ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಭ್ರಷ್ಟಾಚಾರಿಗಳಿಗೆ ರಕ್ಷಣೆ ಬೇಕಿಲ್ಲ

01:59 AM Sep 12, 2024 IST | Samyukta Karnataka

ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಲ್ಲಿ ಒಟ್ಟು ೧೮೭.೩೩ ಕೋಟಿ ರೂ. ದುರುಪಯೋಗ ಆಪಾದನೆ. ಬ್ಯಾಂಕ್ ಮೂಲಕ ಅಕ್ರಮ ಹಣ ವರ್ಗಾವಣೆ ನಡೆದಿರುವುದರಿಂದ ಸಿಬಿಐ- ಇಡಿ ತನಿಖೆ ನಡೆಸಿದೆ. ವಾಲ್ಮೀಕಿ ನಿಗಮ ರಾಜ್ಯ ಸರ್ಕಾರಕ್ಕೆ ಸೇರಿದ್ದರಿಂದ ಎಸ್‌ಐಟಿ ಮೂಲಕ ತನಿಖೆ ಆಗಿದೆ. ಈಗ ಎರಡೂ ತನಿಖಾ ಸಂಸ್ಥೆಗಳು ಪ್ರತ್ಯೇಕ ಎಫ್‌ಐಆರ್ ದಾಖಲಿಸಿ ಎರಡು ಚಾರ್ಜ್ ಶೀಟ್ ಸಲ್ಲಿಸಿವೆ. ನ್ಯಾಯಾಲಯ ಈಗ ಎರಡನ್ನೂ ಪರಿಗಣಿಸಿ ಶಿಕ್ಷೆ ವಿಧಿಸಬೇಕಾದ ಪರಿಸ್ಥಿತಿ ಬಂದಿದೆ. ಒಂದೇ ಪ್ರಕರಣ ಎರಡು ತನಿಖೆ ಎರಡು ವರದಿ ವಿಚಿತ್ರವಾಗಿ ಕಂಡರೂ ನಿಜ.
ನಮ್ಮ ರಾಜಕಾರಣಿಗಳು ಪೊಲೀಸ್ ಮತ್ತು ತನಿಖಾ ಸಂಸ್ಥೆಗಳನ್ನು ತಮ್ಮ ಅನುಕೂಲಕ್ಕಾಗಿ ವಿಭಜಿಸಿದ್ದಾರೆ. ಕಾನೂನು ಪಾಲನೆಯಲ್ಲಿ ಕೇಂದ್ರ ಮತ್ತು ರಾಜ್ಯಗಳಿಗೆ ಪ್ರತ್ಯೇಕ ಕರ್ತವ್ಯಗಳನ್ನು ನೀಡಲಾಗಿದೆ. ರಾಷ್ಟ್ರಮಟ್ಟದಲ್ಲಿ ಯಾವುದೇ ಅಪರಾಧಗಳು ನಡೆದರೂ ಅದರ ಸ್ವರೂಪ ನೋಡಿಕೊಂಡು ಸಿಬಿಐ ತನಿಖೆ ನಡೆಸುತ್ತಿತ್ತು. ಆರ್ಥಿಕ ಅಪರಾಧಗಳಿಗೆ ಜಾರಿ ನಿರ್ದೇಶನಾಲಯ(ಇಡಿ) ತನಿಖೆ ನಡೆಸುತ್ತದೆ. ಅದೇರೀತಿ ರಾಜ್ಯದೊಳಗೆ ನಡೆಯುವ ಅಪರಾಧಗಳ ತನಿಖೆ ನಡೆಸಲು ಎಸ್‌ಐಟಿ ರಚಿಸಲಾಗಿದೆ. ಈಗ ಸಿಬಿಐ. ಇಡಿ, ಎಸ್‌ಐಟಿ ತನಿಖೆ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಸಿಬಿಐ ತನಿಖೆಗೆ ರಾಜ್ಯ ಸರ್ಕಾರದ ಅನುಮೋದನೆ ಬೇಕು ಎಂದು ನಿಯಮ ಮಾಡಲಾಗಿದೆ. ವಾಲ್ಮೀಕಿ ನಿಗಮದ ಅವ್ಯವಹಾರದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕೈವಾಡ ಇರುವುದರಿಂದ ಸಿಬಿಐ ಮತ್ತು ಇಡಿ ತನಿಖೆ ನಡೆಸಿದೆ. ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಅನುಮೋದನೆ ನೀಡಿಲ್ಲ. ಇದಕ್ಕೆ ಬದಲಾಗಿ ಎಸ್‌ಐಟಿ ತನಿಖೆ ನಡೆಸಿದೆ.
