ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಭಿನ್ನಾಭಿಪ್ರಾಯಗಳಿಂದ ವಿವೇಚನೆ

04:03 AM Jan 17, 2025 IST | Samyukta Karnataka

ಏಕರೂಪತೆ ಈ ಸೃಷ್ಟಿಯ ಲಕ್ಷಣವಲ್ಲ. ಭಿನ್ನ ವಿಭಿನ್ನವಾಗಿರುವುದೇ ಅದರ ಸಹಜ ರೂಪ. ಪ್ರಪಂಚದ ತುಂಬೆಲ್ಲ ಸುತ್ತಾಡಿದರೂ ನಾವು ಎಲ್ಲಿಯೂ ಏಕ ರೂಪತೆಯನ್ನು ಕಾಣಲಾರೆವು. ಭೇದ ಪ್ರಭೇದ ಸೃಷ್ಟಿಕರ್ತನ ಯೋಜನೆಯಲ್ಲಿಯ ಪ್ರಮುಖ ಭಾಗ. ವಿವಿಧ ರೂಪ ಲಕ್ಷಣಗಳು ಆತನ ಸೃಷ್ಟಿ ಕ್ರಿಯೆಯಲ್ಲಿ ಕಂಡುಬರುತ್ತವೆ.
ಸೃಷ್ಟಿಯ ಒಂದು ಪ್ರಮುಖ ಭಾಗವಾಗಿರುವ ಮಾನವ ಕುಲವು ಸಹಜ ಅನೇಕ ಭಿನ್ನ ವಿಭಿನ್ನಗಳಲ್ಲಿ ಸೃಷ್ಟಿಸಲ್ಪಟ್ಟಿದೆ. ಇದು ಸಹಜ ಸೃಷ್ಟಿಕರ್ತನ ಒಂದು ಯೋಜನೆ. ಕುರಾನಿನ ಅಧ್ಯಾಯ ಹೂದ್(೧೩)ದಲ್ಲಿ `ನಿಮ್ಮ ಒಡೆಯನು ಬಯಸಿದರೆ ಎಲ್ಲಾ ಮಾನವರನ್ನು ಒಂದೇ ಸಮುದಾಯವರನ್ನಾಗಿ ಮಾಡಿಬಿಡುತ್ತಿದ್ದ. ಎಂದಿದೆ…
ಗುಂಪುಗಳಲ್ಲಿ ವೈಯಕ್ತಿಕವಾಗಿ, ಸಾಮೂಹಿಕವಾಗಿ ಭಿನ್ನಾಭಿಪ್ರಾಯಗಳಿವೆ ನಿಜ. ಆದರೆ ಅವು ಕೆಡಕು ಮಾಡುವವು ಅಲ್ಲ. ಮಾನವನ ವಿಚಾರ ಶಕ್ತಿಗೆ ಈ ಭಿನ್ನಾಭಿಪ್ರಾಯಗಳು ಅವಶ್ಯ. ಭಿನ್ನಾಭಿಪ್ರಾಯಗಳು ಕೇವಲ ಭಿನ್ನಾಭಿಪ್ರಾಯಗಳಲ್ಲ. ಅವು ಸ್ತ್ರೀ ಪುರುಷರ ವೈವಿಧ್ಯತೆಯ ವ್ಯಕ್ತಿತ್ವವನ್ನು ಗುರುತಿಸುತ್ತವೆ. ಆರೋಗ್ಯಕರವಾದ ಭಿನ್ನಾಭಿಪ್ರಾಯಗಳಿಂದ ಉಂಟಾಗುವ ಚರ್ಚೆ, ಮಾತುಕತೆಗಳಿಂದ ಸಮಾಜದಲ್ಲಿ ಪ್ರಗತಿಯ ಲಕ್ಷಣಗಳು ಕಾಣುತ್ತವೆ. ಭಿನ್ನಾಭಿಪ್ರಾಯಗಳು ಇರದಿದ್ದರೆ ಸಮಾಜವು ನಿಂತ ನೀರಿನಂತಾಗಿ ಎಲ್ಲೆಡೆ ಅನಾರೋಗ್ಯಕರವಾದ ವಾತಾವರಣ ಹುಟ್ಟುತ್ತದೆ.
ಮಾನವರ ಪರಸ್ಪರ ಸಂಬಂಧಗಳಲ್ಲಿ ಘರ್ಷಣೆ ಮತ್ತು ಅಪಶ್ರುತಿಗೆ ಕಾರಣವೆಂದರೆ ಅಭಿಪ್ರಾಯ ವ್ಯತ್ಯಾಸಗಳು. ಈ ಪ್ರಪಂಚದಲ್ಲಿ ಎಷ್ಟು ಜನರಿದ್ದಾರೋ ಅಷ್ಟೊಂದು ಅಭಿಪ್ರಾಯಗಳು ಇರುತ್ತವೆ. ಸಂಬಂಧಗಳಿಗೆ ಹಾನಿಯಾಗದಂತೆ ಈ ವ್ಯತ್ಯಾಸಗಳ ಅಭಿಪ್ರಾಯಗಳನ್ನು ಚರ್ಚಿಸಲು ಮುಂದಾಗಬೇಕು. ತೀವ್ರವಾಗದ ಶಾಂತ ರೀತಿಯ ಚರ್ಚೆ, ಮಾತುಕತೆಗೆ ಅವಕಾಶ ಮಾಡಿಕೊಡಬೇಕು. ನಮ್ಮ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸ್ವಾತಂತ್ರ‍್ಯವಿರಬೇಕು. ಅದೇ ರೀತಿ ಇನ್ನಿತರ ಅಭಿಪ್ರಾಯಗಳನ್ನು ಗೌರವಿಸಿ ಚರ್ಚಿಸಬೇಕು.
