಷ್ಟೀಕರಿಸಲಾಗದು, ಸಾಕ್ಷಿಗೆ ಬೆಲೆ ಇದೆ. ಆದ್ದರಿಂದ ಮೇಲ್ಮನವಿಯನ್ನು ವಜಾಗೊಳಿಸಿ" ಎಂದು ವಾದ ಮುಗಿಸಿದೆ.
ನ್ಯಾಯಾಲಯವು ಎದುರದಾರನ ವಾದದ ಅಂಶಗಳನ್ನು ಪುಷ್ಟೀಕರಿಸಿ, ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು, ಮೇಲ್ಮನವಿದಾರಳು ಹೆಂಡತಿಯೆಂದು ರುಜುವಾತುಪಡಿಸಲು ವಿಫಲಳಾಗಿದ್ದಾಳೆ ಎಂದು ನಿರ್ಣಯಿಸಿ ಮೇಲ್ಮನವಿಯನ್ನು ವಜಾಗೊಳಿಸಿತು.
ನ್ಯಾಯ ವ್ಯವಸ್ಥೆ ಕಾನೂನು, ನಿಯಮಗಳ ಆಧಾರದ ಮೇಲೆ ನಿಂತಿದೆ. ಭಾವನೆ, ಕಣ್ಣೀರು, ದುಃಖ, ಕರುಣೆ, ಅನುಕಂಪಕ್ಕೆ ಬೆಲೆ ಇಲ್ಲಿದೆ, ಆದರೆ ಪೂರಕ ನಂಬುವಂತ ಸಾಕ್ಷ್ಯಾಧಾರ ಬೇಕು.