ಭೈರ ಕಾಡಾನೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿ
08:33 PM Dec 11, 2022 IST | Samyukta Karnataka
ಚಿಕ್ಕಮಗಳೂರು: ವ್ಯಕ್ತಿಯೊಬ್ಬರನ್ನು ಬಲಿ ತೆಗೆದುಕೊಂಡು ಜನರ ನಿದ್ದೆಗೆಡಿಸಿದ್ದ ಮೂಡಿಗೆರೆ ನರಹಂತಕ ಭೈರ ಎಂದೇ ಕುಖ್ಯಾತಿ ಹೊಂದಿದ್ದ ಕಾಡಾನೆಯನ್ನು ಭಾನುವಾರ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಆನೆ ಕಾರ್ಯಾಚರಣೆಗೆಂದೇ ಇತ್ತೀಚೆಗೆ ರಾಜ್ಯ ಸರ್ಕಾರ ನೇಮಿಸಿದ್ದ ಅರಣ್ಯ ಇಲಾಖೆಯ ವಿಶೇಷ ಟಾಸ್ಕ್‌ಫೋರ್ಸ್‌ನ ತಂಡವು ಮೂಡಿಗೆರೆ ತಾಲ್ಲೂಕಿನ ಊರುಬಗೆ ಹೊಸಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ಅರವಳಿಕೆ ಚುಚ್ಚುಮದ್ದು ನೀಡಿ ಮೂಡಿಗೆರೆ ಭೈರನನ್ನು ಖೆಡ್ಡಕ್ಕೆ ಬೀಳಿಸಿದ್ದಾರೆ.
ಈ ಆನೆ ಊರುಬಗೆ ಗ್ರಾಮದಲ್ಲಿ ಇತ್ತೀಚೆಗೆ ಅರ್ಜುನ್ ಎಂಬ ವ್ಯಕ್ತಿಯನ್ನು ಅಟ್ಟಾಡಿಸಿ ಕೊಂದು ಹಾಕಿತ್ತು. ಈ ಕಾರಣಕ್ಕೆ ಸಾರ್ವಜನಿಕರು ಮೂಡಿಗೆರೆ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಆನೆ ಸೆರೆಗೆ ಆಗ್ರಹಿಸಿದ್ದರು. ಇದಲ್ಲದೆ ಕಾಫಿ ತೋಟಗಳಲ್ಲಿ ದಾಂಧಲೆ ನಡೆಸಿ ಅಪಾರ ಪ್ರಮಾಣದ ಬೆಳೆಯನ್ನೂ ಆನೆ ಹಾನಿಪಡಿಸಿತ್ತು. ಆಗಾಗ ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಂಡು ಗ್ರಾಮಸ್ಥರ ನಿದ್ದೆಗೆಡಿಸಿತ್ತು.