ಭೂ ನುಂಗಣ್ಣರ ವಿರುದ್ಧ ಶೋಷಿತರ ಕುದಿ
ಚಿತ್ರ: ಧೀರ ಭಗತ್ ರಾಯ್
ನಿರ್ದೇಶನ: ಕರ್ಣನ್
ತಾರಾಗಣ: ರಾಕೇಶ್ ದಳವಾಯಿ, ಸುಚರಿತ, ಶರತ್ ಲೋಹಿತಾಶ್ವ, ನೀನಾಸಂ ಅಶ್ವಥ್ ಮುಂತಾದವರು.
ರೇಟಿಂಗ್ಸ್: 3
- ಜಿ.ಆರ್.ಬಿ
ಭೂ ಸುಧಾರಣೆ ಕಾಯ್ದೆ ಬರುವುದಕ್ಕೂ ಮುನ್ನ ಸಮಾಜ ಹೇಗಿತ್ತು ಎಂಬುದನ್ನು ಅನೇಕ ಸಿನಿಮಾಗಳಲ್ಲಿ ತೋರಿಸಿದ್ದಾರೆ. ಹಾಗೆಯೇ ‘ಉಳುವವನೇ ಭೂಮಿ ಒಡೆಯ’ ಕಾಯ್ದೆ ಬಂದ ನಂತರದ ಬೆಳವಣಿಗೆ, ರಕ್ತಪಾತ, ಹಿಂಸೆ, ಕಿತ್ತಾಟ ಅಷ್ಟಿಷ್ಟಲ್ಲ…
ಊರಿನ ಜಮೀನ್ದಾರ್ರು, ಉಳ್ಳವರ ಮನೆಯಲ್ಲಿ ಜೀತ ಮಾಡಿಕೊಂಡಿದ್ದವರೆಲ್ಲ ಉಳುವವರಾದರೆ, ಆಳುವವರು ಅವರಿಗೆ ಏನೆಲ್ಲ ತೊಂದರೆ ಕೊಡುತ್ತಾರೆ, ಮುಂದೆ ಅವರಿಂದ ಭೂಮಿಯನ್ನು ಅನ್ಯಮಾರ್ಗದಲ್ಲಿ ತಮ್ಮ ವಶಕ್ಕೆ ಪಡೆದುಕೊಂಡು ಮತ್ತದೇ ಸ್ಥಿತಿಗೆ ದೂಡುವ ಮನಸ್ಥಿತಿಯವರ ವಿರುದ್ಧ ಹೋರಾಡುವ ಕಥನವೇ ‘ಧೀರ ಭಗತ್ ರಾಯ್’.
ತನ್ನ ತಂದೆ, ಅಕ್ಕಪಕ್ಕದ ಮನೆಯವರು ವಿನಾಕಾರಣ ಸರ್ಕಾರದಿಂದ ಮಂಜೂರಾಗಿದ್ದ ಭೂಮಿಯನ್ನು ಕಳೆದುಕೊಂಡಿರುತ್ತಾರೆ. ಅದನ್ನು ವಾಪಸ್ ಕೊಡಿಸಲು ಬರುವ ‘ಧೀರ…’ ಅನ್ಯಾಯವಾದವರಿಗೆ ನ್ಯಾಯ ಕೊಡಿಸುತ್ತಾನಾ ಎಂಬುದನ್ನು ತೆರೆಯ ಮೇಲೆ ನೋಡಬೇಕು.
ತಳ ಸಮುದಾಯದವರು ಎಲ್ಲವನ್ನೂ ಸಹಿಸುವುದಿಲ್ಲ… ಭೂ ನುಂಗಣ್ಣರ ವಿರುದ್ಧ ಶೋಷಿತರ ಕುದಿ ಹೇಗಿರುತ್ತದೆ, ಅವರು ತಿರುಗಿಬಿದ್ದರೆ ಹೇಗೆ ಚಂಡಮಾರುತವನ್ನೂ ಬಗ್ಗುಬಡಿಯುತ್ತಾರೆ ಎಂಬುದನ್ನು ಈ ಸಿನಿಮಾದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಕರ್ಣನ್.
ಸಾಕಷ್ಟು ಬಾರಿ ಆಕ್ರೋಶ, ಆವೇಶದಿಂದಲೇ ಸಂಭಾಷಣೆ ಒಪ್ಪಿಸುವ ನಾಯಕ, ಕೋರ್ಟ್‌ನಲ್ಲಿ ವಾದ ಮಾಡುವಾಗಲೂ ಅದೇ ಧಾಟಿಯಲ್ಲಿ ವಾದಿಸುತ್ತಾರೆ. ಬರೀ ಹೋರಾಟಕ್ಕಷ್ಟೇ ಸೀಮಿತಗೊಳಿಸದೇ ಒಂದಷ್ಟು ವಿಷಯಗಳನ್ನು ದಾಟಿಸುವ ಪ್ರಯತ್ನವನ್ನೂ ಮಾಡಲಾಗಿದೆ.
ರಾಕೇಶ್ ದಳವಾಯಿ ಹೋರಾಟಕ್ಕೂ ಸೈ, ಪ್ರೀತಿಗೂ ಜೈ ಎಂದು ಎರಡನ್ನೂ ನಿಭಾಯಿಸಿದ್ದಾರೆ. ಗೆಳತಿಯಾಗಿ, ಗೃಹಿಣಿಯಾಗಿ, ಸುಚರಿತ ನಾಯಕನಿಗೆ ಸಾಥ್ ನೀಡಿದ್ದಾರೆ. ಶರತ್ ಲೋಹಿತಾಶ್ವ, ನೀನಾಸಂ ಅಶ್ವಥ್ ಮುಂತಾದವರು ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ಪೂರ್ಣಚಂದ್ರ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.