For the best experience, open
https://m.samyuktakarnataka.in
on your mobile browser.

ಭ್ರಷ್ಟಾಚಾರಕ್ಕಿಳಿದರೆ ಕಾನೂನು ರಕ್ಷಣೆಯಿಲ್ಲ

12:34 AM Mar 05, 2024 IST | Samyukta Karnataka
ಭ್ರಷ್ಟಾಚಾರಕ್ಕಿಳಿದರೆ ಕಾನೂನು ರಕ್ಷಣೆಯಿಲ್ಲ

ನವದೆಹಲಿ: ಮತಕ್ಕಾಗಿ ಲಂಚ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ನಿರ್ಣಾಯಕ ತೀರ್ಪು ನೀಡಿದೆ. ಸಂಸತ್ತು ಅಥವಾ ವಿಧಾನಸಭೆಯಲ್ಲಿ ಯಾರಾದರೂ ಸದಸ್ಯರು ಭ್ರಷ್ಟಾಚಾರಕ್ಕಿಳಿದರೆ ಅವರಿಗೆ ಕಾನೂನು ರಕ್ಷಣೆಯಿಲ್ಲ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
೧೯೯೮ರ ಜೆಎಂಎಂ ಪ್ರಕರಣ ತೀರ್ಪಿನ ಬಗ್ಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಏಳು ನ್ಯಾಯಮೂರ್ತಿಗಳ ಪೀಠ ಸೋಮವಾರ ಒಮ್ಮತದಿಂದ ತೀರ್ಪು ನೀಡಿದೆ. ಸಂಸದೀಯ ಸೌಲಭ್ಯದ ನೆಪದಲ್ಲಿ ಭ್ರಷ್ಟ ಜನಪ್ರತಿನಿಧಿಗಳಿಗೆ ವಿನಾಯ್ತಿ ನೀಡಿದಲ್ಲಿ ಪ್ರಜಾತಂತ್ರ ಮೌಲ್ಯಗಳಿಗೆ ಅಪಚಾರ ಬಗೆದಂತೆ ಎಂದು ನ್ಯಾಯಪೀಠ ಎಚ್ಚರಿಕೆ ಕೊಟ್ಟಿದೆ.
ಪ್ರಕರಣದ ವಿವರ: ೧೯೯೩ರಲ್ಲಿ ಪಿ.ವಿ ನರಸಿಂಹರಾವ್ ಪ್ರಧಾನಿಯಾಗಿದ್ದ ವೇಳೆ ಅಲ್ಪಮತಕ್ಕಿಳಿದ ಕೇಂದ್ರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾದಾಗ ನಡೆದ ಮತದಾನದಲ್ಲಿ ಸರ್ಕಾರದ ಪರ ೨೬೫ ಮತ ಬಿದ್ದರೆ ವಿರುದ್ಧವಾಗಿ ೨೫೧ ಮತ ಬಿದ್ದು ಅತ್ಯಲ್ಪ ಅಂತರದಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡಿತ್ತು. ಆದರೆ, ಒಂದು ವರ್ಷ ನಂತರ ಗೊತ್ತುವಳಿ ಪರ ಮತಹಾಕಲು ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ)ದ ಸಂಸದರು ಕೋಟ್ಯಂತರ ರೂ. ಲಂಚ ಪಡೆದಿದ್ದಾರೆಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್ ಮೊರೆಹೋಗಲಾಗಿತ್ತು.
೧೯೯೮ರಲ್ಲಿ ಜನಪ್ರತಿನಿಧಿಗಳ ಪರ ತೀರ್ಪು ಹೊರಬಿದ್ದಿತ್ತು. ಲಂಚ ಪ್ರಕರಣದಲ್ಲಿ ಸಂಸದರು ಮತ್ತು ಶಾಸಕರು ಕಾನೂನಿನ ರಕ್ಷಣೆ ಹೊಂದಿದ್ದಾರೆಂದು ನ್ಯಾಯಪೀಠ ೩:೨ ಮತಗಳ ಅಂತರದಲ್ಲಿ ತೀರ್ಪು ನೀಡಲಾಗಿತ್ತು. ಈ ಬಗ್ಗೆ ಸಲ್ಲಿಸಲಾದ ಮೇಲ್ಮನವಿ ವಿಚಾರಣೆ ನಡೆದ ೧೯೯೮ರ ತೀರ್ಪನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
೧೯೯೮ರ ತೀರ್ಪು ಒಪ್ಪುವುದಿಲ್ಲ: ಪಿ.ವಿ ನರಸಿಂಹರಾವ್ ಪ್ರಕರಣದಲ್ಲಿ ಹಣ ಪಡೆದು ಮತ ಹಾಕಿದ ಸಂಸದರಿಗೆ ಕಾನೂನಿನ ರಕ್ಷಣೆ ನೀಡಿದ್ದನ್ನು ನಾವು ಒಪ್ಪುವುದಿಲ್ಲ. ಈ ಆದೇಶವನ್ನು ನಾವು ತಳ್ಳಿಹಾಕುತ್ತೇವೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.