ಭೂ ಸುರಕ್ಷಾ ಯೋಜನೆ ಜಾರಿ: ಜನರ ಕೈಗೆ ರೆಕಾರ್ಡ್ ರೂಮ್
ಹುಬ್ಬಳ್ಳಿ : ರಾಜ್ಯದ ಜಿಲ್ಲೆಗೊಂದರಂತೆ 31 ತಾಲೂಕಿನಲ್ಲಿ ಭೂ ಸುರಕ್ಷಾ ಯೋಜನೆ ಜಾರಿಗೊಳಿಸಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಇಲ್ಲಿನ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಕಂದಾಯ ಇಲಾಖೆಯ ಹಳೆಯ ದಾಖಲೆ ಸೇರಿದಂತೆ ಎಲ್ಲ ದಾಖಲೆಗಳ ಡಿಜಿಟಲೀಕರಣ ಮಾಡಲು ಭೂ ಸುರಕ್ಷಾ ಯೋಜನೆ ಜಾರಿ ಮಾಡಲಾಗುತ್ತದೆ. ಈ ದಾಖಲೆ ಡಿಜಿಟಲೀಕರಣ ಪ್ರಕ್ರಿಯೆ ಮುಗಿದ ಬಳಿಕ ಜನರ ಕೈಗೆ ತಮಗೆ ಸಂಬಂಧಿಸಿದ ದಾಖಲೆಗಳನ್ನು ಆನ್ ಲೈನ್ ನಲ್ಲಿಯೇ ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ತಹಶೀಲ್ದಾರ ಕಚೇರಿಗೆ ಬಂದು ಅಧಿಕಾರಿ, ರೆಕಾರ್ಡ್ ರೂಮ್ ಸಿಬ್ಬಂದಿ ಸಂಪರ್ಕಿಸಿ ಪಡೆಯುವುದು ತಪ್ಪುತ್ತದೆ. ಅಲ್ಲದೇ ದಾಖಲೆಗಳ ವ್ಯತ್ಯಾಸ, ರೆಕಾರ್ಡ್ ಮಿಸ್ಸಿಂಗ್ , ವಿಳಂಬ ಎಲ್ಲ ಸಮಸ್ಯೆಗಳು ಪರಿಹಾರ ಆಗಲಿದೆ ಎಂದರು. ಪ್ರಥಮ ಹಂತವಾಗಿ ಪ್ರತಿ ಜಿಲ್ಲೆಗೊಂದು ತಾಲೂಕು ಆಯ್ಕೆ ಮಾಡಿಕೊಂಡು ಅನುಷ್ಠಾನ ಮಾಡಲಾಗುತ್ತಿದೆ. ನಂತರ ಇತರ ತಾಲೂಕಿನಲ್ಲಿ ಜಾರಿ ಮಾಡಲಾಗುತ್ತದೆ ಎಂದು ಹೇಳಿದರು. ಬರೀ ನಾವು ತಹಶೀಲ್ದಾರ ಕಚೇರಿ ದಾಖಲೆ ಮಾತ್ರ ಡಿಜಿಟಲೀಕರಣ ಮಾಡುತ್ತಿಲ್ಲ. ಉಪನೋಂದಣಿ ಅಧಿಕಾರಿ ಕಚೇರಿಯಲ್ಲಿನ ದಾಖಲೆ, ಸರ್ವೇ ಇಲಾಖೆ ದಾಖಲೆಗಳನ್ನೂ ಭೂ ಸುರಕ್ಷಾ ಯೋಜನೆಯಡಿ ಡಿಜಿಟಲೀಕರಣ ಮಾಡುತ್ತೇವೆ ಎಂದು ಹೇಳಿದರು.