ಸಿಬಿಐ ಮತ್ತು ಇಡಿ ತನಿಖೆಯಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಕಿಂಗ್‌ಪಿನ್ ಎಂದು ಕರೆಯಲಾಗಿದೆ. ರಾಜ್ಯದ ಎಸ್‌ಐಟಿ ತನ್ನ ತನಿಖೆಯಲ್ಲಿ ನಾಗೇಂದ್ರ ಅವರ ಹೆಸರನ್ನೇ ಹೇಳಿಲ್ಲ. ಇದು ಪಕ್ಷ ರಾಜಕಾರಣ ಯಾವ ಹಂತ ತಲುಪಬಹುದು ಎಂಬುದಕ್ಕೆ ಸಾಕ್ಷಿ. ಕೇಂದ್ರ ಮತ್ತು ರಾಜ್ಯಗಳ ನಡುವೆ ಸಾಮರಸ್ಯ ಇದ್ದಲ್ಲಿ ಎರಡೂ ತನಿಖಾಸಂಸ್ಥೆಗಳು ಒಟ್ಟಿಗೆ ಕೂಲಂಕಷ ತನಿಖೆ ನಡೆಸಿ ಒಟ್ಟಿಗೆ ಚಾರ್ಜ್ ಶೀಟ್ ಸಲ್ಲಿಬಹುದಾಗಿತ್ತು. ನಮ್ಮ ಜನಪ್ರತಿನಿಧಿಗಳು ಎಂಥ ರಾಜಕಾರಣಕ್ಕೆ ಇಳಿದಿದ್ದಾರೆ ಎಂದರೆ ಸರ್ಕಾರಿ ಹಣವನ್ನು ಯಾರು ಎಷ್ಟು ಬೇಕಾದರೂ ನುಂಗಬಹುದು ಅವರು ನಮ್ಮ ಪಕ್ಷದವರಾದರೆ ಅವರನ್ನು ಏನೇ ಆಗಲಿ ರಕ್ಷಿಸಬೇಕು. ಇಲ್ಲ ಎಂದರೆ ಎಷ್ಟೇ ಪ್ರಾಮಾಣಿಕರಾದರೂ ಅವರು ಪ್ರತಿಪಕ್ಷದವರಾಗಿದ್ದರೆ ಅವರನ್ನು ಬಲಿಪಶು ಮಾಡಬೇಕು. ಈ ವಿಕೃತ ಪೈಪೋಟಿಯಲ್ಲಿ ಬಲಿಯಾದವರು ಲೆಕ್ಕಾಧಿಕಾರಿ ಚಂದ್ರಶೇಖರನ್. ಅವರು ಆತ್ಮಹತ್ಯೆ ಮಾಡಿಕೊಂಡು ಮರಣಪತ್ರದಲ್ಲಿ ಎಲ್ಲವನ್ನೂ ಬರೆಯದೇ ಹೋಗಿದ್ದಲ್ಲಿ ಈ ಹಗರಣ ಹೊರಗೆ ಬರುತ್ತಿರಲಿಲ್ಲ. ಇಂದಿನ ಕೆಟ್ಟ ರಾಜಕಾರಣದಲ್ಲಿ ಪ್ರಾಮಾಣಿಕತೆ ಅಂತ್ಯ ಕಾಣುತ್ತದೆ ಎಂಬುದು ಚಂದ್ರಶೇಖರನ್ ಸಾವಿನಿಂದ ಬಹಿರಂಗಗೊಂಡಿದೆ. ಚಂದ್ರಶೇಖರನ್ ಸಾವಿಗೆ ಕಣ್ಣೀರು ಸುರಿಸುವವರು ಯಾರೂ ಇಲ್ಲ. ಪ್ರಾಮಾಣಿಕತೆಗೆ ಬೆಲೆ ಎಲ್ಲಾದರೂ ಇದೆಯೇ ಎಂಬ ಪ್ರಶ್ನೆ ಚಂದ್ರಶೇಖರನ್ ಸಾವಿನಿಂದ ಜನರ ಮುಂದೆ ಬಂದು ನಿಂತಿದೆ.
