For the best experience, open
https://m.samyuktakarnataka.in
on your mobile browser.

ಭೂತಗನ್ನಡಿಯಲ್ಲಿ ಅಪರಾಧ

02:30 AM Apr 13, 2024 IST | Samyukta Karnataka
ಭೂತಗನ್ನಡಿಯಲ್ಲಿ ಅಪರಾಧ

ಬದಲಾದ ಕಾಲಮಾನದಲ್ಲಿ ಭಾರತದಲ್ಲಿ ಜರುಗುತ್ತಿರುವ ಸಹಜ ಘಟನಾವಳಿಗಳು ಎಷ್ಟರ ಮಟ್ಟಿಗೆ ಸಹಜ ಎಷ್ಟರ ಮಟ್ಟಿಗೆ ಪಿತೂರಿ ಎಂಬುದನ್ನು ಸಾದ್ಯಂತವಾಗಿ ವಿವೇಚಿಸುವ ಪರಿಸ್ಥಿತಿ ಬಂದೊದಗಿದೆ. ಸರ್ವೇಸಾಮಾನ್ಯವಾಗಿ ಜರುಗುವ ಘಟನೆಯ ಹಿಂದೆ ವಿದ್ರೋಹಿಗಳ ಕೈವಾಡವಿರುವ ಸಾಕ್ಷ್ಯಗಳು ತನಿಖೆಯ ಮೂಲಕ ಒಂದೊಂದಾಗಿ ಹೊರಬೀಳುತ್ತಿರುವ ಸಂದರ್ಭದಲ್ಲಿ ಭಾರತದ ಭದ್ರತೆ ಹಾಗೂ ಸಾರ್ವಭೌಮತ್ವ ಎಷ್ಟರ ಮಟ್ಟಿಗೆ ಸುರಕ್ಷಿತವಾಗಿದೆ ಎಂಬುದೂ ಕೂಡಾ ಚರ್ಚೆಗೆ ಒಳಗಾಗಬೇಕಾದ ವಿಚಾರವೇ. ಬೆಂಗಳೂರಿನ ರಾಮೇಶ್ವರಂ ಕೆಫೆಯ ಸ್ಫೋಟದ ಪ್ರಕರಣ ಆರಂಭದ ದಿನಗಳಲ್ಲಿ ಯಾವುದೋ ಚಿಲ್ಲರೆ ಪ್ರಕರಣ ಎಂಬ ಭಾವನೆ ಜನರಲ್ಲಿ ಬೇರೂರಲು ಮುಖ್ಯವಾದ ಕಾರಣ ಯಾವುದೇ ಸಾವು ನೋವಿಲ್ಲದೆ ಕೆಲವೇ ನಿಮಿಷಗಳಲ್ಲಿ ಮುಕ್ತಾಯಗೊಂಡದ್ದು. ಆದರೆ, ತನಿಖೆಯ ನಂತರ ಒಂದೊಂದೇ ವಿವರಗಳು ಹೊರಬೀಳಲು ಆರಂಭಿಸಿದ ನಂತರ ಇದೊಂದು ಭಯೋತ್ಪಾದಕರ ಪಾಶವೀ ಕೃತ್ಯ ಎಂದು ಗುರುತಿಸುವಂತಾಯಿತು. ಸ್ಫೋಟಕ್ಕೆ ಕಾರಣನಾದ ಖದೀಮನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಪೊಲೀಸರು ದೇಶದಾದ್ಯಂತ ಜಾಲಾಡಿ ಕಡೆಗೆ ಪಶ್ಚಿಮ ಬಂಗಾಳದಲ್ಲಿ ಪತ್ತೆ ಮಾಡಿ ಪರಗಣ ಜಿಲ್ಲೆಯ ನ್ಯಾಯಾಲಯದ ಮುಂದೆ ಹಾಜರುಪಡಿಸಿರುವ ಪ್ರಕರಣದಲ್ಲಿ ಎದ್ದು ಕಾಣುವುದು ಎಂದರೆ ತನಿಖೆಯಲ್ಲಿ ಅನುಸರಿಸಿರುವ ದಕ್ಷತೆಯ ಮಾರ್ಗ. ವಿವರಗಳನ್ನು ಆಸಾಮಿಗಳ ಬಂಧನಕ್ಕೆ ಮೊದಲೇ ಜಾಹೀರು ಮಾಡದೆ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ಮುಗಿಸಿ ಪಾತಕಿಗಳು ಪರಾರಿಯಾಗಲು ಅವಕಾಶ ಕೊಡದೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ಕ್ರಮ ನಿಜಕ್ಕೂ ಮೆಚ್ಚತಕ್ಕದ್ದು. ವಿದೇಶಕ್ಕೆ ಪರಾರಿಯಾಗಲು ಹೊಂಚು ಹಾಕುತ್ತಿದ್ದ ಸಂದರ್ಭದಲ್ಲಿ ತನಿಖಾ ದಳದ ಬಲೆಗೆ ಬಿದ್ದು ಪಾಶವೀ ಕೃತ್ಯದ ಸಂಚನ್ನು ಹೊರ ಹಾಕಿಸಿದ್ದು ಇನ್ನೊಂದು ಸಾಧನೆ. ಇಂತಹ ಸಾಧನೆಗೆ ಇಡೀ ಭಾರತದ ಅಭಿನಂದನೆ ಸಲ್ಲಬೇಕು.
