ಭೂಸ್ವಾಧೀನ ಪರಿಹಾರ ನೀಡದ ಕೆಪಿಟಿಸಿಎಲ್: ಕಚೇರಿಯ ಸಾಮಗ್ರಿ ಜಪ್ತಿ
ಕೊಪ್ಪಳ: ರೈತರಿಗೆ ೨೫ ವರ್ಷ ಕಳೆದರೂ ಭೂಸ್ವಾಧೀನ ಪರಿಹಾರ ನೀಡಿಲ್ಲ ಎಂದು ನಗರದ ಹೊಸಪೇಟೆ ರಸ್ತೆಯ ಕೆ.ಪಿ.ಟಿ.ಸಿ.ಎಲ್ ಕೆ.ವಿ ಕೇಂದ್ರದಲ್ಲಿನ ಸಾಮಗ್ರಿಗಳನ್ನು ಗುರುವಾರ ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿದರು.
ಗಂಗಾವತಿ ತಾಲ್ಲೂಕಿನ ವೆಂಕಟಗಿರಿಯ ಜಿ.ರಾಮಕೃಷ್ಣ ಎನ್ನುವವರ ೧ ಎಕರೆ ೧೫ ಗುಂಟೆ ಜಮೀನು ೨೦೦೧ರಲ್ಲಿ ಭೂಸ್ವಾಧೀನ ಮಾಡಿಕೊಂಡಿದ್ದರು. ೩೩ ಕೆ.ವಿಯ ಸ್ಟೇಷನ್ ನಿರ್ಮಿಸಿ, ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ೨೦೨೨ರ ನವೆಂಬರ್ ೯ರಂದು ೫೨,೧೭,೫೪೪ ರೂ. ಫಲಾಭವಿಗೆ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ ಮಾಡಿತ್ತು. ಎರಡು ವರ್ಷ ಕಳೆದರೂ ಕೆಪಿಟಿಸಿಎಲ್ ಕೆ.ವಿ.ಕೇಂದ್ರ ಕಚೇರಿ ಫಲಾನುಭವಿ ರಾಮಕೃಷ್ಣಗೆ ಪರಿಹಾರ ಹಣ ನೀಡಲಿಲ್ಲ.
೨೦೨೩ರಲ್ಲಿ ಹಣ ತುಂಬಲು ಇ.ಪಿ ಹಾಕಲಾಗಿತ್ತು. ಬಳಿಕ ೨೦೨೪ರ ಜೂನ್ ೨೪ರಂದು ಹಿರಿಯ ಸಿವಿಲ್ ನ್ಯಾಯಾಲಯವು ಜಪ್ತಿ ಆದೇಶ ಮಾಡಿತ್ತು. ಆಗ ನ್ಯಾಯಾಲಯದ ಆದೇಶದಂತೆ ೩೮,೪೪,೩೨೫ ರೂ. ಫಲಾನುಭವಿಗಳಿಗೆ ನೀಡಿದರು. ೧೫,೪೯,೧೦೫ ರೂ. ಬಾಕಿ ಉಳಿದಿತ್ತು. ಬಾಕಿ ಪರಿಹಾರ ಪಾವತಿಸುವಂತೆ ೨೦೨೪ ಜುಲೈ ೨೪ರಂದು ಉಪವಿಭಾಗಾಧಿಕಾರಿಯು ಕೊಪ್ಪಳದ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಬೃಹತ್ ಕಾಮಗಾರಿ ಪತ್ರ ಬರೆಯುತ್ತಾರೆ. ಆದರೂ ಈವರೆಗೂ ಕೆಪಿಟಿಸಿಲ್ ಕೆ.ವಿ.ಕೇಂದ್ರದ ಅಧಿಕಾರಿಗಳು ಹಣ ಪಾವತಿ ಮಾಡಿಲ್ಲ.
ಈ ಹಿನ್ನಲೆ ಗುರುವಾರ ನ್ಯಾಯಾಲಯದ ಸಿಬ್ಬಂದಿಗಳು ಕೆ.ಪಿ.ಟಿ.ಸಿ.ಎಲ್ ಕಚೇರಿಯ ಸಾಮಗ್ರಿಗಳಾದ ಕುರ್ಚಿ, ಕಂಪ್ಯೂಟರ್, ಟೇಬಲ್, ಪ್ರಿಂಟರ್, ಸಿಪಿಯು, ಅಲಮಾರು ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿಕೊಂಡರು. ನಂತರ ಜಪ್ತಿ ಮಾಡಿದ ಸಾಮಗ್ರಿಗಳನ್ನು ಲಾರಿಯಲ್ಲಿ ತುಂಬಲಾಯಿತು. ಕೊನೆಗೆ ಲಾರಿಯನ್ನು ನ್ಯಾಯಾಲಯದ ಆವರಣದಲ್ಲಿ ನಿಲುಗಡೆ ಮಾಡಲಾಯಿತು.
ನನ್ನ ಫಲಾನುಭವಿಗೆ ನ್ಯಾಯಾಲಯದ ಆದೇಶದ ಪ್ರಕಾರ ಬಾಕಿ ಹಣ ಠೇವಣಿ ಮಾಡದ್ದಕ್ಕೆ ಕೆಪಿಟಿಸಿಎಲ್ ಕಚೇರಿಯ ಸಾಮಗ್ರಿಗಳನ್ನು ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿದ್ದಾರೆ ಎಂದು ಫಲಾನುಭವಿಗಳ ಪರ ವಕೀಲ ಹನುಮೇಶ ಮುರುಡಿ ತಿಳಿಸಿದರು.