ಭೀಕರ ಅಪಘಾತ: 30 ಕ್ಕೂ ಹೆಚ್ಚು ನರೇಗಾ ಕಾರ್ಮಿಕರು ಆಸ್ಪತ್ರೆಗೆ ದಾಖಲು
02:09 PM Jan 23, 2025 IST | Samyukta Karnataka
ನರೇಗಾ ಕೆಲಸಕ್ಕೆ ಕೂಲಿ ಕಾರ್ಮಿಕರು ಟ್ರಕ್‌ನಲ್ಲಿ ಹೊರಟಿದ್ದರು
ಬೆಳಗಾವಿ: ನರೇಗಾ ಕಾರ್ಮಿಕರನ್ನು ಕರೆದುಕೊಂಡು ಹೊಗುತ್ತಿದ್ದ ಟ್ರಕ್ ಪಲ್ಟಿಯಾಗಿ 30ಕ್ಕೂ ಅಧಿಕ ಜನ ಕಾರ್ಮಿಕರು ಗಾಯಗೊಂಡಿರುವ ಘಟನೆ ನಡೆದಿದೆ.
ಹುಕ್ಕೇರಿ ತಾಲೂಕಿನ ಹೊಸುರ ಗ್ರಾಮದ ಹೊರವಲಯದ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಯಮಕನಮರಡಿ ಗ್ರಾಮದಿಂದ ಹಿಡಕಲ್ ಡ್ಯಾಮ್‌ಗೆ ನರೇಗಾ ಕೆಲಸಕ್ಕೆ ಕೂಲಿ ಕಾರ್ಮಿಕರು ಟ್ರಕ್‌ನಲ್ಲಿ ಹೊರಟಿದ್ದರು ಈ ವೇಳೆ ಅಡ್ಡ ಬಂದ ಬುಲೆಟ್ ವಾಹನವನ್ನು ತಪ್ಪಿಸಲು ಹೋಗಿ ಬುಲೆಟ್‌ಗೆ ಡಿಕ್ಕಿ ಹೊಡೆದು ಟ್ರಕ್ ಗಾಡಿಯ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ 30ಕ್ಕೂ ಅಧಿಕ ಜನ ಕಾರ್ಮಿಕರು ಗಾಯಗೊಂಡಿದ್ದಾರೆ. 29 ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರೆ, ಓರ್ವ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ. ಸಣ್ಣಪುಟ್ಟ ಗಾಯವಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.