ಅಪರಾಧ ಕೃತ್ಯಗಳನ್ನು ಹಾಗೂ ಅಪರಾಧಿಗಳನ್ನು ಅಪರಾಧವೆಂದೇ ಪರಿಗಣಿಸಬೇಕಾದದ್ದು ದೇಶದ ಧರ್ಮ. ಇಂತಹ ವಿಚಾರದಲ್ಲಿ ಜಾತಿ, ಬಣ್ಣ, ಧರ್ಮ, ಭಾಷೆ, ವರ್ಗ, ಪ್ರದೇಶಗಳು ಪರಿಗಣನೆಗೆ ಬರಲೇಬಾರದು. ಅಪರಾಧ ಯಾವುದೇ ಪ್ರದೇಶವಾದರೂ ಸರಿ ಅದನ್ನು ಅಪರಾಧ ಎಂದೇ ಪರಿಗಣಿಸಬೇಕು. ಸಮ್ಮಿಶ್ರ ರಾಜಕೀಯ ಯುಗವನ್ನು ಪ್ರವೇಶಿಸಲು ಭರದಲ್ಲಿ ಪ್ರತಿಯೊಂದಕ್ಕೂ ಭೂತಗನ್ನಡಿ ಬಳಸಿ ರಾಜಕೀಯ ಲೆಕ್ಕಾಚಾರದ ತುಲಾಭಾರ ಮಾಡುವುದು ಸತ್ಯಕ್ಕೆ ಹಾಗೂ ದೇಶದ ಸಮಗ್ರತೆ, ಸುಭದ್ರತೆ ಹಾಗೂ ಸಾರ್ವಭೌಮತ್ವಕ್ಕೆ ಎಸಗುವ ದೊಡ್ಡ ಅಪಚಾರ. ಲೋಕಸಭಾ ಚುನಾವಣೆಯ ಕಾವು ಏರುತ್ತಿರುವ ಸಂದರ್ಭದಲ್ಲಿ ಮತಪೆಟ್ಟಿಗೆಯ ಸೂತ್ರದ ಮೂಲಕವೇ ಪ್ರತಿಯೊಂದು ಘಟನೆಯನ್ನು ನೋಡುವುದು ಜನತಂತ್ರಕ್ಕೆ ಎಸಗುವ ದೊಡ್ಡ ದ್ರೋಹ. ಲೋಕಸಭಾ ಚುನಾವಣೆ ನಡೆಯುತ್ತಿರುವಾಗ ಇಡೀ ದೇಶದ ಆಡಳಿತ ವ್ಯವಹಾರ ಮತ್ತು ಬೆಳವಣಿಗೆಗಳ ಮೇಲೆ ಹದ್ದಿನ ಕಣ್ಣಿಡಬೇಕಾದ ಚುನಾವಣಾ ಆಯೋಗ ಇಂತಹ ಅಪರಾಧ ಪ್ರಕರಣದಲ್ಲಿ ವಾಗ್ವಿಲಾಸ ಮೆರೆಯಲು ಹೊರಡುವ ಮುಖಂಡರ ವಿರುದ್ಧ ಚಾಟಿ ಬೀಸಬೇಕು.
ಜನಾದೇಶವೆಂಬುದು ಜನತಂತ್ರದಲ್ಲಿ ಅತ್ಯಂತ ಪವಿತ್ರವಾದ ಅಸ್ತ್ರ. ಮತಪೆಟ್ಟಿಗೆಯ ಮೂಲಕ ಯಾವುದಾದರೂ ಒಂದು ಪಕ್ಷಕ್ಕೆ ಪ್ರಾಪ್ತವಾಗುವ ಈ ಜನಾದೇಶದ ಗುರಿಯನ್ನು ಪಲ್ಲಟಗೊಳಿಸಿ ಪಟ್ಟಭದ್ರರಿಗೆ ರಜತ ಪಾತ್ರೆಯಲ್ಲಿ ಕೊಡುವ ಸನ್ನಾಹವನ್ನು ದೇಶವಾಸಿಗಳು ಗುರುತಿಸಬಾರದು ಎಂದು ಯಾರೂ ತಿಳಿಯುವುದು ಬೇಡ. ಭಾರತ ಒಂದು ಪ್ರಬುದ್ಧ ಜನತಂತ್ರ ದೇಶ. ಮತದಾರರಿಗೆ ವಿವೇಚನಾ ಸಾಮರ್ಥ್ಯ ೭೫ ವರ್ಷಗಳ ಸ್ವತಂತ್ರ ರಾಷ್ಟ್ರದ ಅನುಭವದಲ್ಲಿ ಸಾಕಷ್ಟು ಸಿದ್ಧಿಸಿದೆ. ಹೀಗಿರುವಾಗ ಅಪರಾಧಗಳನ್ನು ಇಲ್ಲವೇ ಅಪರಾಧಿಗಳನ್ನು ರಕ್ಷಿಸುವ ಯಾವುದೇ ಸನ್ನಾಹವನ್ನು ದೇಶವಾಸಿಗಳು ತಮ್ಮೆಲ್ಲಾ ಸಾಮರ್ಥ್ಯವನ್ನು ಬಳಸಿ ಹಿಮ್ಮೆಟ್ಟಿಸುವುದು ಪೌರ ಧರ್ಮವೂ ಹೌದು ಹಾಗೂ ರಾಜಧರ್ಮವೂ ಹೌದು.