ಭಿನ್ನಾಭಿಪ್ರಾಯಗಳು ಎರಡು ರೀತಿಯವು ಎಂದು ಸಮಾಜಶಾಸ್ತ್ರಜ್ಞರು ವಿಶ್ಲೇಷಿಸಿದ್ದಾರೆ. ಒಂದು ಸಕಾರಾತ್ಮಕವಾಗಿದ್ದರೆ ಇನ್ನೊಂದು ನಕಾರಾತ್ಮಕವಾಗಿರುತ್ತದೆ. ಭಿನ್ನಾಭಿಪ್ರಾಯಗಳು ಸಕಾರಾತ್ಮಕವಾಗಿದ್ದರೆ ಅವುಗಳನ್ನು ಶಾಂತ ರೀತಿಯಿಂದ ಚರ್ಚಿಸಲು ಸಾಧ್ಯ. ನಕಾರಾತ್ಮಕವಾಗಿದ್ದರೆ ಅವುಗಳನ್ನು ಸಹ ಶಾಂತ ರೀತಿಯಿಂದ ಚರ್ಚಿಸಿ ಅವುಗಳ ತೀವ್ರತೆಯನ್ನು ಕಡಿಮೆ ಮಾಡಬಹುದು. ಯಾವುದೇ ಪ್ರಗತಿಪರ ಸಮಾಜ ಆರೋಗ್ಯಕರ ಭಿನ್ನಾಭಿಪ್ರಾಯಗಳಿಲ್ಲದೆ ಬೆಳೆಯಲು ಸಾಧ್ಯವಿಲ್ಲ.
ಭಿನ್ನಾಭಿಪ್ರಾಯಗಳು ನಮ್ಮನ್ನು ವಿಚಾರ ಮಾಡಲು ಹಚ್ಚಿ ಸಮಸ್ಯೆಗಳನ್ನು ವಿವೇಚನೆಯಿಂದ ಪರಿಹರಿಸಲು ಸಾಧ್ಯವಾಗುತ್ತದೆ. ಇದರಿಂದ ಸಮಾಜದಲ್ಲಿ ಪ್ರಜ್ಞೆಯುಳ್ಳ ನಾಗರಿಕರು ಹೆಚ್ಚಾಗುತ್ತಾರೆ. ಸೃಷ್ಟಿಯ ರಚನೆ ಭಿನ್ನ ವಿಭಿನ್ನವಿದ್ದಾಗ, ಸಾಕಷ್ಟು ಭೇದ ಪ್ರಭೇದಗಳಿರುವಾಗ ನಮ್ಮಲ್ಲಿ ಏಕಾಭಿಪ್ರಾಯ ಇರಲು ಸಾಧ್ಯವಿಲ್ಲ. ಭಿನ್ನಾಭಿಪ್ರಾಯ ಪ್ರಭೇಧ ವ್ಯತ್ಯಾಸಗಳನ್ನು ಅಳಿಸಿಹಾಕಲು ಬಾರವು. ಅವು ಒಂದು ಆಹ್ವಾನ. ವಿಚಾರಿಸಲು ಚುಚ್ಚುವ ಸೂಜಿಯಂತೆ ಎಲ್ಲರೂ ಒಂದೇ ರೀತಿಯಲ್ಲಿ ವಿಚಾರ ಮಾಡಿದರೆ ಹೊಸ ವಿಚಾರಗಳು ಗರಿಗೆದರಲಾರವು.
ಸಮಾಜಶಾಸ್ತ್ರಜ್ಞರು ಭಿನ್ನಾಭಿಪ್ರಾಯಗಳು ಒಮ್ಮತಕ್ಕೆ ಬರದಿದ್ದಾಗ ಕೆಲವು ಸಲಹೆಗಳನ್ನು ನೀಡಿದ್ದಾರೆ. ರಾಜಿ ಮಾಡಿಕೊಳ್ಳುವುದು, ಬುದ್ಧಿವಂತರ ಸಲಹೆ ಕೇಳುವುದು, ಸರ್ವಾನುಮತದ ನಿರ್ಣಯ ಕೈಗೊಳ್ಳುವುದು ಉತ್ತಮ ಅಭಿಪ್ರಾಯವನ್ನು ಅನುಮೋದಿಸುವುದು ಇತ್ಯಾದಿ.
ಈ ಸೃಷ್ಟಿಯನ್ನು ಏಕರೂಪವಾಗಿಯೇ ರಚಿಸಲಿಲ್ಲ. ಅದು ಬೆಳೆಯಲು ಅದು ಭಿನ್ನ ವಿಭಿನ್ನವಾಗಿಯೇ ಇರಬೇಕೆಂಬ ಯೋಜನೆಯ ಸೃಷ್ಟಿಕರ್ತನದು ಇದ್ದಿರಬೇಕು. ಅದರಂತೆ ನಾವು ಬೆಳೆಯಬೇಕಾದರೆ, ವಿವೇಚನೆಯನ್ನು ಪಡೆಯಬೇಕಾದರೆ ಭಿನ್ನಾಭಿಪ್ರಾಯಗಳನ್ನು ಬೆಂಬಲಿಸಬೇಕು.

Next Article