ವಾಲ್ಮೀಕಿ ನಿಗಮದ ಅವ್ಯವಹಾರದಲ್ಲಿ ರಾಜ್ಯ-ಕೇಂದ್ರ ಸರ್ಕಾರ ರಾಜಕೀಯ ಲಾಭ ತೆಗೆದುಕೊಳ್ಳಲು ಯತ್ನಿಸುತ್ತಿದೆಯೇ ಹೊರತು ಅಕ್ರಮ ಹಣ ವ್ಯವಹಾರದ ದಮನಕ್ಕೆ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಇದು ನಿಜಕ್ಕೂ ದುರ್ದೈವ. ಇಂಥ ಪರಿಸ್ಥಿತಿಯನ್ನು ಸಮಾಜ ಘಾತುಕ ಶಕ್ತಿಗಳು ಸುಲಭವಾಗಿ ದುರುಪಯೋಗಪಡಿಸಿಕೊಳ್ಳುತ್ತವೆ. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳು ಸ್ವತಂತ್ರವಾಗಿ ಕೆಲಸ ಮಾಡಲು ಮುಕ್ತ ಅವಕಾಶಗಳಿವೆ. ಆದರೆ ಇದು ಪ್ರಜಾತಂತ್ರ ವಿರೋಧಿ ಆಗಬಾರದು. ಈಗ ಕರ್ನಾಟಕದಲ್ಲಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸಗಳು ನಡೆಯುತ್ತಿವೆ. ಇವುಗಳನ್ನು ಈಗಲೇ ದಮನ ಮಾಡುವುದು ಅಗತ್ಯ. ಭ್ರಷ್ಟಾಚಾರ ಯಾರೇ ಮಾಡಲಿ. ಅವರಿಗೆ ಶಿಕ್ಷೆ ವಿಧಿಸುವುದು ಸರ್ಕಾರದ ಕರ್ತವ್ಯ. ಅದರಲ್ಲಿ ನಮ್ಮ ಪಕ್ಷದವರು ಎಂದು ಗುರುತಿಸಲು ಹೋಗುವುದು ಇಡೀ ವ್ಯವಸ್ಥೆ ಕುಸಿಯುವಂತೆ ಮಾಡುತ್ತದೆ. ಪ್ರಾಮಾಣಿಕತೆಗೆ ಪಕ್ಷ ಬೇಧ ಇರುವುದಿಲ್ಲ. ಅದರಲ್ಲೂ ಸರ್ಕಾರಿ ನೌಕರರು ವಸ್ತುನಿಷ್ಠವಾಗಿ ದುಡಿಯುವಂತೆ ನೋಡಿಕೊಳ್ಳುವುದು sಸರ್ಕಾರದ ಕರ್ತವ್ಯ. ಸರ್ಕಾರಿ ಹಣವನ್ನು ಸುಲಭವಾಗಿ ದುರುಪಯೋಗಪಡಿಸಿಕೊಳ್ಳಬಹುದು ಎಂಬುದು ನಿಜಕ್ಕೂ ಆತಂಕಕಾರಿ ಸಂಗತಿ. ಅದರಲ್ಲೂ ಬ್ಯಾಂಕ್‌ಗಳು ಈ ವಂಚನೆಯಲ್ಲಿ ಭಾಗಿಯಾಗುತ್ತಿರುವುದು ನಮ್ಮ ವ್ಯವಸ್ಥೆ ಹದಗೆಡುತ್ತಿರುವ ಸೂಚನೆ. ಇಂಥ ಪ್ರಸಂಗಗಳಲ್ಲಿ ಕೇಂದ್ರ ಮತ್ತು ರಾಜ್ಯ ಒಟ್ಟಿಗೆ ಸೇರಿ ತನಿಖೆ ನಡೆಸಿ ಅಕ್ರಮವನ್ನು ಮೂಲದಿಂದಲೇ ಕಿತ್ತು ಹಾಕಬೇಕು. ಇದರಲ್ಲಿ ಪಕ್ಷ ರಾಜಕಾರಣ ಬರಬಾರದು. ಆರ್ಥಿಕ ಅಪರಾಧ ಎಲ್ಲೇ ನಡೆದರೂ ದೇಶದ ಪ್ರಗತಿಗೆ ಮಾರಕ ಎಂಬುದರಲ್ಲಿ ಸಂದೇಹವಿಲ್ಲ. ಹಿಂದಿನಿಂದಲೂ ನಾವು ಆರ್ಥಿಕ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇದನ್ನು ಈಗಲೂ ಮುಂದುವರಿಸುವುದು ಅಗತ್ಯ. ಆರ್ಥಿಕ ಅಪರಾಧಗಳ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಮುಲಾಜಿಲ್ಲದೆ ಅನುಸರಿಸಬೇಕು.

Next Article